ರೋರಿಂಗ್ ಸ್ಟಾರ್! ಅಂಥದ್ದೊಂದು ಬಿರುದಾಂಕಿತ ಶ್ರೀಮುರಳಿ ಹುಟ್ಟುಹಬ್ಬ ಇಂದು. ಪ್ರೇಮಿಸುವ ಹುಡುಗ, ಕನ್ನಡ ಪ್ರೇಮಿ, ಉಗ್ರಹೋರಾಟಗಾರ, ಸಿಡಿದೆದ್ದ ವೀರ-ಹೀಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ಶ್ರೀಮುರಳಿ ಕನ್ನಡಪ್ರಭದ ಸೇವ್ ಟೈಗರ್ ಅಭಿಯಾನದ ರಾಯಭಾರಿ. ಪರಿಸರ, ಕಾಡು, ಹುಲಿ ಉಳಿಸುವ ಯೋಜನೆ, ಬುಡಕಟ್ಟು ಮಂದಿ, ಅಭಯಾರಣ್ಯಗಳ ಕುರಿತು ಅಧಿಕೃತವಾಗಿ ಮಾತಾಡಬಲ್ಲ ಶ್ರೀಮುರಳಿ ಸ್ಟಾರ್‌ಡಮ್ ಮತ್ತು ಸಿಂಪ್ಲಿಸಿಟಿ ಎರಡನ್ನೂ ತೂಗಿಕೊಂಡು ಹೋದವರು. ಅವರಿಗೆ ಕನ್ನಡಪ್ರಭ ಶುಭಾಶಯ ಕೋರುತ್ತದೆ.
-ಆರ್. ಕೇಶವಮೂರ್ತಿ
ಈ ಬಾರಿಯ ಹುಟ್ಟು ಹಬ್ಬದ ವಿಶೇಷತೆಗಳೇನು?
ವಿಶೇಷಕ್ಕಿಂತ ಖುಷಿ ಕೊಡುವ ಸುದ್ದಿಗಳು ಹೆಚ್ಚಿವೆ. ಅವೇ ಈ ಸಲದ ನನ್ನ ಹುಟ್ಟು ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ. ಬಿಡುಗಡೆಗೆ ಸಿದ್ದವಾಗುತ್ತಿರುವ ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ಬರುತ್ತಿದೆ. ನಾನು ನಟಿಸುತ್ತಿರುವ ಹೊಂಬಾಳೆ ನಿರ್ಮಾಣದ, ದುನಿಯಾ ಸೂರಿ ನಿರ್ದೇಶನದ ಚಿತ್ರ ಹಾಗೂ ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಣದ ಚಿತ್ರಗಳು ಘೋಷಣೆ ಆಗುತ್ತಿವೆ.
ಪ್ರತಿ ವರ್ಷ ಹುಟ್ಟು ಹಬ್ಬದ ದಿನ ಎಲ್ಲಿಗೆ ಹೋಗುತ್ತಿದ್ರಿ?
ಕುಟುಂಬ ಮತ್ತು ಅಭಿಮಾನಿಗಳು ಬಿಟ್ಟರೆ ಎಲ್ಲೂ ಹೋಗಲ್ಲ. ಯಾಕೆಂದರೆ ನಾನು ಈ ಹಂತಕ್ಕೆ ಬೆಳೆಯಕ್ಕೆ ಇವರೇ ಕಾರಣ. ನನ್ನ ಸಂಭ್ರಮದ ಕ್ಷಣಗಳನ್ನೂ ಸಹ ಅಭಿಮಾನಿಗಳ ಜತೆ ಕಳೆಯುತ್ತೇನೆ. ಅವರು ಪ್ರೀತಿಯಿಂದ ಕೇಕ್ ತರುತ್ತಾರೆ, ಹೂವಿನ ಹಾರ ಹಾಕುತ್ತಾರೆ, ನನ್ನ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅದೇ ಸಂಭ್ರಮ.
