ವಿವಾಹದ ಬಳಿಕ ಪತಿಯ ಮನೆಯಲ್ಲಿ ಮೊದಲ ಯುಗಾದಿ ಹಬ್ಬ ಆಚರಣೆಯ ಸಂಭ್ರಮವನ್ನು ನಟಿ ಪೂಜಾ ಗಾಂಧಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮಿ ವಿಜಯ್ ಘೋರ್ಪಡೆ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪೂಜಾ ಗಾಂಧಿ ತಾವು ಕಾಡಿಗನಹಳ್ಳಿ ಮನೆಯಲ್ಲಿ ಆಚರಿಸಿದ ಯುಗಾದಿ ಸಂಭ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಯಲಹಂಕದಿಂದ 7 ಕಿಲೋಮೀಟರ್ ದೂರದಲ್ಲಿರುವ ಕಾಡಿಗಾನಹಳ್ಳಿಯಲ್ಲಿರುವ ಪತಿಯ ಹಳ್ಳಿ ಮನೆಯಲ್ಲಿ ಕುಟುಂಬಸ್ಥರ ಜೊತೆ ನಟಿ ಯುಗಾದಿ ಆಚರಿಸಿದ್ದಾರೆ. ಇದು ಹೊಸತಾಗಿ ವಿವಾಹವಾದ ಜೋಡಿಯ ಮೊದಲ ಹಬ್ಬವಾಗಿದ್ದು, ನಟಿಯ ಮುಖದಲ್ಲಿ ಈ ಸಂಭ್ರಮ ಕಾಣಬಹುದಾಗಿದೆ.
ಫೋಟೋಗಳಲ್ಲಿ ಮನೆಯ ಸದಸ್ಯರೊಬ್ಬರ ಹುಟ್ಟುಹಬ್ಬ ಆಚರಣೆಯೂ ಇದೆ. ಇದರಲ್ಲಿ ಪೂಜಾ ಗಾಂಧಿ ಪತಿಯೊಂದಿಗೆ ಪೋಸ್ ನೀಡಿದ್ದಾರೆ. ಇದಲ್ಲದೆ, ನಾಯಿಗೆ ಆಹಾರ ತಿನ್ನಿಸುತ್ತಾ, ಎಳನೀರು ಸವಿಯುತ್ತಾ, ಸಾಂಪ್ರದಾಯಿಕ ಸಲ್ವಾರ್ ಕಮೀಜ್ ತೊಟ್ಟು ತೆಂಗಿನ ತೋಟದ ಮಧ್ಯೆ ನಿಂತಿರುವುದನ್ನು, ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವುದನ್ನು ಕಾಣಬಹುದು.
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಅಚ್ಚಕನ್ನಡದಲ್ಲಿ ಬರೆಯಲು, ಓದಲು, ಮಾತಾಡಲು ಕಲಿತಿರುವ ಪೂಜಾ, ತನಗೆ ಕನ್ನಡ ಕಲಿಸಿದ ಉದ್ಯಮಿ ವಿಜಯ್ ಅವರನ್ನೇ ಪ್ರೇಮಿಸಿ, ಮಂತ್ರಮಾಂಗಲ್ಯ ಶೈಲಿಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಬಳಿಕ, ಪತಿಯೊಂದಿಗೆ ಕುಪ್ಪಳ್ಳಿಗೆ ಭೇಟಿ ನೀಡಿದ್ದರು.
ವಿಜಯ್ ಬೆಂಗಳೂರಿನ ಅವಿಕಾಂ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರಾಗಿದ್ದಾರೆ. ಪೂಜಾ ಗಾಂಧಿಯ ಯುಗಾದಿ ಸಂಭ್ರಮ ಅಭಿಮಾನಿಗಳಿಗೂ ಖುಷಿ ತಂದಿದೆ. ಸದಾ ಹೀಗೆ ನಗುನಗುತ್ತಾ ಇರಿ ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ಹಲವರು ಹಾರೈಸಿದ್ದಾರೆ.