* ಉತ್ತರ ಕರ್ನಾಟಕಕ್ಕೆ ಬಂದಾಗಲೊಮ್ಮೆ ಸಿದ್ಧಾರೂಢ ಮಠಕ್ಕೆ ಭೇಟಿ ಕಾಯಂ
* ಸಾವಜಿ ಊಟದ ಮೇಲೆ ಬಲು ಪ್ರೀತಿ
* ರಾಜ್ ಕುಟುಂಬದವರು ಯಾರೇ ಬಂದರೂ ಮಠಕ್ಕೆ ಭೇಟಿ
ಹುಬ್ಬಳ್ಳಿ(ಅ.30): ಶ್ರೀ ಸಿದ್ಧಾರೂಢರ ಮೇಲೆ ಅಪಾರ ಭಕ್ತಿ; ಸಾವಜಿ ಊಟವೂ ಅಚ್ಚುಮೆಚ್ಚು..! ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್-ಹುಬ್ಬಳ್ಳಿ(Hubballi) ಅವಿನಾಭಾವ ನಂಟಿನ ಕುರಿತು ಒಂದು ಸಾಲಿನ ವಿವರಣೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ(Puneeth Rajkumar) ಇಲ್ಲಿನ ಸಿದ್ಧಾರೂಢರ ಮೇಲೆ ಅಪಾರ ಭಕ್ತಿ. ಹುಬ್ಬಳ್ಳಿಗಷ್ಟೇ ಅಲ್ಲ. ಬೆಳಗಾವಿ ಸೇರಿದಂತೆ ಹುಬ್ಬಳ್ಳಿ ಸುತ್ತಮುತ್ತಲಿನ ಯಾವುದೇ ಜಿಲ್ಲೆಗೂ ಬಂದರೂ ಇಲ್ಲಿನ ಆರೂಢರ ಮಠಕ್ಕೆ ಭೇಟಿ ಕೊಡದೇ ಹೋಗುತ್ತಿರಲಿಲ್ಲ. ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿಯೇ ಹೋಗುತ್ತಿದ್ದರು. ಆರೂಢರ ಮಠಕ್ಕೆ(Siddharoodha Matha) ಬಂದರೆ ಮನಸಿಗೆ ನೆಮ್ಮದಿ ದೊರೆಯುತ್ತದೆ. ಎಂತಹ ಕಷ್ಟಗಳಿದ್ದರೂ ಆ ‘ಸಿದ್ಧಾರೂಢ ಅಜ್ಜ’ನ ಮಠಕ್ಕೆ ಹೋಗಿ ಬಂದರೆ ಅವು ದೂರವಾಗುತ್ತವೆ ಎಂದು ಹೇಳಿಕೊಳ್ಳುತ್ತಿದ್ದರು ಪುನೀತ.
ಅಭಿಮಾನಿಗಳ ಕಣ್ತಪ್ಪಿಸಲು 5 ಆ್ಯಂಬುಲೆನ್ಸ್ ಬಳಕೆ ಮಾಡ್ಬೇಕಾಯ್ತು
ಇದಕ್ಕೂ ಒಂದು ಇತಿಹಾಸವಿದೆ. ಪುನೀತ್ ತಂದೆ ರಾಜ್‌ಕುಮಾರ(Rajkumar) ಹುಬ್ಬಳ್ಳಿಯಲ್ಲಿ ಕೆಲ ದಿನ ನೆಲೆಸಿದ್ದರು. ಗುಬ್ಬಿ ವೀರಣ್ಣ ನಾಟಕ ಕಂಪನಿ ಇಲ್ಲಿ ಟೆಂಟ್ ಹಾಕಿತ್ತು. ಆಗ ರಾಜಕುಮಾರ ವಾಸ ಮಠದ ಬಳಿ ಇತ್ತು. ಪ್ರತಿದಿನ ಸಿದ್ಧಾರೂಢರ ಮಠಕ್ಕೆ ಭೇಟಿ ಕೊಡುತ್ತಿದ್ದರಂತೆ. ಆ ಸಮಯದಲ್ಲೇ ರಾಜಕುಮಾರ ಅವರಿಗೆ ‘ಬೇಡರ ಕಣ್ಣಪ್ಪ’(Bedara Kannappa) ಚಿತ್ರಕ್ಕೆ ಆಫರ್ ಬಂದಿತ್ತು. ಬಳಿಕ ಸಿದ್ಧಾರೂಢ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ, ಅಲ್ಲಿಂದ ಸಿದ್ಧಾರೂಢರ ಪರಮ ಶಿಷ್ಯ ಗೋವಿಂದ ಸ್ವಾಮಿಗಳ ಬಳಿ ಆಶೀರ್ವಾದ ಪಡೆದು ಚಿತ್ರೀಕರಣಕ್ಕೆ ಚೆನ್ನೈಗೆ(Chennai) ತೆರಳಿದ್ದರು. ಆಗ ರಾಜಕುಮಾರ ಕುಟುಂಬದ ಕೆಲ ಸದಸ್ಯರು ಗೋವಿಂದಸ್ವಾಮಿ ಮಠದಲ್ಲಿ ಉಳಿದುಕೊಂಡಿದ್ದರು. ಬೇಡರ ಕಣ್ಣಪ್ಪ ಸುಪರ್ ಡೂಪರ್ ಹಿಟ್ ಆಗಿತ್ತು. ಬೆಂಗಳೂರಿಗೆ ಹೋಗಿ ಸೆಟಲ್ ಆದರೂ ಡಾ.ರಾಜಕುಮಾರ ಮಾತ್ರ ಆರೂಢರ ಮಠಕ್ಕೆ ಬರುವುದನ್ನು ಮಾತ್ರ ಬಿಟ್ಟಿರಲಿಲ್ಲ. ಅದೇ ಸಂಪ್ರದಾಯವನ್ನೂ ರಾಜ್ ಕುಟುಂಬ ಅನುಸರಿಸುತ್ತಾ ಬಂದಿದೆ. ಪುನೀತ್ ರಾಜಕುಮಾರ ಈ ಭಾಗಕ್ಕೆ ಯಾವಾಗಾದರೂ ಬಂದರೆ ಆರೂಢರ ಮಠಕ್ಕೆ ಬಾರದೇ ಹೋಗುತ್ತಿರಲಿಲ್ಲ.
ಟೀಸರ್ ಬಿಡುಗಡೆ:
ಈ ಭಾಗದ ಮಂಟೂರಿನ ಸದಾನಂದ ಶ್ರೀಗಳು ಸಿದ್ಧಾರೂಢರ ಕುರಿತು ಸಾಕ್ಷ್ಯಚಿತ್ರವೊಂದನ್ನು ಮಾಡಿದ್ದರು. ಆ ಸಾಕ್ಷ್ಯ ಚಿತ್ರದ ಟೀಸರ್‌ನ್ನು(Teaser) 3 ದಿನದ ಹಿಂದೆಯಷ್ಟೇ ಬೆಂಗಳೂರಲ್ಲಿ ಪುನೀತ್ ರಾಜಕುಮಾರ ಅವರೇ ಬಿಡುಗಡೆಗೊಳಿಸಿದ್ದರು. ಬಿಡುಗಡೆಗೊಳಿಸಿ ಹುಬ್ಬಳ್ಳಿ ಹಾಗೂ ಸಿದ್ಧಾರೂಢರ ಮಠದ ಬಗ್ಗೆ ತಮಗಿರುವ ನಂಟನ್ನು ಭಾಷಣದಲ್ಲಿ ವ್ಯಕ್ತಪಡಿಸಿದ್ದರು. ಅದಾಗಿ ಮೂರೇ ದಿನಕ್ಕೆ ಪುನೀತ್ ಇಲ್ಲ ಎಂಬುದು ನಂಬಲು ಆಗುತ್ತಿಲ್ಲ ಎಂದು ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ನುಡಿಯುತ್ತಾರೆ.
