SPB ಕಾಯ್ತಿದ್ರು, ಬಾಬು-ಹಂಸಲೇಖ ಬಾತ್‌ರೂಂ ಪಕ್ಕ ಅಡಗಿದ್ರು.. ಆಗ ಹುಟ್ಟಿದ ಹಿಟ್ ಹಾಡನ್ನ ಜೈಲಲ್ಲಿ 3 ಬಾರಿ ಕೇಳ್ತಿದ್ರಂತೆ ರೆಡ್ಡಿ!

Published : Nov 14, 2026, 12:58 PM IST
Kannada evergreen songs history

ಸಾರಾಂಶ

Hamsalekha SPB songs: ಎಸ್ಪಿಬಿಗೆ ಹೆದರಿ ಅವಿತುಕೊಂಡಿದ್ದಾಗ ಜಸ್ಟ್ 5 ನಿಮಿಷದಲ್ಲಿ ಹುಟ್ಟಿದ ಕನ್ನಡದ ಆ ಆಲ್‌ಟೈಮ್ ಬ್ಲಾಕ್‌ಬಸ್ಟರ್ ಹಾಡು ಯಾವುದು ಗೊತ್ತಾ? ಜೈಲಿನಲ್ಲಿದ್ದಾಗ ಜನಾರ್ದನ ರೆಡ್ಡಿ ಅವರೂ ದಿನಕ್ಕೆ 3 ಬಾರಿ ಕೇಳ್ತಿದ್ದ ಆ ಹಾಡಿನ ಅಸಲಿ ಸತ್ಯವನ್ನು ಸ್ವತಃ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಿಚ್ಚಿಟ್ಟಿದ್ದಾರೆ!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಎಂದಿಗೂ ಅಳಿಯದ ಅದ್ಭುತ ಗೀತೆ ‘ಮಹಾಕ್ಷತ್ರಿಯ’ ಚಿತ್ರದ "ಈ ಭೂಮಿ ಬಣ್ಣದ ಬುಗುರಿ". ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಹೃದಯ ತಟ್ಟುವ ಈ ಸಾರ್ವಕಾಲಿಕ ಹಾಡು ಹುಟ್ಟಿದ್ದೇ ಒಂದು ರೋಚಕ ಪ್ರಸಂಗ. ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಮುಖ ತೋರಿಸಲಾಗದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ನಾದಬ್ರಹ್ಮ ಹಂಸಲೇಖ ಸ್ಟುಡಿಯೋದ ಬಾತ್‌ರೂಮ್ ಪಕ್ಕದ ಕೊಠಡಿಯಲ್ಲಿ ಅವಿತುಕೊಂಡಿದ್ದಾಗ ಸೃಷ್ಟಿಯಾದ ಗೀತೆಯಿದು!

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಂದರ್ಶನವೊಂದರಲ್ಲಿ ಈ ಅಪರೂಪದ ನೆನಪನ್ನು ಹಂಚಿಕೊಂಡಿದ್ದಾರೆ. ‘ಮಹಾಕ್ಷತ್ರಿಯ’ ಸಿನಿಮಾದಲ್ಲಿ ಎಂಟು ಜನ ಕ್ರಿಮಿನಲ್‌ಗಳಿಗೆ ಬುದ್ಧಿ ಹೇಳುವ ಸನ್ನಿವೇಶವಿತ್ತು. ಸಾಮಾನ್ಯವಾಗಿ ಇಂತಹ ಉಪದೇಶದ ಹಾಡುಗಳು ಬಂದರೆ ಜನ ಬೋರ್ ಆಗಿ ಎದ್ದು ಹೋಗುತ್ತಾರೆ. ಹೀಗಾಗಿ, ಜನರನ್ನು ಹಿಡಿದಿಟ್ಟುಕೊಳ್ಳುವ ಸವಾಲಿನೊಂದಿಗೆ ಹಾಡು ಸಿದ್ಧಪಡಿಸಬೇಕಿತ್ತು.

