ಯುಗಾದಿಯಂದು ಯೂಟ್ಯೂಬ್‌ನಲ್ಲಿ ಬರಲಿರುವ ಕ್ರೇಜಿಸ್ಟಾರ್‌!

By Suvarna NewsFirst Published Apr 6, 2021, 4:34 PM IST
Highlights

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೊನೆಗೂ ಸಾಮಾಜಿಕ ಜಾಲತಾಣಕ್ಕೆ ಪ್ರವೇಶಿಸುತ್ತಿದ್ದಾರೆ. ಅಂದಹಾಗೆ ಈಗಾಗಲೇ ಅವರನ್ನು ಫೇಸ್ಬುಕ್, ಟ್ವಿಟ್ಟರ್ ಮೂಲಕ ಫಾಲೋ ಮಾಡ್ತಾ ಇರೋರು ಬೆಚ್ಚಿ ಬೀಳಬೇಡಿ. ಅದು ಅವರ ಅಕೌಂಟ್‌ ಅಲ್ಲ. ರವಿಚಂದ್ರನ್ ಅವರ ಹೆಸರಲ್ಲಿ ಯಾರೋ ಮಾಡಿರುವಂಥ ಫೇಕ್ ಅಕೌಂಟ್‌ಗಳು ಅವು. ಆದರೆ ಇದೀಗ ಸ್ವತಃ ಎಂಟ್ರಿ ನೀಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ ರವಿಚಂದ್ರನ್.
 

ಸದಾ ಏನಾದರೊಂದು ಸೃಜನಶೀಲ ಕೆಲಸದಲ್ಲಿರುವವರು ವಿ ರವಿಚಂದ್ರನ್. ಅದೇ ಕಾರಣದಿಂದಲೇ ಸಾಮಾಜಿಕ ಜಾಲತಾಣದಿಂದ ದೂರ ಕಾಯ್ದುಕೊಂಡಿದ್ದ ಅವರು ಅದು ಸತ್ಯಕ್ಕಿಂತ ದೂರದಲ್ಲೇ ಇರುತ್ತದೆ ಎನ್ನುವ ಅಭಿಪ್ರಾಯ ಹೊಂದಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಬೇರೆಯವರು ರವಿಚಂದ್ರನ್ ಹೆಸರಿನಲ್ಲಿರುವ ಫೇಸ್ಬುಕ್‌ ವೆರಿಫೈ ಕೂಡ ಆಗಿತ್ತು ಎನ್ನುವುದು ವಿಶೇಷ. ಬಹುಶಃ ಇದನ್ನೆಲ್ಲ ನೋಡಿಯೇ ಇನ್ನು ಖುದ್ದಾಗಿ ಬರುವುದೇ ಚಂದ ಎಂದು ಪ್ರವೇಶಕ್ಕೆ ಸನ್ನದ್ಧರಾಗಿದ್ದಾರೆ ಕ್ರೇಜಿಸ್ಟಾರ್. ಯಾವುದೇ ಕೆಲಸವನ್ನು ಮಾಡಿದರೂ ಅಲ್ಲೊಂದು ಅಚ್ಚುಕಟ್ಟು ಆಕರ್ಷಣೆ ಮತ್ತು ಅದ್ಧೂರಿತನ ಇದೆಯೆಂದರೆ ಅದು ರವಿಚಂದ್ರನ್ ಎಂದು ಕಣ್ಮುಚ್ಚಿ ಹೇಳಬಹುದಾದ ಇಮೇಜ್ ಇವರದ್ದು. ಹಾಗಾಗಿ ಈ ಬಾರಿಯೂ ತಮ್ಮ ಸಾಮಾಜಿಕ ಜಾಲತಾಣದ ಪ್ರವೇಶದ ಸೂಚನೆಯನ್ನು ಸೊಗಸಾಗಿ ನೀಡಿದ್ದಾರೆ ಸಣ್ಣದೊಂದು ತುಣುಕು ವಿಡಿಯೋ ಮೂಲಕ.