ಪುನೀತ್ ನಟಿಸಿರುವ ದೊಡ್ಮನೆ ಹುಡುಗ, ಯುವರತ್ನ, ಅಜಯ್ ಸೇರಿದಂತೆ ಹತ್ತಾರು ಚಿತ್ರಗಳ ಚಿತ್ರೀಕರಣ(Shooting) ನಡೆದಿರುವುದು ಇಲ್ಲೇ ಹುಬ್ಬಳ್ಳಿಯಲ್ಲಿ. ಚೆನ್ನಮ್ಮ ಸರ್ಕಲ್, ಸಿದ್ಧಾರೂಢ ಮಠ ಸೇರಿದಂತೆ ಮತ್ತಿತರರ ಸ್ಥಳಗಳಲ್ಲಿ ಚಿತ್ರೀಕರಣವಾಗಿತ್ತು. ಇನ್ನು ತಾವು ನಟಿಸಿರುವ ಚಿತ್ರಗಳ ಪ್ರಮೋಷನ್‌ಗೂ ಅವರು ಹತ್ತಾರು ಬಾರಿ ಬಂದಿರುವುದುಂಟು.
ಮರೆಯಾದ 'ಪವರ್' ಜೇಮ್ಸ್ ಸೇರಿ ಹಲವು ಸಿನಿಮಾ ಅತಂತ್ರ
ಸಾವಜಿ ಊಟದ ಪ್ರೀತಿ!
ಹುಬ್ಬಳ್ಳಿಗೆ ಬಂದಾಗಲೊಮ್ಮೆ ಈ ಭಾಗದ ಪ್ರಸಿದ್ಧ ಸಾವಜಿ ಖಾನಾವಳಿ ಊಟದ(Food) ಬಗ್ಗೆ ಬಲುಪ್ರೀತಿ. ಇಲ್ಲಿನ ಉಳ್ಳಾಗಡ್ಡಿ ಓಣಿಯಲ್ಲಿರುವ ನಾಕೋಡ್ ಸಾವಜಿ ಖಾನಾವಳಿಯಿಂದ ಊಟ ತರಿಸಿಕೊಂಡು ಸೇವಿಸುತ್ತಿದ್ದರು. ಮಟನ್, ಖಾರಾಬೋಟಿ, ಹೀಗೆ ಸಾವಜಿ ಊಟದ ವಿಶೇಷ ಖಾಧ್ಯಗಳನ್ನು ತರಿಸಿಕೊಂಡು ಸವಿಯುತ್ತಿದ್ದರು ಎಂದು ನಾಕೋಡ್ ಸಾವಜಿ ಖಾನಾವಳಿಯ ವಿನೋದ ನಾಕೋಡ ಹೇಳುತ್ತಾರೆ.
ಪುನೀತ್ ಪಾಲಿಕೆ ಸ್ವಚ್ಛತಾ ರಾಯಬಾರಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಬ್ಬಳ್ಳಿ-ಧಾರವಾಡ(Dharwad) ಮಹಾನಗರ ಪಾಲಿಕೆಯ ಸ್ವಚ್ಛತೆಯ ರಾಯಬಾರಿ(Ambassador) ಕೂಡ ಆಗಿದ್ದರು. 2017- 18ರ ಸಾಲಿನಲ್ಲಿ ಇವರನ್ನು ಸ್ವಚ್ಛತಾ ರಾಯಬಾರಿಯನ್ನಾಗಿ ಮಾಡಲು ಪಾಲಿಕೆ ನಿರ್ಧರಿಸಿತ್ತು. ಅದಕ್ಕೆ ಪುನೀತ್ ಕೂಡ ಒಪ್ಪಿಗೆ ಸೂಚಿಸಿದ್ದರು. ತದನಂತರ ಕೋವಿಡ್(Covid19) ಬಂದ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ ಎಂದು ಪಾಲಿಕೆ ಪರಿಸರ ಎಂಜಿನಿಯರ್ ಸಂತೋಷ ತಿಳಿಸಿದರು.
ಹುಬ್ಬಳ್ಳಿಗೆ ಬಂದಗಾಲೊಮ್ಮೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡದೇ ಹೋಗುತ್ತಿರಲಿಲ್ಲ. ಮಠಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ, ಕೆಲಹೊತ್ತು ಕುಳಿತು ಇಲ್ಲಿಂದ ತೆರಳುತ್ತಿದ್ದರು. ರಾಜ್ ಕುಟುಂಬದವರು ಯಾರೇ ಬಂದರೂ ಇಲ್ಲಿಗೆ ಭೇಟಿ ನೀಡುತ್ತಿದ್ದರು ಎಂದು ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಧರ್ಮದರ್ಶಿ ಎಸ್.ಐ. ಕೊಳಕೂರು ತಿಳಿಸಿದ್ದಾರೆ.