ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು, ಚಿತ್ರೋದ್ಯಮದ ಗಣ್ಯರು ಹಾಗೂ ಸಾರ್ವಜನಿಕರ ಸಾಕ್ಷಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಪುನೀತ ಪರ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಬೆಂಗಳೂರು (ಅ.22): ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು, ಚಿತ್ರೋದ್ಯಮದ ಗಣ್ಯರು ಹಾಗೂ ಸಾರ್ವಜನಿಕರ ಸಾಕ್ಷಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಪುನೀತ ಪರ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅರಮನೆ ಮೈದಾನದ ಕೃಷ್ಣ ವಿಹಾರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು, ಸೇರಿದಂತೆ ಎಲ್ಲ ಭಾಷೆಯ ಕಲಾವಿದರು, ಪುನೀತ್ ಅವರ ಆಪ್ತರು, ಸ್ನೇಹಿತರು ಪಾಲ್ಗೊಂಡು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು. ಹಿರಿಯ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅವರು ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಎನ್ನುವ ಹಾಡನ್ನು ಹಾಡುವ ಮೂಲಕ ಪುನೀತ ಪರ್ವಕ್ಕೆ ಚಾಲನೆ ಕೊಟ್ಟರು.
ಗಣ್ಯರು ಹಾಗೂ ಅಭಿಮಾನಿಗಳು ದಂಡು: ಗಣ್ಯರು, ಅಭಿಮಾನಿಗಳು, ಕಲಾವಿದರು ಬಿಳಿ ಡ್ರಸ್‌ನಲ್ಲೇ ಬಂದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಯುವರಾಜ್‌ಕುಮಾರ್, ಧೀರನ್ ರಾಮ್‌ಕುಮಾರ್ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಹಾಗೂ ಸಂಸದೆ ಸುಮಲತಾ ಅಂಬರೀಶ್, ನಟ ಯಶ್, ರಾಧಿಕಾ ಪಂಡಿತ್, ಪ್ರಕಾಶ್ ರೈ, ಸೂರ್ಯ, ಸಿದ್ದಾಥ್‌ರ್, ರಾಣಾ ದಗ್ಗುಬಾಟಿ, ಅಕ್ಕಿನೇನಿ ಅಖಿಲ್, ಸಾಯಿ ಕುಮಾರ್, ರಮೇಶ್ ಅರವಿಂದ್, ಶರತ್ ಕುಮಾರ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ಪ್ರಿಯಾ ಆನಂದ್, ಸುಧಾರಾಣಿ, ಶ್ರುತಿ, ಮೇಘನಾ ರಾಜ್, ದುನಿಯಾ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಟಿಯರು, ತಂತ್ರಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬದುಕಿದ್ರೆ ಅಪ್ಪು ತರ ಇರಬೇಕು, ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾವುಕ!
