
ಇತ್ತೀಚೆಗೆ ಬಿಡುಗಡೆಯಾದ ‘ಮದರ್ ಪ್ರಾಮಿಸ್’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ಬಗ್ಗೆ ಮೆಚ್ಚುಗೆಯ ಅಭಿಪ್ರಾಯಗಳು ಹರಿದಾಡುತ್ತಿವೆ. ಆದರೆ, ಇದರ ನಡುವೆ ಕೆಲವರು ಉದ್ದೇಶಪೂರ್ವಕವಾಗಿ ಚಿತ್ರದ ವಿರುದ್ಧ ನೆಗೆಟಿವ್ ಪ್ರಚಾರ ನಡೆಸುತ್ತಿರುವ ಬಗ್ಗೆ ನಟ ಡಾಲಿ ಧನಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಅವರು, "ಜನರು ಸಿನಿಮಾ ನೋಡುವ ಮೊದಲೇ ಅದನ್ನು ವಿಫಲಗೊಳಿಸುವ ಪ್ರಯತ್ನ ನಡೆಯುತ್ತಿರುವುದು ವಿಷಾದನೀಯ. ರೇಟಿಂಗ್‌ಗಳನ್ನು ಬದಲಾಯಿಸಬಹುದು, ಆದರೆ ಪ್ರೇಕ್ಷಕರ ಪ್ರೀತಿ ಮತ್ತು ಭಾವನೆಗಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದ ಧನಂಜಯ್, "ಮೊದಲು ಸಿನಿಮಾ ನೋಡಿ. ನಂತರ ನಿಮ್ಮ ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳಿ. ಅದೇ ನ್ಯಾಯಸಮ್ಮತ ವಿಮರ್ಶೆ," ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ, ಚಿತ್ರದ ಬಗ್ಗೆ ಎಲ್ಲರಿಗೂ ಒಂದೇ ರೀತಿಯ ಅಭಿಪ್ರಾಯ ಇರಬೇಕೆಂಬುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. "ಅನೇಕರಿಗೆ ಸಿನಿಮಾ ಇಷ್ಟವಾಗುತ್ತಿದೆ. ಕೆಲವರಿಗೆ ಇಷ್ಟವಾಗದಿರಬಹುದು. ಪ್ರಾಮಾಣಿಕ ವಿಮರ್ಶೆಗಳನ್ನು ನಾವು ಸದಾ ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸುತ್ತೇವೆ. ಆದರೆ, ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲು ನಡೆಯುವ ದ್ವೇಷಪೂರಿತ ಅಭಿಯಾನ ಚಿತ್ರರಂಗಕ್ಕೆ ಒಳ್ಳೆಯದಲ್ಲ," ಎಂದು ಅವರು ಹೇಳಿದ್ದಾರೆ.
ಇಂತಹ ಘಟನೆಗಳು ಒಂದೇ ಚಿತ್ರದ ಸಮಸ್ಯೆಯಲ್ಲ, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಅನೇಕ ಸಿನಿಮಾಗಳಿಗೂ ಎದುರಾಗುತ್ತಿವೆ ಎಂದು ಧನಂಜಯ್ ಅಭಿಪ್ರಾಯಪಟ್ಟರು. ಇದೇ ಕಾರಣಕ್ಕೆ ಹಲವರು ನ್ಯಾಯಾಲಯದ ಮೊರೆ ಹೋಗಿ ಬುಕ್‌ಮೈಶೋನಲ್ಲಿ ರೇಟಿಂಗ್ ಹಾಗೂ ಕಾಮೆಂಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶ ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ಮತ್ತು ಪ್ರಾಮಾಣಿಕ ವಿಮರ್ಶೆಗಳಿಗೂ ಅವಕಾಶ ಕಡಿಮೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇನ್ನು "ಆರೋಗ್ಯಕರ ವಿಮರ್ಶಾ ಸಂಸ್ಕೃತಿ ಬೆಳೆಸುವುದು ಅಗತ್ಯ. ಉದ್ದೇಶಪೂರ್ವಕ ದ್ವೇಷ ಮತ್ತು ಸುಳ್ಳು ಪ್ರಚಾರಕ್ಕೆ ಅಂತ್ಯ ಬರಬೇಕು," ಎಂದು ಧನಂಜಯ್ ಹೇಳಿದರು.
‘ಮದರ್ ಪ್ರಾಮಿಸ್’ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಾಗಭೂಷಣ್, ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ನಿರ್ದೇಶನದ ಹೊಣೆಗಾರಿಕೆಯನ್ನು ಪೂರ್ಣ ವಹಿಸಿಕೊಂಡಿದ್ದು, ‘ಡೇರ್ ಡೆವಿಲ್ ಮುಸ್ತಾಫ’ ಖ್ಯಾತಿಯ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ರಾಹುಲ್ ರಾಯ್ ಅವರ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಅವರ ಸಂಗೀತ ಚಿತ್ರಕ್ಕಿದೆ. ಡಾಲಿ ಧನಂಜಯ್ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.