ಕಂಬಳವಲ್ಲ.. ಕಬಡ್ಡಿ ಕೋರ್ಟ್‌ನಲ್ಲಿ ಕಾಂತಾರ ಟೀಮ್‌, ಬುಲ್ಸ್‌ಗೆ ಬೆಂಬಲಿಸಿದ ರಿಷಬ್ ಶೆಟ್ಟಿ!

By Santosh Naik  |  First Published Oct 16, 2022, 8:18 PM IST

ಕಾಂತಾರ ಚಿತ್ರದ ಬಹುದೊಡ್ಡ ಯಶಸ್ಸಿನ ಸಂಭ್ರಮದಲ್ಲಿರುವ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಪ್ರೊ ಕಬಡ್ಡಿ ಲೀಗ್‌ನ ಸೂಪರ್‌ ಸಂಡೇ ಪಂದ್ಯಗಳಿಗೆ ಚಾಲನೆ ನೀಡಿದರು. ಎಂದಿನಂತೆ ಪಂಚೆಯುಟ್ಟು ಬಂದಿದ್ದ ರಿಷಬ್‌ ಶೆಟ್ಟಿ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು.
 


ಬೆಂಗಳೂರು (ಅ. 16): ಕನ್ನಡದಲ್ಲಿ ಬಿಡುಗಡೆಗೊಂಡ ಬಳಿಕ, ದೇಶದ ಇತರ ಭಾಷೆಗಳಿಗೆ ಡಬ್‌ ಆಗಿ ಅಬ್ಬರಿಸುತ್ತಿರುವ "ಕಾಂತಾರ" ಚಿತ್ರ ಬಹುದೊಡ್ಡ ಯಶಸ್ಸು ಸಂಪಾದಿಸಿದೆ. ಅದರ ನಡುವೆ ಭಾನುವಾರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು. ಹಾಗಂತ.. ಅಲ್ಲಿ ಯಾವುದೇ ಕಂಬಳ ಕ್ರೀಡೆಯ ಚಾಲನೆಗಾಗಲಿ ಬಂದಿರಲಿಲ್ಲ. ದೇಶೀಯ ಮಣ್ಣಿನ ಸೊಗಡಿನ ಇನ್ನೊಂದು ಕ್ರೀಡೆ ಕಬಡ್ಡಿಯ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ಬಂದಿದ್ದರು. ಕಂಬಳ ಕ್ರೀಡೆ ಹಾಗೂ ಕರಾವಳಿ ಸಂಸ್ಕೃತಿಯನ್ನು ದೇಶ ಮಟ್ಟದಲ್ಲಿ ಪಸರಿಸಲು ಕಾಂತಾರ ಒಂದು ರೀತಿಯಲ್ಲಿ ಕಾರಣವಾಗಿದ್ದರೆ, ಸ್ಥಳೀಯವಾಗಿಯೇ ಉಳಿದುಕೊಂಡಿದ್ದ ಕಬಡ್ಡಿಗೆ ಬೂಸ್ಟ್‌ ನೀಡಿದ್ದು ಪ್ರೊ ಕಬಡ್ಡಿ ಲೀಗ್‌. ಕಾಂತಾರದ ಯಶಸ್ಸಿನ ಬಳಿಕ ದೇಶದ ವಿವಿಧ ಪ್ರದೇಶಗಳಿಗೆ ಪ್ರಚಾರಕ್ಕೆ ಹೋಗುತ್ತಿರುವ ರಿಶಬ್‌ ಶೆಟ್ಟಿ, ಪಿಕೆಎಲ್‌ ಪಂದ್ಯಗಳಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಪ್ರತಿದಿನದ ಕಬಡ್ಡಿ ಪಂದ್ಯಗಳಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡುವುದು ಪಿಕೆಎಲ್‌ನ ವಾಡಿಕೆ. ಅದಕ್ಕೆ ಗಣ್ಯರನ್ನು, ಪ್ರಖ್ಯಾತರನ್ನು ಇದಕ್ಕಾಗಿ ಕರೆಸುತ್ತದೆ. ಪ್ರಸ್ತುತ ಈಗ ಇಡೀ ದೇಶ ಕಾಂತಾರದ ಕ್ರೇಜ್‌ನಲ್ಲಿದೆ. ಇದರ ಸೂತ್ರಧಾರಿಯಾದ ರಿಷಭ್‌ ಅವರಿಂದ ರಾಷ್ಟ್ರಗೀತೆ ಹಾಡಿಸಿ ಸೂಪರ್‌ ಸಂಡೇ ಮ್ಯಾಚ್‌ಗಳಿಗೆ ಚಾಲನೆ ನೀಡಲಾಗಿದೆ.



ನೀಲಿ ಬಣ್ಣದ ಶರ್ಟ್‌ ಹಾಗೂ ಬಿಳಿ ಬಣ್ಣದ ಪಂಚೆಯುಟ್ಟು ಬಂದಿದ್ದ ರಿಷಬ್‌ (Rishab Shetty), ಪುಣೇರಿ ಪಲ್ಟನ್‌ ಹಾಗೂ ಯು ಮುಂಬಾ ನಡುವಿನ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು. ಇದೇ ವೇಳೆ ಬೆಂಗಳೂರು ಬುಲ್ಸ್‌ ತಂಡಕ್ಕೂ ತಮ್ಮ ಶುಭ ಕೋರಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೊಟ್‌ (Thawar Chand gehlot) ಕೂಡ ಭಾನುವಾರದ ಪಂದ್ಯಗಳ ವೀಕ್ಷಣೆ ಮಾಡಿದ್ದಾರೆ.

