ಆಗ ಥಿಯೇಟರ್‌ ಟಾರ್ಚ್‌ ಬಾಯ್‌, ಈಗ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕ: ಯಾರೀತ?

Published : Oct 08, 2026, 08:00 AM IST
Manoj Kumar Director

ಸಾರಾಂಶ

‘ಪ್ರೇಮದ ಊರಲಿ’ ಚಿತ್ರದ ನಿರ್ದೇಶಕ ಮನೋಜ್ ಕುಮಾರ್‌ರ ಬದುಕಿನ ಸ್ಫೂರ್ತಿದಾಯಕ ಕಥೆ ಇದೀಗ ವೈರಲ್ ಆಗಿದೆ. ಒಂದು ಕಾಲದಲ್ಲಿ ಇದೇ ಚಿತ್ರಮಂದಿರಗಳಲ್ಲಿ ಟಾರ್ಚ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ..

ಇದು ಎರಡು ದಿನಗಳ ಹಿಂದಿನ ಸನ್ನಿವೇಶ. ಅದು ನರ್ತಕಿ ಚಿತ್ರಮಂದಿರ. ಥಿಯೇಟರ್‌ ಮುಂದೆ ಹೌಸ್‌ಫುಲ್‌ ಬೋರ್ಡ್‌. ಥಿಯೇಟರ್‌ನ ಬಾಗಿಲು ಮುಂದೆ ಕೂತಿದ್ದ ವ್ಯಕ್ತಿಯಿಂದ ಯುವಕನೊಬ್ಬ ಟಾರ್ಚ್‌ ತೆಗೆದುಕೊಂಡು ಬೆಳಕು ಹರಿಸುತ್ತಾ ತುಂಬಿದ ಥಿಯೇಟರ್‌ಗೆ ಪ್ರವೇಶಿಸುತ್ತಾನೆ. ಹೀಗೆ ಪ್ರವೇಶಿಸುತ್ತಲೇ ಆತ ಭಾವುಕನಾಗುತ್ತಾನೆ. ಇದು ಸೋಷಿಯಲ್‌ ಮೀಡಿಯಾಗಳಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಹೀಗೆ ತುಂಬಿದ ಚಿತ್ರಮಂದಿರದ ಕತ್ತಲಲ್ಲಿ ಟಾರ್ಚ್‌ ಬಿಟ್ಟುಕೊಂಡು ಥಿಯೇಟರ್‌ ಪ್ರವೇಶಿಸಿದ್ದು ‘ಪ್ರೇಮದ ಊರಲಿ’ ಚಿತ್ರದ ನಿರ್ದೇಶಕ ಮನೋಜ್‌ ಕುಮಾರ್‌. ಈ ಬ್ಯಾಟರಿ ಸನ್ನಿವೇಶ ವೈರಲ್‌ ಆಗಲು ‘ಪ್ರೇಮದ ಊರಲಿ’ ಚಿತ್ರದ ಸಕ್ಸಸ್‌ ಕಾರಣ ಎನ್ನುವುದಕ್ಕಿಂತ ನಿರ್ದೇಶಕ ಹಿನ್ನೆಲೆಯೇ ಕಾರಣ ಎಂಬುದು ಬಹುತೇಕರಿಗೆ ಗೊತ್ತಿಲ್ಲ ಅನಿಸುತ್ತದೆ. ಹೌದು, ತಾನು ನಿರ್ದೇಶಿಸಿ ಚಿತ್ರವು ತುಂಬಿದ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಾಗ ಟಾರ್ಚ್‌ ಬಾಯ್‌ನಂತೆ ಎಂಟ್ರಿ ಕೊಟ್ಟ ಮನೋಜ್‌ ಕುಮಾರ್‌ ಅವರಿಗೆ ಚಿತ್ರರಂಗದಲ್ಲಿ ಸಿಕ್ಕ ಮೊದಲ ವೃತ್ತಿ ಅದೇ ಥಿಯೇಟರ್‌ ಟಾರ್ಚ್‌ ಬಾಯ್‌.

ಡಾ ರಾಜ್‌ಕುಮಾರ್‌ ಅವರ ಸ್ಫೂರ್ತಿಯಿಂದ ಹುಟ್ಟಿಕೊಂಡ ಕತೆಯನ್ನುಪ ಒಳಗೊಂಡ ‘ಅಕ್ಷಿ’ ಚಿತ್ರ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದವರು, ದರ್ಶನ್‌, ಮಾಲಾಶ್ರೀ ಅವರ ಚಿತ್ರಗಳಿಗೆ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದವರು, ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಜೊತೆಗೆ ಸಹಾಯಕರಾಗಿದ್ದವರು...ಇದು ಮನೋಜ್‌ ಕುಮಾರ್‌ ಅವರ ಬಗ್ಗೆ ಗೊತ್ತಿರುವ ಮಾಹಿತಿ. ಆದರೆ, ಇದೆಲ್ಲದಕ್ಕೂ ಮೊದಲು ಅವರು ಟಾರ್ಚ್‌ ಬಾಯ್‌ ಆಗಿದ್ದರು ಎಂಬುದು ಕುತೂಹಲ. ಆ ಬಗ್ಗೆ ಅವರ ಮಾತುಗಳಲ್ಲೇ ಕೇಳಿ.

