
ಬೆಂಗಳೂರು (ಸೆ.7): ಬೈರಾದೇವಿ ಸಿನಿಮಾದಲ್ಲಿ ಹೆಣ್ಣು ಅಘೋರಿಯಾಗಿ ನಟಿಸಿರುವ ರಾಧಿಕಾ ಕುಮಾರಸ್ವಾಮಿ, ಗಣೇಶ ಚತುರ್ಥಿ ಸಂಭ್ರಮದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ನ ರಾಧಿಕೆಯ ಗಣಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ಶೂಟಿಂಗ್ ಅನುಭವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಸ್ಮಶಾನದಲ್ಲಿ ನಟಿಸಿದ ಅನುಭವ ಬಹಳ ರೋಚಕವಾಗಿತ್ತು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಶ್ರೀಜೈ ನಿರ್ದೇಶನದ ಈ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ, ಶಮಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಲ್ಲದೆ, ರಮೇಶ್ ಅರವಿಂದ್, ಅನು ಪ್ರಭಾಕರ್, ಸ್ಕಂದ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹೆಚ್ಚಿನ ಶೂಟಿಂಗ್ ಸ್ಮಶಾನದಲ್ಲಿಯೇ ಆಗಿದೆ. ಅಲ್ಲಿನ ವಾತಾವರಣ ನಿಮಗೆ ಭಯ ತರಲಿಲ್ಲವೇ ಎನ್ನುವ ಪ್ರಶ್ನೆಗೆ ಮಾತನಾಡಿದ ಅವರು, 'ಸಾಮಾನ್ಯವಾಗಿ ಸ್ಮಶಾನ ಅಂದ್ರೆ ಭಯ ಇರುತ್ತೆ. ನನಗೆ ಸ್ಮಲ್ಪ ಹೆಚ್ಚಿನ ಭಯವೇ ಇತ್ತು. ನನಗೆ ಭೂತ, ಪ್ರೇತಗಳ ಮೇಲೆ ನಂಬಿಕೆ ಇದೆ. ನಾನು ದೇವರನ್ನು ಎಷ್ಟು ನಂಬುತ್ತೀನೋ, ದೆವ್ವಗಳನ್ನೂ ಕೂಡ ಅಷ್ಟೇ ನಂಬುತ್ತೇನೆ. ಜಗತ್ತಿನಲ್ಲಿ ಎಷ್ಟು ಪಾಸಿಟಿವ್ ಎನರ್ಜಿ ಇದೆಯೋ, ಅಷ್ಟೇ ನೆಗೆಟವಿವ್ ಎನರ್ಜಿ ಕೂಡ ಇದೆ' ಎಂದು ಹೇಳಿದ್ದಾರೆ.
ಸ್ಮಶಾನದಲ್ಲಿ ಶೂಟಿಂಗ್ ಎಂದಾಗ ನಾನು ಈ ಸಿನಿಮಾ ಮಾಡೋದೇ ಇಲ್ಲ ಎಂದು ಹೇಳಿದ್ದೆ. ನಮ್ಮ ಅಣ್ಣ ಮತ್ತು ನಿರ್ದೇಶಕರು ಏನೋ ಪ್ಲ್ಯಾನ್ ಮಾಡಿದ್ದರು. ಮೊದಲು ಸಿನಿಮಾಗೆ ಒಪ್ಪಿಸೋಣ ಬಳಿಕ ಸ್ಮಶಾನದಲ್ಲಿ ನಟಿಸೋಕೆ ಒಪ್ಪಿಸೋಣ ಅಂದಿದ್ದರು. ಆದರೆ, ನನಗೆ ಮೊದಲು ಅವರು ಸ್ಮಶಾನ ಸೆಟ್ ಹಾಕೋಣ ಎಂದು ಹೇಳಿದ್ದರು. ಇಂಥ ಚಾಲೆಂಜಿಂಗ್ ಪಾತ್ರ ನನಗೆ ಬೇಕಾಗಿದ್ದ ಕಾರಣಕ್ಕೆ ಸ್ಮಶಾನದ ಸೆಟ್ ಹಾಕ್ತಾರೆ ಅನ್ನೋ ಕಾರಣಕ್ಕಾಗಿ ಒಪ್ಪಿಕೊಂಡಿದ್ದೆ. ಅಘೋರಿ ಪಾತ್ರವನ್ನ ನಾನು ಮಾಡ್ತೇನೆ ಅಂತಾ ಕನಸಲ್ಲೂ ಅಂದುಕೊಂಡಿರಲಿಲ್ಲ. ಇಂಥದ್ದೊಂದು ಪಾತ್ರದ ಬಗ್ಗೆ ನಾನು ಯೋಚನೆಯನ್ನೇ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ರಾಧಿಕಾ ಕುಮಾರಸ್ವಾಮಿ ತುಪ್ಪ ತಿನ್ನೋದನ್ನ ಕಡಿಮೆ ಮಾಡಿದ್ದು ಯಾವಾಗ ಗೊತ್ತಾ?