'ಭಾಗ್ಯದ ಬಳೆಗಾರ' ಹಾಡಿಗೆ ಚಿಣ್ಣರ ಜೊತೆ ರೋರಿಂಗ್ ಸ್ಟಾರ್ ಸ್ಟೆಪ್..!
ಈ ಬಾರಿ ಅಭಿಮಾನಿಗಳು ಒಂದು ಕಡೆ ಸೇರಲು ಆಗುತ್ತಿಲ್ಲವಲ್ಲ?
ನನಗೂ ಆ ಬಗ್ಗೆ ನೋವು ಇದೆ. ಆದರೆ, ನನ್ನ ಸಂಭ್ರಮಕ್ಕಿಂತ ಹೆಚ್ಚಾಗಿ ಅವರ ಆರೋಗ್ಯವೂ ಮುಖ್ಯ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಈಗ ಮುಖ್ಯ. ಕೋವಿಡ್-19 ನಿಯಮಗಳನ್ನು ಪಾಲಿಸಲೇಬೇಕು. ಅಭಿಮಾನಿಗಳು ಅವರ ಆರೋಗ್ಯ ಕಾಪಾಡಿಕೊಂಡು ಅವರು ಇದ್ದಲ್ಲೇ ನನಗೆ ಆಶೀರ್ವಾದ ಮಾಡಿದರೆ ಅದೇ ನನಗೆ ಅವರು ಕೊಡುವ ದೊಡ್ಡ ಉಡುಗೊರೆ.
ಹುಟ್ಟು ಹಬ್ಬಕ್ಕೆ ಸೆಟ್ಟೇರುತ್ತಿರುವ ಹೊಸ ಚಿತ್ರಗಳ ಕುರಿತು?
ನಿಜ ಹೇಳಬೇಕು ಅಂದರೆ ನನಗೂ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ಹಾಗೂ ಸೂರಜ್ ಪ್ರೊಡಕ್ಷನ್‌ನ ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಪಕರು ಎಂಬುದು ಮಾತ್ರ ಗೊತ್ತು. ಇವರ ನಿರ್ಮಾಣದ ಚಿತ್ರಗಳನ್ನು ಟೈಟಲ್ ಜತೆಗೆ ಪ್ರಕಟಣೆ ಮಾಡುತ್ತಾರೆಯೇ ಅಥವಾ ಶೀರ್ಷಿಕೆ ಇಲ್ಲದೆ ಹಾಗೆ ಘೋಷಣೆ ಮಾಡುತ್ತಾರೆಯೇ ಎಂಬುದು ನನಗೆ ಗೊತ್ತಿಲ್ಲ. ತುಂಬಾ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ನಾನು ಕೂಡ ಕೂತುಹೂಲದಿಂದ ಕಾಯುತ್ತಿದ್ದೇನೆ.
ಕದ್ದು ಕರ್ಜಿಕಾಯಿ ತಿನ್ನುವಾಗ ಅಮ್ಮನ ಕೈಲಿ ಸಿಕ್ಕಿಬಿದ್ದ ರೋರಿಂಗ್ ಸ್ಟಾರ್!
ಈ ಪೈಕಿ ಒಂದು ಸಿನಿಮಾ ಸೂರಿ ನಿರ್ದೇಶನದ ಚಿತ್ರ ಅಲ್ಲವೇ?
