ಹೀರೋಗಳೇ, ಕ್ಯಾರವಾನ್ ಬಿಟ್ಟು ಆಚೆ ಬನ್ನಿ, ಸಿನಿಮಾ ನಿರ್ಮಿಸಿ: ನಿರ್ಮಾಪಕ ರಮೇಶ್ ಯಾದವ್‌

Published : Jul 19, 2026, 11:48 PM IST
Ramesh Yadav

ಸಾರಾಂಶ

ಕನ್ನಡದ ನಟ, ನಟಿಯರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ನಮ್ಮಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಮಾಡಬೇಕು ಎಂದರು ನಿರ್ಮಾಪಕ ರಮೇಶ್ ಯಾದವ್‌.

1. ಸಿನಿಮಾರಂಗ ಬಹಳ ಪವರ್‌ಫುಲ್‌ ಕ್ಷೇತ್ರ. ನಟನೊಬ್ಬನನ್ನು ಮುಖ್ಯಮಂತ್ರಿ ಮಾಡಿಸುವಷ್ಟು ಪವರ್ ಇಲ್ಲಿದೆ. ಜೊತೆಗೆ ಇದೊಂದು ಉದ್ಯಮ. ಇಲ್ಲಿ ಬಂಡವಾಳ ಹೂಡುವ ನಿರ್ಮಾಪಕ ಬಿಸಿನೆಸ್‌ ಮೈಂಡ್‌ಸೆಟ್‌ನಲ್ಲೂ ಯೋಚಿಸಬೇಕಾಗುತ್ತದೆ. ಮೊನ್ನೆ ಈ ಬಗ್ಗೆ ಮಾತನಾಡಿದ ನಟ ಪ್ರೇಮ್‌ ಅವರೂ ಬಿಸಿನೆಸ್‌ ಬಗ್ಗೆ ಯೋಚಿಸಿಯೇ ಮುಂದುವರಿದಿರುತ್ತಾರೆ. ತನಗೆ ಬರುವ ಲಾಭದ ಬಗ್ಗೆ ಅವರಿಗೆ ಯೋಚನೆ ಇದ್ದೇ ಇರುತ್ತದೆ. ಸ್ಟಾರ್‌ ಸಿನಿಮಾ ಮಾಡಿದರೆ ಆರಂಭದಲ್ಲಾದರೂ ಜನರನ್ನು ಥಿಯೇಟರ್‌ಗೆ ಎಳೆದು ತರುವ ಶಕ್ತಿ ಇರುತ್ತದೆ. ಅದೇ ಬೇರೆಯವರನ್ನು ಹಾಕಿಕೊಂಡು ಸಿನಿಮಾ ಮಾಡಿದಾಗ ಆ ಮಿನಿಮಮ್ ಗ್ಯಾರಂಟಿಯೂ ಇರುವುದಿಲ್ಲ. ಕಥೆ, ಮೇಕಿಂಗ್ ಎಷ್ಟೇ ಚೆನ್ನಾಗಿದ್ದರೂ ಅದು ಜನರಿಗೆ ರುಚಿಸುತ್ತದೋ ಇಲ್ಲವೋ ಅನ್ನುವುದನ್ನು ಅಂದಾಜಿಸುವುದು ಕಷ್ಟ. ಇಂಥಾ ಸ್ಟಾರ್‌ಗಳು ನಮ್ಮಲ್ಲಿ ಒಂದು ಸಿನಿಮಾವನ್ನೂ ಮಾಡದೇ ಅಧಿಕ ಬಂಡವಾಳದ ಕಾರಣಕ್ಕೆ ಬೇರೆ ಭಾಷೆಗೇ ಆದ್ಯತೆ ನೀಡಿದರೆ ನಮ್ಮ ಇಂಡಸ್ಟ್ರಿಗೆ ಅಳಿವು ಉಳಿವಿನ ಪ್ರಶ್ನೆಯಾಗುತ್ತದೆ.