- ಶಶಿಕರ ಪಾತೂರು

ಲಾಕ್ಡೌನ್ ಸಂದರ್ಭದಲ್ಲಿ ಒಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಮನರಂಜನೆಯನ್ನು ನೋಡುವವರ ಸಂಖ್ಯೆ ಹೆಚ್ಚಾಗಿತ್ತು. ಅದೇ ಸಂದರ್ಭದಲ್ಲಿ ಸ್ವತಃ ಒಟಿಟಿ ನಿರ್ಮಾಣಕ್ಕೆ ಮುಂದಾದವರಲ್ಲಿ ಕ್ರೇಜಿಸ್ಟಾರ್  ರವಿಚಂದ್ರನ್ ಹೆಸರು ಕೂಡ ಕೇಳಿಬಂದಿತ್ತು. ಅದು ಕಾರ್ಯಗತಗೊಂಡಿಲ್ಲ ಎನ್ನುವುದು ಸತ್ಯವಾದರೂ ಸ್ವತಃ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡುತ್ತಿರುವುದಾಗಿ ಅವರೇ ಘೋಷಿಸಿಕೊಂಡಿದ್ದಾರೆ.

ರವಿಚಂದ್ರನ್ ಚಿತ್ರ ನಿರ್ದೇಶಿಸುವ ಆಸೆ ಇದೆ

ರವಿಚಂದ್ರನ್ ಅವರು ಫೇಸ್ಬುಕ್, ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆಲ್ಲ ಬರೋದೇನೋ ಸರಿ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ರವಿಚಂದ್ರನ್ ಅವರ ಯೂಟ್ಯೂಬ್ ಪ್ರವೇಶ ಎಲ್ಲರಿಗೂ ಆಸಕ್ತಿಯ ವಿಚಾರವಾಗಿದೆ. ಯಾಕೆಂದರೆ ಅವರು ಕ್ರೇಜಿಸ್ಟಾರ್ ಆಗಿದ್ದೇ ಪರದೆಯ ಮೇಲೆ ದೃಶ್ಯ ವಿಸ್ಮಯಗಳನ್ನು ತೋರಿಸುವ ಮೂಲಕ. ಇದೀಗ ಅಂಥದೊಂದು ಪರದೆ ಅವರದೇ ಹೆಸರಲ್ಲಿ ಸೃಷ್ಟಿಯಾಗುತ್ತಿದೆ ಎನ್ನುವುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. ಯೂಟ್ಯೂಬ್ ವಾಹಿನಿಯನ್ನು ಇಂದು ಯಾರು ಎಷ್ಟು ಬೇಕಾದರೂ ಮಾಡಿಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಆದರೆ ರವಿಚಂದ್ರನ್ ಅವರು ಅದರಲ್ಲಿಯೂ ಸೃಜನಶೀಲತೆ ತೋರಿಸಲಿರುವ ಬಗ್ಗೆ ಯಾವ ಸಂದೇಹವೂ ಇಲ್ಲ. ಸ್ವತಃ ರವಿಯವರೇ ಹೇಳಿಕೊಂಡಂತೆ ತಮ್ಮದೇ ನಿರ್ಮಾಣದಲ್ಲಿ ಕಷ್ಟಪಟ್ಟು  ಚಿತ್ರೀಕರಿಸಿದ ಹಲವಾರು ಅಮೋಘ ದೃಶ್ಯಗಳನ್ನು ಅವರು ಫೈನಲ್‌ ಇನ್‌ಪುಟ್‌ನಲ್ಲಿ ಸಿನಿಮಾಗೆ ಅಗತ್ಯವಿಲ್ಲ ಎಂದು ಕತ್ತರಿಸಿಟ್ಟ ಘಟನೆಗಳು ಸಾಕಷ್ಟಿವೆ. ಅಂಥ ಬಳಸದಿರುವ ದೃಶ್ಯಗಳಿದ್ದರೂ ಕೂಡ ಅವು ಪ್ರೇಕ್ಷಕರನ್ನು ಸೆಳೆಯಲಿರುವುದು ಖಚಿತ. ಅಷ್ಟೇ ಅಲ್ಲ, ರವಿಚಂದ್ರನ್ ಸುಖಾ ಸುಮ್ಮನೆ ಮೊಬೈಲ್ ಕ್ಯಾಮೆರಾ ಹಿಡಿದರೂ ಅಲ್ಲಿ ದೃಶ್ಯ ಕಾವ್ಯದ ಪ್ರಯತ್ನ ಇರುತ್ತದೆ. ಅಂಥ ಹಲವಾರು ಚಿತ್ರಣಗಳಿಗೆ ಇಂದು ಕೇಂದ್ರವಾಗಬಹುದೆನ್ನುವ ನಿರೀಕ್ಷೆ ಇದೆ.