ಹೌದು. ಮೊದಲ ಬಾರಿಗೆ ನಾನು ಮತ್ತು ಸೂರಿ ಜತೆಯಾಗಿ ಸಿನಿಮಾ ಮಾಡುತ್ತಿದ್ದೇವೆ. ತುಂಬಾ ಅಪರೂಪದ ಕಾಂಬಿನೇಶನ್. ಸೂರಿ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸೂಪರ್ ಮ್ಯಾನ್. ತುಂಬಾ ತಿಳುವಳಿಕೆ ಇರುವ ನಿರ್ದೇಶಕರು. ಸಿನಿಮಾಗಳ ಬಗ್ಗೆ ಅಭಿರುಚಿ ಇರುವ ಸಿನಿಮಾ ಜೀವಿ. ನಾವಿಬ್ಬರು ಒಂದೇ ರೀತಿ ಆಲೋಚನೆ ಮಾಡುವ ವ್ಯಕ್ತಿಗಳು. ಹೀಗಾಗಿ ಅವರ ನಿರ್ದೇಶನದ ಸಿನಿಮಾ ಎಂದಾಗ ನೆಮ್ಮದಿಯಾಗಿ ಕ್ಯಾಮೆರಾ ಮುಂದೆ ನಿಲ್ಲಬಹುದು. ಅಷ್ಟರ ಮಟ್ಟಿಗೆ ವಿಶ್ವಾಸ ಮತ್ತು ಧೈರ್ಯ ಸೂರಿ ಅವರ ನಿರ್ದೇಶನದಲ್ಲಿ ನನಗೆ ಸಿಗಲಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ನಮ್ಮ ಮನೆಯವರದ್ದೇ ನಿರ್ಮಾಣ ಸಂಸ್ಥೆ ಎನ್ನಬಹುದು. ಒಂದು ದೊಡ್ಡ ಕನ್ನಡ ಸಿನಿಮಾ ಆಗಲಿದೆ. ಈ ಕಾಂಬಿನೇಶನ್ ಮೂಲಕ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದೇನೆಂಬ ಭರವಸೆ ಬಂದಿದೆ.
ಉಗ್ರಂ ವೀರಂ ಯಾವಾಗ? ಇದನ್ನು ಪ್ರಶಾಂತ್ ನೀಲ್ ಅವರೇ ನಿರ್ದೇಶಿಸಲಿದ್ದಾರೆಯೆ?
ಖಂಡಿತವಾಗಿ ಈ ಚಿತ್ರವನ್ನು ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡುತ್ತಾರೆ. ‘ಉಗ್ರಂ ವೀರಂ’ ಚಿತ್ರವನ್ನು ನಾನು ಬೇರೆಯವರ ನಿರ್ದೇಶನದಲ್ಲಿ ಕಲ್ಪಿಸಿಕೊಳ್ಳಲಾರೆ. ಆದರೆ, ಯಾವಾಗ ಸೆಟ್ಟೇರುತ್ತದೆ ಎಂದು ಈಗಲೇ ಹೇಳಲಾರೆ. ಅವರು ಈಗ ‘ಕೆಜಿಎಫ್ 2’ ಮುಗಿಸಿಕೊಂಡು ‘ಸಲಾರ್’ ಚಿತ್ರ ಮಾಡುತ್ತಿದ್ದಾರೆ. ಅವರು ಆ ಸಿನಿಮಾ ಮಾಡುವ ಹೊತ್ತಿಗೆ ನಾನು ಒಪ್ಪಿಕೊಳ್ಳುವ ಸಿನಿಮಾಗಳು ಮುಗಿಯಬೇಕು. ಅಥವಾ ನಮ್ಮಿಬ್ಬರ ನಡುವೆ ‘ಉಗ್ರಂ ವೀರಂ’ ಬದಲು ಬೇರೆಯದ್ದೇ ಚಿತ್ರ ಬರುತ್ತದೆಯೇ ಎಂಬುದನ್ನು ಹೇಳಲಾಗದು. ಆದರೂ ‘ಉಗ್ರಂ ವೀರಂ’ ಸಿನಿಮಾ ಬರುವುದು ಪಕ್ಕಾ.
‘ಉಗ್ರಂ’ ಮೊದಲು, ‘ಉಗ್ರಂ’ ನಂತರ ನಿಮ್ಮಲ್ಲಿ ನೀವು ಕಂಡ ಬದಲಾವಣೆಗಳೇನು?
