ನಿರ್ಮಾಪಕರೇ, ಎಲ್ಲಿ ಎಡವುತ್ತಿದ್ದೀರಿ ಸಾರ್: ಚಿತ್ರರಂಗ ಮತ್ತು ದುಂದುವೆಚ್ಚ

Published : Apr 25, 2025, 11:53 AM ISTUpdated : Apr 25, 2025, 11:59 AM IST
ನಿರ್ಮಾಪಕರೇ, ಎಲ್ಲಿ ಎಡವುತ್ತಿದ್ದೀರಿ ಸಾರ್: ಚಿತ್ರರಂಗ ಮತ್ತು ದುಂದುವೆಚ್ಚ

ಸಾರಾಂಶ

ಒಂದು ದೊಡ್ಡ ಸಿನಿಮಾ. ನಿರ್ಮಾಪಕರು ಮಾತ್ರ ಕೊಂಚ ಹಳಬರು. ಅವರ ಬಳಿ ಒಂದು ದಿನ ಯಾರೋ ಒಬ್ಬರು ಹೋಗಿ 16 ಲಕ್ಷದ ಲೈಟಿಂಗ್‌ ವ್ಯವಸ್ಥೆ ಬೇಕು ಎಂದು ಕೇಳಿದ್ದಾರೆ. ನಿರ್ಮಾಪಕರಿಗೆ ಸ್ವಲ್ಪ ಶಾಕ್ ಆಗಿದೆ. ಸ್ಪಾಟಿಗೆ ಹೋಗಿ ಎಲ್ಲೆಲ್ಲಿ ಲೈಟ್‌ ಇಡುತ್ತೀರಿ ಎಂದು ಕೇಳಿದ್ದಾರೆ. 

ಪ್ರಸಂಗ 1: ಕೆಲವು ತಿಂಗಳ ಹಿಂದೆ ಒಬ್ಬ ನಿರ್ಮಾಪಕರು ಫೈನಾನ್ಶಿಯರ್‌ ಬಳಿ ಬಂದು 9 ಕೋಟಿ ಫೈನಾನ್ಸ್‌ ಬೇಕು ಎಂದು ಕೇಳಿದರು. ದೊಡ್ಡ ಸಿನಿಮಾ, ದೊಡ್ಡ ಹೀರೋ ಇರುವುದರಿಂದ ಫೈನಾನ್ಶಿಯರ್‌ಗೂ ಕೊಡುವುದಕ್ಕೆ ಏನೂ ಸಮಸ್ಯೆ ಇರಲಿಲ್ಲ. ಕಷ್ಟ ಸುಖ ಮಾತನಾಡುತ್ತಾ ಎಲ್ಲಿಯವರೆಗೆ ಬಂತು ಸಿನಿಮಾ ಎಂದೆಲ್ಲಾ ಕೇಳಿದಾಗ ನಿರ್ಮಾಪಕರು ಸದ್ಯಕ್ಕೆ 4 ಕೋಟಿ ಖರ್ಚಾಗಿದೆ, ಹೀರೋ ಇನ್ನೂ ಸಂಭಾವನೆ ಫೈನಲ್‌ ಮಾಡಿಲ್ಲ, ಅವರ ಸಂಭಾವನೆ 7 ಕೋಟಿ ಆಗಬಹುದು, ಎಂದೆಲ್ಲಾ ಲೆಕ್ಕ ಹೇಳಿ ಒಟ್ಟು ಬಜೆಟ್ಟೇ 16 ಕೋಟಿ ಆಗುತ್ತದೆ ಎಂದರು. ಅವರಲ್ಲಿದ್ದ 4 ಕೋಟಿ ಮುಗಿದಿದೆ. ಫೈನಾನ್ಶಿಯರ್‌ 9 ಕೋಟಿ ಕೊಟ್ಟರೂ ಮತ್ತೆ ಆ ನಿರ್ಮಾಪಕರು ದುಡ್ಡಿಗಾಗಿ ಇನ್ನೂ ಯಾರೋ ಒಬ್ಬರ ಬಳಿ ಹೋಗಬೇಕಾಗುತ್ತದೆ. ಅಂತಿಮವಾಗಿ 16 ಕೋಟಿ 18 ಕೋಟಿ ಆದರೂ ಆದೀತು. ಅಷ್ಟು ದುಡ್ಡು ವಾಪಸ್ ಹೇಗೆ ಕಲೆಕ್ಷನ್‌ ಮಾಡುತ್ತೀರಿ ಎಂದು ಕೇಳಿದರಂತೆ ಫೈನಾನ್ಷಿಯರ್‌. ನಿರ್ಮಾಪಕರು ಉತ್ತರ ಹೇಳಲಿಲ್ಲ. ಅವರಿಗೆ ಗೊತ್ತಿರಲೂ ಇಲ್ಲ.