Tap to resize

Latest Videos

ಒಂದೂವರೆ ವರ್ಷದ ಮಗು Kantara ಚಿತ್ರದ ವರಾಹರೂಪಂ ಹಾಡಿಗೆ ಕುಣಿದ ವಿಡಿಯೋ ವೈರಲ್!

ಕಾಂತಾರಕ್ಕೆ ಮೆಚ್ಚುಗೆಯ ಸುರಿಮಳೆ: ಇನ್ನು ಕಾಂತಾರ ಚಿತ್ರ, ದೇಶಾದ್ಯಂತ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಟಿಕೆಟ್‌ಗಾಗಿ ಈಗಲೂ ಥಿಯೇಟರ್‌ಗಳ ಮುಂದೆ ಸರತಿ ಸಾಲು ಕಾಣುತ್ತಿದೆ. ತೆಲುಗು ಸ್ಟಾರ್‌ ನಟ, ಬಾಹುಬಲಿ ಖ್ಯಾತಿಯ ಪ್ರಭಾಸ್‌ (Prabhas) ಈಗಾಗಲೇ ಎರಡು ಬಾರಿ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ. ಶನಿವಾರ ಈ ಚಿತ್ರವನ್ನು ವೀಕ್ಷಿಸಿರುವ ಕರ್ನಾಟಕದ ಕರಾವಳಿ ಮೂಲದವರೇ ಆದ ಸ್ಟಾರ್‌ ನಟಿ ಅನುಷ್ಕಾ ಶೆಟ್ಟಿ (Anushka Shetty) ತಮ್ಮ ಮೆಚ್ಚುಗೆಯನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 'ಕಾಂತಾರ (Kantara) ಸಿನಿಮಾವನ್ನು ವೀಕ್ಷಿಸಿದೆ. ಸಂಪೂರ್ಣವಾಗಿ ಚಿತ್ರವನ್ನು ಆನಂದಿಸಿದೆ! ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ನೀವೆಲ್ಲಾ ಬಹಳ ಅದ್ಬುತವಾದ ಸಿನಿಮಾ ನೀಡಿದ್ದೀರಿ. ರಿಷಬ್‌ ಶೆಟ್ಟಿ ಈ ಅನುಭವ ನೀಡಿದ್ದಕ್ಕೆ ಬಹಳ ಥ್ಯಾಂಕ್ಸ್‌' ಎಂದು ಅನುಷ್ಕಾ ಶೆಟ್ಟಿ ಬರೆದುಕೊಂಡಿದ್ದು, ಚಿತ್ರದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು, ನಾಯಕಿ ಸಪ್ತಮಿ ಗೌಡ, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ನಟ ಕಿಶೋರ್‌ ಅವರಿಗೆ ಟ್ವಿಟರ್‌ನಲ್ಲಿ ಟ್ಯಾಗ್‌ ಕೂಡ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಚಿತ್ರವನ್ನು ಮಿಸ್‌ ಮಾಡಿಕೊಳ್ಳಬೇಡಿ ಎಂದೂ ಅವರು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ನೀವು ಅದ್ಭುತ; 'ಕಾಂತಾರ' ನೋಡಿ ವಿಮರ್ಶೆ ಮಾಡಿದ ಅನುಷ್ಕಾ ಶೆಟ್ಟಿ

ಇನ್ನು ಲೆಕ್ಕಾಚಾರದ ವಿಚಾರಕ್ಕೆ ಬರುವುದಾದರೆ, ಮೂಲ ಕನ್ನಡ ಭಾಷೆಯಲ್ಲಿ ಚಿತ್ರ ಈಗಾಗಲೇ 70 ಕೋಟಿಗಿಂತ ಅಧಿಕ ಮೊತ್ತವನ್ನು ಬಾಚಿಕೊಂಡಿದ್ದರೆ, ಒಟ್ಟಾರೆಯಾಗಿ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಐಎಂಡಿಬಿಯಲ್ಲಿ ಗರಿಷ್ಠ ಅಂಕ ಪಡೆದ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯೂ ಕಾಂತಾರಕ್ಕೆ ಸಿಕ್ಕಿದೆ. ಈ ಹಾದಿಯಲ್ಲಿ ಕೆಜಿಎಫ್‌ ಚಿತ್ರವನ್ನು ಹಿಂದಿಕ್ಕಿದೆ. ಇನ್ನು ಬುಕ್‌ಮೈ ಶೋ ವೆಬ್‌ಸೈಟ್‌ನಲ್ಲಿ ಚಿತ್ರದ ಟ್ರೆಂಡಿಂಗ್‌ 16 ದಿನಗಳಾದರೂ ಮುಂದುವರಿದಿದೆ. ವಿಶ್ವದಾದ್ಯಂತ 100 ಕೋಟಿ ಕಲೆಕ್ಷನ್‌ ಮಾಡಿದ ಕನ್ನಡದ 6ನೇ ಚಿತ್ರ ಎನ್ನುವ ಹೆಮ್ಮೆ ಕಾಂತಾರಕ್ಕೆ ಸೇರಿದೆ.

click me!