ಆಗ ನಾನು ಮುಗ್ಧ. ಬಿದ್ದಿದ್ದೇನೆ, ಎದ್ದಿದ್ದೇನೆ. ಸಾಕಷ್ಟುಪಾಠಗಳನ್ನು ಕಲಿತಿದ್ದೇನೆ. ತುಂಬಾ ಗೊಂದಲಗಳಲ್ಲೇ ಜರ್ನಿ ಆರಂಭಿಸಿದೆ. ತುಂಬಾ ತಾಳ್ಮೆಯಿಂದ ಕಾಯುತ್ತಿದ್ದ ಕಲಾವಿದ ಆಗಿದ್ದೆ ನಾನು. ‘ಚಂದ್ರಚಕೋರಿ’ ಚಿತ್ರದಿಂದ ಆರಂಭವಾದ ನನ್ನ ಪಯಣವನ್ನು ನೀವೇ ನೋಡಿದ್ದೀರಿ. ಈಗ ಹಿಂದಿನ ತಪ್ಪುಗಳಿಂದ ಪಾಠ ಕಲಿತ ಶ್ರೀಮುರಳಿ ನಿಮ್ಮ ಮುಂದೆ ನಿಂತಿದ್ದಾರೆ. ನೆಮ್ಮದಿ ಇದೆ. ಏನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಪ್ಲಾನ್ ಇದೆ. ಒಳ್ಳೆಯ ತಂಡ ನನ್ನ ಜತೆಗೆ ನಿಂತಿದೆ. ಯಶಸ್ಸು ಇದೆ. ಅದರ ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ‘ನೀನು ಇರೋದು ಇದಕ್ಕೆ, ನಿನ್ನ ಸಿನಿಮಾ ಇದು’ ಎಂದು ಹೇಳಿದ ‘ಉಗ್ರಂ’ ಚಿತ್ರ ನನ್ನ ಜತೆಗೆ ಸದಾ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತೃಪ್ತಿ ಎಂಬುದು ಸಿಕ್ಕಿದೆ. ಅಪಾರವಾಗಿ ಪ್ರೀತಿಸುವ ಅಭಿಮಾನಿಗಳು, ನನ್ನ ಮೇಲೂ ಹಣ ಹಾಕಿದರೆ ಗೆಲ್ಲುತ್ತೇವೆ ಎನ್ನುವ ನಿರ್ಮಾಪಕರ ಸಂಖ್ಯೆ ಹೆಚ್ಚಾಗಿದೆ. ನಿರ್ದೇಶಕರ ಕನಸುಗಳಿಗೆ ನಾನು ಸಾರಥಿ ಆಗುತ್ತಿದ್ದೇನೆ. ಇದು ‘ಉಗ್ರಂ’ ನಂತರದ ಶ್ರೀಮುರಳಿ.
ಪ್ರಶಾಂತ್ ನೀಲ್ ನಿಮಗೆ ಜತೆಯಾಗಿ ನಿಂತಿದ್ದನ್ನು ಹೇಗೆ ನೋಡುತ್ತೀರಿ?
ಪ್ರಶಾಂತ್ ನೀಲ್ ಯಾವಾಗಲೂ ನನ್ನ ಜತೆಗೇ ಇದ್ದವರು. ಅವರು ನಿರ್ದೇಶಕರಾಗುವ ಮುನ್ನ ಕೂಡ. ಆದರೆ, ‘ಉಗ್ರಂ’ ಎನ್ನುವ ಸಿನಿಮಾ ಕೊಟ್ಟು ‘ಇದೇ ನೀನು’ ಎಂದು ತೋರಿಸಿಕೊಟ್ಟವರು ಪ್ರಶಾಂತ್ ನೀಲ್. ನಿರ್ದೇಶಕರಾಗಿ, ಸ್ನೇಹಿತರಾಗಿ, ನನ್ನ ಮಾರ್ಗದರ್ಶಕರಾಗಿ ಪ್ರಶಾಂತ್ ನೀಲ್ ಎನ್ನುವ ಹೆಸರು ನನ್ನ ನಂಬಿಕೆ, ಧೈರ್ಯ ಮತ್ತು ಭರವಸೆ. ಒಂದೇ ಮಾತಿನಲ್ಲಿ ಹೇಳುವುದಾರೆ, ಅವರು ನನ್ನ ಗಾಡ್‌ಫಾದರ್.
ನಿಮ್ಮ ಈ ಯಶಸ್ಸಿನ ಹಿಂದಿರುವ ಶಕ್ತಿಗಳು ಯಾರು ಮತ್ತು ಯಾವುದು?