ಪ್ರಸಂಗ 2: ಒಂದು ದೊಡ್ಡ ಸಿನಿಮಾ. ನಿರ್ಮಾಪಕರು ಮಾತ್ರ ಕೊಂಚ ಹಳಬರು. ಅವರ ಬಳಿ ಒಂದು ದಿನ ಯಾರೋ ಒಬ್ಬರು ಹೋಗಿ 16 ಲಕ್ಷದ ಲೈಟಿಂಗ್‌ ವ್ಯವಸ್ಥೆ ಬೇಕು ಎಂದು ಕೇಳಿದ್ದಾರೆ. ನಿರ್ಮಾಪಕರಿಗೆ ಸ್ವಲ್ಪ ಶಾಕ್ ಆಗಿದೆ. ಸ್ಪಾಟಿಗೆ ಹೋಗಿ ಎಲ್ಲೆಲ್ಲಿ ಲೈಟ್‌ ಇಡುತ್ತೀರಿ ಎಂದು ಕೇಳಿದ್ದಾರೆ. ಸಮರ್ಪಕ ಉತ್ತರ ಬಾರದೇ ಇರುವ ಕಾರಣ ನಿರ್ಮಾಪಕರು ಅಲ್ಲಿಯೇ ಪ್ಯಾಕಪ್‌ ಹೇಳಿ ಮನೆಗೆ ಹೋದರಂತೆ. ಈಗ ಹೋದರೆ ಒಂದು ಕೋಟಿ ಹೋಯಿತು, ವರ್ಷ ಬಿಟ್ಟರೆ 15 ಹೋಗುತ್ತದೆ ಎಂದರಂತೆ.ಈ ಕತೆಗಳು ಬಲ್ಲ ಮೂಲಗಳು ಹೇಳಿದ್ದು. ಲೆಕ್ಕ ಕೊಂಚ ಆಚೀಚೆಯಾಗಬಹುದು. ಆದರೆ ಚಿತ್ರರಂಗದ ಸ್ಥಿತಿ ಮಾತ್ರ ಹೀಗೇ ಇದೆ. ವರ್ಷಕ್ಕೆ 200 ಮಂದಿ ಸಿನಿಮಾ ಮಾಡುತ್ತಾರೆ. ಬೆರಳೆಣಿಕೆಯಷ್ಟು ಮಂದಿ ಗೆಲ್ಲುತ್ತಾರೆ. ಹಲವರು ಗೆದ್ದ ಭ್ರಮೆಯಲ್ಲಿ ಇರುತ್ತಾರೆ. ಉಳಿದವರೆಲ್ಲಾ ಸುದೀರ್ಘ ನಿಟ್ಟುಸಿರು ಬಿಟ್ಟು ಸೈಡಿಗೆ ಹೋಗುತ್ತಾರೆ. ಹಾಗೇ ಕಳೆದ ಕೆಲವು ವರ್ಷಗಳಲ್ಲಿ ರಿಲೀಸ್‌ ಆದ ನೂರಾರು ಸಿನಿಮಾಗಳ ನಿರ್ಮಾಪಕರು ಹೇಳಹೆಸರಿಲ್ಲದೇ ಹೋಗಿದ್ದಾರೆ. ರಿಪೀಟೆಡ್‌ ಆಗಿ ಸಿನಿಮಾ ಯಾರು ಮಾಡುತ್ತಿದ್ದಾರೆ ಎಂದು ನೋಡಿದರೆ ನಿರಾಶೆ ಮಾತ್ರ ಉತ್ತರ.

