ರಾಘವೇಂದ್ರ ರಾಜ್‌ಕುಮಾರ್‌-ಶ್ರುತಿ ನಟನೆಯ ಹೊಸ ಸಿನಿಮಾ '13'

Published : Apr 15, 2022, 09:17 AM ISTUpdated : Apr 15, 2022, 10:38 AM IST
ರಾಘವೇಂದ್ರ ರಾಜ್‌ಕುಮಾರ್‌-ಶ್ರುತಿ ನಟನೆಯ ಹೊಸ ಸಿನಿಮಾ '13'

ಸಾರಾಂಶ

ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ '13' ಏನಿರಬಹುದು ಎಂದು ನನಗೂ ಕುತೂಹಲ ಮೂಡಿತು. ಕಥೆ ಕೇಳಿದಾಗ ಅರ್ಥವಾಯಿತು. ನನ್ನ ಪಾತ್ರದ ಬಗ್ಗೆ ನಿರ್ದೇಶಕರೇ ಹೇಳಿದ್ದಾರೆ.

ತುಂಬಾ ವರ್ಷಗಳ ನಂತರ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಹಾಗೂ ಶ್ರುತಿ (Shruthi) ‘13’ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ನರೇಂದ್ರ ಬಾಬು (Narendra Babu) ನಿರ್ದೇಶನದ ಈ ಚಿತ್ರವನ್ನು ಸಂಪತ್‌ ಕುಮಾರ್‌ ನಿರ್ಮಿಸುತ್ತಿದ್ದು, ಮಂಜುನಾಥ್‌ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದ್ದಾರೆ. ಇಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರುತಿ ಟೀ ಅಂಗಡಿ ನಡೆಸುವ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಇಡೀ ಚಿತ್ರವನ್ನು ರೂಪಿಸಲಾಗಿದೆಯಂತೆ.

ಶ್ರುತಿ ಪಾತ್ರದ ಹೆಸರು ಸಾಯಿರಾ ಬಾನು. ರಾಘಣ್ಣ ಪಾತ್ರಕ್ಕೆ ಮೋಹನ್‌ ಎಂದು ಹೆಸರು. ‘ನನ್ನ ಸಿನಿಮಾ ಜೀವನದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರದ ಪೂರ್ವ ತಯಾರಿಗಾಗಿಯೇ 20 ದಿನ ಸಮಯ ಕೇಳಿದ್ದೇನೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಎನ್ನುವ ಕಾರಣಕ್ಕೆ. ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಮತ್ತು ನಾನು ಮತ್ತೆ ಜೋಡಿಯಾಗುತ್ತಿದ್ದೇವೆ. ಅಂತರ್‌ಧರ್ಮಿಯ ಪ್ರೇಮ ಕತೆಯ ಸಿನಿಮಾ. ಹಾಗಂತ ಇದು ಲವ್‌ ಜಿಹಾದ್‌ ಅಲ್ಲ, ಲವ್‌ ಮ್ಯಾರೇಜ್‌ ಸ್ಟೋರಿ ಸಿನಿಮಾ’ ಎಂದರು ಶ್ರುತಿ.

