Puneeth Namana: ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌!

By Suvarna NewsFirst Published Nov 17, 2021, 6:29 AM IST
Highlights
  • ಈ ಮೊದಲು ಡಾ.ರಾಜ್‌ಗೆ ಪ್ರಶಸ್ತಿ, ಈವರೆಗೆ 10 ಮಂದಿಗೆ ಕರ್ನಾಟಕ ರತ್ನ ಗೌರವ
  • 2009ರಲ್ಲಿ ಕೊನೆಯದಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ, 
  • ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಅಪ್ಪು

ಬೆಂಗಳೂರು(ನ.17):  ಹಠಾತ್‌ ನಿಧನರಾಗಿ ಕರುನಾಡನ್ನು ದುಃಖದಲ್ಲಿ ಮುಳುಗಿಸಿದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌(Puneeth Rajkumar) ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಕರ್ನಾಟಕ ರತ್ನಕ್ಕೆ(Karnataka Ratna Award) ಭಾಜನರಾದ 10ನೇ ವ್ಯಕ್ತಿ. ಅಲ್ಲದೆ, ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಕೂಡಾ ಹೌದು. ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಈವರೆಗೆ ಒಂಬತ್ತು ಗಣ್ಯರಿಗೆ ನೀಡಲಾಗಿದೆ. ಕಡೆಯ ಬಾರಿಗೆ 2009ರಲ್ಲಿ ಈ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನೀಡಲಾಗಿತ್ತು. ಇದಾಗಿ 11 ವರ್ಷದ ನಂತರ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ಯಾವುದೇ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟಸೇವೆ ಸಲ್ಲಿಸಿರುವ ಗಣ್ಯರಿಗೆ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ 1992ರಿಂದ ‘ಕರ್ನಾಟಕ ರತ್ನ‘ ಪ್ರಶಸ್ತಿ ಸ್ಥಾಪಿಸಿತು. ಮೊದಲ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಾಗಿ ರಾಷ್ಟ್ರಕವಿ ಡಾ. ಕುವೆಂಪು ಹಾಗೂ ಸಿನಿಮಾ ಮತ್ತು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ‘ನಟಸಾರ್ವಭೌಮ’ ಡಾ. ರಾಜಕುಮಾರ್‌ ಅವರಿಗೆ 1992ರಲ್ಲಿ ಪ್ರದಾನ ಮಾಡಲಾಯಿತು. ನಂತರದ ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ (1999), ಖ್ಯಾತ ವಿಜ್ಞಾನಿ ಡಾ. ಸಿ.ಎನ್‌.ರಾವ್‌ (2000), ಖ್ಯಾತ ವೈದ್ಯ, ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ( 2001), ನಾಡಿನ ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ ಭೀಮಸೇನ ಜೋಶಿ (2005), ದಶಕಗಳ ಕಾಲ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುತ್ತಾ ಬಂದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ (2007), ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ. ಜವರೇÜಗೌಡ (2008) ಹಾಗೂ ಹತ್ತಾರು ವರ್ಷಗಳ ಕಾಲದ ಸಾಮಾಜಿಕ ಸೇವೆ ಪರಿಗಣಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (2009) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. 2009ರ ನಂತರ ಈವರೆಗೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ. ಈಗ ಸಿನಿಮಾ ಹಾಗೂ ಸಾಮಾಜಿಕ ಸೇವೆ ಪರಿಗಣಿಸಿ ಪುನೀತ್‌ ರಾಜಕುಮಾರ್‌ ಅವರನ್ನು ‘ಕರ್ನಾಟಕ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Puneeth Namana; ಭಾರತ ಸಿನಿ ದಿಗ್ಗಜರಿಂದ ಪುನೀತ್‌ಗೆ ಗೀತ ನಮನ, ನೋವು ತಡೆಯಲಾಗದೆ ಅತ್ತ ಶಿವಣ್ಣ, ರಾಘಣ್ಣ!

