
ಕನ್ನಡ ಸಿನಿಮಾ 'ಪ್ರೇಮದ ಊರಲಿ' ಹೊಸ ದಾಖಲೆ!
‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ ಮೂರನೇ ವಾರದಲ್ಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಬುಕ್ ಮೈ ಶೋ ಮೂಲಕ ಬರೋಬ್ಬರಿ 2.60 ಲಕ್ಷ ಟಿಕೆಟ್‌ಗಳು ಮಾರಾಟವಾಗಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ. ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ತೆಲುಗಿನಲ್ಲೂ ಪ್ರೇಕ್ಷಕರ ಮೆಚ್ಚುಗೆ
ಕನ್ನಡದಲ್ಲಿ ಯಶಸ್ಸು ಕಾಣುತ್ತಿರುವ ಈ ಸಿನಿಮಾ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ತೆಲುಗಿನಲ್ಲೂ ಬಿಡುಗಡೆಯಾಗಿದೆ. ಅಲ್ಲಿಯೂ ಕುಟುಂಬ ಪ್ರೇಕ್ಷಕರು ಮತ್ತು ಯುವಜನರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯಿಂದ ಚಿತ್ರದ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಮೂಡಿದೆ.
ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊಟ್ಟಮೊದಲ ಸೂಪರ್ ಹಿಟ್ ಸಿನಿಮಾ ಆಗಿ 'ಪ್ರೇಮದ ಊರಲಿ' (Premada Oorali) ಹೊಸ ಇತಿಹಾಸ ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಹೊಸಬರ ತಂಡದ ಸಿನಿಮಾ ಇದೀಗ ಹಾಕಿರುವ ಕಾಸಿಗೆ ಅದೆಷ್ಟೋ ಪಟ್ಟು ಹೆಚ್ಚು ಲಾಭ ತಂದುಕೊಟ್ಟು, ಇನ್ನೂ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಗೊತ್ತೇ ಇದೆ. ಬಿಡುಗಡೆಯಾದ 2ನೇ ವಾರದಲ್ಲಿ ಪ್ರೇಮದ ಊರಲಿ ಸಿನಿಮಾ 34 ಕೋಟಿ ಗಳಿಸಿದ್ದ ಸಿನಿಮಾ 3ನೇ ವಾರದ ಮಧ್ಯದಲ್ಲೇ 40 ಕೋಟಿಗೂ ಅಧಿಕ ಗಳಿಸಿ ತನ್ನ ನಾಗಾಲೋಟ ಮುಂದುವರಿಸಿದೆ. ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಮನೋಜ್ ಕುಮಾರ್ ನಿರ್ದೇಶನದಲ್ಲಿ ತೆರೆಗೆ ಬಂದಿರುವ 'ಪ್ರೇಮದ ಊರಲಿ' ಸಿನಿಮಾ ಇದೀಗ ಬರೋಬ್ಬರಿ 34 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿ ಮುನ್ನುಗ್ಗುತ್ತಿದೆ. ರಂಗಾಯಣ ರಘು, ಶ್ರೀರಾಮ್ (ಸಂತು), ತಪಸ್ವಿನಿ ಪೂಣಚ್ಚ, ರಾಮಿಕಾ ಶಿವು ತಾರಾಗಣದ ಈ ಸಿನಿಮಾವನ್ನು ನಿರ್ಮಾಪಕರಾದ ದೇವೇಂದ್ರ ನಾಯ್ಡು (ನಿರ್ಮಾಪಕಿ: ಮಮತಾ ದೇವೇಂದ್ರ ಎಂ) ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್ ನೀಡಿದ್ದಾರೆ.
