
ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾ ಗೆಲ್ಲುವುದೇ ಸವಾಲಾಗಿರುವ ಇಂದಿನ ಕಾಲಘಟ್ಟದಲ್ಲಿ, ಯಾವುದೇ ದೊಡ್ಡ ಮಟ್ಟದ ಪ್ರಚಾರದ ಅಬ್ಬರವಿಲ್ಲದೆ ಪ್ರೇಕ್ಷಕರ ಮನಸ್ಸು ಗೆದ್ದು ಮುನ್ನುಗ್ಗಿರುವ ಸಿನಿಮಾ ‘ಪ್ರೇಮದ ಊರಲಿ’. ಕೇವಲ 60 ಶೋಗಳ ಮೂಲಕ ತನ್ನ ಪಯಣ ಆರಂಭಿಸಿದ ಈ ಚಿತ್ರ, ದಿನದಿಂದ ದಿನಕ್ಕೆ ಪ್ರೇಕ್ಷಕರ ಬೆಂಬಲ ಹೆಚ್ಚಿಸಿಕೊಂಡು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಚಿತ್ರತಂಡ ಸಂಭ್ರಮದಲ್ಲಿದೆ.
ಕಥೆಯ ಬಲವನ್ನೇ ನಂಬಿ ಚಿತ್ರಮಂದಿರಕ್ಕೆ ಬಂದ ‘ಪ್ರೇಮದ ಊರಲಿ’ಗೆ ಪ್ರೇಕ್ಷಕರು ನಿರೀಕ್ಷೆಗೂ ಮೀರಿದ ಪ್ರೀತಿ ನೀಡಿದ್ದಾರೆ. ಪ್ಯಾನ್ ಇಂಡಿಯಾ ಪ್ರಚಾರದ ಅಬ್ಬರವಿಲ್ಲದೆ, ಕನ್ನಡದ ನೆಲದ ಕಥೆಯ ಮೂಲಕವೇ ಗಮನ ಸೆಳೆದ ಈ ಸಿನಿಮಾ ₹100 ಕೋಟಿ ಕ್ಲಬ್ ಸೇರಿದೆ ಎಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ. ಚಿತ್ರದ ಈ ಅಭೂತಪೂರ್ವ ಯಶಸ್ಸಿನ ಹಿಂದೆ ಪ್ರೇಕ್ಷಕರ ಪ್ರೀತಿಯೇ ದೊಡ್ಡ ಶಕ್ತಿಯಾಗಿದೆ.
ಈ ಸಂಭ್ರಮದ ನಡುವೆ ಸಿನಿಮಾದಲ್ಲಿ ವಸಂತಾ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ರಮಿಕಾ ಶಿವು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ತಾವು ಊಹಿಸಿರಲಿಲ್ಲ ಎಂಬ ಅವರು, ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಭಾವುಕರಾಗಿದ್ದಾರೆ.
ನಮ್ಮ ಗೆಲುವನ್ನು ಹೆಚ್ಚು ಸಂಭ್ರಮಿಸುತ್ತಿದ್ದೀರಿ
'ನಿಜಕ್ಕೂ ಇಷ್ಟು ಪ್ರೀತಿಯನ್ನು ನಾವು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಗೆಲುವಿಗಿಂತ ನೀವೇ ನಮ್ಮ ಗೆಲುವನ್ನು ಹೆಚ್ಚು ಸಂಭ್ರಮಿಸುತ್ತಿದ್ದೀರಿ. ‘ನಮ್ಮ ಸಿನಿಮಾ, ನಮ್ಮ ಕನ್ನಡ ಸಿನಿಮಾ’ ಎಂದು ನಮ್ಮನ್ನು ತಲೆಯ ಮೇಲೆ ಹೊತ್ತು ಮೆರೆಯುತ್ತಿದ್ದೀರಿ. ಇದನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ' ಎಂದು ರಮಿಕಾ ಹೇಳಿದ್ದಾರೆ.