2. ನೆನಪಿರಲಿ ಪ್ರೇಮ್ ಅವರು ಕ್ಯಾರವಾನ್‌ ಈ ಕಾಲದ ಅನಿವಾರ್ಯತೆ ಅನ್ನುವ ರೀತಿ ಮಾತನಾಡಿದರು. ಆದರೆ ಇವತ್ತು ಚಿತ್ರೀಕರಣ ವಿಳಂಬ ಆಗುವುದಕ್ಕೆ ಕ್ಯಾರವಾನ್ ಕೊಡುಗೆ ಬಹಳ ದೊಡ್ಡದು. ಕ್ಯಾರವಾನ್ ಒಳಗೆ ಸೇರಿಕೊಳ್ಳುವ ಕಲಾವಿದರನ್ನು ಅದರಿಂದ ಆಚೆ ಎಳೆದು ತರುವುದು ಬಹಳ ಕಷ್ಟ. ಅಸಿಸ್ಟೆಂಟ್ ಡೈರೆಕ್ಟರ್‌ ಕ್ಯಾರವಾನ್ ಬಾಗಿಲು ಕಾಯುತ್ತ ನಿಂತಿರಬೇಕಾಗುತ್ತದೆ. ಆತ ಐದಾರು ಬಾರಿ ಕರೆದ ಬಳಿಕ ನಿಧಾನಕ್ಕೆ ನಟ, ನಟಿಯರು ಸೆಟ್‌ಗೆ ಬರುತ್ತಾರೆ. ಆದರೆ ಸೆಟ್‌ನಲ್ಲಿ ಒಂದೊಂದು ನಿಮಿಷಕ್ಕೂ ನಿರ್ಮಾಪಕ ಹಣ ತೆರಬೇಕಾಗುತ್ತದೆ. ವಿಳಂಬವಾದರೆ ಬಾಡಿಗೆಗೆ ತರುವ ಅನೇಕ ಪರಿಕರಗಳಿಂದ ಹಿಡಿದು ಲೈಟ್‌ಬಾಯ್‌ತನಕ ಪ್ರತಿಯೊಬ್ಬರಿಗೂ ಹೆಚ್ಚಿನ ಹಣ ತೆರಬೇಕು. ಈ ನಟ, ನಟಿಯರಿಂದ ಐವತ್ತು ದಿನಗಳ ಶೂಟಿಂಗ್ ಶೆಡ್ಯೂಲ್ ಎಪ್ಪತ್ತು ದಿನಗಳಿಗೆ ವಿಸ್ತರಿಸಿದಾಗ ಖರ್ಚು ಎಷ್ಟು ಹೆಚ್ಚಾಯ್ತು ಊಹಿಸಿ.

3. ನಮ್ಮ ಹೀರೋಗಳು ಇಷ್ಟೆಲ್ಲ ಮಾತನಾಡುತ್ತಾರಲ್ಲ, ಮೂರು ಸಿನಿಮಾ ಮಾಡಿದ ಬಳಿಕ ಅದರ ಸಂಭಾವನೆಯಲ್ಲಿ ಅವರೊಂದು ಸಿನಿಮಾ ನಿರ್ಮಾಣ ಮಾಡುತ್ತ ಹೋಗಲಿ. ಆಗ ಸಿನಿಮಾ ಸಂಖ್ಯೆ ಹೆಚ್ಚುತ್ತದೆ. ಇಂಡಸ್ಟ್ರಿಯ ಮಂದಿಗೆ ಕೆಲಸ ಸಿಗುತ್ತದೆ. ಜೊತೆಗೆ ನಿರ್ಮಾಪಕರ ಕಷ್ಟ ಏನು ಅನ್ನುವುದೂ ತಿಳಿಯುತ್ತದೆ.