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ‘ಪ್ರೇಮದ ಊರಲಿ’, ಸರಳ ಕಥೆ ಮತ್ತು ಭಾವನಾತ್ಮಕ ನಿರೂಪಣೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಸದ್ಯ ಚಿತ್ರದ ಗಳಿಕೆ ಮತ್ತು ಟಿಕೆಟ್ ಮಾರಾಟದ ಕುರಿತು ಕೇಳಿಬರುತ್ತಿರುವ ವರದಿಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಅಂದಹಾಗೆ, ಪ್ರೇಮದ ಊರಲಿ ಸಿನಿಮಾಗೆ ಕನ್ನಡ ಚಿತ್ರರಂಗದ ಕಡೆಯಿಂದಲೂ ಸಾಕಷ್ಟು ಅನುಕೂಲತೆಗಳು ಲಭ್ಯವಾಗಿವೆ ಎನ್ನಬಹುದು. 'ಪ್ರೇಮದ ಊರಲಿ ಸಿನಿಮಾದ ವಾರಾಂತ್ಯದ ಕಲೆಕ್ಷನ್‌ಗೆ ಪೆಟ್ಟು ಬೀಳೋದು ಬೇಡ ಎಂದು ನಾವು ನಮ್ಮ 'ಬೃಂದಾವಿಹಾರಿ' ಸಿನಿಮಾವನ್ನು ಅಕ್ಟೋಬರ್ 16ರ ಬದಲು ಅಕ್ಟೋಬರ್ 20ರಂದು ತೆರೆಗೆ ತರಲಿದ್ದೇವೆ' ಎಂದು ಘೋಷಿಸುವ ಮೂಲಕ ಯಶಸ್ವೀ ಪ್ರದರ್ಶನ ಮುಂದುವರಿಯಲು ಇನ್ನೂ ಹೆಚ್ಚಿನ ದಾರಿ ಮಾಡಿಕೊಟ್ಟಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ, ಪ್ರೇಮದ ಊರಲಿ ಸಿನಿಮಾ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ.
ಕನ್ನಡದ ಸಾಕಷ್ಟು ಸಿನಿಮಾಗಳ ಒಟಿಟಿ ಹಕ್ಕುಗಳನ್ನು ಖರೀದಿಸಿ ನಿರ್ಮಾಪಕರಿಗೆ ಅನ್ನದಾತ ಎನ್ನಿಸಿಕೊಂಡಿರುವ ಅರವಿಂದ್ ವೆಂಕಟೇಶ್ ರೆಡ್ಡಿಯವರು ಇದೀಗ ಸೂಪರ್ ಹಿಟ್ 'ಪ್ರೇಮದ ಊರಲಿ' ಸಿನಿಮಾದ ಒಟಿಟಿ ಖರೀದಿಗೆ ಸಜ್ಜಾಗಿದ್ದಾರೆ. ಬಹುದೊಡ್ಡ ಮೊತ್ತಕ್ಕೆ 'ಪ್ರೇಮದ ಊರಲಿ ಸಿನಿಮಾವನ್ನು ಖರೀದಿ ಮಾಡಲು ತಮ್ಮ 'ಎವಿಆರ್ ಸಿನೆಮ್ಯಾಕ್ಸ್ (AVR Cine-Max)' ಮೂಲಕ ಮುಂದೆ ಬಂದಿರುವ ಅರವಿಂದ್ ವೆಂಕಟೇಶ್ ರೆಡ್ಡಿಯವರ ಜೊತೆಗೆ ಒಟಿಟಿ ದೈತ್ಯ ಕಂಪನಿಗಳಾದ ಅಮೆಜಾನ್, ನೆಟ್‌ಫ್ಲಿಕ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಂತಹ ಕಂಪನಿಗಳು ಪೈಪೋಟಿಗೆ ಇಳಿದಿವೆ. ಸದ್ಯ ಈ ನ್ಯೂಸ್ ಸಾಕಷ್ಟು ಕುತೂಹಲ ಕೆರಳಿಸುತ್ತಿವೆ. ಆದರೆ, ಕನ್ನಡದ ಈ ಸಿನಿಮಾ ಕನ್ನಡಿಗ ಅರವಿಂದ್ ವೆಂಕಟೇಶ್ ರೆಡ್ಡಿಯವರ ಒಟಿಟಿ ಪ್ಲಾಟ್‌ಫಾರಂ ‘AVR Cinemax’ ಮೂಲಕ ಹೊರಬರಲಿ ಎಂಬುದು ಬಹಳಷ್ಟು ಜನರ ಆಶಯ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.