ಮಗ 'ಆಯುಷ್‌' ಸಿನಿಮಾದಿಂದ ನಿರ್ದೇಶಕ ಪುರುಷೋತ್ತಮ್‌ ಬದಲಾವಣೆಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?

Published : Nov 09, 2026, 12:21 PM IST
Priyanka Upendra

ಸಾರಾಂಶ

ಉಪೇಂದ್ರ-ಪ್ರಿಯಾಂಕಾ ಜೋಡಿ ಮಗ ‘ಆಯುಷ್’ ಮೊದಲ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಬದಲಾವಣೆ ವಿಚಾರ ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಯಾಗಿದ್ದು, ನಿರ್ದೇಶಕರ ಆರೋಪಗಳಿಗೆ ನಿರ್ಮಾಪಕರ ಸ್ಪಷ್ಟೀಕರಣವೂ ಹೊರಬಿದ್ದಿದೆ. ಈ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು ನೋಡಿ..

ಮಗ ಆಯುಷ್ ಸಿನಿಮಾ ವಿವಾದಕ್ಕೆ ಪ್ರಿಯಾಂಕಾ ಉಪೇಂದ್ರ ಪೋಸ್ಟ್ ಮೂಲಕ ಉತ್ತರ; ನಿರ್ದೇಶಕ ಪುರುಷೋತ್ತಮ್ ಬದಲಾವಣೆಗೆ ಕೊಟ್ಟ ಕಾರಣವೇನು?

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ (Priyanaka Upendra) ದಂಪತಿಯ ಪುತ್ರ ಆಯುಷ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾ ಈಗ ವಿವಾದದ ಕೇಂದ್ರಬಿಂದುವಾಗಿದೆ. ‘ಆಯುಷ್’ ಹೆಸರಿನ ಈ ಚಿತ್ರದ ನಿರ್ದೇಶಕ 'ಮೊದಲಾ ಸಲ' ಸಿನಿಮಾ ಖ್ಯಾತಿಯ ನಿರ್ದೇಶಕ ಪುರುಷೋತ್ತಮ್ (Purushotham C. Somanathapura) ಅವರನ್ನು ದಿಢೀರ್ ಬದಲಾಯಿಸಿರುವುದು ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಪುರುಷೋತ್ತಮ್ ಅವರು ಹಲವು ದಿನಗಳಿಂದ ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಸೋಷಿಯಲ್ ಮೀಡಿಯಾ ಮೂಲಕ ಮೌನ ಮುರಿದಿದ್ದಾರೆ.

ನಿರ್ದೇಶಕ ಮೊದಲ ಸಲ ಪುರುಷೋತ್ತಮ್ ಅವರ ಪ್ರಕಾರ, ಸುಮಾರು 12 ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ಕಥೆಯೇ ‘ಆಯುಷ್’ ಸಿನಿಮಾದ ಮೂಲ. ಈ ಕಥೆಯನ್ನು ನಿರ್ಮಾಪಕ ಅಭಿಷೇಕ್ ಎನ್. ಸಿರಿವಂತ್ ಅವರಿಗೆ ತಲುಪಿಸುವಲ್ಲಿ ಖ್ಯಾತ ಛಾಯಾಗ್ರಾಹಕ ವೇಣು ಪ್ರಮುಖ ಪಾತ್ರ ವಹಿಸಿದ್ದರು. ನಟಿ ತಾರಾ ಅವರ ಪತಿಯಾಗಿರುವ ವೇಣು ಅವರೇ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿಯೂ ಕೆಲಸ ಮಾಡುತ್ತಿದ್ದರು.

ಹದಿಹರೆಯದ ಯುವಕರ ಕಥೆ

ಹದಿಹರೆಯದ ಯುವಕರ ಕಥೆಯಾಗಿದ್ದರಿಂದ ಹೊಸ ಮುಖದ ನಟನ ಹುಡುಕಾಟ ನಡೆದಿತ್ತು. ಆಗ ಉಪೇಂದ್ರ ಪುತ್ರ ಆಯುಷ್ ಸೂಕ್ತ ಆಯ್ಕೆ ಎನಿಸಿದ್ದರು. ಆರಂಭದಲ್ಲಿ ಮಗನ ವಿದ್ಯಾಭ್ಯಾಸದ ಕಾರಣಕ್ಕೆ ಉಪೇಂದ್ರ ಒಪ್ಪಿರಲಿಲ್ಲವಂತೆ. ಆದರೆ ಕಥೆ ಕೇಳಿದ ಬಳಿಕ ಉಪೇಂದ್ರ ಮತ್ತು ಪ್ರಿಯಾಂಕಾ ಇಬ್ಬರಿಗೂ ಇಷ್ಟವಾಗಿತ್ತು. ಹೀಗಾಗಿ ಚಿತ್ರದ ಶೀರ್ಷಿಕೆಗೆ ಆಯುಷ್ ಹೆಸರನ್ನೇ ಇಡಲು ನಿರ್ಧರಿಸಲಾಗಿತ್ತು ಎಂದು ಪುರುಷೋತ್ತಮ್ ಹೇಳಿದ್ದಾರೆ.

