
ದಕ್ಷಿಣ ಭಾರತದ ಗಾನಕೋಗಿಲೆ, ಪದ್ಮಭೂಷಣ್ ಎಸ್. ಜಾನಕಿ ಅವರ ನಿಧನದಿಂದ ಸಂಗೀತ ಲೋಕದಲ್ಲಿ ಎಂದಿಗೂ ತುಂಬಲಾರದ ಶೂನ್ಯ ಉಂಟಾಗಿದೆ. 88ನೇ ವಯಸ್ಸಿನಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಜಾನಕಿ ಅಮ್ಮನ ಅಗಲಿಕೆಗೆ ಸಿನಿಮಾ ರಂಗದ ಗಣ್ಯರು, ಸಂಗೀತ ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಜಾನಕಿ ಅಮ್ಮನ ಅಂತಿಮ ದರ್ಶನ ಪಡೆದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ನಟಿ ಜಯಮಾಲಾ ಹಾಗೂ ನಟಿ ತಾರಾ ಭಾವುಕರಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
"ಸೂರ್ಯ-ಚಂದ್ರ ಇರುವ ತನಕ ಜಾನಕಿ ಅಮ್ಮ ಶಾಶ್ವತ": ವಿಜಯ್ ಪ್ರಕಾಶ್
ಗಾಯಕ ವಿಜಯ್ ಪ್ರಕಾಶ್ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಒಂದು ಕಾರ್ಯಕ್ರಮಕ್ಕೆ ಜಾನಕಿ ಅಮ್ಮನವರನ್ನು ಕರೆತರಬೇಕು ಎಂಬ ಆಸೆ ಇತ್ತು. ನಾನು ಅವರ ಹಾಡುಗಳ ಶಿಷ್ಯ. ಅವರ ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದೇನೆ. ಸಾವಿರಾರು ಹಾಡುಗಳಿಗೆ ಜೀವ ತುಂಬಿದ ಆ ಧ್ವನಿ ಇಂದು ಮೌನವಾಗಿರುವುದನ್ನು ನೋಡಲು ಮನಸ್ಸು ಒಪ್ಪುತ್ತಿಲ್ಲ," ಎಂದು ಭಾವುಕರಾದರು.
"ಜಾನಕಿ ಅಮ್ಮ ಎಂದೆಂದಿಗೂ ಶಾಶ್ವತ. ಸೂರ್ಯ ಮತ್ತು ಚಂದ್ರ ಇರುವವರೆಗೂ ಅವರ ಧ್ವನಿ ಜೀವಂತವಾಗಿಯೇ ಇರುತ್ತದೆ. ಯಾರಿಗೂ ನೋವು ಕೊಡದ ಅಪರೂಪದ ವ್ಯಕ್ತಿತ್ವ ಅವರದ್ದು. ಅವರು ಎಷ್ಟೊಂದು ದೊಡ್ಡ ಗಾಯಕಿ ಎಂಬ ಅರಿವೇ ಅವರಿಗೆ ಇರಲಿಲ್ಲ ಎನ್ನುವಷ್ಟು ವಿನಯಶೀಲರಾಗಿದ್ದರು," ಎಂದು ಹೇಳಿದರು.
ಇನ್ನೂ ಮಾತನಾಡಿದ ಅವರು, "ಇತ್ತೀಚೆಗೆ ಅವರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ. ಹಲವು ವರ್ಷಗಳ ಹಿಂದೆ ಭೇಟಿಯಾದಾಗ, 'ಚೆನ್ನಾಗಿ ಹಾಡ್ತೀಯಾ' ಎಂದು ಪ್ರೋತ್ಸಾಹಿಸಿದ್ದರು. ಹೊಸ ಗಾಯಕ-ಗಾಯಕಿಯರ ಹಾಡುಗಳನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸುವ ಅಪರೂಪದ ಗುಣ ಅವರಲ್ಲಿತ್ತು. ಅವರ ಮಾಧುರ್ಯ ಕೇವಲ ಕಂಠದಲ್ಲಷ್ಟೇ ಅಲ್ಲ, ಅವರ ಹೃದಯದಲ್ಲೂ ಇತ್ತು. ಸಂಗೀತ ಕ್ಷೇತ್ರಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ," ಎಂದು ಕಂಬನಿ ಮಿಡಿದರು.
"ಜಾನಕಿ ಅಮ್ಮನ ಹಾಡುಗಳೇ ನಮ್ಮನ್ನು ಜನರಿಗೆ ಪರಿಚಯಿಸಿದವು": ಜಯಮಾಲಾ
ಹಿರಿಯ ನಟಿ ಜಯಮಾಲಾ, "1975ರಲ್ಲಿ 'ಪ್ರೇಮದ ಕಾಣಿಕೆ' ಚಿತ್ರದ ಸಮಯದಿಂದ ಜಾನಕಿ ಅಮ್ಮನವರ ಪರಿಚಯವಿತ್ತು. ಯಾವುದೇ ಹೊಸ ಕಲಾವಿದರನ್ನು ಕಂಡರೂ ಆತ್ಮೀಯವಾಗಿ ಮಾತನಾಡಿಸಿ, ಪ್ರೋತ್ಸಾಹಿಸುತ್ತಿದ್ದರು. ಅವರ ಸರಳತೆ ಮತ್ತು ಪ್ರೀತಿಯೇ ಅವರನ್ನು ಎಲ್ಲರಿಗೂ ಹತ್ತಿರವಾಗಿಸಿತ್ತು," ಎಂದು ನೆನಪಿಸಿಕೊಂಡರು.
