
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಸರಮಾಲೆ ನಿರ್ಮಿಸಿದ ಬಳಿಕ ಇದೀಗ ಡಿಜಿಟಲ್ ಲೋಕದಲ್ಲೂ ಮತ್ತೊಂದು ಅಪರೂಪದ ಮೈಲಿಗಲ್ಲು ಸಾಧಿಸಿದೆ. ಸಿನಿಮಾ ಬಿಡುಗಡೆಯಾದ ನಂತರವೂ ಅದರ ಜನಪ್ರಿಯತೆ ಕ್ಷೀಣಿಸದೆ ಮುಂದುವರಿದಿದ್ದು, ಚಿತ್ರದ ಭಕ್ತಿಗೀತೆ ‘ಬ್ರಹ್ಮಕಲಶ’ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಅಧಿಕ ರೀಲ್ಸ್‌ಗಳಲ್ಲಿ ಬಳಸಲ್ಪಟ್ಟ ಮೊದಲ ಕನ್ನಡ ಚಲನಚಿತ್ರ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ಬ್ರಹ್ಮಕಲಶ’ ಕ್ರೇಜ್ ಮುಂದುವರಿಕೆ
ಬಿಡುಗಡೆಯ ದಿನದಿಂದಲೇ ‘ಬ್ರಹ್ಮಕಲಶ’ ಹಾಡು ತನ್ನ ವಿಭಿನ್ನ ಸಂಗೀತ, ಭಾವನಾತ್ಮಕ ನಿರೂಪಣೆ ಮತ್ತು ಆಧ್ಯಾತ್ಮಿಕ ಸ್ಪರ್ಶದ ಮೂಲಕ ಸಿನಿಪ್ರಿಯರ ಮನಗೆದ್ದಿತ್ತು. ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಅಭಿನಯಕ್ಕೆ, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಸಂಯೋಜನೆ ಹಾಗೂ ಅಭಿ ವಿ. ಅವರ ಗಾಯನ ವಿಶೇಷ ಮೆರುಗು ನೀಡಿತ್ತು. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಹಲವು ಸಿನಿಮಾ ಹಾಗೂ ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಗಳವರೆಗೆ ಸಾವಿರಾರು ಮಂದಿ ಈ ಹಾಡಿಗೆ ರೀಲ್ಸ್ ಮಾಡಿದ್ದು, ಅದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇಂದಿಗೂ ಈ ಟ್ರ್ಯಾಕ್‌ಗೆ ಹೊಸಹೊಸ ರೀಲ್ಸ್‌ಗಳು ನಿರಂತರವಾಗಿ ಮೂಡಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ‘ಬ್ರಹ್ಮಕಲಶ’ ಹವಾ ಕಡಿಮೆಯಾಗಿಲ್ಲ. ಸದ್ಯದ ಮಟ್ಟಿಗೆ ಈ ದಾಖಲೆಯನ್ನು ಮತ್ತೊಂದು ಕನ್ನಡ ಚಿತ್ರದ ಹಾಡು ಮುರಿಯುವುದು ಸುಲಭದ ಮಾತಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಕರಾವಳಿಯ ಸಂಸ್ಕೃತಿ, ದೈವಾರಾಧನೆ ಮತ್ತು ಸ್ಥಳೀಯ ಪರಂಪರೆಯನ್ನು ಅದ್ಭುತವಾಗಿ ತೆರೆ ಮೇಲೆ ಕಟ್ಟಿಕೊಟ್ಟಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ. ಕಥೆ, ನಿರ್ದೇಶನ, ಛಾಯಾಗ್ರಹಣ ಮತ್ತು ಅದ್ಭುತ ದೃಶ್ಯ ವೈಭವದ ಜೊತೆಗೆ ಸಂಗೀತವೂ ಚಿತ್ರದ ಯಶಸ್ಸಿನ ಪ್ರಮುಖ ಅಂಶವಾಗಿತ್ತು.
ಮೊದಲ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ’ ಹಾಡು ಹೇಗೆ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿತ್ತೋ, ಅದೇ ರೀತಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಹಾಡುಗಳೂ ಭಾರೀ ಜನಪ್ರಿಯತೆ ಗಳಿಸಿವೆ. ಅದರಲ್ಲೂ ‘ಬ್ರಹ್ಮಕಲಶ’ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಇತಿಹಾಸ ನಿರ್ಮಿಸುವ ಮೂಲಕ ಚಿತ್ರದ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.