ಪಹಲ್ಗಾಮ್‌ನಲ್ಲಿ ಚಿತ್ರೀಕರಣಗೊಂಡಿತ್ತು ದಳಪತಿ ವಿಜಯ್ ನಟಿಸಿದ ಆ ಸಿನಿಮಾ!

ಹಾಗಾದರೆ ನಿರ್ಮಾಪಕರು ಎಡವುತ್ತಿರುವುದು ಎಲ್ಲಿ?
1. ಹೊಸ ನಿರ್ಮಾಪಕರಲ್ಲಿ ಶೇ.90 ಮಂದಿಗೆ ಫೀಲ್ಡಲ್ಲಿ ಹೇಗೆ ಕೆಲಸ ಆಗುತ್ತದೆ ಎಂಬುದು ತಿಳಿದಿಲ್ಲ. ಎಲ್ಲೆಲ್ಲಿ ಎಷ್ಟೆಷ್ಟು ಖರ್ಚಾಗುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಒಂದು ಸಿನಿಮಾ ಮಾಡೋಣ ಅಂತ ಬರುತ್ತಾರೆ. ಕೆಲವರು ಗೊತ್ತಿದ್ದೂ ಫೀಲ್ಡಿಗೆ ಹೋಗದೇ ಕೇಳಿದಾಗೆಲ್ಲಾ ಕೊಟ್ಟು ಎಡವುದೂ ಇದೆ. ಸಿನಿಮಾ ಎಂಬುದು ಉದ್ಯಮ ಎಂದಾಗ ಎಲ್ಲೆಲ್ಲಿ ಎಷ್ಟೆಷ್ಟು ಪೈಸೆ ಹೋಗುತ್ತದೆ, ನಿಜಕ್ಕೂ ಅಷ್ಟು ಖರ್ಚಾಗುತ್ತದಾ, ಎಲ್ಲೆಲ್ಲಿ ಸೋರಿಕೆಯಾಗುತ್ತದೆ ಎಂಬ ಮಾಹಿತಿ ಬೇಕಲ್ಲವೇ. ಬೇರೆ ಬೇರೆ ಇಂಡಸ್ಟ್ರಿಯ ಎಲ್ಲಾ ಉದ್ಯಮಿಗಳೂ ಹೀಗೇ ಲೆಕ್ಕ ಹಾಕಿರುತ್ತಾರೆ. ಆದರೆ ಸಿನಿಮಾರಂಗದಲ್ಲಿ ಹಾಗಾಗುವುದಿಲ್ಲವೇನೋ. ಹೀಗಾಗಿ ಬಹುತೇಕರು ಸೈಟ್‌ಗಳು ಮಾರುವ ಪರಿಸ್ಥಿತಿ ಬರುತ್ತದೆ. ಕಳೆದ ವರ್ಷ ಒಬ್ಬರು 17 ಸೈಟ್‌ ಮಾರಿದರಂತೆ, ಪಾಪ. ಹೊಸ ನಿರ್ಮಾಪಕರು ಕೆಲಸ ತಿಳಿದುಕೊಂಡು ಬನ್ನಿ. ಇಲ್ಲದಿದ್ದರೆ ಸಿನಿಮಾ ರಿಲೀಸ್‌ ದಿನ ಅಯ್ಯೋ ಪಾಪ ಅಂತ ಹೇಳಲಿಕ್ಕೂ ಜನ ಇರುವುದಿಲ್ಲ.

