James 2022 ಕನ್ನಡ ಚಿತ್ರರಂಗದ ಅತಿ ದೊಡ್ಡ ರಿಲೀಸ್‌; ಜೇಮ್ಸ್‌ಗೆ ಅದ್ದೂರಿ ಸ್ವಾಗತ

By Kannadaprabha NewsFirst Published Mar 17, 2022, 8:38 AM IST
Highlights

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರದ ಸ್ವಾಗತಕ್ಕೆ ಅದ್ದೂರಿ ತಯಾರಿ ನಡೆದಿದೆ. ಚೇತನ್‌ ಕುಮಾರ್‌ ನಿರ್ದೇಶನದ, ಕಿಶೋರ್‌ ಪತ್ತಿಕೊಂಡ ನಿರ್ಮಾಣದ ಈ ಸಿನಿಮಾ ಕನ್ನಡ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗುತ್ತಿದೆ.

1. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೆಮ್ಸ್‌’ ಸಿನಿಮಾ ಬಿಡುಗಡೆ ಆಗುತ್ತಿದ್ದು, ರಾಜ್ಯದಲ್ಲಿ ಮೊದಲ ದಿನವೇ 1,500 ಸಾವಿರ ಪ್ರದರ್ಶನ ಕಾಣಲಿದೆ. ರಾಜ್ಯದಲ್ಲಿ 15 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿವೆ. ಬೆಂಗಳೂರು ಸೇರಿದಂತೆ ಹಲವು ಕಡೆ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರದ ಪ್ರದರ್ಶನ ಕಾಣಲಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಜಮಾಯಿಸುವ ಸಾಧ್ಯತೆಗಳು ಇವೆ.

2. ಧಾರವಾಡದ ಪದ್ಮಾ ಚಿತ್ರಮಂದಿರದಲ್ಲಿ ಪುನೀತ್‌ ಅವರ ದೊಡ್ಡ ಕಟೌಟ್‌ ಹಾಕಿದ್ದು, ಗುರುವಾರದ ಐದು ಆಟಗಳ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಕಟೌಟ್‌ಗೆ ಪೂಜೆ ಸಲ್ಲಿಕೆ, ಕೇಕ್‌ ಕತ್ತರಿಸುವುದು, ಉಪಾಹಾರ ವಿತರಣೆ ಹಾಗೂ ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

3. ಜೇಮ್ಸ್‌ ಚಿತ್ರದಲ್ಲಿ ಅಪ್ಪು ಹೆಲ್ಮೆಟ್‌ ಜಾಗೃತಿ ಬಗ್ಗೆ ಹೇಳಿದ್ದ ಸಂದೇಶ ಪ್ರಸಾರವಾಗಲಿದೆ. ಕರ್ನಾಟಕ ಟ್ರಾಫಿಕ್‌ ಪೊಲೀಸ್‌ ವಿಭಾಗದಿಂದ ಈ ವೀಡಿಯೋ ಬಿಡುಗಡೆ ಮಾಡಲಾಗಿದೆ.

4. ಗಂಗಾವತಿ ಶಿವ ಚಿತ್ರಮಂದಿರದಲ್ಲಿ ಅಪ್ಪು ಅವರಿಗಾಗಿ ವಿಶೇಷ ಮಂಟಪ ಮಾಡಲಾಗಿದೆ. ನೂರಾರು ಫ್ಲೆಕ್ಸ್‌ ಅಳವಡಿಸಲಾಗಿದೆ.

5. ಬೀದರ್‌ನ ಸಪ್ನಾ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರದಲ್ಲಲ್ಲಿ 25 ಅಡಿಯ ಬ್ಯಾನರ್‌ ಅಳವಡಿಸಲಾಗಿದೆ. ಕæೕಕ್‌ ಕತ್ತರಿಸಿ ಅನ್ನ ದಾಸೋಹ ನಡೆಯಲಿದೆ. ಪುನೀತ್‌ ಚಿತ್ರಗಳ ಪೋಸ್ಟರ್‌ ಅಂಟಿಸಿಕೊಂಡ ಆಟೋಗಳ ರಾರ‍ಯಲಿ ನಡೆಯಲಿದೆ.

