ಹಾಸ್ಟೆಲ್ ಹುಡುಗರಿಗೆ ರಮ್ಯಾ ನೋಟಿಸ್ ಭಾಗ್ಯ: ಈ ಸಿನಿಮಾ ಮೇಲೆ ಯಾಕೆ ಅನೇಕರಿಗೆ ಕಣ್ಣು?

By Kannadaprabha News  |  First Published Jul 19, 2023, 10:20 PM IST

ಪ್ರೋಮೋಗಳ ಮೂಲಕವೇ ಕುತೂಹಲ ಕೆರಳಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಈಗ ರಮ್ಯಾ ನೋಟಿಸ್ ಭಾಗ್ಯ ಒದಗಿಸಿದ್ದಾರೆ.


ಪ್ರೋಮೋಗಳ ಮೂಲಕವೇ ಕುತೂಹಲ ಕೆರಳಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಈಗ ರಮ್ಯಾ ನೋಟಿಸ್ ಭಾಗ್ಯ ಒದಗಿಸಿದ್ದಾರೆ. ಜುಲೈ 21ರಂದು ಬಿಡುಗಡೆಯಾಗುವ ಈ ಸಿನಿಮಾ ಮೇಲೆ ಅನೇಕರಿಗೆ ಯಾಕೆ ಕಣ್ಣು ಎಂಬ ಕುರಿತ ಲೇಖನ ಇಲ್ಲಿದೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಅದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಜುಲೈ 21ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಮೇಲೆ ರಮ್ಯಾ ಕೋಪಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಆರಂಭದಲ್ಲಿ ಪ್ರಮೊಷನಲ್ ವೀಡಿಯೋ ಮಾಡಿದ್ದ ರಮ್ಯಾ ಈಗ ಮಾತ್ರ ಸಿಟ್ಟು ಮಾಡಿಕೊಂಡು ಸಿನಿಮಾ ಬಿಡುಗಡೆಗೆ ಎರಡು ದಿನ ಮೊದಲು ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾದ ವಿಶೇಷತೆಗಳನ್ನು ನೋಡೋಣ.

Tap to resize

Latest Videos

ರಮ್ಯಾಗಾಗಿ ಗುಡಿ ಕಟ್ಟಿಸಿ ಪ್ರತಿಭಟನೆ ಮಾಡಿದ 'ಹಾಸ್ಟೆಲ್ ಹುಡುಗರು'; ವಿಡಿಯೋ ನೋಡಿ ಫ್ಯಾನ್ಸ್ ಖುಷ್

1. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಸಿನಿಮಾದ ಬಗ್ಗೆ ಮೊದಲು ಗೊತ್ತಾಗಿದ್ದು ಕ್ರಿಯೇಟಿವ್ ಪ್ರೋಮೋಗಳ ಮೂಲಕ. ವಿಶಿಷ್ಟವಾದ ಪ್ರೋಮಗಳನ್ನು ನೋಡಿ ಸ್ವತಃ ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ, ರಮ್ಯಾ, ರಿಷಬ್ ಶೆಟ್ಟಿಯವರೇ ಮರುಳಾಗಿದ್ದರು. ಪುನೀತ್ ಅವರಿಗೆ ಈ ಹುಡುಗರ ಮೇಲೆ ಎಷ್ಟು ಪ್ರೀತಿ ಹುಟ್ಟಿತ್ತು ಎಂದರೆ ಅ‍ವರೇ ಈ ಚಿತ್ರವನ್ನು ಪ್ರಮೋಟ್ ಮಾಡಲು ಮುಂದಾಗಿದ್ದರು. ಅದರ ಮುಂದವರಿದ ಭಾಗವಾಗಿ ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ಅರ್ಪಿಸಲು ಒಪ್ಪಿಕೊಂಡರು. ರಿಷಬ್‌ ಶೆಟ್ಟಿ, ಪವನ್‌ ಕುಮಾರ್‌ರಂಥ ದೊಡ್ಡ ನಿರ್ದೇಶಕರು ಈ ಚಿತ್ರದ ಸಣ್ಣ ಪಾತ್ರಗಳಲ್ಲಿ ನಟಿಸಿದರು ಕೂಡ. ರಕ್ಷಿತ್ ಶೆಟ್ಟಿಯಂತೂ ಈ ಚಿತ್ರ ಪ್ರಮೋಷನ್ ವಿಡಿಯೋಗಳಲ್ಲೂ ಭಾಗವಹಿಸುತ್ತಿದ್ದಾರೆ. ಈ ಸಿನಿಮಾವನ್ನು ಜನರಿಗೆ ತಲುಪಿಸಲು ಹೋರಾಟವೇ ನಡೆಸುತ್ತಿದ್ದಾರೆ.