ಟಾರ್ಚ್‌ ಬಾಯ್‌ ಕೆಲಸ

‘ನಾನು ನಿರ್ದೇಶಕನಾಲು ಗಾಂಧಿನಗರಕ್ಕೆ ಬಂದೆ. ಆದರೆ, ಅಷ್ಟು ಬೇಗ ನಿರ್ದೇಶಕನಾಗುವ ಅವಕಾಶ ಸಿಗಲಿಲ್ಲ. ಜೀವನ ನಡೆಯೋದು ಕಷ್ಟ ಆಗಿತ್ತು. ಅಂಥ ಸಮಯದಲ್ಲಿ ನನಗೆ ಚಿತ್ರರಂಗದಲ್ಲಿ ಮೊದಲು ಸಿಕ್ಕ ಕೆಲವೇ ಸಂತೋಷ್‌ ಚಿತ್ರಮಂದಿರದಲ್ಲಿ ಟಾರ್ಚ್‌ ಬಾಯ್‌ ಕೆಲಸ. ನಾನು ಬಹಳಷ್ಟು ಚಿತ್ರಗಳಿಗೆ ಟಾರ್ಚ್‌ ಬಾಯ್‌ ಆಗಿ ಕೆಲಸ ಮಾಡಿದ್ದೇನೆ. ಈ ಪೈಕಿ ನಾನು ಮರೆಯಲಾಗದ ಸಿನಿಮಾ ಎಂದರೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅರಸು’.

ನಾನು ಟಾರ್ಚ್‌ ಬಾಯ್‌ ಆಗಿ ಕೆಲಸ ಮಾಡಿದ್ದ ಸಂತೋಷ್‌ ಥಿಯೇಟರ್‌ ಪಕ್ಕದಲ್ಲೇ ಇರುವ ನರ್ತಕಿ ಚಿತ್ರಮಂದಿರದಲ್ಲಿ ಈಗ ನನ್ನ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ರಾತ್ರಿ ಹೊತ್ತು ಹೌಸ್‌ಫುಲ್‌ ಆದಾಗ ನಮ್ಮನ್ನು ಥಿಯೇಟರ್‌ ಒ‍ಳ‍ಗೆ ಬಿಡುತ್ತಿರಲಿಲ್ಲ. ಪ್ರದರ್ಶನಗಳು ಮುಗಿದ ಮೇಲೆ ಅಲ್ಲೇ ಹಾಸಿಗೆ ಹಾಕಿಕೊಂಡು ಥಿಯೇರ್‌ ಮುಂದೆ ಮಲಗುತಿದ್ವಿ. ಇವತ್ತು ಅದೇ ಥಿಯೇಟರ್‌ ಮುಂದೆ ನನ್ನ ಸಿನಿಮಾ ನೋಡಲು ಜನ ಕಾಯುತ್ತಿದ್ದಾರೆ. ಇದು ನನ್ನ 18 ವರ್ಷಗಳ‍ ಕನಸು. ‘ಪ್ರೇಮದ ಊರಲಿ’ ಚಿತ್ರಕ್ಕೆ ಹಾಗೂ ಈ ಚಿತ್ರವನ್ನು ಗೆಲ್ಲಿಸುತ್ತಿರುವ ಇಡೀ ಕರ್ನಾಟಕಕ್ಕೇ ನಾನು ಋಣಿ’ ಎಂದು ಭಾವುಕರಾಗುತ್ತಾರೆ ಮನೋಜ್‌ ಕುಮಾರ್‌.

17 ಕೋಟಿಗೂ ಹೆಚ್ಚು ಕೆಲೆಕ್ಷನ್‌

ಟಾರ್ಚ್‌ ಬಾಯ್‌ ಆಗಿ ಕೆಲಸ ಮಾಡುತ್ತಾ, ಸಿನಿಮಾ ಕನಸುಗಳನ್ನು ಕಾಣುವ ಜೊತೆಗೆ ಜೀವನಕ್ಕಾಗಿ ದಿನದ ಕೂಲಿಗಾಗಿ ಪರದಾಡುತ್ತಿದ್ದ ಮನೋಜ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪ್ರೇಮದ ಊರಲಿ’ ಚಿತ್ರವು ಈವರೆಗೂ 17 ಕೋಟಿಗೂ ಹೆಚ್ಚು ಕೆಲೆಕ್ಷನ್‌ ಮಾಡಿದೆ. ಇದೇ ಕಲೆಕ್ಷನ್‌ ಮುಂದುವರೆದರೆ 50 ಕೋಟಿಯ ಗಳಿಕೆಯ ಗಡಿ ಮುಟ್ಟೋದು ಪಕ್ಕಾ ಎನ್ನುತ್ತಿದೆ ಚಿತ್ರರಂಗ. ಹಾಗೇನಾದರು ಆದರೆ ಕನ್ನಡ ಚಿತ್ರವೊಂದರ ಬಹುದೊಡ್ಡ ದಾಖಲೆ ಆಗಿ ನಿಲ್ಲುವುದರಲ್ಲಿ ಅನುಮಾನ ಇಲ್ಲ. ಜೊತೆಗೆ ‘50 ಕೋಟಿ ಮುಟ್ಟಿದ ಟಾರ್ಚ್‌ ಬಾಯ್‌ ನಿರ್ದೇಶನದ ಚಿತ್ರ’ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಪ್ರೇಮದ ಊರಲಿ’ ಬಳಿಕ ರಮಿಕಾ ಶಿವುಗೆ ಹೆಚ್ಚಿದ ಬೇಡಿಕೆ: ‘ವಸಂತ’ ಪಾತ್ರಕ್ಕೆ ಭಾರೀ ಮೆಚ್ಚುಗೆ
ಸ್ಕೂಲ್ ಮಕ್ಕಳಿಂದ 'ಪ್ರೇಮದ ಊರಲಿ' ಟೈಟಲ್ ಟ್ರಾಕ್ ಹಾಡಿಸಿದ ಸೀಕ್ರೆಟ್ ಬಿಚ್ಚಿಟ್ಟ ಸುನಾದ್ ಗೌತಮ್!