James ಸಿನಿಮಾಗೆ ನಮ್ಮ ಮನಸ್ಸಲ್ಲಿ‌ ವಿಶೇಷ ಸ್ಥಾನ: ಮಲಯಾಳಂ ನಟ ಮೋಹನ್ ಲಾಲ್

6. ಶಿವಮೊಗ್ಗದ ಎಚ್‌ಪಿಸಿ ಮತ್ತು ಲಕ್ಷ್ಮೇ ಸಿನಿಮಾ ಮಂದಿರದಲ್ಲಿ ಬೆಳಗ್ಗೆ 6.45ಕ್ಕೆ ಫ್ಯಾನ್ಸ್‌ ಶೋ ನಡೆಯಲಿದೆ. ನೆಹರು ರಸ್ತೆಯಲ್ಲಿ ಅಪ್ಪುವಿನ ಕಟೌಟ್‌ ಹಾಕಿದ್ದಾರೆ. 30 ಕಡೆ ಫ್ಲೆಕ್ಸ್‌ ಹಾಕಿದ್ದಾರೆ. ಸಿನಿಮಾ ಪ್ರೇಕ್ಷಕರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಬಿರಿಯಾನಿ ವಿತರಿಸಲಿದ್ದಾರೆ.

7. ಚಿತ್ರದುರ್ಗದ ಬಸವೇಶ್ವರ ಹಾಗೂ ಪ್ರಸನ್ನ ಥಿಯೇಟರ್‌ಗಳನ್ನು ಕಟೌಟ್‌ಗಳಿಂದ ಮುಳುಗಿಸಲಾಗಿದೆ. ಜೆ ಜೆ ಹಟ್ಟಿಪವರ್‌ಸ್ಟಾರ್‌ ಯುವಕರ ಬಳಗ ಪುನೀತ್‌ ನೆನಪಲ್ಲಿ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದೆ.

8. ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ.ಶಿವಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತ ರಾಜಕುಮಾರ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಬೆಳಿಗ್ಗೆ 7.30ಕ್ಕೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ. ಅಪ್ಪು 47ನೇ ಜನ್ಮದಿನದ ನೆನಪಿಗಾಗಿ 47 ಆಟೋಗಳ ಮೇಲೆ ಪುನೀತ್‌ರ ಚಿತ್ರಗಳಿಗೆ ಸಂಬಂಧಿಸಿದ ಕಟೌಟ್‌ ಇಟ್ಟು ಮೆರವಣಿಗೆ. ವಸಂತ ಚಿತ್ರ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಪುನೀತ್‌ರ ಕಟೌಟ್‌ಗೆ ಹಾಲಿನ ಅಭಿಷೇಕ.

'ಜೇಮ್ಸ್' ಸಂಭ್ರಮಕ್ಕೆ ಬ್ರೇಕ್; ಪುನೀತ್ ಅಭಿಮಾನಿಗಳಿಗೆ ಭಾರಿ ನಿರಾಸೆ

9. ಮೈಸೂರಿನಲ್ಲಿ 5 ಸಿಂಗಲ್‌ ಸ್ಕ್ರೀನ್‌, ಮೂರು ಮಲ್ಟಿಪ್ಲೆಕ್ಸ್‌ಗಳಿವೆ. ಅಷ್ಟೂಸ್ಕ್ರೀನ್‌ಗಳಲ್ಲಿ ಮೊದಲ ದಿನದ ಟಿಕೇಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಮೈಸೂರಿನ ಇತಿಹಾಸದಲ್ಲಿ ಈ ಥರ ಆಗಿದ್ದು ಇದೆ ಮೊದಲ ಸಲ. ಒಂದೇ ದಿನ ಜೇಮ್ಸ್‌ನ ಒಟ್ಟು 85 ಶೋಗಳು ನಡೆಯಲಿವೆ.

10. ಪುನೀತ್‌ ಸಮಾಧಿಯಿಂದ ಗಾಜನೂರಿನಲ್ಲಿರುವ ಡಾ. ರಾಜ್‌ ನಿವಾಸದವರೆಗೆ ಸುಮಾರು 202ಕಿಮೀ ದೂರ ಅಭಿಮಾನಿಗಳಿಂದ ಸೈಕಲ್‌ ಜಾಥಾ ನಡೆಯಲಿದೆ.