500ಕ್ಕೂ ವಿವಿಐಪಿಗಳು ಹಾಗೂ 5 ಸಾವಿರಕ್ಕೂ ಹೆಚ್ಚು ವಿಐಪಿಗಳಿಗೆ ಅಹ್ವಾನ ನೀಡಲಾಗಿತ್ತು. ಅಹ್ವಾನ ಸ್ವೀಕರಿಸಿದ್ದ ಬಹುತೇಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನೂ ಬೆಂಗಳೂರು ಸೇರಿದಂತೆ ದೂರದ ಊರು ಹಾಗೂ ಜಿಲ್ಲೆಗಳಿಂದಲೂ ವಾಹನಗಳನ್ನು ಮಾಡಿಕೊಂಡು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಸುಮಾರು 25 ಸಾವಿರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರದ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡರು. ಪುನೀತ್‌ರಾಜ್‌ಕುಮಾರ್ ಅವರ ಕುರಿತು ಮಾತನಾಡುವಾಗ ಭಾವುಕತೆ, ಹಾಡು, ಸಂಗೀತ ಬಂದಾಗ ಸಂಭ್ರಮದಿಂದ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟುತ್ತ ಕಾರ್ಯಕ್ರಮವನ್ನು ಅಭಿಮಾನಿಗಳು ಅಸ್ವಾದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಅರಮನೆ ಮೈದಾನದಲ್ಲೇ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಅಶ್ವಿನಿ ಪುನೀತ್‌ರಾಜ್‌ಕುಮಾರ್ ಸಾರಥ್ಯ: ಇಡೀ ಕಾರ್ಯಕ್ರಮ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು. ಚಿತ್ರರಂಗದ ಕಲಾವಿದರಿಗೆ ಸ್ವತಃ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರೇ ಆಹ್ವಾನ ನೀಡಿದ್ದನ್ನು ವೇದಿಕೆ ಮೇಲೆ ಹಲವರು ನೆನಪಿಸಿಕೊಂಡರು. ಶುಕ್ರವಾರ ಬೆಳಗ್ಗಿನಿಂದಲೇ ಕಾರ್ಯಕ್ರಮದ ಜಾಗದಲ್ಲಿ ಖುದ್ದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಹಾಜರಿದ್ದು, ವೇದಿಕೆ ಸಿದ್ಧತೆ, ವೇದಿಕೆ ಮೇಲೆ ನಡೆಯಲಿರುವ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಿ ಕೊಡುವ ಜತೆಗೆ ಎಲ್ಲದರ ಮೇಲ್ವಿಚಾರಣೆ ನೋಡಿಕೊಂಡರು.
ಬೃಹತ್ ಕಾರ್ಯಕ್ರಮದ ವೇದಿಕೆ: ನಾಡಿನ ಪ್ರಕೃತಿ ಸೌಂದರ್ಯವನ್ನು ನೆನಪಿಸುವಂತೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. 10 ಅಡಿ ಎತ್ತರ, 80-60 ಅಡಿ ಅಳತೆಯ ವೇದಿಕೆ ಇದಾಗಿತ್ತು. ವೇದಿಕೆ ಹಾಗೂ ಕಾರ್ಯಕ್ರಮದ ಸುತ್ತ 60ಕ್ಕೂ ಹೆಚ್ಚು ಪುನೀತ್ ರಾಜ್‌ಕುಮಾರ್ ಅವರ ಕಟೌಟ್‌ಗಳನ್ನು ಹಾಕಲಾಗಿತ್ತು. ಅಲ್ಲದೆ ವೇದಿಕೆ ಮೇಲೆ ಹಾಗೂ ಕಾರ್ಯಕ್ರಮದ ಸುತ್ತ ಬಹೃತ್ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿತ್ತು. ಆ ಮೂಲಕ ಕಾರ್ಯಕ್ರಮ ವೀಕ್ಷಿಸುವುದಕ್ಕೆ ಎಲ್ಲರಿಗೂ ವ್ಯವಸ್ಥೆ ಮಾಡಲಾಗಿತ್ತು.
ಹಾಡು, ನೃತ್ಯ, ಸಂಗೀತ, ಮಾತಿನ ಸಂಗಮ: ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರ ಮಾತುಗಳ ನಡುವೆಯೇ ಹಾಡು, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಕೂಡ ನಡೆಯಿತು. ಗುರುಕಿರಣ್ ಅವರು ಪುನೀತ್ ಅವರ ಆರಂಭದ ಚಿತ್ರಗಳ ಹಾಡುಗಳನ್ನು ಹಾಡಿದರೆ, ವಿಜಯ್ ಪ್ರಕಾಶ್ ಅವರು ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡನ್ನು ಹಾಡುವ ಜತೆಗೆ ಅಪ್ಪು ಹೆಸರಿನಲ್ಲಿ ಒಂದು ಕವಿತೆ ಬರೆದು ಹೇಳಿದರು. ಶರತ್ ಕುಮಾರ್ ಅವರು ತಮಿಳಿನ ಹಾಡೊಂದರ ಸಾಲು ಹೇಳಿ ಪುನೀತ್ ಅವರು ದೇವರು ಎಂದರು. ನಟಿ ರಮ್ಯಾ, ಶಿವರಾಜ್‌ಕುಮಾರ್ ಅವರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ಮಾಡಿದರು.