ನನ್ನ ಕುಟುಂಬ. ಅಪ್ಪ-ಅಮ್ಮ ಜೀವನ, ವಿದ್ಯೆ ಕೊಟ್ಟರು. ನನ್ನ ಪತ್ನಿ ನನ್ನ ಜತೆಗೆ ಹೇಗೆ ನಿಂತರು, ನನ್ನ ಪ್ರತಿ ಹೆಜ್ಜೆಗೂ ಹೇಗೆ ಧೈರ್ಯ ತುಂಬಿದರು ಎಂಬುದನ್ನು ಪದಗಳಲ್ಲಿ ಹೇಳಲಾಗದು. ಕಷ್ಟದ ದಿನಗಳಿಂದಲೂ ಈ ಕ್ಷಣದ ವರೆಗೂ ನನ್ನ ಪತ್ನಿ ವಿದ್ಯಾ ಇಲ್ಲದೆ ಹೋಗಿದ್ದರೆ ನಾನು ಈ ಹಂತಕ್ಕೆ ಬರಲು ಸಾಧ್ಯವಿರಲಿಲ್ಲ. ಮೊದಲೇ ಹೇಳಿದಂತೆ ನನ್ನ ವೃತ್ತಿಯ ಪಿಲ್ಲರ್ ಪ್ರಶಾಂತ್ ನೀಲ್. ನನ್ನ ಕತೆಗಳನ್ನು ಕೇಳುವುದು, ಸರಿ ತಪ್ಪುಗಳನ್ನು ಹೇಳಿ ತಿದ್ದುವುದು, ನನಗೆ ಗೈಡ್ ಮಾಡುವುದು ಎಲ್ಲವೂ ಪ್ರಶಾಂತ್ ನೀಲ್ ಅವರೇ.
ಕನ್ನಡಪ್ರಭ ಹಾಗೂ ಸುವರ್ಣವಾಹಿನಿಯ ಸಾರಥ್ಯದ ಸೇವ್ ಟೈಗರ್ ಅಭಿಯಾನದ ಅನುಭವ ಹೇಗಿತ್ತು?
ಈ ಅಭಿಯಾನ ನನ್ನ ಮತ್ತಷ್ಟುಮನುಷ್ಯನನ್ನಾಗಿಸಿತು. ಯಾಕೆಂದರೆ ಆ ಕಾಡು ಸುತ್ತಾಟ, ಪ್ರಾಣಿಗಳನ್ನು ಹತ್ತಿರದಿಂದ ನೋಡಿದಾಗ ನನ್ನಲ್ಲಿರುವ ಮುಗ್ಧತೆಯನ್ನು ನಾನೇ ಗುರುತಿಸಿಕೊಂಡೆ. ಮನುಷ್ಯರನ್ನು ಮನುಷ್ಯರನ್ನಾಗಿಸುವುದಕ್ಕೆ ಸಾಧ್ಯವಿರುದು ಪ್ರಾಣಿಗಳಿಗೆ ಮತ್ತು ಪ್ರಕೃತಿಗೆ. ಅಭಿಯಾನದ ಭಾಗವಾಗಿ ಕಾಡಿಗೆ ಹೋದಾಗ ಪ್ರಾಣಿಗಳು ನೆಮ್ಮದಿಯಾಗಿ ಜೀವನ ಮಾಡುತ್ತಿರುವುದು ಕಂಡಿತು. ಅವುಗಳನ್ನು ನೋಡಿದ ಮೇಲೆಯೇ ಮನುಷ್ಯರಾದ ನಾವೇ ನಮ್ಮದಿಯಾಗಿಲ್ಲ ಅನಿಸಿತು. ಜೀವನದಲ್ಲಿ ನಾನು ಅಂಥ ಲೋಕೇಶನ್‌ಗಳನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ, ನೋಡಿದೆ.
ಈ ಅಭಿಯಾನ ನಿಮ್ಮಲ್ಲಿ ಮೂಡಿಸಿದ ಅಭಿಪ್ರಾಗಳೇನು?
