
ನಟ ಶೈನ್ ಶೆಟ್ಟಿ ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಹಣವನ್ನೆಲ್ಲ ಧಾರೆಯೆರೆದು ರೂಪಿಸಿರುವ ‘ಶಂಕರಾಭರಣ’ ಸಿನಿಮಾ ಈಗಾಗಲೇ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ವಿಭಿನ್ನ ಕಥಾಹಂದರ ಮತ್ತು ಹಾರರ್ ಥ್ರಿಲ್ಲರ್ ಅಂಶಗಳ ಮೂಲಕ ಗಮನ ಸೆಳೆಯುತ್ತಿದೆ.
ರಾಷ್ಟ್ರಪ್ರಶಸ್ತಿ ವಿಜೇತ ‘ಮಿಥ್ಯ’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಸುಮಂತ್ ಭಟ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನವೆಂಬರ್ 20ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ‘ಶಂಕರ ನೀ ಭಯಂಕರ...’ ಎಂಬ ಚಿತ್ರದ ಹಾಡು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದರ ಬೆನ್ನಲ್ಲೇ ಶೈನ್ ಶೆಟ್ಟಿ ಮತ್ತು ತಂಡ ‘ಶಂಕರಾಭರಣ’ ಬಸ್ ಮೂಲಕ ರಾಜ್ಯಾದ್ಯಂತ ಸಂಚರಿಸಿ ವಿನೂತನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಈ ವಿಭಿನ್ನ ಪ್ರಚಾರ ತಂತ್ರದ ನಡುವೆಯೇ ಬಿಡುಗಡೆಯಾಗಿರುವ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದಲ್ಲಿ ಶೈನ್ ಶೆಟ್ಟಿ ಬಸ್ ಚಾಲಕನಾಗಿ, ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್ ಕುಮಾರ್ ಖಳನಾಯಕನಾಗಿ ಮಿಂಚಿದ್ದರೆ, ತನ್ವಿ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಸಾಲ ಮಾಡಿ ಬಸ್ ಖರೀದಿಸುವ ಮಾಲೀಕನೊಬ್ಬ ಎದುರಿಸುವ ಸವಾಲುಗಳು, ಬದುಕಿನ ಏರಿಳಿತಗಳು ಹಾಗೂ ಅವುಗಳ ಸುತ್ತ ಹೆಣೆದಿರುವ ಕಥೆಗೆ ಹಾರರ್ ಥ್ರಿಲ್ಲರ್ ಸ್ಪರ್ಶ ನೀಡಿರುವುದು ಚಿತ್ರದ ವಿಶೇಷ. ಸಾಮಾನ್ಯ ಬದುಕಿನ ಕಥೆಯನ್ನು ಕುತೂಹಲಕಾರಿ ಸಿನಿಮಾ ಅನುಭವವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಟ್ರೇಲರ್‌ನಲ್ಲಿ ಕಾಣಬಹುದು.
ಚಿತ್ರದ ಕಥೆಯನ್ನು ಶೈನ್ ಶೆಟ್ಟಿಯವರೇ ಬರೆದಿದ್ದು, ದಿವಾಕರ್ ಶೆಟ್ಟಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಭಿನ್ನ ಕಥಾವಸ್ತು, ಹಾರರ್ ಥ್ರಿಲ್ಲರ್ ನಿರೂಪಣೆ ಮತ್ತು ಶೈನ್ ಶೆಟ್ಟಿಯ ಹೊಸ ಅವತಾರದೊಂದಿಗೆ ‘ಶಂಕರಾಭರಣ’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.