ಕಾಂತಾರ, ಕೆಜಿಎಫ್ 2 ದಾಖಲೆಗಳ ಸಾಲಿಗೆ ‘ಪ್ರೇಮದ ಊರಲಿ’ ಎಂಟ್ರಿ: 40 ದಿನಗಳ ಗಳಿಕೆ ಎಷ್ಟು ಕೋಟಿ?

Published : Nov 04, 2026, 05:01 PM IST
Premada Oorali

ಸಾರಾಂಶ

ಕನ್ನಡ ಸಿನಿಮಾ ‘ಪ್ರೇಮದ ಊರಲಿ’ 40 ದಿನಗಳ ಬಾಕ್ಸ್ ಆಫೀಸ್ ಪಯಣದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರವು 134.67 ಕೋಟಿ ರೂಪಾಯಿ ಜಾಗತಿಕ ಕಲೆಕ್ಷನ್ ಮಾಡಿದ್ದು, ಆರನೇ ವಾರಾಂತ್ಯದಲ್ಲಿ..

ದೊಡ್ಡ ಸ್ಟಾರ್‌ಗಳು, ಭಾರೀ ಬಜೆಟ್‌ ಹಾಗೂ ಅದ್ದೂರಿ ಪ್ರಚಾರವಿದ್ದರೆ ಮಾತ್ರ ಸಿನಿಮಾ ಗೆಲ್ಲುತ್ತದೆ ಎಂಬ ಲೆಕ್ಕಾಚಾರಕ್ಕೆ ಅಪವಾದವೆಂಬಂತೆ ಕೆಲವು ಚಿತ್ರಗಳು ಗೆದ್ದು ತೋರಿಸುತ್ತವೆ. ಅಂಥದ್ದೇ ಒಂದು ಅಚ್ಚರಿಯ ಯಶಸ್ಸಿನ ಕಥೆ ಈಗ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಾಧಾರಣ ಕಲೆಕ್ಷನ್‌ನೊಂದಿಗೆ ಬಾಕ್ಸ್ ಆಫೀಸ್ ಪಯಣ ಶುರುಮಾಡಿದ್ದ ‘ಪ್ರೇಮದ ಊರಲಿ’ ಸಿನಿಮಾ, ದಿನ ಕಳೆದಂತೆ ಪ್ರೇಕ್ಷಕರ ಮನಗೆದ್ದು ಈಗ ಹೊಸ ದಾಖಲೆಯನ್ನೇ ಬರೆದಿದೆ. ಅಷ್ಟೇ ಅಲ್ಲ, ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ‘ಕಾಂತಾರ’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಚಿತ್ರಗಳ ಸಾಲಿನಲ್ಲೂ ಸ್ಥಾನ ಗಿಟ್ಟಿಸಿಕೊಂಡಿದೆ.

ಮೊದಲ ದಿನದ 10 ಲಕ್ಷದಿಂದ 40ನೇ ದಿನದವರೆಗೂ ಕೋಟಿ ಕೋಟಿ ಗಳಿಕೆ!

ಸೆಪ್ಟೆಂಬರ್ 25ರಂದು ಯಾವುದೇ ಪ್ಯಾನ್ ಇಂಡಿಯಾ ಪ್ರಚಾರದ ಅಬ್ಬರವಿಲ್ಲದೆ ಕನ್ನಡದಲ್ಲೇ ಬಿಡುಗಡೆಯಾದ ‘ಪ್ರೇಮದ ಊರಲಿ’ ಮೊದಲ ದಿನ ಭಾರತದಲ್ಲಿ ಗಳಿಸಿದ್ದು ಕೇವಲ 10 ಲಕ್ಷ ರೂಪಾಯಿ. ಎರಡನೇ ದಿನ 27 ಲಕ್ಷ ರೂಪಾಯಿ, ಮೂರನೇ ದಿನ 65 ಲಕ್ಷ ರೂಪಾಯಿ ಹಾಗೂ ನಾಲ್ಕನೇ ದಿನ 75 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಐದನೇ ದಿನಕ್ಕೆ ಚಿತ್ರದ ಗಳಿಕೆ ಒಂದು ಕೋಟಿ ರೂಪಾಯಿ ಗಡಿ ದಾಟಿ 1.09 ಕೋಟಿ ರೂಪಾಯಿಗೆ ತಲುಪಿತು.

ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ್ದ ಚಿತ್ರದ ಬಾಕ್ಸ್ ಆಫೀಸ್ ಓಟಕ್ಕೆ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರವೇ ವೇಗ ನೀಡಿತು. ಹೀಗಾಗಿ ದಿನ ಕಳೆದಂತೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಬರೀ ಆರಂಭಿಕ ವಾರಾಂತ್ಯದ ಕಲೆಕ್ಷನ್‌ಗೆ ಸೀಮಿತವಾಗದೆ, 38ನೇ ದಿನದವರೆಗೂ ಕೋಟಿ ರೂಪಾಯಿಗಳ ಗಳಿಕೆಯನ್ನು ಮುಂದುವರಿಸಿದ್ದು ಚಿತ್ರದ ವಿಶೇಷತೆ.