ಕರ್ನಾಟಕ ರತ್ನ ಪುರಸ್ಕೃತರು
ಡಾ. ಕುವೆಂಪು 1992 ಸಾಹಿತ್ಯ
ಡಾ. ರಾಜಕುಮಾರ್‌ 1992 ಸಿನಿಮಾ, ಸಂಗೀತ
ಎಸ್‌. ನಿಜಲಿಂಗಪ್ಪ 1999 ರಾಜಕೀಯ
ಡಾ. ಸಿ.ಎನ್‌.ರಾವ್‌ 2000 ವಿಜ್ಞಾನ
ಡಾ. ದೇವಿಶೆಟ್ಟಿ 2001 ಮೆಡಿಸಿನ್‌
ಪಂ. ಭೀಮಸೇನ ಜೋಶಿ 2005 ಸಂಗೀತ
ಡಾ. ಶಿವಕುಮಾರ ಸ್ವಾಮೀಜಿ, ಸಿದ್ದಗಂಗಾಮಠ 2007 ಸಮಾಜ ಸೇವೆ
ಡಾ. ಜವರೇಗೌಡ 2008 ಶಿಕ್ಷಣ ಮತ್ತು ಸಾಹಿತ್ಯ
ಡಾ. ವೀರೇಂದ್ರ ಹೆಗ್ಗಡೆ 2009 ಸಮಾಜ ಸೇವೆ, ಪರೋಪಕಾರ
ಪುನೀತ್‌ ರಾಜಕುಮಾರ್‌, 2021, ಸಿನಿಮಾ ಹಾಗೂ ಸಾಮಾಜಿಕ ಸೇವೆ

Puneeth Rajkumar;ಬರ್ತಾ ನನ್ನ ತಮ್ಮನಾಗಿ ಬಂದ, ಹೋಗ್ತಾ ಅಪ್ಪನಾಗಿ ಹೋದ

ಪುನೀತ್‌ಗೆ ‘ಕರ್ನಾಟಕ ರತ್ನ’: ಸರ್ಕಾರಕ್ಕೆ ಅಭಿನಂದನೆ
ಅರ್ಥಪೂರ್ಣವಾಗಿ ಬದುಕಿ ನಾಡಿಗೆ ಅಪಾರ ಕೊಡುಗೆ ನೀಡಿದ ನಟ ಪುನೀತ್‌ರಾಜಕುಮಾರ್‌ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಘೋಷಿಸಿದ ರಾಜ್ಯ ಸರ್ಕಾರವನ್ನು ಹರಿಹರ ಪಂಚಮಸಾಲಿ ಪೀಠದ ಶ್ವಾಸಗುರು ವಚನಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ಏರ್ಪಡಿಸಿದ್ದ ‘ಪುನಿತ್‌ ನಮನ’(Puneeth Namana) ಕಾರ್ಯಕ್ರಮದಲ್ಲಿ ಪುನೀತ್‌ ರಾಜಕುಮಾರ್‌ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರ ಸ್ವಾಗತಾರ್ಹ ಎಂದರು. ಮನುಷ್ಯ ಎಷ್ಟುಕಾಲ ಬದುಕುತ್ತಾನೆ ಎಂಬುದು ಮುಖ್ಯವಲ್ಲ. ಎಷ್ಟುಅರ್ಥಪೂರ್ಣವಾಗಿ ಮತ್ತು ಮನುಷ್ಯರಾಗಿ ಬದುಕಿದ್ದೆವು ಎಂಬುದು ಮುಖ್ಯ. ಹೀಗೆ ಆದರ್ಶಪಾಯವಾಗಿ ಜೀವಿಸಿ ಅಲ್ಪ ಸಮಯದಲ್ಲೇ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಮರೆಯಾದವರು ನಟ ಪುನೀತ್‌ ರಾಜಕುಮಾರ್‌. ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಮಾಡಿದ ಸಮಾಜಮುಖಿ ಕಾರ್ಯಗಳು ಎಲ್ಲವೂ ಪುನೀತ್‌ ಅವರ ಮರಣಾನಂತರ ಗೊತ್ತಾಗುತ್ತಿವೆ. ಅಂತಹ ಮಹಾನ್‌ ವ್ಯಕ್ತಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಿಸಿ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಶ್ರೀಗಳು ತಿಳಿಸಿದ್ದಾರೆ.

click me!