
'ಪ್ರೇಮದ ಊರಲಿ' ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ನಟಿ ತಪಸ್ವಿನಿ ಪೂಣಚ್ಚ ಈಗ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅದರಲ್ಲೂ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ 'MR ಜಾಕ್' ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ? ತಪಸ್ವಿನಿ ಇಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಕನ್ನಡ ಚಿತ್ರರಂಗದಲ್ಲಿ ಸದ್ಯ 'ಪ್ರೇಮದ ಊರಲಿ' ಸಿನಿಮಾ ಸದ್ದು ಮಾಡುತ್ತಿದೆ. ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಐವತ್ತನೇ ದಿನದತ್ತ ಮುನ್ನುಗ್ಗುತ್ತಿರುವ ಈ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಅವರಿಗೂ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮೊದಲ ಸಿನಿಮಾದ ಮೂಲಕ ಗಮನ ಸೆಳೆದಿರುವ ಅವರು, ಇದೀಗ 'MR ಜಾಕ್' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.
ಗುರುನಂದನ್ ನಾಯಕನಾಗಿರುವ ಈ ಸಿನಿಮಾದ ಎರಡನೇ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಮದುವೆಯ ಸಂಭ್ರಮವನ್ನು ಸಾರುವ 'ಆರಂಭ ವಸಂತ ಆರಂಭ' ಗೀತೆ ಗಮನ ಸೆಳೆಯುತ್ತಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಜಸ್ಕರಣ್ ಸಿಂಗ್ ಧ್ವನಿಯಾಗಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ.
ಡಿಸೆಂಬರ್ 4ಕ್ಕೆ ಚಿತ್ರಮಂದಿರಕ್ಕೆ ಬರ್ತಿದ್ದಾನೆ 'MR ಜಾಕ್'!
'MR ಜಾಕ್' ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ. ಈ ಕುರಿತು ಮಾತನಾಡಿರುವ ನಾಯಕ ಗುರುನಂದನ್, ಚಿತ್ರದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಮದುವೆಯ ಸಂಭ್ರಮವನ್ನು ಬಿಂಬಿಸುವ ಎರಡನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮೂಡಿಗೆರೆ ಸಮೀಪದ ಕಳಸ ಬಳಿಯ ಮೈದಾಡಿ ಗುಡ್ಡದಲ್ಲಿ ಮೂರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಹವಾಮಾನದ ಸವಾಲುಗಳ ನಡುವೆಯೂ ಇಡೀ ಚಿತ್ರತಂಡ ಶ್ರಮಪಟ್ಟು ಹಾಡನ್ನು ಚಿತ್ರೀಕರಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಟ್ರೇಲರ್ ಸೇರಿದಂತೆ ಇನ್ನಷ್ಟು ಹಾಡುಗಳನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
'MR ಜಾಕ್'ನಲ್ಲಿ ಟೀಚರ್ ಆದ 'ಪ್ರೇಮದ ಊರಲಿ' ಬೆಡಗಿ!
ತಪಸ್ವಿನಿ ಪೂಣಚ್ಚ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲೊಂದು ಇಂಟರೆಸ್ಟಿಂಗ್ ಅಪ್ಡೇಟ್ ಇದೆ. ಈ ಸಿನಿಮಾದಲ್ಲಿ ಅವರು ನಂದಿನಿ ಎಂಬ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ನೀಡುವ ಕುಟುಂಬದಿಂದ ಬಂದಿರುವ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ತಪಸ್ವಿನಿ ತಿಳಿಸಿದ್ದಾರೆ. ಚಿತ್ರದ ಟೀಸರ್ ಹಾಗೂ ಮೊದಲ ಶೀರ್ಷಿಕೆ ಗೀತೆಗೆ ಪ್ರೇಕ್ಷಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಪ್ರೇಮದ ಊರಲಿ' ಮೂಲಕ ಗುರುತಿಸಿಕೊಂಡಿರುವ ತಪಸ್ವಿನಿ, ಈ ಬಾರಿ ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.
ಇನ್ನು 'ಪ್ರೇಮದ ಊರಲಿ' ಸಿನಿಮಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಬೆನ್ನಲ್ಲೇ ಅದರ ಎರಡನೇ ಭಾಗದ ಬಗ್ಗೆಯೂ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಒಂದು ಸಿನಿಮಾ ದೊಡ್ಡ ಯಶಸ್ಸು ಕಂಡರೆ ಅದರ ಸೀಕ್ವೆಲ್ ಮಾಡುವ ಆಲೋಚನೆ ಚಿತ್ರತಂಡಗಳಿಗೆ ಬರುತ್ತದೆ. ಆದರೆ 'ಪ್ರೇಮದ ಊರಲಿ' ವಿಚಾರದಲ್ಲಿ ನಿರ್ದೇಶಕ ಮನೋಜ್ ಕುಮಾರ್ ಅವರ ಆಲೋಚನೆಯೇ ಬೇರೆ. ಕಥೆಗೆ ಅದರದ್ದೇ ಆದ ಅಂತ್ಯವಿರುತ್ತದೆ. ಆ ಕಥೆಯ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳುವುದು ಮುಖ್ಯ.
ಕೇವಲ ವ್ಯಾಪಾರದ ದೃಷ್ಟಿಯಿಂದ ಕಥೆಯನ್ನು ಮುಂದುವರಿಸುವುದು ಸರಿಯಲ್ಲ ಎಂಬುದು ಅವರ ನಿಲುವು. ಹೀಗಾಗಿ 'ಪ್ರೇಮದ ಊರಲಿ' ಸಿನಿಮಾದ ಕಥೆಯನ್ನು ಅಲ್ಲಿಗೇ ಮುಗಿಸುವ ನಿರ್ಧಾರಕ್ಕೆ ನಿರ್ದೇಶಕರು ಒಲವು ತೋರಿದ್ದಾರೆ. 'ಪ್ರೇಮದ ಊರಲಿ' ಯಶಸ್ಸಿನ ಸಂಭ್ರಮದಲ್ಲಿರುವ ತಪಸ್ವಿನಿ ಪೂಣಚ್ಚ ಈಗ 'MR ಜಾಕ್' ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಗುರುನಂದನ್ ಜೊತೆಗಿನ ಅವರ ಹೊಸ ಜೋಡಿ, ನಂದಿನಿ ಪಾತ್ರ ಮತ್ತು ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸಿವೆ. ಡಿಸೆಂಬರ್ 4ರಂದು ಈ ಜೋಡಿ ಪ್ರೇಕ್ಷಕರ ಮನ ಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.