ಹಾಡನ್ನು ಹಾಡಲು ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಚೆನ್ನೈನ ಪ್ರಸಾದ್ ಸ್ಟುಡಿಯೋಗೆ ಬಂದಿಳಿದಿದ್ದರು. ಆದರೆ, ಆ ಸಮಯಕ್ಕೆ ಹಾಡಿನ ಸಾಹಿತ್ಯವೇ ರೆಡಿಯಾಗಿರಲಿಲ್ಲ! ಅಷ್ಟು ದೊಡ್ಡ ಗಾಯಕರನ್ನು ಎದುರಿಸಲು ಮುಜುಗರಪಟ್ಟುಕೊಂಡ ಬಾಬು ಮತ್ತು ಹಂಸಲೇಖ, ಸ್ಟುಡಿಯೋದಲ್ಲಿದ್ದ ಬಾತ್‌ರೂಮ್ ಪಕ್ಕದ ಪುಟ್ಟ ರೂಮಿನಲ್ಲಿ ಹೋಗಿ ಅಡಗಿಕುಳಿತರು. ಹೊರಗಡೆಯಿಂದ ಎಸ್ಪಿಬಿ "ಎಲ್ಲಪ್ಪಾ ಲಿರಿಕ್ಸ್?" ಎಂದು ಕೇಳುತ್ತಿದ್ದರೆ, ಇತ್ತ ಇಬ್ಬರಿಗೂ ಸಾಲುಗಳೇ ಹೊಳೆಯುತ್ತಿರಲಿಲ್ಲ.

ರೆಕಾರ್ಡಿಂಗ್ ಕ್ಯಾನ್ಸಲ್ ಮಾಡೋಣವೇ ಎಂದು ಯೋಚಿಸುತ್ತಿದ್ದಾಗ, ನಿರ್ದೇಶಕ ಬಾಬು ಅವರು ಹಂಸಲೇಖ ಅವರಿಗೆ, "ಸರ್, ಈ ಜಗತ್ತೇ ಒಂದು ಬಣ್ಣದ ಬುಗುರಿ ಇದ್ದ ಹಾಗೆ... ಅದು ನಿಂತುಹೋದಾಗ ಏನಾಗುತ್ತೆ ಅನ್ನೋ ಕಾನ್ಸೆಪ್ಟ್ ಇಟ್ಟುಕೊಳ್ಳಿ" ಎಂದು ಸಣ್ಣ ಎಳೆ ಕೊಟ್ಟರು.

ಅಷ್ಟೇ! ಆ ಸಾಲು ಕೇಳುತ್ತಿದ್ದಂತೆ ಹಂಸಲೇಖ ಅವರ ಲೇಖನಿಗೆ ಮಿಂಚಿನ ವೇಗ ಬಂತು. ಕೇವಲ ಐದೇ ನಿಮಿಷಗಳಲ್ಲಿ "ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ ..." ಎಂಬ ಸಾರ್ವಕಾಲಿಕ ಸಾಹಿತ್ಯವನ್ನು ಬರೆದು ಮುಗಿಸಿದರು. ಹಾಡು ರೆಕಾರ್ಡ್ ಆದ ತಕ್ಷಣ ಎಸ್ಪಿಬಿ, "ಬಾಬು, ಇದು ಎಟರ್ನಲ್ ಸಾಂಗ್ (ಶಾಶ್ವತ ಗೀತೆ). ಈ ಹಾಡಿಗೆ ಸಾವೇ ಇಲ್ಲ!" ಎಂದು ಭವಿಷ್ಯ ನುಡಿದರು. ಆ ಮಾತು ಇಂದಿಗೂ ಅಕ್ಷರಶಃ ಸತ್ಯವಾಗಿದೆ.