ಕಾಡು ಮತ್ತು ಅಲ್ಲಿನ ಪ್ರಾಣಿಗಳನ್ನು ನೋಡಿಕೊಳ್ಳುವ ಕಾರ್ಮಿಕರು, ಅವರ ಬದುಕಿನ ಚಿತ್ರಣ ನೋಡಿ ನನಗೆ ಸಿಟ್ಟು ಬಂತು. ಕನಿಷ್ಠ ಸೌಲಭ್ಯಗಳು ಇಲ್ಲ ಅವರಿಗೆ ಎಂಬುದು ಗೊತ್ತಾಯಿತು. ಆದರೂ ಪ್ರಾಣಿಗಳನ್ನು ಅವರು ಪ್ರೀತಿಸುವ ರೀತಿಗೆ ನಾನು ಫಿದಾ ಆದೆ. ಇನ್ನೂ ಪ್ರಾಣಿಗಳಿಗೆ ನಾನು ಬೌಂಡರಿ ಹಾಕಿದ್ದೇವಲ್ಲ ಅನಿಸಿ ಬೇಸರ ಆಯಿತು. ಕಾಡು, ಪ್ರಾಣಿ ಮತ್ತು ಮನುಷ್ಯರು ಎಲ್ಲವೂ ಈ ಭೂಮಿಯ ಭಾಗ. ಎಲ್ಲರಿಗೂ ಸ್ವಾತಂತ್ರ್ಯ ಇರಬೇಕು.
ಮದಗಜ ಕುರಿತು ಹೇಳುವುದಾದರೆ?
ಒಂದು ಸೂಪರ್ ಆಗಿರುವ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ. ನಿರ್ದೇಶಕ ಮಹೇಶ್, ಕೆಲಸದ ರೀತಿ ಇಷ್ಟವಾಯಿತು. ಇಡೀ ತಂಡ ಸೇರಿಕೊಂಡು ಒಂದು ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ ಎಂದುಕೊಂಡಾಗ ನಮ್ಮ ಜತೆ ನಿರ್ಮಾಪಕರಾಗಿ ಉಮಾಪತಿ ಅವರು ನಿಂತಿದ್ದ ರೀತಿ ಚೆನ್ನಾಗಿತ್ತು. ಎಲ್ಲೂ ರಾಜಿ ಆಗದೆ ಅಡೀ ಚಿತ್ರ ಅದ್ದೂರಿಯಾಗಿ ಮೂಡಿ ಬರಲು ಉಮಾಪತಿ ಕಾರಣಕರ್ತರಾದರು. ಇನ್ನೂ ಈ ಚಿತ್ರದ ಆರಂಭದಲ್ಲಿ ಇಡೀ ಚಿತ್ರಕಥೆಯನ್ನು ಬದಲಾಯಿಸಿ, ಶೇ.90 ಭಾಗ ಹೊಸದಾಗಿ ರೂಪಿಸಿದ್ದು ಪ್ರಶಾಂತ್ ನೀಲ್. ಅವರಿಗೆ ಧನ್ಯವಾದ ಹೇಳಬೇಕು. ಆಶಿಕಾ ರಂಗನಾಥ್ ನಟನೆ, ಅವರು ತಮ್ಮ ಪಾತ್ರವನ್ನು ನಿಭಾಯಿಸಿದ ರೀತಿ ತೆರೆ ಮೇಲೆಯೇ ನೋಡಬೇಕು. ಹುಟ್ಟು ಹಬ್ಬದ ಅಂಗವಾಗಿ ಇದರ ಫಸ್ಟ್ ಲುಕ್ ಟೀಸರ್ ಬರುತ್ತಿದೆ. ಪ್ರಶಾಂತ್ ನೀಲ್ ಅವರು ಬಿಡುಗಡೆ ಮಾಡುತ್ತಿದ್ದಾರೆ. ಹೇಗಿರಬಹುದು ಎನ್ನುವ ಕುತೂಹಲ ನನಗೂ ಇದೆ.