Manipur Violence: ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಳೆದ 77 ದಿನಗಳಿಂದ ಗಲಭೆ ನಡೆಯುತ್ತಿದೆ. ಈ ನಡುವೆ ಮಹಿಳೆಯನ್ನು ನಗ್ನವಾಗಿ ಪರೇಡ್ ಮಾಡಿ ಬಳಿಕ ರೇಪ್ ಮಾಡಿದ ಘಟನೆಯ ಕುರಿತು ನಟ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜು.21): ಕೇವಲ ತಾಯಿಯಾಗಿ, ಸಹೋದರಿಯಾಗಿ ಕೊನೆಗೆ ಮಗಳಾಗಿ ಮಾತ್ರವೇ ಮಹಿಳೆಯನ್ನು ರಕ್ಷಣೆ ಮಾಡಬೇಕಿಲ್ಲ. ಮಹಿಳೆಯರು ಕೂಡ ಮನುಷ್ಯರು ಅವರೂ ಕೂಡ ಈ ದೇಶದ ನಾಗರೀಕರು, ಘನತೆಯಿಂದ ಬದುಕುವ, ಭದ್ರತೆಯ ವಿಶ್ವಾಸವಿರುವ ಸಮಾಜವನ್ನು ನಾವು ಕಟ್ಟಿಕೊಡಬೇಕಿದೆ ಅನ್ನೋದು ಮಣಿಪುರದಲ್ಲಿ ಆದ ಘಟನೆಯಿಂದ ದೇಶಕ್ಕೆ ಅರಿವಾಗಿದೆ. ಇಡೀ ದೇಶವೆ ತಲೆತಗ್ಗಿಸುವಂಥ ಘಟನೆಯಲ್ಲಿ ಇಬ್ಬರು ಯುವತಿಯರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡಿದಲ್ಲದೆ, ಅವರ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ ಹೇಯ ಘಟನೆ ನಡೆದಿದೆ. ಎರಡು ತಿಂಗಳ ಹಿಂದಿನ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು ಮಾತ್ರವಲ್ಲದೆ, ವಿಡಿಯೋ ವೈರಲ್ ಆದ ಬಳಿಕವೇ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಮಣಿಪುರ ಗಲಭೆಯ ವಿಚಾರ ಈಗ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು, ಸ್ವತಃ ಪ್ರಧಾನಮಂತ್ರಿ ಗುರುವಾರ ಮಾನ್ಸೂನ್ ಅಧಿವೇಶನ ಆರಂಭವಾಗುವ ಮುನ್ನ, ಇದಕ್ಕೆ ಕಾರಣರಾದ ವ್ಯಕ್ತಿಗಳನ್ನು ಶಿಕ್ಷಿಸದೆ ಸುಮ್ಮನೆ ಬಿಡೋದಿಲ್ಲ ಎಂದು ಅಬ್ಬರಿಸಿದ್ದಾರೆ. ಈ ನಡುವೆ ಇಂಥ ವಿಚಾರಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡುವ ನಟ ಕಿಶೋರ್, ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ನಿಮ್ಮ ಮಾತುಗಳೆಲ್ಲಿ ಎಂದು ಪ್ರಧಾನಿಯನ್ನು ಪ್ರಶ್ನೆ ಮಾಡಿದ್ದಾರೆ.
'ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ ... ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ … ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ..
ಹೌದು, ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ?
ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್ ನ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ???? ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ..ನಿಮ್ಮ ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ….' ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಶೋರ್ ಬರೆದುಕೊಂಡಿದ್ದಾರೆ.
ಮಣಿಪುರದ ರಾಜಧಾನಿಯಾಗಿರುವ ಇಂಫಾಲ್‌ನಿಂದ 35 ಕಿಲೋಮೀಟರ್ ದೂರದಲ್ಲಿರುವ ಕಾಂಗ್ ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಅಮಾನುಷ ಘಟನೆ ನಡೆದಿದೆ. ಪುರುಷರ ಗುಂಪು ಇಬ್ಬರು ಕುಕಿ ಮಹಿಳೆಯರ ಬಟ್ಟೆಯನ್ನು ತೆಗೆದು ಅವರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಅವರ ಖಾಸಗಿ ಅಂಗಗಳನ್ನು ಕೆಟ್ಟದಾಗಿ ಸ್ಪರ್ಶಿಸಿದ್ದಾರೆ. ಬಳಿಕ ಪಕ್ಕದಲ್ಲಿನ ತೋಟದಲ್ಲಿ 21 ವರ್ಷದ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದ್ದು, ಅದಕ್ಕೂ ಮುನ್ನ ಯುವತಿಯರ ಕುಟುಂಬದವರನ್ನು ಕೊಲ್ಲಲಾಗಿದೆ. ಈ ನಡುವೆ ಇವರನ್ನು ಪೊಲೀಸ್ ಸುಪರ್ದಿಯಿಂದಲೇ ಕರೆದುಕೊಂಡು ಹೋಗಲಾಗಿತ್ತು ಎನ್ನಲಾಗಿದೆ.
ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಓರ್ವನ ಬಂಧನ, ಇತರ ಆರೋಪಿಗಳಿಗೆ ಹುಡುಕಾಟ!
ನಾಲ್ವರ ಬಂಧನ: ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಆಕ್ರೋಶ ಹೆಚ್ಚಾಗಿತ್ತು. ಸ್ವತಃ ಪ್ರಧಾನಿ ಕೂಡ ಕ್ರಮಕ್ಕೆ ಆಗ್ರಹಿಸಿದ್ದರಿಂದ ಪೊಲೀಸರು ಗುರುವಾರವೇ ಒಬ್ಬ ವ್ಯಕ್ತಿಯನ್ನು ಬಂಧಿಸಿದಿದ್ದರು. ಶುಕ್ರವಾರ ಮತ್ತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ಎಲ್ಲರನ್ನೂ 11 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.