40 ದಿನಗಳಲ್ಲಿ ‘ಪ್ರೇಮದ ಊರಲಿ’ ಗಳಿಸಿದ್ದೆಷ್ಟು?

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ನೀಡಿರುವ ಅಂಕಿಅಂಶಗಳ ಪ್ರಕಾರ, 40ನೇ ದಿನವಾದ ಮಂಗಳವಾರ ಚಿತ್ರ ಭಾರತದಲ್ಲಿ 70 ಲಕ್ಷ ರೂಪಾಯಿ ಗಳಿಸಿದೆ. ಅದಕ್ಕೂ ಹಿಂದಿನ ಸೋಮವಾರ 75 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಭಾನುವಾರದ ಗಳಿಕೆ 2.25 ಕೋಟಿ ರೂಪಾಯಿ ಆಗಿತ್ತು.

40 ದಿನಗಳ ಒಟ್ಟು ಬಾಕ್ಸ್ ಆಫೀಸ್ ಲೆಕ್ಕಾಚಾರ ಹೀಗಿದೆ:

ಗ್ಲೋಬಲ್ ಕಲೆಕ್ಷನ್: 134.67 ಕೋಟಿ ರೂಪಾಯಿ

ಭಾರತದ ಗ್ರಾಸ್ ಕಲೆಕ್ಷನ್: 131.02 ಕೋಟಿ ರೂಪಾಯಿ

ಭಾರತದ ನೆಟ್ ಕಲೆಕ್ಷನ್: 112.07 ಕೋಟಿ ರೂಪಾಯಿ

ವಿದೇಶಿ ಮಾರುಕಟ್ಟೆಯ ಗಳಿಕೆ: 3.65 ಕೋಟಿ ರೂಪಾಯಿ

ಕಾಂತಾರ, ಕೆಜಿಎಫ್ 2 ಬಳಿಕದ ಸ್ಥಾನ!

‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿಗೆ ಮತ್ತೊಂದು ವಿಶೇಷ ದಾಖಲೆ ಸೇರ್ಪಡೆಯಾಗಿದೆ. ಕನ್ನಡ ಸಿನಿಮಾಗಳ ಆರನೇ ವಾರಾಂತ್ಯದ ಕಲೆಕ್ಷನ್ ವಿಚಾರದಲ್ಲಿ ಈ ಚಿತ್ರ ಈಗ ಅಗ್ರ ಮೂರು ಸಿನಿಮಾಗಳ ಪಟ್ಟಿಗೆ ಸೇರಿದೆ. ಸ್ಯಾಕ್ನಿಲ್ಕ್ ವರದಿಯಲ್ಲಿನ ಅಂಕಿಅಂಶಗಳ ಪ್ರಕಾರ, ಆರನೇ ವಾರಾಂತ್ಯದಲ್ಲಿ ಚಿತ್ರ 4.83 ಕೋಟಿ ರೂಪಾಯಿ ಭಾರತದ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಮೊದಲ ಸ್ಥಾನದಲ್ಲಿದ್ದರೆ, ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಎರಡನೇ ಸ್ಥಾನದಲ್ಲಿದೆ. ಇದೀಗ ‘ಪ್ರೇಮದ ಊರಲಿ’ ಮೂರನೇ ಸ್ಥಾನ ಅಲಂಕರಿಸಿದೆ.

ಆರನೇ ವಾರದಲ್ಲೂ ಹೆಚ್ಚಿದ ಶೋಗಳು; ಪ್ರೇಕ್ಷಕರ ಒಲವಿಗೆ ಸಾಕ್ಷಿ!

ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆಯಾಗಿ ಐದಾರು ವಾರಗಳು ಕಳೆದ ನಂತರ ಹೊಸ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಅವಕಾಶ ಕಲ್ಪಿಸಲು ಹಳೆಯ ಚಿತ್ರದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ‘ಪ್ರೇಮದ ಊರಲಿ’ ವಿಚಾರದಲ್ಲಿ ಈ ಟ್ರೆಂಡ್ ಬೇರೆಯೇ ಆಗಿದೆ. ಐದನೇ ವಾರಾಂತ್ಯಕ್ಕೆ ಹೋಲಿಸಿದರೆ ಆರನೇ ವಾರಾಂತ್ಯದಲ್ಲಿ ಗಳಿಕೆಯಲ್ಲಿ ಇಳಿಕೆ ಕಂಡಿದ್ದರೂ, ವಾರಾಂತ್ಯದ ಪ್ರೇಕ್ಷಕರ ಪ್ರತಿಕ್ರಿಯೆ ಆಶಾದಾಯಕವಾಗಿತ್ತು.