ದುನಿಯಾ ವಿಜಯ್ ಪುನೀತ್ ಫೋಟೋ ಇರುವ ಬಿಳಿ ಶರ್ಚ್ ಹಾಕಿಕೊಂಡು ಅದರ ಮೇಲೆ ನೀನೇ ರಾಜಕುಮಾರ ಎನ್ನುವ ಸಾಲು ಬರೆಸಿಕೊಂಡಿದ್ದರು. ಅವರು ಮಾತನಾಡುವ ಮುನ್ನ ಭಾವುಕರಾದರು. ರಾಜ್ ಬಿ ಶೆಟ್ಟಿಅವರು ತಮ್ಮ ಸಿನಿಮಾ ಜೀವನವನ್ನೇ ಅಪ್ಪುಗೆ ಅರ್ಪಿಸಿದರು. ‘ನೀವು ಹೊಡೆದ್ರೆ ಕೇಸು ಸಾರ್. ಅದೇ ನಾವ್ ತಿರುಗಿ ಹೊಡೆದ್ರೆ ಹೆಡ್ ಲೈನ್ ನ್ಯೂಸ್ ಸಾರ್’ಎನ್ನುವ ಪುನೀತ್ ಅವರ ನಟನೆಯ ಚಿತ್ರದ ಡೈಲಾಗ್‌ನ್ನು ಧ್ರುವ ಸರ್ಜಾ ಹೇಳಿದರು.
ನೋವಿನಲ್ಲಿ ಕಳೆದೋಯ್ತು ವರ್ಷ, ಪುನೀತ ಪರ್ವದಲ್ಲಿ ಶಿವಣ್ಣ ಭಾವುಕ, ರಮ್ಯಾ, ಧ್ರುವ ಸೇರಿ ಗಣ್ಯರು ನುಡಿ!
ಪುನೀತ ಪರ್ವ ಕಾರ್ಯಕ್ರಮ ಯಾಕೆ?: ಅಮೋಘವರ್ಷ ನಿರ್ದೇಶನದ, ಪುನೀತ್‌ರಾಜ್‌ಕುಮಾರ್ ಅವರು ಕಾಣಿಸಿಕೊಂಡಿರುವ ಕೊನೆಯ ಚಿತ್ರ ‘ಗಂಧದಗುಡಿ’. ಕೊರೋನಾ ಸಂದರ್ಭದಲ್ಲಿ ಗುಡ್ಡ, ಕಾಡು, ಅರಣ್ಯ ಸುತ್ತಾಡಿ ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗಲೇ ಇದೊಂದು ಸಾಕ್ಷ್ಯ ಚಿತ್ರ ಮಾಡುವ ಯೋಚನೆ ಹೊಳೆದು, ಅದನ್ನು ‘ಗಂಧದಗುಡಿ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆ ಮಾಡಿದ್ದರು ಪುನೀತ್ ರಾಜ್‌ಕುಮಾರ್ ಅವರು. ಓಟಿಟಿ ಅಥವಾ ತಮ್ಮದೇ ಪಿಆರ್‌ಕೆ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಪುನೀತ್‌ರಾಜ್‌ಕುಮಾರ್ ಅಗಲಿದ ಮೇಲೆ ಈ ಸಾಕ್ಷ್ಯ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ಟೀಸರ್, ಟ್ರೇಲರ್ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದರ್ಶನ ಮಾಡುವ ಗಂಧದಗುಡಿ ಚಿತ್ರಮಂದಿರಗಳಲ್ಲಿ ಇದೇ ಅಕ್ಟೋಬರ್ 29ಕ್ಕೆ ತೆರೆ ಕಾಣುತ್ತಿದೆ. ಅದರ ಪ್ರೀ ರಿಲೀಸ್ ಈವೆಂಟ್ ಅನ್ನು ಪುನೀತ ಪರ್ವ ಹೆಸರಿನಲ್ಲಿ ನಡೆಯಿತು.