ಸ್ಮಶಾನದ ವಿಚಾರ ಬಂದಾಗ ಎಲ್ಲರೂ ಆಕ್ಟ್ ಮಾಡೋಕೆ ಶುರು ಮಾಡಿದ್ರು. ಸೆಟ್ ಆ ರೀತಿ ಇರುತ್ತೆ, ಈ ರೀತಿ ಇರುತ್ತೆ ಅಂತಾ. ಶೂಟಿಂಗ್ ಆಯ್ತು ಎಲ್ಲಾ ಒಕೆ ಅಂದಾಗ, ಡೈರೆಕ್ಟರ್ ಬಂದು ಸ್ಮಶಾನದ ಸೆಟ್ ಬೇಡ, ರಿಯಲ್ ಆಗಿ ಸ್ಮಶಾನದಲ್ಲಿ ಶೂಟ್ ಮಾಡಿದ್ರೆ ರಾ ಫೀಲ್ ಬರುತ್ತೆ ಅಂದಿದ್ದರು. ನಮ್ಮ ಅಣ್ಣ ಕೂಡ ಇದಕ್ಕೆ ಒಪ್ಪಿಕೊಂಡಿದ್ದರು. ಅದಲ್ಲದೆ ರಾತ್ರಿ ಶೂಟಿಂಗ್ ಬೇರೆ. ಸ್ಮಶಾನದ ಶೂಟಿಂಗ್ ವೇಳೆ ನಾನೇ ಮೊದಲು ಸ್ಮಶಾನಕ್ಕೆ ಹೊಕ್ಕಿದ್ದೆ. ಅಲ್ಲಿ ಹೋಗಿ ನೋಡಿದ್ರೆ, 'ಗುಂಯ್..' ಅಂತಾ ಇದೆ. ಸಣ್ಣ ಶಬ್ದ ಕೂಡ ಇಲ್ಲ. ಅಯ್ಯಯ್ಯೋ ನನಗೆ ಇಲ್ಲಿ ಶೂಟಿಂಗ್ ಮಾಡೋಕೆ ಆಗಲ್ಲ ಅಂದುಕೊಂಡಿದ್ದೆ ಎಂದು ಹೇಳಿದ್ದಾರೆ.
ಆದರೆ, 4-5 ಗಂಟೆಗಳ ಕಾಲ ಕ್ಯಾರವಾನ್‌ನಲ್ಲಿ ಬೈರಾದೇವಿ ಗೆಟಪ್‌ನಲ್ಲಿ ಮೇಕಪ್ ಮಾಡಿಕೊಂಡು ಹೊರಗಡೆ ಬಂದಾಗ, ನನಗೆ ಅದು ಸ್ಮಶಾನ ಅಂತಾನೇ ಅನಿಸಿರಲಿಲ್ಲ. ಏನೋ ಒಂದು ಖುಷಿ. ಈ ಪಾರ್ಟ್ ಮಾಡಬೇಕು ಅನ್ನೋ ಎನರ್ಜಿ ಮಾತ್ರವೇ ನನ್ನಲ್ಲಿತ್ತು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.