
ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ವಿವಾದದ ಕೇಂದ್ರಬಿಂದುವಾಗಿದೆ. ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಅವರಿಂದಲೇ ಡಬ್ಬಿಂಗ್ ಮಾಡಿಸದೆ, ಮತ್ತೊಬ್ಬ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ ಕೂಡ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಇದೀಗ ಈ ಬೆಳವಣಿಗೆಗೆ ನಿರ್ದೇಶಕ ಹಾಗೂ ಪ್ರಜ್ವಲ್ ದೇವರಾಜ್ ಅವರ ಆಪ್ತ ಸ್ನೇಹಿತ ಪನ್ನಗಾಭರಣ ಪ್ರತಿಕ್ರಿಯೆ ನೀಡಿದ್ದು, ಗುರುದತ್ ಗಾಣಿಗ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಪನ್ನಗಾಭರಣ, "ನಾನು 'ಕರಾವಳಿ' ವಿವಾದದ ಬಗ್ಗೆ ಬಂದಿರುವ ಹಲವು ವಿಡಿಯೋಗಳನ್ನು ನೋಡಿದ್ದೇನೆ. ಗುರುದತ್ ಗಾಣಿಗ ಅವರು ತಾವು ಈ ಹಿಂದೆ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅವರೊಂದಿಗೆ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಆ ಸಿನಿಮಾಗಳಲ್ಲಿ ಆ ನಟರಿಗೆ ತಿಳಿಸದೆ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿತ್ತೇ? ಅಂತಹ ನಿರ್ಧಾರವನ್ನು ಆ ನಟರು ಒಪ್ಪಿಕೊಳ್ಳುತ್ತಿದ್ರಾ?" ಎಂದು ಪ್ರಶ್ನಿಸಿದರು.
ಮುಂದುವರಿದು, "ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಇದ್ದಾರೆ. ಅವರು ಸಿನಿಮಾವನ್ನು ಪ್ರೀತಿಸುವ ಕಲಾವಿದ ಎನ್ನುವುದು ಎಲ್ಲರಿಗೂ ಗೊತ್ತು. ಇದೇ ಚಿತ್ರದಲ್ಲಿ ನಟಿಸಿರುವ ಮಿತ್ರ ಕೂಡ, ಡಬ್ಬಿಂಗ್ ವೇಳೆ ತೊಂದರೆ ಆಗುತ್ತಿದ್ದಾಗ ರಾಜ್ ಬಿ ಶೆಟ್ಟಿ ತಮ್ಮ ಸಂಭಾಷಣೆಗಳನ್ನು ತಿದ್ದಿಕೊಟ್ಟು ಸಹಾಯ ಮಾಡಿದ್ದರು ಎಂದು ಹೇಳಿದ್ದಾರೆ. ಹಾಗಿರುವಾಗ ಪ್ರಜ್ವಲ್ ದೇವರಾಜ್ ಅವರಿಗೂ ಅದೇ ರೀತಿಯ ಸಹಕಾರ ನೀಡುವ ಪ್ರಯತ್ನ ಏಕೆ ಮಾಡಲಿಲ್ಲ? ಸಹಾಯ ಕೇಳಿದರೆ ನಿರಾಕರಿಸುವ ವ್ಯಕ್ತಿ ರಾಜ್ ಬಿ ಶೆಟ್ಟಿ ಅಲ್ಲ. ಕಲಿಯಲು ಹಿಂದೇಟು ಹಾಕುವ ವ್ಯಕ್ತಿ ಪ್ರಜ್ವಲ್ ದೇವರಾಜ್ ಕೂಡ ಅಲ್ಲ," ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ಕಾರಣಗಳಿಂದಲೇ ಪ್ರಜ್ವಲ್ ಅವರನ್ನು ಈ ಪ್ರಕ್ರಿಯೆಯಿಂದ ದೂರ ಇಡಲಾಗಿದೆ ಎಂಬ ಆರೋಪವನ್ನೂ ಪನ್ನಗಾಭರಣ ಮಾಡಿದರು. "ಪ್ರಜ್ವಲ್ ಅವರಿಂದ ಡಬ್ಬಿಂಗ್ ಮಾಡಿಸಿ, ಅದು ತೃಪ್ತಿಕರವಾಗಿಲ್ಲ ಎಂದು ಹೇಳಿದ್ದರೆ ಅರ್ಥವಾಗುತ್ತಿತ್ತು. ಆದರೆ ಅವರನ್ನು ಡಬ್ಬಿಂಗ್‌ಗೆ ಕರೆಯದೇ, ಅವರಿಂದ ಸಾಧ್ಯವಿಲ್ಲ ಎಂದು ಹೇಳುವುದು ನ್ಯಾಯಸಮ್ಮತವಲ್ಲ. ಸಿನಿಮಾ ಆರಂಭಕ್ಕೂ ಮುನ್ನ ನಡೆದ ಚರ್ಚೆಗಳು, ವರ್ಕ್‌ಶಾಪ್‌ಗಳಲ್ಲಿ ಕಾಣಿಸದ ಸಮಸ್ಯೆ ಈಗ ಮಾತ್ರ ಹೇಗೆ ಎದುರಾಯಿತು?" ಎಂದು ಅವರು ಪ್ರಶ್ನಿಸಿದರು.
ಕೊನೆಯಲ್ಲಿ ಚಿತ್ರರಂಗದಲ್ಲಿ ಪರಸ್ಪರ ಗೌರವದ ಮಹತ್ವವನ್ನು ಒತ್ತಿಹೇಳಿದ ಪನ್ನಗಾಭರಣ, "ಒಬ್ಬ ಕಲಾವಿದನ ಅನುಮತಿ ಪಡೆಯದೆ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸುವುದು ಸರಿಯಲ್ಲ. ಇದೇ ರೀತಿ ನಿಮ್ಮನ್ನು ಬದಿಗಿಟ್ಟು ನಿಮ್ಮ ಸಿನಿಮಾವನ್ನು ಬಿಡುಗಡೆ ಮಾಡಿದರೆ ಅದನ್ನು ನೀವು ಒಪ್ಪಿಕೊಳ್ಳುತ್ತೀರಾ? ಸಿನಿಮಾ ಎನ್ನುವುದು ಒಂದು ಕುಟುಂಬದಂತದ್ದು. ಭಿನ್ನಾಭಿಪ್ರಾಯಗಳಿದ್ದರೆ ಸಾರ್ವಜನಿಕವಾಗಿ ಆರೋಪ-ಪ್ರತ್ಯಾರೋಪ ಮಾಡುವ ಬದಲು, ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ," ಎಂದು ಸಲಹೆ ನೀಡಿದರು. ಇನ್ನು 'ಕರಾವಳಿ' ಬಿಡುಗಡೆಯ ಮುನ್ನವೇ ಈ ಡಬ್ಬಿಂಗ್ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಚಿತ್ರತಂಡದಿಂದ ಈ ಕುರಿತು ಮತ್ತಷ್ಟು ಸ್ಪಷ್ಟನೆ ಬರಬಹುದೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.