90ರ ದಶಕದಲ್ಲೇ ಬಿಗ್‌ಬಜೆಟ್ ಸಿನಿಮಾಗಳನ್ನು ಕೊಟ್ಟಕನಸುಗಾರ, ಅದ್ದೂರಿಯಾಗಿ ಚಿತ್ರಿಸಿ ಆ್ಯಕ್ಷನ್ ಸಿನಿಮಾಗಳ ಆಕರ್ಷಣೆ ಹೆಚ್ಚಿಸಿದ ದಾರಾಳಿ, ದೇವರಾಜ್‌ರಿಂದ ಹಿಡಿದು ಚಿತ್ರರಂಗದ ಬಹುತೇಕ ಸ್ಟಾರ್‌ಗಳ ಸಿನಿಮಾ ನಿರ್ಮಿಸಿದ ನಿರ್ಮಾಪಕ, ಸಿನಿಮಾಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಮನಸ್ಸಿದ್ದ ಸಿನಿಮಾ ವ್ಯಾಮೋಹಿ. ಈ ಎಲ್ಲಕ್ಕೂ ಒಂದೇ ಹೆಸರು. ಕೋಟಿ ರಾಮು.
ಹುಟ್ಟಿದ್ದು ಕುಣಿಗಲ್‌ನಲ್ಲಿ. ವೃತ್ತಿ ಸಲುವಾಗಿ ಬೆಂಗಳೂರಿಗೆ ಬಂದವರು ಗಾಲ್ಫ್ ಕ್ಲಬ್‌ನಲ್ಲಿ ಸಪ್ಲೈಯರ್ ಆಗಿದ್ದರು. ಆ್ಯಕ್ಷನ್ ಸಿನಿಮಾಗಳೆಂದರೆ ಇಷ್ಟವಿತ್ತು. ಸಿನಿಮಾ ಸೆಳೆತದಿಂದ ಸಿನಿಮಾ ನಿರ್ಮಾಣ ಆಫೀಸೊಂದರಲ್ಲಿ ಆಫೀಸ್‌ಬಾಯ್ ಆದರು. ಅಲ್ಲಿಂದ ನಿಧಾನಕ್ಕೆ ವಿತರಣೆ ಕೆಲಸ ಶುರುವಾಯಿತು. ಈ ಹಂತದಲ್ಲಿ ಸಿನಿಮಾ ನಿರ್ಮಾಣವನ್ನೂ ಕಲಿತರು. ಬೇರೆ ಚಿತ್ರರಂಗದಲ್ಲಿ ಅದ್ದೂರಿ ಆ್ಯಕ್ಷನ್ ಸಿನಿಮಾ ಮಾಡುತ್ತಾರೆ, ಕನ್ನಡದಲ್ಲಿ ನಾನೂ ಅವರಿಗಿಂತ ಅದ್ದೂರಿ ಸಿನಿಮಾ ಮಾಡುತ್ತೇನೆ ಎಂದುಕೊಂಡೇ ಚಿತ್ರರಂಗಕ್ಕೆ ಕಾಲಿಟ್ಟಮಹತ್ವಾಕಾಂಕ್ಷಿ ರಾಮು.
ಕನಸಿನ ರಾಣಿ ಮಾಲಾಶ್ರೀ ಪುತ್ರಿ ಅನನ್ಯಾರಾಮು ಸ್ಟೈಲಿಶ್ ಫೋಟೋಗಳು!
undefined
ಯಾವುದೇ ಗಾಡ್‌ಫಾದರ್ ಇಲ್ಲದೆ ಕೆಲಸ ಮಾತ್ರ ನಂಬಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟಹುಡುಗ ನಿರ್ಮಿಸಿದ ಮೊದಲ ಸಿನಿಮಾ ಗೋಲಿಬಾರ್. 1993ರಲ್ಲಿ ಇವರು ಅದ್ದೂರಿಯಾಗಿ ಸಿನಿಮಾ ನಿರ್ಮಿಸಿದ ರೀತಿಗೆ ಕನ್ನಡ ಚಿತ್ರರಂಗ ಮರುಳಾಗಿತ್ತು. ಸಿನಿಮಾ ಗೆದ್ದಿತು. ಕೋಟಿ ನಿರ್ಮಾಪಕ ಯಶಸ್ಸಿನ ಜೊತೆ ಕನ್ನಡ ಚಿತ್ರರಂಗದ ಒಳಗೆ ಕಾಲಿಟ್ಟಿದ್ದರು. ಅಲ್ಲಿಂದ ನಂತರ ಲಾಕಪ್‌ಡೆತ್, ಸರ್ಕಲ್ ಇನ್‌ಸ್ಪೆಕ್ಟರ್, ಸಿಂಹದ ಮರಿ, ಏಕೆ 47 ಹೀಗೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸಿದರು. ಪ್ರತಿಯೊಂದು ಸಿನಿಮಾವನ್ನೂ ಜನ ಮಾತನಾಡುವಂತೆ ನಿರ್ಮಿಸಿದರು. ಈಗೆಲ್ಲಾ ಆ್ಯಕ್ಷನ್ ಸಿನಿಮಾಗಳು ಚೇಸಿಂಗ್ ಇತ್ಯಾದಿ ಸೀನ್‌ಗಳಿಂದ ಅದ್ದೂರಿಯಾಗಿ ನಿರ್ಮಾಣ ಆಗುತ್ತವೆ. ಅದನ್ನೆಲ್ಲಾ 90ರ ದಶಕದಲ್ಲೇ ಮಾಡಿ ತೋರಿಸಿದ ನಿರ್ಮಾಪಕ ಕೋಟಿ ರಾಮು.
