ಸೋಷಿಯಲ್ ಮೀಡಿಯಾದಲ್ಲಿ ತಂದೆ ಸಿನಿಮಾ ನೋಡುತ್ತಿರುವ ಫೋಟೋ ಹಂಚಿಕೊಂಡು ಧೃತಿ. ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು....
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. 29ರಂದು ಅಪ್ಪು ಅಗಲಿ ಒಂದು ವರ್ಷ ಕಳೆದಿದೆ, ವಿಶ್ವಾದ್ಯಂತ ಅಪ್ಪು ಪುಣ್ಯಸ್ಮರಣೆ ಮಾಡಿ ಅನ್ನದಾನ, ನೇತ್ರದಾನ ಮತ್ತು ರಕ್ತ ದಾನ ಮಾಡಿದ್ದಾರೆ. 365 ದಿನ ಕಳೆದರೂ ಅಪ್ಪು ಜೊತೆಗಿದ್ದಾರೆ ಅನ್ನೋ ಭಾವನೆಯಲ್ಲಿ ಅಭಿಮಾನಿಗಳು ಮತ್ತು ಕುಟುಂಬಸ್ಥರು ಬದುಕುತ್ತಿದ್ದಾರೆ. ಅಪ್ಪು ಇಲ್ಲ ಅನೋ ನೋವಿಗೆ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ.
ಅಪ್ಪು ಕನಸು ನನಸು ಮಾಡಲು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಅಪ್ಪು ಕೊನೆ ಸಿನಿಮಾ ಕೊನೆಯ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಬೇಕು ಎಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪುನೀತ ಪರ್ವ ನಡೆಸಿದ್ದರು. ಕನ್ನಡ ಚಿತ್ರರಂಗ ಮಾತ್ರವಲ್ಲ ತೆಲುಗು ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್‌ಗಳು ಭಾಗಿಯಾಗಿದ್ದರು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ವಿಡಿಯೋ ಕಾಲ್ ಮೂಲಕ ವಿಶ್ ಮಾಡಿದ್ದರು. ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಅಪ್ಪುಗೆ ಸಾಥ್ ಕೊಟ್ಟಿದೆ. ಅಶ್ವಿನಿ ಜೊತೆ ಕಿರಿಯ ಪುತ್ರಿ ವಂದಿತಾ ಮಾತ್ರ ಕಾಣಿಸಿಕೊಳ್ಳುತ್ತಿದ್ದರು ಹಿರಿ ಮಗಳು ಎಲ್ಲಿ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು.
ಧೃತಿ ಪುನೀತ್:
ವಿದೇಶದಲ್ಲಿ ಧೃತಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ ರಜೆ ಇದ್ದಾಗ ಮಾತ್ರ ಬೆಂಗಳೂರಿಗೆ ಬರುತ್ತಾರೆ. ಗಂಧದ ಗುಡಿ ಸಿನಿಮಾ ಬಿಡುಗಡೆ ದಿನ ತಂದೆ ಜೊತೆಗಿರುವ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ್ದರೆ ಧೃತಿ 1 ಅಥವಾ 2 ವರ್ಷ ಮಗು ಇರಬಹುದು ಇದಕ್ಕೆ ವೈಟ್ ಬಣ್ಣ ಹಾರ್ಟ್ ಹಾಕಿದ್ದಾರೆ. ಅಪ್ಪು ಪುಣ್ಯ ಸ್ಮರಣೆ ದಿನ ಗಂಧದ ಗುಡಿ ಸಿನಿಮಾ ವೀಕ್ಷಿಸಿದ್ದಾರೆ.ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗಂಧದ ಗುಡಿ ಟೈಟಲ್ ಫೋಟೋ ಹಂಚಿಕೊಂಡಿದ್ದರು.
