ಪುನೀತ್‌ ಕಣ್ಣಿಂದ 4 ಮಂದಿಗೆ ದೃಷ್ಟಿನೀಡಲು ಸಿದ್ಧತೆ

By Kannadaprabha NewsFirst Published Oct 31, 2021, 6:18 AM IST
Highlights

*  ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡುವ ತಂತ್ರಜ್ಞಾನ
*  ಅಂಧರಿಗೆ ಪುನೀತ್‌ ಕಣ್ಣಿಂದ ಪ್ರಪಂಚ ನೋಡುವ ಭಾಗ್ಯ
*  25 ಸಾವಿರ ಮಜ್ಜಿಗೆ ಪ್ಯಾಕೆಟ್‌, 4 ಸಾವಿರ ಕುಕ್ಕೀಸ್‌ ವಿತರಣೆ
 

ಬೆಂಗಳೂರು(ಅ.31): ಭಾನುವಾರ ಮಣ್ಣಲ್ಲಿ ಮಣ್ಣಾಗಲಿರುವ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರು ಭಕ್ತ ಕಣ್ಣಪ್ಪನಾಗಿ ಮೂರ್ನಾಲ್ಕು ಮಂದಿ ಅಂಧರಿಗೆ(Blind) ಸುಂದರ ಪ್ರಪಂಚ ನೋಡುವ ‘ಪ್ರೇಮದ ಕಾಣಿಕೆ’ ನೀಡಲಿದ್ದಾರೆ.

ನಾರಾಯಣ ನೇತ್ರಾಲಯವು(Narayana Nethralaya) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್‌ ಅವರ ಕಣ್ಣುಗಳಿಂದ ಮೂರ್ನಾಲ್ಕು ಮಂದಿಗೆ ದೃಷ್ಟಿನೀಡಲು ಪ್ರಯತ್ನ ಶುರು ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪುನೀತ್‌ ಮಣ್ಣಲ್ಲಿ ಮಣ್ಣಾಗುವ ವೇಳೆಗೆ ಅವರ ಕಣ್ಣುಗಳು(Eye) ಮೂರ್ನಾಲ್ಕು ಮಂದಿಗೆ ಸುಂದರ ಪ್ರಪಂಚ ತೋರುವ ಸಾಧ್ಯತೆ ಇದೆ.

Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು

ಈ ಬಗ್ಗೆ ‘ಕನ್ನಡಪ್ರಭ’(Kananda Prabha) ಜತೆ ಮಾತನಾಡಿದ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗಶೆಟ್ಟಿ, ಪುನೀತ್‌ ಅವರ ದಾನ ಮಾಡಿದ ಕಣ್ಣುಗಳನ್ನು ಅಳವಡಿಸಲು ಮೂರ್ನಾಲ್ಕು ಮಂದಿಗೆ ಬರಲು ಸೂಚಿಸಿದ್ದೇವೆ. ಕಣ್ಣುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ಇದರ ಸಹಕಾರದಿಂದ ಕಣ್ಣಿನ ಮುಂಭಾಗ ಹಾನಿಗೊಳಗಾದವರಿಗೆ ಮುಂಭಾಗ ಹಾಗೂ ಹಿಂಭಾಗ ಹಾನಿಗೊಳಗಾದವರಿಗೆ ಹಿಂಭಾಗ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಮೂರ್ನಾಲ್ಕು ಮಂದಿಗೆ ದೃಷ್ಟಿ ನೀಡಲು ಯೋಚಿಸಿದ್ದೇವೆ. ಭಾನುವಾರ ಈ ಸಂಬಂಧ ಅಂತಿಮ ಪ್ರಕ್ರಿಯೆ ನಡೆಯಲಿದೆ. ಭಾನುವಾರ ಪುನೀತ್‌ ಅವರ ಅಂತ್ಯಸಂಸ್ಕಾರ ಮುಗಿದ ಬಳಿಕ ನಾವೇ ಖುದ್ದು ಎಲ್ಲಾ ಮಾಹಿತಿಯನ್ನೂ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಪುನೀತ್‌ ತಂದೆ ಹಾಗೂ ತಾಯಿಯ ಹಾದಿಯಲ್ಲಿ ಸಾಗಿ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅಭಿಮಾನಿಗಳು ಹಾಗೂ ಕನ್ನಡಿಗರನ್ನು ದೇವರಂತೆ ಪೂಜಿಸುವ ಡಾ. ರಾಜ್‌ ಕುಟುಂಬದ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಪುನೀತ್‌ ಅಭಿಮಾನಿಗಳಿಗೆ ‘ನಂದಿನಿ’ ಮಜ್ಜಿಗೆ, ಕುಕ್ಕೀಸ್‌

ದಶಕಕ್ಕೂ ಹೆಚ್ಚು ನಂದಿನಿ(Nandini) ಉತ್ಪನ್ನಗಳ ರಾಯಭಾರಿಯಾಗಿದ್ದ ಪುನೀತ್‌ ರಾಜ್‌ಕುಮಾರ್‌ ಅಂತಿಮ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಭಿಮಾನಿಗಳಿಗಾಗಿ ಕೆಎಂಎಫ್‌ ವತಿಯಿಂದ 4 ಸಾವಿರ ಕುಕ್ಕೀಸ್‌ ತಿಂಡಿ ಹಾಗೂ 25 ಸಾವಿರ ಮಜ್ಜಿಗೆ ಪ್ಯಾಕೆಟ್‌ ವಿತರಿಸಲಾಯಿತು.

ಶುಕ್ರವಾರ ಸಂಜೆಯಿಂದಲೂ ಲಕ್ಷಾಂತರ ಮಂದಿ ಅಭಿಮಾನಿಗಳು ಅಪ್ಪು ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದರು. ಶನಿವಾರ ಅಭಿಮಾನಿಗಳಿಗಾಗಿ ಬಮೂಲ್‌ ವತಿಯಿಂದ 25 ಸಾವಿರ ಮಜ್ಜಿಗೆ ಪಾಕೆಟ್‌ ಹಾಗೂ 4 ಸಾವಿರ ಕುಕ್ಕೀಸ್‌ ತಿಂಡಿ ವಿತರಣೆ ಮಾಡಲಾಗಿದೆ. ಈ ಮೂಲಕ ಪುನೀತ್‌ ರಾಜ್‌ಕುಮಾರ್‌ ಹಾಗೂ ಅಭಿಮಾನಿಗಳಿಗೆ ಗೌರವ ಸಲ್ಲಿಸಲಾಗಿದೆ ಎಂದು ಕೆಎಂಎಫ್‌ ಮಾರುಕಟ್ಟೆ ವಿಭಾಗದ ಸಹಾಯಕ ನಿರ್ದೇಶಕ ರಘುನಂದನ್‌ ಹೇಳಿದರು.
 

click me!