11. ಗುಂಡ್ಲುಪೇಟೆಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಹಿಂದೆಂದೂ ಕಾಣದಷ್ಟುಬ್ಯಾನರ್‌ ಕಟ್ಟಲಾಗಿದೆ. ಮೊದಲ ಶೋ ನೋಡಲು ಬುಧವಾರವೇ ಟಿಕೆಟ್‌ ಖರೀದಿಸಿದ್ದಾರೆ.

12. ಹುಬ್ಬಳ್ಳಿ, ವಿಜಯನಗರ, ಉತ್ತರ ಕನ್ನಡ, ಬಳ್ಳಾರಿ, ಗದಗ, ಹಾವೇರಿಗಳಲ್ಲಿ ಚಿತ್ರಮಂದಿರಗಳ ಮುಂದೆ ಭಾರಿ ಕಟೌಟ್‌ ಹಾಕಲಾಗಿದೆ.

ನ್ಯೂಜೆರ್ಸಿಯಲ್ಲಿ ಅಪ್ಪು ಜೇಮ್ಸ್‌ ಜಾತ್ರೆ

ನ್ಯೂಜೆರ್ಸಿಯಲ್ಲಿ ಶನಿವಾರ ಪುನೀತ್‌ ಸ್ಮರಣೆ ನಡೆಯಲಿದ್ದು ಸುಮಾರು 150 ಕಾರುಗಳ ಮೆರವಣಿಗೆ ನಡೆಯಲಿದೆ. ನ್ಯೂಜೆರ್ಸಿಯ ನಾತ್‌ರ್‍ ಬ್ರೂನ್ಸ್‌ವಿಕ್‌ ಕಮ್ಯೂನಿಟಿ ಪಾರ್ಕ್ನಲ್ಲಿ ಕನ್ನಡಿಗರೆಲ್ಲ ಒಟ್ಟು ಸೇರಿ ಅಪ್ಪು ಅವರನ್ನು ಸ್ಮರಿಸಲಿದ್ದಾರೆ. ಬಳಿಕ 5 ಕಿಮೀ ದೂರ ಕಾರುಗಳ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಪುನೀತ್‌ ಅವರ ಭಾವಚಿತ್ರ, ಕನ್ನಡ ಬಾವುಟಗಳ ಪ್ರದರ್ಶನ ನಡೆಯಲಿದೆ. ಬಳಿಕ ನೂರಾರು ಕನ್ನಡಿಗರು ಇಲ್ಲಿನ ರೀಗಲ್‌ ಥಿಯೇಟರ್‌ನಲ್ಲಿ ಜೇಮ್ಸ್‌ ಚಿತ್ರ ವೀಕ್ಷಿಸಲಿದ್ದಾರೆ. 200ಕ್ಕೂ ಹೆಚ್ಚು ಮಂದಿ ಅಪ್ಪು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಮೆರವಣಿಗೆಗೆ ಅವಕಾಶ ಇಲ್ಲ

ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಕೆಲವೆಡೆ ಪುನೀತ್‌ ಜನ್ಮದಿನಾಚರಣೆಗೆ ಅನುಮತಿ ಸಿಕ್ಕಿಲ್ಲ. ಬೆಂಗಳೂರಿನ ಚಾಮರಾಜಪೇಟೆಯಿಂದ ವೀರೇಶ್‌ ಚಿತ್ರಮಂದಿರದವರೆಗೂ ಬೈಕ್‌ ರಾರ‍ಯಲಿ, ಮೆರವಣಿಗೆ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದರು. ಜೊತೆಗೆ ಪುನೀತ್‌ ಸಮಾಧಿ, ವೀರಭದ್ರೇಶ್ವರ, ಪ್ರಸನ್ನ ಹಾಗೂ ವೀರೇಶ್‌ ಚಿತ್ರಮಂದಿರಗಳ ಮೇಲೆ ಹೆಲಿಕಾಪ್ಟರ್‌ ಮೂಲಕ ಪುಷ್ಪಮಳೆ ಸುರಿಸಲು ಅಭಿಮಾನಿಗಳು ಸಜ್ಜಾಗಿದ್ದರು. ಇವೆರಡೂ ಕಾರ್ಯಕ್ರಮಗಳಿಗೆ ಪೊಲೀಸ್‌ ಇಲಾಖೆ ಅನುಮತಿ ನೀಡಿಲ್ಲ. ಅಭಿಮಾನಿಗಳು ಈ ಕಾರಣಕ್ಕೆ ಕಣ್ಣೀರು ಹಾಕಿದ್ದಾರೆ.

click me!