2. ನಿತಿನ್ ಕೃಷ್ಣಮೂರ್ತಿ ಎಂಬ ಯುವ ನಿರ್ದೇಶಕ ನಿರ್ದೇಶಿಸಿರುವ ಮೊದಲ ಸಿನಿಮಾ ಇದು. ಈ ಸಿನಿಮಾದ ವಿಶುವಲ್ಸ್‌ಗಳನ್ನು ನೋಡಿದ ರಕ್ಷಿತ್ ಶೆಟ್ಟಿಯವರು ಹಾಲಿವುಡ್ ರೇಂಜಿನ ಫಿಲಂ ಮೇಕಿಂಗ್ ಇದೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಅಷ್ಟರ ಮಟ್ಟಿಗೆ ಪಕ್ಕಾ ಪ್ಲಾನ್ ಮಾಡಿ ರೂಪಿಸಿದ ಸಿನಿಮಾ ಇದು.

3. ಒಂದು ಹಾಸ್ಟೆಲ್‌ನಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕತೆ ಇದು ಎನ್ನಲಾಗಿದೆ. ಇಲ್ಲಿ ಪ್ರಮುಖವಾಗಿ ಪ್ರಜ್ವಲ್, ಶ್ರೀವತ್ಸ, ಭರತ್, ಮಂಜುನಾಥ್, ತೇಜಸ್, ಚೇತನ್ ದುರ್ಗಾ, ಪವನ್ ಶರ್ಮಾ, ಅನಿರುದ್ಧ, ಶ್ರೇಯಸ್ ಶರ್ಮಾ, ಮಂಜುನಾಥ್ ನಾಯಕ್, ಅರ್ಚನಾ ಕೊಟ್ಟಿಗೆ, ಅನುಷಾ ಕೃಷ್ಣಾ ನಟಿಸಿದ್ದಾರೆ. ಒಬ್ಬೊಬ್ಬರ ನಟನೆಯೂ ಮನಮೋಹಕ. ಇಂಟರೆಸ್ಟಿಂಗ್ ಎಂದರೆ ಸುಮಾರು 300 ಮಂದಿ ಕಾಣಿಸಿಕೊಳ್ಳುವ ದೃಶ್ಯಗಳೂ ಈ ಚಿತ್ರದಲ್ಲಿವೆ. ಅದರಲ್ಲಿ ಬಹುತೇಕರು ರಂಗಭೂಮಿ ಪ್ರತಿಭೆಗಳು.

4. ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದು ರಕ್ಷಿತ್ ಶೆಟ್ಟಿಯಾದರೂ ವಿತರಣೆ ಮಾಡುತ್ತಿರುವುದು ಜೀ ಸ್ಟುಡಿಯೋಸ್. ನಿರ್ಮಾಣ ತಂಡದಲ್ಲಿ ಮುಂಚೂಣಿಯಲ್ಲಿರುವುದು ವರುಣ್ ಅವರು.

ಕೊನೆಗೂ ಚಿತ್ರಮಂದಿರಕ್ಕೆ ಬರ್ತಿದ್ದಾರೆ 'ಹಾಸ್ಟೆಲ್ ಹುಡುಗರು'; ಯಾವಾಗ?

5. ಈ ಚಿತ್ರದ ತಾಂತ್ರಿಕತಂಡವಂತೂ ಅದ್ದೂರಿಯಾಗಿದೆ. ಈ ಸಿನಿಮಾದ ಛಾಯಾಗ್ರಹಣ ಮಾಡಿದ್ದು ಕಾಂತಾರ ಖ್ಯಾತಿಯ ಅರವಿಂದ್ ಕಶ್ಯಪ್ ಮತ್ತು ಸಂಗೀತ ನಿರ್ದೇಶನ ಮಾಡಿರುವುದು ಒನ್‌ ಆ್ಯಂಡ್ ಓನ್ಲಿ ಅಜನೀಶ್ ಲೋಕನೋಥ್. ಎಲ್ಲಾ ಪ್ರತಿಭಾವಂತರೂ ಒಂದೇ ಕಡೆ ಸೇರಿರುವುದರಿಂದ ಸಿನಿಮಾ ಕೂಡ ಅಪೂರ್ವವಾಗಿದೆ ಎನ್ನುವುದು ಸಿನಿಮಾ ನೋಡಿದವರ ಅಭಿಪ್ರಾಯ.

6. ಒಟ್ಟಾರೆ ಇದೊಂದು ಪ್ರತಿಭಾವಂತ ತಂಡ ಸೇರಿಕೊಂಡು ರೂಪಿಸಿದ ಸಿನಿಮಾ. ಪ್ರಸ್ತುತ ಇದಕ್ಕೆ ಎದುರಾಗಿರುವ ವಿಘ್ನಗಳೆಲ್ಲಾ ಬಗೆಹರಿದು ಸಿನಿಮಾ ಚಿತ್ರಮಂದಿರಕ್ಕೆ ಬಂದು ಹೊಸ ತಂಡವನ್ನು ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡು ಬೆನ್ನುತಟ್ಟುತ್ತಾರೆಯೇ ಅಥವಾ ಬೆನ್ನಿಗೆ ಎರಡು ಕೊಟ್ಟು ಮುಂದೆ ಹೋಗುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.

click me!