Raghavendra Rajkumar: ಅಪ್ಪು ನೆನಪಲ್ಲಿ ಒಂದು ಲಕ್ಷ ಸಸಿ ನೆಡಲು ನಿರ್ಧಾರ

‘ಹಿಂದು ಮತ್ತು ಮುಸ್ಲಿಂ ಪ್ರೇಮ ಕತೆಯ ಸಿನಿಮಾ ಇದಾಗಿದ್ದರೂ ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಸಂಬಂಧವಿಲ್ಲ. ಪರಸ್ಪರ ದ್ವೇಷ ಕಾರುತ್ತಿರುವ ಹೊತ್ತಿನಲ್ಲಿ, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎಂಬುದನ್ನು ನಮ್ಮ ಚಿತ್ರ ನೋಡಿ ಹೇಳುವ ಮಟ್ಟಿಗೆ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕತೆಯನ್ನು ಇಲ್ಲಿ ಹೇಳಿದ್ದೇನೆ’ ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿದರು. ಪ್ರಮೋದ್ ಶೆಟ್ಟಿ ಅವರದು ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹಾಗೆಯೇ ದಿಲೀಪ್ ಪೈ ಕೂಡಾ ಒಂದು ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದು, ಅದೇ ರೀತಿ ಕಾಮಿಡಿ ಕಿಲಾಡಿ ಗೋವಿಂದೇಗೌಡ ಸೇರಿದಂತೆ ಹಲವಾರು ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಒಟ್ಟು ಈ ಚಿತ್ರದಲ್ಲಿ 3 ಹಾಡುಗಳಿದ್ದು, ಶೋಗನ್‍ಬಾಬು ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ. 50 ದಿನಗಳ ಚಿತ್ರೀಕರಣಕ್ಕೆ ಯೋಜನೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ನಂತರ ನಿರ್ಮಾಪಕ ಕೆ. ಸಂಪತ್‍ಕುಮಾರ್ ಮಾತನಾಡಿ ಗೋವಿಂದ ಗೋಪಾಲ, ಸಾಫ್ಟ್‍ವೇರ್ ಗಂಡ ಸೇರಿ ಇದು ನನ್ನ ನಿರ್ಮಾಣದ 5ನೇ ಚಿತ್ರ. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ. ಒಂದು ವಿಭಿನ್ನ ಸಸ್ಪೆನ್ಸ್ ಚಿತ್ರ, ಬಹಳ ಅಚ್ಚುಕಟ್ಟಾಗಿ ನಿರ್ಮಿಸಲು ಮುಂದಾಗಿದ್ದೇವೆ. ಈ ಚಿತ್ರಕ್ಕೆ ಹತ್ತು ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದೆವು. ಪುನೀತ್ ಅವರೇ ಕ್ಲಾಪ್ ಮಾಡಬೇಕಾಗಿತ್ತು ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು. 

Raghavendra Rajkumar: ಸಿನಿಮಾ ಲೈಫು ಮುಗಿದುಹೋಯ್ತು ಅಂದುಕೊಂಡಿದ್ದೆ

ಚಿತ್ರದ ನಾಯಕ ರಾಘಣ್ಣ ಮಾತನಾಡುತ್ತಾ ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ '13' ಏನಿರಬಹುದು ಎಂದು ನನಗೂ ಕುತೂಹಲ ಮೂಡಿತು. ಕಥೆ ಕೇಳಿದಾಗ ಅರ್ಥವಾಯಿತು. ನನ್ನ ಪಾತ್ರದ ಬಗ್ಗೆ ನಿರ್ದೇಶಕರೇ ಹೇಳಿದ್ದಾರೆ. ಸಸ್ಪೆನ್ಸ್ ಚಿತ್ರ ಎಂದರೆ ಸಸ್ಪೆನ್ಸ್ ಆಗೇ ಇರುತ್ತದೆ. ಶ್ರುತಿ ಅವರು ಕಲ್ಪನ, ಮಂಜುಳ ಅವರಹಾಗೆ ಅದ್ಭುತ ನಟಿ. ಅವರ ಜೊತೆ 2ನೇ ಚಿತ್ರ ಎಂದರು. ನಂತರ ಪ್ರಮೋದ್ ಶೆಟ್ಟಿ ಮಾತನಾಡಿ ಈ ಚಿತ್ರದ ಬಗ್ಗೆ ನನಗೂ ಬಹಳ ಕುತೂಹಲ ಇದೆ. ಯಥಾ ಪ್ರಕಾರ ಪೋಲೀಸ್ ಪಾತ್ರ ಎಂದಾಗ ನಗುಬಂತು. ರಾಘಣ್ಣ ಅವರ ಜೊತೆ ಮೊದಲಬಾರಿಗೆ ಅಭಿನಯಿಸುವ ಅವಕಾಶ ಸಿಕ್ಕಿದೆ, ಶೃತಿ ಅವರ ಜೊತೆ ಭಜರಂಗಿ 2 ನಲ್ಲಿ ಅಭಿನಯಿಸಬೇಕಿತ್ತು ಎಂದರು. ಮಂಜುನಾಥ್‌ ನಾಯ್ಡು ಕ್ಯಾಮೆರಾ, ಸೋಹನ್‌ ಬಾಬು ಸಂಗೀತ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್