ರವಿಚಂದ್ರನ್ ಅವರಿಗೆ ಈ ವರ್ಷ ಹಲವಾರು ಕಾರಣಗಳಿಂದಾಗಿ ವಿಶೇಷ. ಅರವತ್ತನೇ ವರ್ಷದ ಜನ್ಮದಿನ. ಈಶ್ವರಿ ಸಂಸ್ಥೆಗೆ ಐವತ್ತು ವರ್ಷಗಳು ತುಂಬಿವೆ. ಹಾಗೆ ರವಿಚಂದ್ರನ್ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ಐದು ದಶಕ ಪೂರ್ತಿಯಾಗುತ್ತಿದೆ. ಅವರದೇ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ `ರವಿಬೋಪಣ್ಣ' ಬಿಡುಗಡೆಯ ಹಂತದಲ್ಲಿದೆ. ಅವರ ನಿರ್ದೇಶನಲ್ಲಿ ಬಂದ ಕೊನೆಯ ಚಿತ್ರ `ಅಪೂರ್ವ' ಆಗಿತ್ತು. ಐದು ವರ್ಷಗಳ ಬಳಿಕ ಅವರದ ನಿರ್ದೇಶನದಲ್ಲಿ ಬರುತ್ತಿರುವ ಸಿನಿಮಾ ಅದು. ಅದರ ಜೊತೆಗೆ `ಕನ್ನಡಿಗ'ನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ಕರ್ನಾಟಕದ ಬಗ್ಗೆ ಇರುವಂಥ ಜನಪ್ರಿಯ ಗೀತೆಗಳಲ್ಲಿ ರವಿಚಂದ್ರನ್ ಸಿನಿಮಾದ ಹಲವು ಹಾಡುಗಳು ಸೇರಿಕೊಳ್ಳುತ್ತವೆ. ಅಂಥ ರವಿಚಂದ್ರನ್ ಸ್ವತಃ ಐತಿಹಾಸಿಕ ಕನ್ನಡದ ಹೋರಾಟಗಾರನಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.   ಈ ಎಲ್ಲ ಕಾರಣಗಳಿಂದ ಈ ವರ್ಷ ಅವರ ಪಾಲಿಗೆ ವಿಶಿಷ್ಠವೆಂದೇ ಹೇಳಬಹುದು. ಇವೆಲ್ಲದರ ಜೊತೆಗೆ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಏಕಕಾಲದಲ್ಲಿ ಪ್ರವೇಶಿಸುತ್ತಿರುವುದು ಅಭಿಮಾನಿಗಳ ಪಾಲಿಗೆ ಹಬ್ಬವೆಂದೇ ಹೇಳಬಹುದು. 

ಕ್ರೇಜಿ ಸ್ಟಾರಿ ಸಿನಿಮಾಗೆ ಶಿವಣ್ಣ ಹಾಡು, ನೋಡಿ ವೀಡಿಯೋ
 

click me!