"20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವುದು ಸಾಮಾನ್ಯ ಸಾಧನೆಯಲ್ಲ. ಅವರ ಧ್ವನಿಯಿಂದಲೇ ನಮ್ಮಂತಹ ಅನೇಕ ಕಲಾವಿದರು ಜನರಿಗೆ ಪರಿಚಿತರಾದೆವು. ಆದರೆ ಇಂದು ಆ ಮಹಾನ್ ಗಾಯಕಿ ನಮ್ಮನ್ನು ಅಗಲಿರುವುದು ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಭಾವುಕರಾದರು. ಈ ವೇಳೆ ಸರ್ಕಾರಕ್ಕೆ ಮನವಿ ಮಾಡಿದ ಜಯಮಾಲಾ, "ಮೈಸೂರು ವಿಶ್ವವಿದ್ಯಾಲಯದಲ್ಲಿ ಎಸ್. ಜಾನಕಿ ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠವನ್ನು ಆರಂಭಿಸಬೇಕು. ಅದು ಅವರ ಸಾಧನೆಗೆ ಸಲ್ಲುವ ಅತ್ಯುತ್ತಮ ಗೌರವವಾಗಲಿದೆ," ಎಂದು ಆಗ್ರಹಿಸಿದರು.
"ಅವರನ್ನು ಒಮ್ಮೆಯೂ ವೈಯಕ್ತಿಕವಾಗಿ ಭೇಟಿಯಾಗದ ನೋವು ಉಳಿದಿದೆ": ನಟಿ ತಾರಾ
ನಟಿ ತಾರಾ ಕೂಡ ಜಾನಕಿ ಅಮ್ಮನ ಅಗಲಿಕೆಗೆ ಸಂತಾಪ ಸೂಚಿಸಿ, "ಜಾನಕಿ ಅಮ್ಮ ನಮ್ಮ ಕರುನಾಡಿನ ನೆಲದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನು ಹೆಮ್ಮೆಯಾಗಿ ನೋಡಬೇಕೋ, ಅಥವಾ ಅವರನ್ನು ಕಳೆದುಕೊಂಡ ದುಃಖವನ್ನು ಅನುಭವಿಸಬೇಕೋ ಎಂಬ ಭಾವನೆ ಮೂಡುತ್ತಿದೆ," ಎಂದು ಹೇಳಿದರು. 1995ರಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅವರು ಹಾಡಿದ ಯುಗಳಗೀತೆಗಳು ಇಂದಿಗೂ ಜನಮನದಲ್ಲಿ ಜೀವಂತವಾಗಿವೆ.
ನಂತರ ರಾಜ್‌ಕುಮಾರ್ ಅವರ ಅನೇಕ ಚಿತ್ರಗಳಿಗೆ ತಮ್ಮ ಅಮೃತಮಯ ಧ್ವನಿಯನ್ನು ನೀಡಿದ್ದಾರೆ. ಭಾರತದ ಹಲವು ಭಾಷೆಗಳಷ್ಟೇ ಅಲ್ಲ, ಶ್ರೀಲಂಕಾದ ಭಾಷೆಯಲ್ಲಿಯೂ ಹಾಡಿರುವುದು ಅವರ ಅಪರೂಪದ ಸಾಧನೆ ಎಂದು ಸ್ಮರಿಸಿದರು. ಭಾವುಕರಾದ ತಾರಾ, "ನನಗೆ ಇಂದಿಗೂ ಒಂದು ಅಪರಾಧ ಭಾವನೆ ಇದೆ. ಇಷ್ಟು ದೊಡ್ಡ ಕಲಾವಿದೆಯನ್ನು ಒಮ್ಮೆಯೂ ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರ ಹಾಡುಗಳು ಎಂದೆಂದಿಗೂ ನಮ್ಮ ಬದುಕಿನ ಭಾಗವಾಗಿಯೇ ಉಳಿಯುತ್ತವೆ," ಎಂದು ಕಣ್ಣೀರಿಟ್ಟರು.
ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಲೋಕವನ್ನು ತಮ್ಮ ಸುಮಧುರ ಕಂಠದಿಂದ ಶ್ರೀಮಂತಗೊಳಿಸಿದ ಎಸ್. ಜಾನಕಿ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಅಪ್ರತಿಮ ದಾಖಲೆ ನಿರ್ಮಿಸಿದ್ದಾರೆ. ಅವರ ದೇಹ ನಮ್ಮೊಂದಿಗಿಲ್ಲದಿದ್ದರೂ, ಅವರ ಧ್ವನಿ ಸಂಗೀತ ಪ್ರಿಯರ ಹೃದಯಗಳಲ್ಲಿ ಸದಾಕಾಲ ಪ್ರತಿಧ್ವನಿಸುತ್ತಲೇ ಇರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.