2025ರಲ್ಲಿ ಆರಂಭವಾದ ಚಿತ್ರದ ಚಿತ್ರೀಕರಣ ಈಗಾಗಲೇ ಶೇ.50ರಷ್ಟು ಪೂರ್ಣಗೊಂಡಿತ್ತು. ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದ ಬಳಿಕ ನಿರ್ಮಾಪಕರು ತಮ್ಮನ್ನು ಭೇಟಿಯಾಗಿ, ಮುಂದಿನ ವೇಳಾಪಟ್ಟಿಯನ್ನು ಪ್ರಿಯಾಂಕಾ ಅವರೇ ನಿರ್ದೇಶಿಸಲಿದ್ದಾರೆ ಮತ್ತು ಕಥೆಯಲ್ಲೂ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾಗಿ ಪುರುಷೋತ್ತಮ್ ಆರೋಪಿಸಿದ್ದಾರೆ. ತಮ್ಮ ಕಥೆ ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು ಬಳಸಬಾರದು, ಮಾಡಿದ ಕೆಲಸಕ್ಕೆ ಸಂಭಾವನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರಂತೆ. ಆದರೆ ಇದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ ಎಂಬುದು ಅವರ ಅಳಲು. ಛಾಯಾಗ್ರಾಹಕ ವೇಣು ಅವರನ್ನೂ ಚಿತ್ರದಿಂದ ಕೈಬಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ಚಿತ್ರದ ಅಂತಿಮ ಗುಣಮಟ್ಟವನ್ನು ರಕ್ಷಿಸುವ ಉದ್ದೇಶ

ಇದೀಗ ಪ್ರಿಯಾಂಕಾ ಉಪೇಂದ್ರ ಹಂಚಿಕೊಂಡಿರುವ ನಿರ್ಮಾಪಕ ಸಂಸ್ಥೆ ಶ್ರೀ ಕಲ್ಪವೃಕ್ಷ ಮೂವಿ ಮೇಕರ್ಸ್‌ನ ಅಧಿಕೃತ ಹೇಳಿಕೆ ವಿವಾದಕ್ಕೆ ಹೊಸ ತಿರುವು ನೀಡಿದೆ. ನಾಯಕನ ಚೊಚ್ಚಲ ಸಿನಿಮಾ, ನಿರ್ಮಾಪಕರ ಹೂಡಿಕೆ ಮತ್ತು ಚಿತ್ರದ ಅಂತಿಮ ಗುಣಮಟ್ಟವನ್ನು ರಕ್ಷಿಸುವ ಉದ್ದೇಶದಿಂದ ನಿರ್ದೇಶಕರ ಬದಲಾವಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಕಾಶ್ಮೀರ ಚಿತ್ರೀಕರಣದ ವೇಳಾಪಟ್ಟಿ, ಎರಡನೇ ಹಂತದ ಎಡಿಟಿಂಗ್ ಕುರಿತ ಆತಂಕಗಳು, ಛಾಯಾಗ್ರಾಹಕರ ಬದಲಾವಣೆ ಹಾಗೂ ಹೆಚ್ಚುವರಿ ಚಿತ್ರೀಕರಣದ ದಿನಗಳ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳಿದ್ದವು ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಯುತ ಪರಿಹಾರಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯನ್ನೂ ಕೋರಿದ್ದಾರೆ.

ಒಟ್ಟಿನಲ್ಲಿ, ‘ಆಯುಷ್’ ಚಿತ್ರದ ನಿರ್ದೇಶಕರ ಬದಲಾವಣೆ ವಿಚಾರ ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಯಾಗಿದ್ದು, ನಿರ್ದೇಶಕರ ಆರೋಪಗಳಿಗೆ ನಿರ್ಮಾಪಕರ ಸ್ಪಷ್ಟೀಕರಣವೂ ಹೊರಬಿದ್ದಿದೆ. ಈ ವಿವಾದಕ್ಕೆ ಮುಂದಿನ ದಿನಗಳಲ್ಲಿ ಯಾವ ತಿರುವು ಸಿಗಲಿದೆ ಎಂಬ ಕುತೂಹಲ ಮೂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ramayana Movie: ನಾಯಕಿ ಸೀತೆ, ವಿಲನ್​ ಕೈಕೇಯಿಗೆ ಕನ್ನಡದಲ್ಲಿ ದನಿ ಕೊಟ್ಟ ಮಹಾನಟಿಯರು ಇವರೇ ನೋಡಿ
ಯಶ್ ಬಗ್ಗೆ ಅಪ್ಪು ನುಡಿದಿದ್ದ ಆ ಭವಿಷ್ಯ ನಿಜವಾಯ್ತು! ಪುನೀತ್ ಸುವರ್ಣ ನ್ಯೂಸ್ ಸಂದರ್ಶನ ವೈರಲ್!