ಹಾಗೆಯೇ ಹಂಸಲೇಖ ಅವರೊಂದಿಗಿನ ಅಪರೂಪದ ಸ್ನೇಹ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜೀವನದ ಕರಾಳ ದಿನಗಳಲ್ಲಿ ‘ಈ ಭೂಮಿ ಬಣ್ಣದ ಬುಗುರಿ’ ಹಾಡು ಹೇಗೆ ಸಾಂತ್ವನ ನೀಡಿತ್ತು ಎಂಬ ಅಚ್ಚರಿಯ ಸಂಗತಿಯನ್ನು ರಾಜೇಂದ್ರ ಸಿಂಗ್ ಬಾಬು ಬಹಿರಂಗಪಡಿಸಿದ್ದಾರೆ.

ಜೈಲಿನಲ್ಲಿ ಜನಾರ್ದನ ರೆಡ್ಡಿಗೆ ನೆಮ್ಮದಿ ತಂದಿದ್ದ ಹಾಡು

‘ಈ ಭೂಮಿ ಬಣ್ಣದ ಬುಗುರಿ’ಯ ಪ್ರಭಾವ ಎಂಥದ್ದು ಎಂಬುದನ್ನು ವಿವರಿಸಿದ ರಾಜೇಂದ್ರ ಸಿಂಗ್ ಬಾಬು, "ನನಗೆ ಜನಾರ್ದನ ರೆಡ್ಡಿ ಅವರು ಸಿಕ್ಕಾಗ ನನ್ನ ಕೈಹಿಡಿದು ಭಾವುಕರಾಗಿ ಒಂದು ಮಾತು ಹೇಳಿದರು. ‘ಬಾಬು ಅವರೇ, ನಾನು ಜೈಲಿನಲ್ಲಿದ್ದ ಕಷ್ಟದ ದಿನಗಳಲ್ಲಿ ಮಾನಸಿಕ ನೆಮ್ಮದಿಗಾಗಿ ಮತ್ತು ರಿಫ್ರೆಶ್‌ಮೆಂಟ್‌ಗಾಗಿ ಪ್ರತಿದಿನ ಮೂರು ಬಾರಿ ನಿಮ್ಮ ‘ಈ ಭೂಮಿ ಬಣ್ಣದ ಬುಗುರಿ’ ಹಾಡನ್ನು ತಪ್ಪದೇ ಕೇಳುತ್ತಿದ್ದೆ’ ಎಂದರು. ಒಂದು ಹಾಡು ಮನುಷ್ಯನ ನೋವಿಗೆ ಎಷ್ಟರಮಟ್ಟಿಗೆ ಮುಲಾಮಾಗಬಲ್ಲದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ" ಎಂದು ಬಾಬು ಹರ್ಷ ವ್ಯಕ್ತಪಡಿಸಿದರು.

