
‘ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರು ಶಿವಣ್ಣ ಅವರ ಸಿನಿಮಾ ಮಾಡಿದ್ರೆ ನಾನದರಲ್ಲಿ ವಿಲನ್ ಆಗಿ ನಟಿಸಬೇಕು. ಆ ಮೂಲಕ ಶಿವಣ್ಣ ಅವರ ಹತ್ರ ಜೋರ್ ಜೋರಾಗಿ ಏಟು ತಿನ್ಬೇಕು’. ಇದು ‘ರತ್ನನ್ ಪ್ರಪಂಚ’ ಖ್ಯಾತಿಯ ನಟ ಪ್ರಮೋದ್ ಮಾತು. ಅವರು ನಾಯಕನಾಗಿ ನಟಿಸಿರುವ ಕೆ ಪಿ ಶ್ರೀಕಾಂತ್ ನಿರ್ಮಾಣದ ‘ಹಲ್ಕಾ ಡಾನ್’ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ನಡೆಯಿತು. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ದುನಿಯಾ ವಿಜಯ್, ರಚಿತಾ ರಾಮ್ ಸಿನಿಮಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಪ್ರಮೋದ್, ‘ಕಾಲೇಜು ಮುಗಿಸಿ ಐಎಫ್‌ಎಸ್ ಆಫೀಸರ್ ಆಗಬೇಕು ಅಂದುಕೊಂಡಿದ್ದೆ. ಆದರೆ ಸುದೀಪ್ ಅವರಂಥಾ ಸ್ಟಾರ್‌ಗಳು ನನ್ನ ನಟನೆ ಮೆಚ್ಚಿದ್ದನ್ನು ಕಂಡಾಗ ಅದನ್ನು ಬಿಟ್ಟು ಸಿನಿಮಾರಂಗಕ್ಕೆ ಬಂದದ್ದಕ್ಕೆ ಹೆಮ್ಮೆ ಅನಿಸುತ್ತದೆ. ಹಲ್ಕಾಡಾನ್ ಸಿನಿಮಾ ಸಿಕ್ಕಾಪಟ್ಟೆ ಬೇರೆ ಥರದ ಕತೆ ಹೊಂದಿದೆ. ಆದರೆ ಇಂಥಾ ಸಿನಿಮಾ ನಾನು ಮಾಡಲೇ ಬೇಕಿದೆ’ ಎಂದರು. ನಿರ್ದೇಶಕ ಚಲ, ‘ ಡಾರ್ಕ್ ಕಾಮಿಡಿ ಜಾನರಾ ಕಥೆ. ವೈಲೆನ್ಸ್, ಕಾಮಿಡಿ ಇದೆ. ಹೀರೋ ಹೆಸರೇ ಇದು. ಮುಂದಿನ ತಿಂಗಳಿಂದ ಶೂಟಿಂಗ್ ಶುರುವಾಗುತ್ತದೆ’ ಎಂದರು. ನಿರ್ಮಾಪಕ ಕೆ ಪಿ ಶ್ರೀಕಾಂತ್, ‘ಕಾಲರ್ ಎತ್ಕೊಂಡು ಕನ್ನಡ ಪ್ರೇಕ್ಷಕರು ಈ ಸಿನಿಮಾ ನೋಡಬಹುದು’ ಎಂದರು.
ಹಲ್ಕಾ ಡಾನ್ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಜ್ಯೋತಿ ಪೂರ್ವಜ್, ಹಿಂದೆ ಅಶ್ಲೀಲ ವೀಡಿಯೋವೊಂದಕ್ಕೆ ತನ್ನ ಹೆಸರು ಟ್ಯಾಗ್ ಆಗಿದ್ದರ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ‘ನಮ್ಮ ಪ್ರತೀ ಕೆಲಸವನ್ನೂ ದೇವರು ಹಾಗೂ ಮನೆಯವರು ಗಮನಿಸಿರುತ್ತಾರೆ. ನಾನು ಮಾನಸಿಕವಾಗಿ ಸಂಪ್ರದಾಯಸ್ಥೆ ಆಗಿದ್ದರೂ ಆನ್‌ಸ್ಕ್ರೀನ್‌ನಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಕಾಣಬೇಕು. ಹಾಗಾಗಿ ಬಾಡಿ ಟ್ರಾನ್ಸ್‌ಫರ್ಮೇಶನ್ ಮಾಡಿಕೊಂಡೆ. ನಾನು ಕೆಟ್ಟ ಕೆಲಸ ಮಾಡ್ತಿಲ್ಲ. ತಪ್ಪು ಮಾಡಿಲ್ಲ. ಹೀಗಾಗಿ ಈ ಹಿಂದೆ ನಡೆದ ಘಟನೆ ಬಗ್ಗೆ ಬೇಜಾರಿಲ್ಲ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.