ದೇವರಾಜ್, ಶಿವರಾಜ್‌ಕುಮಾರ್, ಮಾಲಾಶ್ರೀ, ಸುದೀಪ್, ದರ್ಶನ್ ಹೀಗೆ ಬಹುತೇಕ ಸ್ಟಾರ್‌ಗಳ ಸಿನಿಮಾ ಮಾಡಿದ್ದಾರೆ. ಚಿತ್ರರಂಗದಲ್ಲಿ ಮಾಲಾಶ್ರೀಯ ಎರಡನೇ ಇನ್ನಿಂಗ್ಸ್ ಗೆಲುವಿನ ಹಿಂದೆ ಇದ್ದಿದ್ದು ಕೋಟಿ ರಾಮು. ಮಾಲಾಶ್ರೀಯ ಅಭಿಮಾನಿ ಎನ್ನುತ್ತಿದ್ದ ರಾಮು ಕೆಲಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ನಂತರ ವಾಪಸ್ ಬಂದಿದ್ದೇ ಮಾಲಾಶ್ರೀ ಚಿತ್ರದ ಮೂಲಕ.
ಅಮ್ಮ-ಮಗಳು ಸೇಮ್ ಟು ಸೇಮ್; 'ಕನಸಿನ ರಾಣಿ'ಯ ಟ್ಯಾಟೂ ವೈರಲ್!
ಆ್ಯಕ್ಷನ್ ಸಿನಿಮಾ ಇಷ್ಟಪಡುತ್ತಿದ್ದ, ವಿವಾದಗಳಿಂದ ದೂರವೇ ಉಳಿಯುತ್ತಿದ್ದ, ದೈತ್ಯನಂತೆ ಕಂಡರೂ ಮೃದು ಮನಸ್ಸಿನವರಾಗಿದ್ದ, ಸಿನಿಮಾಗಳು ಗೆದ್ದರೂ ತಾವು ಮಾತನಾಡದೇ ಉಳಿದ ರಾಮು 1993ರಿಂದ ಇಲ್ಲಿಯವರೆಗೆ ಸುಮಾರು 37ಕ್ಕೂ ಹೆಚ್ಚು ಸಿನಿಮಾ ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ಕೊನೆಯ ಸಿನಿಮಾ ಅರ್ಜುನ್ ಗೌಡ ಇನ್ನೇನು ಬಿಡುಗಡೆಯಾಗಬೇಕಿದೆ. ಅವರಿಗೆ ಮಗಳನ್ನು ಚಿತ್ರರಂಗಕ್ಕೆ ಕರೆದುಕೊಂಡು ಬರುವ ಆಸೆ ಇತ್ತು. ಫäಟೋಶೂಟ್ ಕೂಡ ಆಗಿತ್ತು. ಆದರೆ ಕನಸು ನನಸಾಗುವ ಮುನ್ನವೇ ಕೋಟಿ ನಿರ್ಮಾಪಕ ನಿರ್ಗಮಿಸಿದ್ದಾರೆ.
ಆದರೆ ಕಾರ್ಮಿಕನಾಗಿದ್ದ ಹಂತದಿಂದ ಚಿತ್ರರಂಗದ ಏಕೈಕ ಕೋಟಿ ನಿರ್ಮಾಪಕ ಎಂದು ಕರೆಸಿಕೊಳ್ಳುವವರೆಗೆ ಬೆಳೆದ ಹಸನ್ಮುಖಿ ರಾಮು ಬಹಳ ಕಾಲ ಮನಸ್ಸಲ್ಲಿ ಉಳಿಯಲಿದ್ದಾರೆ.