2. ದೊಡ್ಡ ಬಿಗ್‌ ಬಜೆಟ್‌ ಸಿನಿಮಾ ಮಾಡಬೇಕು ಎಂಬ ಆಸೆ ಕೆಲವು ನಿರ್ಮಾಪಕರಿಗೆ ಇರುತ್ತದೆ. ಈಗಂತೂ ಸ್ಟಾರ್‌ ಸಿನಿಮಾ ಎಂದರೆ ಬಿಳಿಯಾನೆ ಸಾಕಿದಂತೆ ಎಂದು ಬಲ್ಲವರು ಹೇಳುತ್ತಾರೆ. ಆದರೂ ಅವರು ಧೈರ್ಯ ಮಾಡುತ್ತಾರೆ. ಆರಂಭದಲ್ಲಿಯೇ ಕಂಟೆಂಟ್‌ ಸಮಸ್ಯೆ ಎದುರಾಗುತ್ತದೆ. ಸಿನಿಮಾ ಒಪ್ಪಿಕೊಳ್ಳುವವರು ಕತೆ ಒಪ್ಪಿಕೊಳ್ಳಲು ಬಹಳ ಕ್ರೈಟೀರಿಯಾಗಳಿರುತ್ತವೆ. ಮೊದಲಾದರೆ ನಿರ್ದೇಶಕರು ಹೇಳಿದ್ದೇ ಫೈನಲ್‌ ಇತ್ತು. ಆದರೆ ಈಗ ನಿರ್ದೇಶಕರು ಹಿಂದೆ ಉಳಿದು ಬಿಟ್ಟಿದ್ದಾರೆ. ಅವರಿಗೆ ಅವರದೇ ನಿಟ್ಟುಸಿರುಗಳು. ಅದಾದ ಮೇಲೆ ಒಂದೋ ಎರಡೋ. ಸ್ಯಾಟಲೈಟಲ್ಲಿ ಅಷ್ಟು ಬಂತು, ಓಟಿಟಿಯಲ್ಲಿ ಇಷ್ಟು ಬಂತು, ಚಿತ್ರಮಂದಿರದಲ್ಲಿ ಅಷ್ಟೊಂದು ಬಂತು ಎಂಬ ಲೆಕ್ಕದಲ್ಲಿ ಕಳೆದು ಹೋಗದಿರಿ. ಆ ಲೆಕ್ಕಗಳು ಬಾಯಿ ಮಾತಲ್ಲಿ ಮಾತ್ರ ಸಿಗುತ್ತವೆ. ಆದರೆ ನಿಜ ಲೆಕ್ಕ ಯಾವುದು ಎಂದು ತಿಳಿಯಬೇಕಾದರೆ ಸೋತವನ ಬಳಿ ಹೋಗಬೇಕಿರುತ್ತದೆ. ಬಹುಶಃ ಅಲ್ಲಿ ಕಣ್ಣೀರು ಮಾತ್ರ ಸಿಗಬಹುದು.

3. ಕೆಲವರಿಗೆ ನಟನೆಯ ಆಸೆ ಇರುತ್ತದೆ. ಹಲವರಿಗೆ ಮಕ್ಕಳ ವ್ಯಾಮೋಹ ಇರುತ್ತದೆ. ಅಂಥವರು ಕಳೆದುಕೊಳ್ಳಲು ಸಿದ್ಧವಾಗಿಯೇ ಬಂದರೂ ಬರಬಹುದು. ಆದರೆ ಅವರಿಗೆ ತಾವು ಸ್ವಲ್ಪ ತಪ್ಪಿದರೂ ಉದ್ಯಮಕ್ಕೆ ಧಕ್ಕೆ ತರುತ್ತಿದ್ದೇವೆ ಎಂಬ ಕಲ್ಪನೆ ಇರಬೇಕು. ಯಾಕೆಂದರೆ ತಪ್ಪು ಹೆಜ್ಜೆಗಳನ್ನು ಇಟ್ಟು ಇಟ್ಟು ಈಗ ಸರಿ ಹೆಜ್ಜೆಗಳನ್ನೂ ಯಾರೂ ನಂಬದ ಸ್ಥಿತಿಗೆ ಬಂದಿದ್ದೇವೆ. ಸಿನಿಮಾ ಸ್ವಲ್ಪ ಚೆನ್ನಾಗಿದೆ ಎಂದು ಹೇಳಿದರೂ ಯಾರೂ ಅದಕ್ಕೆ ಕಿವಿಗೊಡದ ಸಂದರ್ಭ ಎದುರಾಗಿದೆ. ಹಾಗಾಗಿ ಅವರವರ ಆಸೆಗಳಿಗಾಗಿ ಸಿನಿಮಾ ಮಾಡುವವರೂ ತಮಗೂ ಜವಾಬ್ದಾರಿ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