ಗಂಧದ ಗುಡಿ ನೋಡ್ತಾರೆ:
ಗಂಧದ ಗುಡಿ ಸಿನಿಮಾವನ್ನು ಪುತ್ರಿ ಧೃತಿ ಮತ್ತು ವಂದಿತಾ ನೋಡುತ್ತಾರೆಂದು ಅಪ್ಪು ನಿರ್ದೇಶಕ ಅಮೋಘವರ್ಷಗೆ ಹೇಳಿದ್ದರಂತೆ. ‘ಗಂಧದ ಗುಡಿ’ ಸಿನಿಮಾದ ನೆವದಲ್ಲಿ ಕರ್ನಾಟಕದ ಕಾಡುಗಳಿಗೆ ಪುನೀತ್ ಅವರನ್ನು ಕರೆದುಕೊಂಡು ಹೋಗಿ ಸುತ್ತಿಸಿದ್ದರು ಅಮೋಘವರ್ಷ. ‘ಅವರು ಯಾವಾಗಲೂ ಕರ್ನಾಟಕವನ್ನು ಬೇರೆ ಥರ ನೋಡಬೇಕು ಎಂದೇ ಹೇಳುತ್ತಿದ್ದರು. ಅಂಥವರಿಗೆ ಕರ್ನಾಟಕದ ಕಾಡುಗಳನ್ನು ಪರಿಚಯಿಸುವ ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ’ ಎಂಬುದು ಅಮೋಘವರ್ಷ ಆಪ್ತರ ಬಳಿ ಹೇಳಿದ್ದ ಮಾತು. ‘ನನ್ನ ಮಕ್ಕಳು ನನ್ನ ಸಿನಿಮಾವನ್ನು ಅಷ್ಟಾಗಿ ನೋಡಲ್ಲ. ಆದರೆ ಈ ಸಿನಿಮಾ ವೈಲ್‌ಡ್ಲೈಫ್‌ಗೆ ಸಂಬಂಧಿಸಿದ್ದು. ವನ್ಯಜೀವಿ, ಪರಿಸರ ಸಂರಕ್ಷಣೆಯ ಆ್ಯಂಗಲ್ ನಲ್ಲಿರುವಂಥಾದ್ದು. ಹೀಗಾಗಿ ಫೈನಲಿ ನನ್ನ ಮಕ್ಕಳು ನನ್ನ ಈ ಸಿನಿಮಾ ನೋಡ್ತಾರೆ ಸಾರ್’ ಅಂತ ಪುನೀತ್ ಅವರು ಅಮೋಘವರ್ಷ ಅವರ ಬಳಿ ಮನದಿಂಗಿತ ಹಂಚಿಕೊಂಡಿದ್ದರು.
ಎಲ್ಲೆಲ್ಲೂ 'ಅಪ್ಪು' ಅಬ್ಬರ: ಮೊದಲ ದಿನವೇ ಕೋಟಿ-ಕೋಟಿ ಬಾಚಿದ 'ಗಂಧದ ಗುಡಿ'
ಮೊದಲ ದಿನವೇ 5.28 ಕೋಟಿ:
ನಟ ಪುನೀತ್ ರಾಜ್‌ಕುಮಾರ್ ಅಭಿನಯದ, ಅಮೋಘವರ್ಷ ನಿರ್ದೇಶನದ ‘ಗಂಧದ ಗುಡಿ’ ಚಿತ್ರದ ಮೊದಲ ದಿನವೇ 5.28 ಕೋಟಿ ರು. ಗಳಿಸಿದೆ. ಮುಂಗಡ ಬುಕಿಂಗ್‌ನಿಂದಲೇ 1.72 ಕೋಟಿ ಹಾಗೂ ಗುರುವಾರ ಸಂಜೆ ಆಯೋಜಿಸಿದ್ದ ಪೇಯ್ಡ್ ಪ್ರೀಮಿಯರ್ ಶೋಗಳಿಂದ 28 ಲಕ್ಷ ರು. ಕಲೆಕ್ಷನ್ ಆಗಿದೆ. ಒಟ್ಟಾರೆ ಮೊದಲ ದಿನ ಅಪ್ಪು ನಟನೆಯ ಕೊನೆಯ ಚಿತ್ರ ಗಳಿಸಿದ್ದು 5.28 ಕೋಟಿ ರು. ಎನ್ನಲಾಗುತ್ತಿದೆ. ರಾಜ್ಯಾದ್ಯಂತ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿದ್ದು, ಈಗಾಗಲೇ ಶೇ.62.77ರಷ್ಟು ಟಿಕೆಟ್‌ಗಳು ಮಾರಾಟ ಆಗಿವೆ. ಸಿನಿಮಾ ಗಳಿಕೆಯ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ. ಆದರೆ, ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ತೆರೆಕಂಡಿದೆ. ಮೊದಲ ದಿನವೇ 1800ಕ್ಕೂ ಹೆಚ್ಚು ಶೋಗಳನ್ನು ಕಂಡಿದ್ದು, ಪ್ರತಿ ಚಿತ್ರಮಂದಿರಗಳಲ್ಲೂ ಒಂದೇ ದಿನ 6 ರಿಂದ 7 ಪ್ರದರ್ಶನಗಳನ್ನು ಕಂಡಿದೆ.