4. ಕನ್ನಡದ ನಟ, ನಟಿಯರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ನಮ್ಮಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಮಾಡಬೇಕು. ಅವರಿಗೆ ಅನ್ನಕೊಟ್ಟ ಭಾಷೆಗೆ ಅಷ್ಟಾದರೂ ಮರ್ಯಾದೆ ಕೊಡಬೇಕು.

5. ಈಗೀಗ ಸ್ಟಾರ್‌ಗಳು ಕಿರುತೆರೆಗೆ ಹೋಗುವುದು ಸಾಮಾನ್ಯವಾಗಿದೆ. ಅವರ ಸ್ಟಾರ್‌ ವ್ಯಾಲ್ಯೂ ನೋಡಿ ಕಿರುತೆರೆಯವರು ಅವರನ್ನು ಆಹ್ವಾನಿಸಿರುತ್ತಾರೆ. ಆದರೆ ಸಿನಿಮಾ ಪ್ರೇಕ್ಷಕರ ಮನಸ್ಥಿತಿಯೇ ಬೇರೆ. ಎಷ್ಟೋ ಮಂದಿ ತಮ್ಮ ನೆಚ್ಚಿನ ಸ್ಟಾರ್‌ಗಳನ್ನು ನೋಡಲೆಂದೇ ಥಿಯೇಟರ್‌ಗೆ ಬರುತ್ತಾರೆ. ಅವರಿಗೆ ಈ ಸ್ಟಾರ್‌ಗಳು ಮನೆಯ ಟಿವಿಯಲ್ಲೇ ನೋಡಲು ಸಿಗುತ್ತಾರೆ ಅಂತಾದಾಗ ಅವರು ಸಿನಿಮಾಕ್ಕೆ ಯಾಕೆ ಬರುತ್ತಾರೆ. ಅದಕ್ಕೂ ಹೆಚ್ಚು ದಿನಾ ಅವರ ಮುಖ ನೋಡಿ ಅವರ ಬಗ್ಗೆ ಮೊದಲಿನ ಆಕರ್ಷಣೆ ಕಡಿಮೆ ಆಗುವ ಸಾಧ್ಯತೆಯೂ ಇದೆ.

ಅವರಂತೆ ಇರಲು ಯಾರಿಂದಲೂ ಸಾಧ್ಯವಿಲ್ಲ

6. ಡಾ.ರಾಜ್‌ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎಂದು ಗೌರವಿಸುತ್ತಿದ್ದರು. ಸಿನಿಮಾಕ್ಕೆ ತಮ್ಮೆಲ್ಲ ಶ್ರಮ ಹಾಕಿ ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು. ಮನಸ್ಸು ಮಾಡಿದರೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಪರಭಾಷೆಗಳಲ್ಲಿ ನಟಿಸಬಹುದಿತ್ತು. ಅವರು ಅದೆಲ್ಲ ತ್ಯಜಿಸಿ ನಟನೆಯನ್ನೇ ಸರ್ವಸ್ವವಾಗಿಸಿಕೊಂಡರು. ಅವರಂತೆ ಇರಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕಿಂಚಿತ್ತಾದರೂ ಅವರ ಗುಣಗಳನ್ನು ಇಂದಿನ ನಟ, ನಟಿಯರು ಅಳವಡಿಸಿಕೊಳ್ಳಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕರಾವಳಿ' ನನ್ನನ್ನು ಸ್ವಾರ್ಥರಹಿತ ವ್ಯಕ್ತಿಯನ್ನಾಗಿ ಮಾಡಿದೆ: ನಟಿ ಸಂಪದ ಹುಲಿವನ ಹೇಳಿದ್ದೇನು?
'ಗೀತರಚನಾಕಾರರಿಗೆ ಸಿಗಬೇಕಾದಷ್ಟು ಗೌರವ ಸಿಗುತ್ತಿಲ್ಲ': 3000 ಹಾಡುಗಳ ಸೃಷ್ಟಿಕರ್ತ ನಾಗೇಂದ್ರ ಪ್ರಸಾದ್ ಬೇಸರ