
ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ 'ಅಯೋಗ್ಯ 2' ಸಿನಿಮಾ ಬಿಡುಗಡೆಯತ್ತ ದಾಪುಗಾಲಿಟ್ಟಿದ್ದು, ಚಿತ್ರದ ಪ್ರಮೋಷನ್‌ಗೆ ಚಿತ್ರತಂಡ ಮತ್ತಷ್ಟು ವೇಗ ನೀಡಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಸಂಗೀತಪ್ರಿಯರ ಮನ ಗೆದ್ದಿರುವ ಚಿತ್ರ, ಇದೀಗ 'ಮಿಲ್ಕಿ ಬ್ಯೂಟಿ' ಎಂಬ ಹೊಸ ಪೆಪ್ಪಿ ಸಾಂಗ್ ಅನ್ನು ಬಿಡುಗಡೆ ಮಾಡಿ ಸಿನಿಪ್ರಿಯರ ಗಮನ ಸೆಳೆದಿದೆ. ಈ ಹಾಡಿನ ಹೈಲೈಟ್ ಎಂದರೆ, ಹಲವು ವರ್ಷಗಳ ಬಳಿಕ ನಟಿ ಪ್ರಜ್ಞಾ ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿರುವುದು.
'ಮಿಲ್ಕಿ ಬ್ಯೂಟಿ'ಯಾಗಿ ಪ್ರಜ್ಞಾ ಮಿಂಚು
ಒಂದು ಕಾಲದಲ್ಲಿ 'ಬಾಬಾ', 'ಕೆಂಚ', 'ದೇವ್ರು', 'ಗಣೇಶ್ ಮತ್ತೆ ಬಂದ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದ ಪ್ರಜ್ಞಾ, ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವಾಗಿದ್ದರು. ಇದೀಗ 'ಅಯೋಗ್ಯ 2' ಚಿತ್ರದ ವಿಶೇಷ ಹಾಡಿನಲ್ಲಿ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರ ಸ್ಟೈಲ್, ಡ್ಯಾನ್ಸ್ ಮೂವ್ಸ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.
"ಇದು ಕಮ್‌ಬ್ಯಾಕ್ ಅಲ್ಲ, ಖುಷಿಯ ಸಂಭ್ರಮ"
ತಮ್ಮ ಮರುಪ್ರವೇಶದ ಬಗ್ಗೆ ಮಾತನಾಡಿದ ಪ್ರಜ್ಞಾ, "ಬಹಳ ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಂಬಾ ಸಂತೋಷ ತಂದಿದೆ. 'ಮಿಲ್ಕಿ ಬ್ಯೂಟಿ' ಹಾಡಿನ ಶೂಟಿಂಗ್ ವೇಳೆ ಕೆಲಸ ಮಾಡುತ್ತಿದ್ದೇವೆ ಎನ್ನುವ ಭಾವನೆಯೇ ಬರಲಿಲ್ಲ. ಇಡೀ ತಂಡದೊಂದಿಗೆ ಕಳೆದ ಕ್ಷಣಗಳು ಮರೆಯಲಾಗದ ಅನುಭವ. ರಚಿತಾ ರಾಮ್ ಅಭಿನಯದ ಸಿನಿಮಾದ ಭಾಗವಾಗಿರುವುದು ಇನ್ನಷ್ಟು ಖುಷಿ ನೀಡಿದೆ. ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಸಂತಸ ಹಂಚಿಕೊಂಡರು.
'ಅಯೋಗ್ಯ 2' ಬಗ್ಗೆ ಸತೀಶ್ ನೀನಾಸಂಗೆ ಭಾರೀ ವಿಶ್ವಾಸ
ಚಿತ್ರದ ಕುರಿತು ಮಾತನಾಡಿದ ಸತೀಶ್ ನೀನಾಸಂ, "ಮೊದಲ 'ಅಯೋಗ್ಯ' ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಅದ್ಭುತವಾಗಿ ಸ್ವೀಕರಿಸಿದ್ದರು. ಆ ಪ್ರೀತಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಬಾರಿ ನಿರ್ದೇಶಕ ಮಹೇಶ್ ಕುಮಾರ್ ಕೇವಲ ಒಂದು ಊರಿನ ಕಥೆಯಲ್ಲ, ರಾಜ್ಯದ ಪ್ರತಿಯೊಂದು ಹಳ್ಳಿಯ ಜನರೂ ತಮ್ಮ ಜೀವನದ ಪ್ರತಿಬಿಂಬ ಕಾಣುವಂತಹ ಕಥೆಯನ್ನು ತೆರೆಗೆ ತಂದಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಖಂಡಿತ ಇಷ್ಟವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿರುವ ಈ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಆಗಸ್ಟ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, 'ಬಹದ್ದೂರ್' ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಇಂದು ನಾಗರಾಜ್ ಹಾಗೂ ನಿಶಾನ್ ರೈ 'ಮಿಲ್ಕಿ ಬ್ಯೂಟಿ' ಹಾಡಿಗೆ ಧ್ವನಿಯಾಗಿದ್ದಾರೆ.
ಹರ್ಷ ನೃತ್ಯ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರದ ತಾಂತ್ರಿಕ ಬಲವಾಗಿದೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೊತೆಗೆ ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, 'ಅಯೋಗ್ಯ 2' ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.