
ಪ್ರೇಮದ ಊರಲಿ (Premada Oorali Movie) ಹವಾ ಸೃಷ್ಟಿಸುತ್ತಿರುವುದು ಗೊತ್ತೇ ಇದೆ. ಅತ್ಯಂತ ಕಡಿಮೆ ಬಜೆಟ್ನ ಚಿತ್ರವೊಂದು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಹೇಗೆ ಜನರ ಮನಸ್ಸನ್ನು ಕದಿಯಬಹುದು, ಹೇಗೆ ನವೀರಾದ ಕಥೆಯೊಂದು, ರಕ್ತಪಾತ, ಲಾಂಗು, ಮಚ್ಚು ಇಲ್ಲದೇ ಥಿಯೇಟರ್ನಲ್ಲಿ ಅಬ್ಬರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಪ್ರೇಮದ ಊರಲಿ. ಈಗಿನ ಯುವ ಪೀಳಿಗೆ ಬಯಸೋದು ಅಶ್ಲೀಲತೆ, ಲಾಂಗು, ಮಚ್ಚು, ಹೀರೋ ಕೈಯಲ್ಲಿ ರಕ್ತಪಾತ, ನಿಮಿಷಕ್ಕೊಂದು ಕೊಲೆ... ಎನ್ನುತ್ತಲೇ ಅದೇ ರೀತಿ ನಾಯಕನ ಕೈಯಲ್ಲಿ ಕೊಲೆ ಮಾಡಿಸುವುದು ಕೆಲ ವರ್ಷಗಳ ಟ್ರೆಂಡ್ ಆಗಿದೆ. ಆದರೆ, ಅಂಥ ಕೆಲವು ಸಿನಿಮಾಗಳು ತೋಪೆದ್ದು ಹೋಗಿದ್ದು, ಯಾವ ರೀತಿಯ ಸಿನಿಮಾಗಳನ್ನು ಜನರು ಇಷ್ಟಪಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ ಪ್ರೇಮದ ಊರಲಿ, ಹನುಮಾನ್ ಅಂಶ್ನಂಥ ಕಡಿಮೆ ಬಜೆಟ್ ಚಿತ್ರಗಳು.
ಈ ಚಿತ್ರಕ್ಕೆ ಜೀವ ತುಂಬಿರುವವರು ಅಪ್ಪನ ಸೆಂಟಿಮೆಂಟ್ ಪಾತ್ರದಲ್ಲಿ ಎಲ್ಲರ ಮನಸ್ಸನ್ನೂ ಕದ್ದಿರುವ ರಂಗಾಯಣ ರಘು ಹಾಗೂ ನಾಯಕಿಯರಾದ ರುಕ್ಮಿಣಿಯಾಗಿ ತಪಸ್ವಿನಿ ಪೂಣಚ್ಚ ಹಾಗೂ ವಸಂತಾ ಆಗಿ ರಮಿಕಾ ಶಿವು. ಇವರಿಬ್ಬರೂ ಈ ಸಿನಿಮಾದಲ್ಲಿ ತಮ್ಮ ನಟನೆಯಿಂದ ವೀಕ್ಷಕರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಒಂದು ಸಿನಿಮಾ ಹಿಟ್ ಆಯಿತು ಎಂದಾಕ್ಷಣ ಅದೇ ತಾರೆಯರನ್ನು ಹಾಕಿಕೊಂಡು ಬೇರೆ ಬೇರೆ ಸಿನಿಮಾ ಮಾಡುವುದು ಹೊಸ ವಿಷಯವೇನಲ್ಲ. ಅದೇ ರೀತಿ, ಬೇರೆ ಬೇರೆ ಭಾಷೆಗಳ ಚಿತ್ರಗಳಿಂದಲೂ ಅವರಿಗೆ ಆಫರ್ ಬರುವುದು ಉಂಟು. ಇದನ್ನೇ ಮನಗಂಡು ರಂಗಾಯಣ ರಘು (Rangayana Raghu) ಅವರು ಪ್ರೇಮದ ಊರಲಿ ಸಕ್ಸಸ್ ಮೀಟ್‌ನಲ್ಲಿ, ಇಬ್ಬರೂ ನಟಿಯರಿಂದ ಒಂದು ಪ್ರಾಮಿಸ್ ಮಾಡಿಸಿಕೊಂಡಿದ್ದಾರೆ.
ನಾನು ಹೇಳಿದಂತೆ ಹೇಳಿ ಎಂದಾಗ ನಟಿಯರಿಬ್ಬರೂ ಸ್ವಲ್ಪ ಕಕ್ಕಾಬಿಕ್ಕಿಯಾದರು. ಆದರೂ ಅವರು ಹೇಳಿದಂತೆಯೇ ಹೇಳಿದರು. ಆಗ ರಂಗಾಯಣ ರಘು ಅವರು, ನಾವು ತೆಲಗುಗೆ ಹೋಗಲಿ, ತಮಿಳಿಗೆ ಹೋಗಲಿ, ಹಿಂದಿಗೆ ಹೋಗಲಿ, ಕರ್ನಾಟಕದವರು ಕನ್ನಡದವರು ಎಂದು ಎಂದಿಗೂ ಮರೆಯುವುದಿಲ್ಲ. ಆಧಾರ್ ಕಾರ್ಡ್ ಚೇಂಜ್ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಚಪ್ಪಾಳೆಗಳ ಸುರಿಮಳೆಯೇ ಆಗಿದೆ.
ಇದೇ ವೇಳೆ ಅವರಿಬ್ಬರನ್ನೂ ಆಶೀರ್ವದಿಸಿದ ರಂಗಾಯಣ ರಘು ಅವರು, ಜಯಂತಿ, ಆರತಿ ಮುಂತಾದ ನಟಿಯರಿಂದ ನೀವೂ ಚಿತ್ರರಂಗದಲ್ಲಿ ಫೇಮಸ್ ಆಗಬೇಕು. 30 ವರ್ಷ ಕನಿಷ್ಠ ನಾಯಕಿಯರಾಗಿ ಇರಬೇಕು, ಆಮೇಲೆ ಬೇಕಾದರೆ ಕಲಾವಿದರಾಗಿ.ನಿಮಗೆ ಉಜ್ವಲ ಭವಿಷ್ಯವಿದೆ ಎಂದು ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.