4. ಬಹಳಷ್ಟು ಮಂದಿ ನಿರ್ಮಾಪಕರು ಸುದ್ದಿಗೋಷ್ಠಿಗಳಲ್ಲಿ ಬಂದು ಏನ್‌ ಚೆನ್ನಾಗಿ ಶೂಟಿಂಗ್‌ ಮಾಡಿದ್ದೇವೆ ಗೊತ್ತಾ ಸಾರ್‌, ಆ ಕಾಡಿಗೆ ಹೋಗಿದ್ದೇವೆ, ಭಯಂಕರ ಲೆನ್ಸ್‌ ಬಳಸಿದ್ದೇವೆ, ವಿದೇಶಕ್ಕೆ ಹೋಗಿ ಆರ್ಕೆಸ್ಟ್ರಾ ಮಾಡಿಸಿದ್ದೇವೆ, ಧಾಂಧೂಂ ಪ್ರಚಾರ ಮಾಡಿಸಿದ್ದೇವೆ ಎಂದು ಹೇಳುತ್ತಾರೆ. ಒಬ್ಬ ಸಾಮಾನ್ಯ ಸಿನಿಮಾ ಪ್ರೇಕ್ಷಕನಿಗೆ ಇದೆಲ್ಲಾ ಯಾಕ್‌ ಸ್ವಾಮಿ ಬೇಕು. ಒಂದೊಳ್ಳೆ ಕತೆ ಮಾಡಿಸಿ, ನಗಿಸಿ, ಕಣ್ಣೀರು ಹಾಕಿಸಿ. ಹೊರಗೆ ಬಂದ ಪ್ರೇಕ್ಷಕನ ಮುಖದಲ್ಲಿ ಸಂತೃಪ್ತಿ ಇರುವಂತೆ ಮಾಡಿ. ಸಾಧ್ಯವಾದರೆ ಅದು ಬಿಟ್ಟು ನೀವು ಪ್ರೈವೇಟ್‌ ಜೆಟ್‌ನಲ್ಲಿ ಸುತ್ತಾಡಿದರೂ ಏನೂ ಪ್ರಯೋಜನ ಆಗುವುದಿಲ್ಲ.