ಇನ್ನು ಸಿನಿಮಾದ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂಬುದಕ್ಕೂ ರಮಿಕಾ ಒಂದು ಸುಂದರ ಉದಾಹರಣೆ ನೀಡಿದ್ದಾರೆ. ಜನರು ತಮ್ಮನ್ನು ರಮಿಕಾ ಎಂದು ಕರೆಯುವ ಬದಲು ವಸಂತಾ ಎಂದೇ ಗುರುತಿಸುತ್ತಿರುವುದು ಅವರಿಗೆ ವಿಶೇಷ ಸಂತಸ ತಂದಿದೆಯಂತೆ. ವಸಂತ, ರುಕ್ಕು, ಸಂತು, ನಾಗಣ್ಣ ಎಂದು ಪಾತ್ರಗಳ ಹೆಸರಿನಿಂದಲೇ ಕಲಾವಿದರನ್ನು ಕರೆಯುತ್ತಿರುವುದು ಚಿತ್ರಕ್ಕೆ ಸಿಕ್ಕಿರುವ ಜನಪ್ರಿಯತೆಯನ್ನು ತೋರಿಸುತ್ತದೆ.
'ಇದು ನನ್ನ ಮೊದಲ ಸಿನಿಮಾ. ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಹೋದಾಗ ಜನರು ನಮ್ಮನ್ನು ನೋಡಿದ ರೀತಿ, ತೋರಿಸಿದ ಪ್ರೀತಿ ಕಂಡು ನಂಬುವುದಕ್ಕೇ ಆಗಲಿಲ್ಲ. ಕೈ-ಕಾಲು ನಡುಗಲು ಶುರುವಾಗಿತ್ತು. ಮೊದಲ ಸಿನಿಮಾಕ್ಕೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ಸಿನಿಮಾ 50 ದಿನ ಪೂರೈಸಿದೆ. ಯಾರ ಫೋನ್ ನೋಡಿದರೂ ‘ಪ್ರೇಮದ ಊರಲಿ’ ಹಾಡು ಕೇಳಿಸುತ್ತಿರುತ್ತದೆ. ಆಟೋಗಳ ಮೇಲೂ ವಸಂತಾ ಪಾತ್ರದ ಫೋಟೋ ನೋಡಿದಾಗ ಸಿಕ್ಕಾಪಟ್ಟೆ ಖುಷಿಯಾಗುತ್ತದೆ' ಎಂದು ತಮ್ಮ ಅನುಭವವನ್ನು ನೆನಪಿಸಿಕೊಂಡಿದ್ದಾರೆ.
ವಿಶೇಷವಾಗಿ ಉತ್ತರ ಕರ್ನಾಟಕದ ಪ್ರೇಕ್ಷಕರನ್ನು ಭೇಟಿಯಾಗುವ ಆಸೆಯನ್ನು ರಮಿಕಾ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವು ಕಾರಣಗಳಿಂದಾಗಿ ಇದುವರೆಗೆ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲವಂತೆ. ಆದರೂ, ಶೀಘ್ರದಲ್ಲೇ ಉತ್ತರ ಕರ್ನಾಟಕದ ಜನರ ಮುಂದೆ ಬರುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಕೇವಲ 60 ಶೋಗಳಿಂದ ಆರಂಭವಾದ ‘ಪ್ರೇಮದ ಊರಲಿ’ಯ ಪಯಣ 50 ದಿನಗಳ ಸಂಭ್ರಮದವರೆಗೆ ತಲುಪಿರುವುದು ಕನ್ನಡ ಚಿತ್ರರಂಗಕ್ಕೆ ಖುಷಿಯ ವಿಚಾರ. ಅದರಲ್ಲೂ ಮೊದಲ ಸಿನಿಮಾದಲ್ಲೇ ವಸಂತಾ ಪಾತ್ರದ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ರಮಿಕಾ ಶಿವು ಅವರಿಗೆ ಈ ಯಶಸ್ಸು ಮರೆಯಲಾಗದ ಅನುಭವವಾಗಿ ಉಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.