ದರ್ಶನ್ ಗ್ಯಾಂಗ್‌ನ ಮತ್ತೊಬ್ಬ ಆರೋಪಿ ಬಂಧನ, ರೇಣುಕಾಸ್ವಾಮಿ ಕೊಲೆಗೆ ಬಳಸಿದ್ದ ಮೆಗ್ಗರ್ ವಶಕ್ಕೆ!

By Chethan Kumar  |  First Published Jun 16, 2024, 11:09 PM IST

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್‌ನ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದ ರಾಜು ಅಲಿಯಾಸ್ ಧನರಾಜ್‌ನನ್ನು ಅರೆಸ್ಟ್ ಮಾಡಲಾಗಿದೆ.
 


ಬೆಂಗಳೂರು(ಜೂ.16) ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿದೆ. ಈ ಪೈಕಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ರಾಜು ಅಲಿಯಾಸ್ ಧನರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಬಳಿಕ ರಾಜು ತಲೆಮರೆಸಿಕೊಂಡಿದ್ದ. ಇದೀಗ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಬೆಂಗಳೂರಿನಲ್ಲೇ ರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಹತ್ಯೆಗೆ ಬಳಸಿದ್ದ ಮೆಗ್ಗರ್ ವಶಕ್ಕೆ ಪಡೆಯಲಾಗಿದೆ. 

ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರ ಹಿಂಸೆ ನೀಡಿದ್ದರು. ಈ ವೇಳೆ ಎ9 ಆರೋಪಿ ರಾಜು ಹಾಗೂ ಎ5 ಆರೋಪಿ ನಂದೀಶ್ ಇಬ್ಬರು ಸೇರಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದರು. ತೀವ್ರ ಹಲ್ಲೆ, ಮರ್ಮಾಂಗಕ್ಕೆ ಒದ್ದು ಹಾಗೂ ಕರೆಂಟ್ ಶಾಕ್‌ ನೀಡಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿತ್ತು. ಮೃತದೇಹ ಮೋರಿಗೆ ಎಸೆದ ಬಳಿಕ ಆರೋಪಿ ರಾಜು ಪರಾರಿಯಾಗಿದ್ದ. ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಅರೆಸ್ಟ್ ಆದರೂ ರಾಜು ನಾಪತ್ತೆಯಾಗಿದ್ದ.

Latest Videos

undefined

ಪ್ರಕರಣ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ರಾಜು ಬಂಧಿಸಿದ್ದಾರೆ. ಈತನಿಂದ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ ಮಶೀನ್ ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಪ್ರಕರಣ ಸಂಬಂಧ ಇದುವರೆಗೆ ದರ್ಶನ್ ಗ್ಯಾಂಗ್‌ನ 19 ಆರೋಪಿಗಳನ್ನು ಬಂಧಿಸಲಾಗಿದೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ವ್ಯವಸ್ಥಿತಿ ಷಡ್ಯಂತ್ರದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬಂದ ದರ್ಶನ್ ಗ್ಯಾಂಗ್ ಇಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿತ್ತು. ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು. ದರ್ಶನ್ ಹಾಗೂ ಪವಿತ್ರಾ ಗೌಡ ಶೆಡ್‌ಗೆ ಆಗಮಿಸಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು. ಈ ಪೈಕಿ ನಂದೀಶ್ ಹಾಗೂ ರಾಜು ಮೆಗ್ಗರ್ ಮಶೀನ್ ಮೂಲಕ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದರು. ಸಿಗರೇಟಿನಿಂದ ಸುಟ್ಟಿದ್ದರು. ಸಸ್ಯಾಹಾರಿಯಾಗಿದ್ದ ರೇಣುಕಾಸ್ವಾಮಿಗೆ ಬಲವಂತವಾಗಿ ಮಾಂಸ ತಿನ್ನಿಸಿದ್ದರು. ಅತ್ಯಂತ ಕ್ರೂರವಾಗಿ, ಬರ್ಬರವಾಗಿ ರೇಣುಕಾಸ್ವಾಮಿ ಹತ್ಯೆ ನಡೆಸಲಾಗಿತ್ತು. ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಮೋರಿಗೆ ಎಸೆದು ಪರಾರಿಯಾಗಿದ್ದರು. 

ಬಳಿಕ ಆರೋಪಿಗಳಿಬ್ಬರು ತಾವೇ ಈ ಕೊಲೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಆದರೆ ಪೊಲೀಸ್ ತನಿಖೆಯಲ್ಲಿ ಇದರ ಹಿಂದೆ ಅತೀ ದೊಡ್ಡ ಷಡ್ಯಂತ್ರ ಇರುವುದು ಬೆಳಕಿಗೆ ಬಂದಿದೆ. ಬಳಿಕ ನಟ ದರ್ಶನ್ ಸೇರಿ ಒಬ್ಬರ ಹಿಂದೊಬ್ಬರನ್ನು ಪೊಲೀಸರು ಬಂಧಿಸಿ ಇದೀಗ ವಿಚಾರಣೆ ತೀವ್ರಗೊಳಿಸಿದ್ದಾರೆ. 

ಮರ್ಡರ್‌ ಕೇಸಲ್ಲಿ ಅರೆಸ್ಟ್‌: ದರ್ಶನ್‌ಗೆ ಬಿಟ್ಟೂ ಬಿಡದೆ ಬೆನ್ನು ಹತ್ತಿದೆಯಾ 'ಡೆವಿಲ್' ಚಿತ್ರ?

click me!