ಶುಕ್ರವಾರಕ್ಕೆ ಹೋಲಿಸಿದರೆ ಭಾನುವಾರದ ಕಲೆಕ್ಷನ್ ಹೆಚ್ಚಾಗಿದ್ದು, ಪ್ರದರ್ಶನಗಳ ಸಂಖ್ಯೆಯೂ 708ರಿಂದ 795ಕ್ಕೆ ಏರಿಕೆಯಾಗಿದೆ. ಆರನೇ ವಾರದಲ್ಲೂ ಸಿನಿಮಾದ ಶೋಗಳನ್ನು ಹೆಚ್ಚಿಸುವ ಮಟ್ಟಿಗೆ ಪ್ರೇಕ್ಷಕರ ಬೇಡಿಕೆ ಉಳಿದಿರುವುದು ಗಮನಾರ್ಹ. ಇದೇ ವೇಳೆ ಆರನೇ ವಾರಾಂತ್ಯದಲ್ಲಿ ಬುಕ್‌ಮೈಶೋ ಮೂಲಕ ಸುಮಾರು 75,720 ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ಕೂಡ ಚಿತ್ರದ ಜನಪ್ರಿಯತೆಯನ್ನು ತೋರಿಸುತ್ತದೆ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಚಿತ್ರದ ಆರಂಭಿಕ ವಾರಾಂತ್ಯದ ಭಾರತದ ಗ್ರಾಸ್ ಕಲೆಕ್ಷನ್ ಕೇವಲ 1.02 ಕೋಟಿ ರೂಪಾಯಿ ಆಗಿತ್ತು. ಆದರೆ ಆರು ವಾರಗಳ ನಂತರವೂ ಚಿತ್ರ ತನ್ನ ಮೊದಲ ಮೂರು ದಿನಗಳ ಗಳಿಕೆಯನ್ನು ಮೀರಿಸುವ ರೀತಿಯಲ್ಲಿ ಆದಾಯ ತರುತ್ತಿದೆ. ದೊಡ್ಡ ಓಪನಿಂಗ್‌ಗಿಂತಲೂ ಪ್ರೇಕ್ಷಕರ ಮೆಚ್ಚುಗೆ ಮತ್ತು ಬಾಯ್ಮಾತಿನ ಪ್ರಚಾರ ಸಿನಿಮಾ ಗೆಲುವಿನಲ್ಲಿ ಎಷ್ಟು ಮುಖ್ಯ ಎಂಬುದಕ್ಕೆ ‘ಪ್ರೇಮದ ಊರಲಿ’ ಉತ್ತಮ ಉದಾಹರಣೆಯಾಗಿದೆ.

2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ; ಯಾರು ಈ ಚಿತ್ರದ ಹಿಂದಿದ್ದಾರೆ?

ವೆನಿಲ್ಲಾ ಎಂಟರ್‌ಟೈನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಸುಮಾರು 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ‘ಪ್ರೇಮದ ಊರಲಿ’ ಸಿನಿಮಾ ನಿರ್ಮಾಣವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀರಾಮ್, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಹಿರಿಯ ನಟ ರಂಗಾಯಣ ರಘು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಸುನಾದ್ ಗೌತಮ್ ಸಂಗೀತ ಸಂಯೋಜನೆ, ರಾಜ್‌ಕಾಂತ್ ಎಸ್.ಕೆ. ಅವರ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರಕ್ಕಿದೆ. ದೊಡ್ಡ ಮಟ್ಟದ ಆರಂಭಿಕ ಪ್ರಚಾರವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಮೆಚ್ಚುಗೆಯನ್ನೇ ಬಂಡವಾಳವಾಗಿಸಿಕೊಂಡು ಆರು ವಾರಗಳಿಗೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ತನ್ನ ಓಟ ಮುಂದುವರಿಸಿರುವ ‘ಪ್ರೇಮದ ಊರಲಿ’ ಈಗ ಕನ್ನಡ ಚಿತ್ರರಂಗದ ಗಮನ ಸೆಳೆದಿದೆ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಆರಂಭಕ್ಕಿಂತಲೂ ಗಟ್ಟಿಯಾದ ಪ್ರೇಕ್ಷಕ ಬೆಂಬಲ ಮುಖ್ಯ ಎಂಬುದನ್ನು ಈ ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಕಾಂತಾರ’ ಸಕ್ಸಸ್ ಬಳಿಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ: ಮನದ ನೋವು ಹಂಚಿಕೊಂಡ ಸಪ್ತಮಿ ಗೌಡ!
ನಿದ್ದೆ ಕದಿವ ರೀಲ್ಸ್​ ಮೂಲಕ ಪಡ್ಡೆಗಳ ಮನಸ್ಸು ಗೆದ್ದ Premada Oorali ರುಕ್ಮಿಣಿ ಖ್ಯಾತಿಯ ನಟಿ ತಪಸ್ವಿನಿ - ವಿಡಿಯೋ ವೈರಲ್​