5. 18 ಕೋಟಿ ಹಾಕಿ ಮಾಡಿದ ಚಿತ್ರಕ್ಕೆ 18 ಕೋಟಿ ಮಾತ್ರ ಸಂಗ್ರಹವಾದರೆ ಅಲ್ಲಿ ಲಾಭ ಎಲ್ಲಿ ಬಂತು. ಅದನ್ನು ಗೆಲುವು ಅನ್ನುವುದಕ್ಕಿಂತ ಚಿತ್ರರಂಗದ ಹೊರೆ ಎಂದೇ ಭಾವಿಸಬೇಕು. ಯಾಕೆಂದರೆ ಆ ಭ್ರಮೆಯಿಂದ ಖರ್ಚುಗಳು ಹೆಚ್ಚಾಗುತ್ತವೆ. ಭಾರ ಜಾಸ್ತಿಯಾಗುತ್ತದೆ. ಭಾರ ಜಾಸ್ತಿ ಮಾಡುವವರು ಒಳ್ಳೆಯ ಸ್ಥಿತಿಯಲ್ಲಿದ್ದಾಗ ಆತ್ಮಾವಲೋಕನ ಮಾಡಬೇಕು. ಗೆದ್ದವರು ಮತ್ತೊಬ್ಬರ ಕೈ ಹಿಡಿದರೆ ಎಷ್ಟು ಸೊಗಸು. ಅಮೀರ್‌ ಖಾನ್‌ ತಾನು ಗೆದ್ದರೆ ಮಾತ್ರ ಸಿನಿಮಾದ ಲಾಭದಲ್ಲಿ ಒಂದು ಭಾಗ ತೆಗೆದುಕೊಳ್ಳುತ್ತೇನೆ ಎಂದು ಒಂದು ಸಂದರ್ಶನದಲ್ಲಿ ಹೇಳುತ್ತಾರೆ. ಅವರು ಸಂಪೂರ್ಣ ಸಿನಿಮಾಗಾಗಿ ತನ್ನನ್ನು ತಾನು ಕೊಟ್ಟುಬಿಡುತ್ತಾರೆ. ನಿರ್ಮಾಪಕರು ಅಂಥದ್ದೊಂದು ಮಾಡೆಲ್‌ ಅನ್ನು ತರಲು ಸಾಧ್ಯವಿಲ್ಲವೇ. ಕೂತು ಮಾತನಾಡುವಷ್ಟು ಪುರ್ಸೊತ್ತು ಯಾರಿಗಿದೆ.

ಫೈರ್‌ಫ್ಲೈ ಯಂಗ್‌ ಟೀಮ್‌ನ ಸುಂದರ ದೃಶ್ಯಕಾವ್ಯ: ನಿವೇದಿತಾ ಶಿವರಾಜ್‌ ಕುಮಾರ್‌ ಸಂದರ್ಶನ

6. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ಮಾಪಕಿ ಎಂಬ ಹೆಗ್ಗಳಿಕೆ ಇರುವ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಕಾದಂಬರಿ ಆಧರಿತ ಸಿನಿಮಾ ಮಾಡುತ್ತಿದ್ದರು. ಒಂದೊಳ್ಳೆ ರೈಟಿಂಗ್‌ ಟೀಮ್‌ ಇಟ್ಟುಕೊಂಡಿದ್ದರು. ಅವರಿಗೆ ಸಾಹಿತ್ಯ, ಸಿನಿಮಾ ಗೊತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಬದುಕು ಗೊತ್ತಿತ್ತು. ಸೋಲು, ನೋವು ಗೊತ್ತಿತ್ತು. ಈಗ ಬರಹಗಾರರಿಗಿಂತ ಮಾತಲ್ಲಿ ಅರಮನೆ ಕಟ್ಟುವವರು ಮುಂದಾಗಿದ್ದಾರೆ. ಬರಹ ಹಿಂದಾಗಿದೆ. ಮೊನ್ನೆ ಒಬ್ಬರು ಹಿರಿಯರು ಒಂದೊಳ್ಳೆ ಸ್ಕ್ರಿಪ್ಟ್‌ ಬರುತ್ತಿಲ್ಲ ಎಂದು ಬೇಸರಿಸಿಕೊಂಡರು. ಎಂಥಾ ಇಂಡಸ್ಟ್ರಿ ಎಲ್ಲಿಗೆ ಬಂತು ಎಂದು ನಿಟ್ಟುಸಿರಾದರು. ಇಂಥಾ ಸ್ಥಿತಿಗೆ ನಾವು ಯಾಕೆ ಬಂದಿದ್ದೇವೆ? ಯಾಕೆಂದರೆ ನಮಗೆ ಎಲ್ಲಿ ಗೌರವ ಕೊಡಬೇಕು ಅನ್ನುವುದೇ ತಿಳಿಯದಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