ಹಂಸಲೇಖ ಜೊತೆ ‘ಈಗೋ’ ಇಲ್ಲದ ಗಾಢ ಸ್ನೇಹ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರ ನಡುವಿನ ಸೃಜನಶೀಲ ಬಾಂಧವ್ಯ ಹೇಗಿರಬೇಕು ಎಂಬುದಕ್ಕೆ ಹಂಸಲೇಖ ಮತ್ತು ತಮ್ಮ ಸ್ನೇಹವೇ ಸಾಕ್ಷಿ ಎಂದ ಬಾಬು, "ನಮ್ಮಿಬ್ಬರ ಮಧ್ಯೆ ಯಾವತ್ತೂ ಅಹಂ (Ego) ಸುಳಿಯಲೇ ಇಲ್ಲ. ಸಿನಿಮಾದಲ್ಲಿ ಅಹಂ ಇದ್ದರೆ ಕೆಲಸ ಹಾಳಾಗುತ್ತದೆ. ಕೆಲಸ ಚೆನ್ನಾಗಿದ್ದರೆ ಚೆನ್ನಾಗಿದೆ ಎನ್ನಬೇಕು, ಸರಿಯಿಲ್ಲದಿದ್ದರೆ ಮುಖದ ಮೇಲೆಯೇ ಹೇಳಿಬಿಡಬೇಕು. ಈ ಗುಣ ನಮ್ಮಿಬ್ಬರಲ್ಲೂ ಇತ್ತು. ಹಂಸಲೇಖ ಅವರಿಗೆ ನಾನೇನು ಕೇಳುತ್ತೇನೆ ಎಂಬುದು ಗೊತ್ತು, ನನಗೂ ಅವರು ಏನು ಕೊಡಬಲ್ಲರು ಎಂಬ ಅರಿವಿತ್ತು. ಎಷ್ಟು ಸಲ ಅಂದರೆ, ಹಂಸಲೇಖ ಅವರೇ ತಮ್ಮ ಕಾಲ್‌ಶೀಟ್ ಕ್ಯಾಲೆಂಡರ್ ತಂದು ನನ್ನ ಕೈಗಿಟ್ಟು, ‘ಬಾಬು, ನಿಮಗೆ ಎಷ್ಟು ದಿವಸ ಬೇಕೋ ತಗೊಳ್ಳಿ’ ಎಂದು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು. ಆ ಮಟ್ಟಿನ ಆತ್ಮೀಯತೆ ನಮ್ಮ ನಡುವೆ ಇತ್ತು" ಎಂದು ಸ್ಮರಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಮ್ಯಾಜಿಕ್ ಪ್ಲಾನ್ ಮಾಡಿ ಆಗಲ್ಲ, ತಾನಾಗೇ ಘಟಿಸಬೇಕು

ಅತ್ಯುತ್ತಮ ಹಾಡುಗಳು ಮತ್ತು ಸಿನಿಮಾಗಳು ಹುಟ್ಟುವ ಬಗೆಯನ್ನು ವಿವರಿಸಿದ ಅವರು, "ಸಿನಿಮಾರಂಗದಲ್ಲಿ ಯಾವುದೇ ಒಂದು ಕ್ಲಾಸಿಕ್ ಅನ್ನು ಮೊದಲೇ ಪ್ಲಾನ್ ಮಾಡಿ, ಲೆಕ್ಕಾಚಾರ ಹಾಕಿ ಸೃಷ್ಟಿಸಲು ಸಾಧ್ಯವೇ ಇಲ್ಲ. ‘ಶೋಲೆ’, ‘ಬಂಗಾರದ ಮನುಷ್ಯ’, ‘ಬಂಧನ’, ‘ಮಯೂರ’ ಅಥವಾ ‘ನಾಗರಹಾವು’ ನಂತಹ ಸಿನಿಮಾಗಳು ಹೇಗೆ ತಾನಾಗಿಯೇ ಒಂದು ಮ್ಯಾಜಿಕ್‌ನಂತೆ ಸೃಷ್ಟಿಯಾದವೋ, ಅದೇ ರೀತಿ ‘ಈ ಭೂಮಿ ಬಣ್ಣದ ಬುಗುರಿ’ ಹಾಡು ಕೂಡ ಕಾಲದ ಗರ್ಭದಿಂದ ಮೂಡಿಬಂತು. ಅದು ಎಲ್ಲಿ, ಹೇಗೆ, ಯಾವಾಗ ಘಟಿಸುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ" ಎಂದು ಬಾಬು ಮಾರ್ಮಿಕವಾಗಿ ನುಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1987-88ರಲ್ಲಿಅಭಿಮಾನಿಗೆ ವಿಷ್ಣುವರ್ಧನ್ ಬರೆದ ಅಪರೂಪದ ಪತ್ರ; ಯಜಮಾನನ ಪ್ರೀತಿ ಮಾತು
ತಮಿಳುನಾಡಿನಲ್ಲೂ ರಾಮಾಯಣ ಹವಾ; ಸೂರ್ಯ 'ಸೀನ್' ಮೇಲೆ ಸವಾರಿ, ಕಾಲಿವುಡ್‌ನಲ್ಲಿ ಭಾರೀ ಕಾಂಚಾಣ!