
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಕುತೂಹಲಕಾರಿ ಕಾಂಬಿನೇಷನ್ ಸಿದ್ಧವಾಗಿದೆ. ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾದ ಚಿತ್ರೀಕರಣ ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಶೇಷವೆಂದರೆ, ಯಾವುದೇ ಸದ್ದು-ಸುದ್ದಿಯಿಲ್ಲದೆ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಇದೀಗ ಸಿನಿಮಾದ ಮತ್ತೊಂದು ಪ್ರಮುಖ ಅಪ್‌ಡೇಟ್ ಅನ್ನು ಬಹಿರಂಗಪಡಿಸಿದೆ.
ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಅಪರ್ಣಾ ದಾಸ್ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಸಿನಿಮಾದಲ್ಲಿ ಪ್ರತಿಭಾವಂತ ನಟ ಪೃಥ್ವಿ ಅಂಬಾರ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಾಯಕ ಮನೋರಂಜನ್ ರವಿಚಂದ್ರನ್ ಮತ್ತು ಪೃಥ್ವಿ ಅಂಬಾರ್ ನಡುವಿನ ಮುಖಾಮುಖಿ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಸಿನಿಪ್ರಿಯರಲ್ಲಿ ಮೂಡಿದೆ.
ಹುಟ್ಟುಹಬ್ಬದಂದೇ ನಾಯಕಿಯ ಕನ್ನಡ ಎಂಟ್ರಿ ಅನೌನ್ಸ್
ಇಂದು ಸೆಪ್ಟೆಂಬರ್ 10ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಪರ್ಣಾ ದಾಸ್ ಅವರಿಗೆ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರತಂಡ ವಿಶೇಷವಾಗಿ ಶುಭಾಶಯ ಕೋರಿದೆ. ಇದೇ ಸಂದರ್ಭದಲ್ಲಿ ಅವರ ಕನ್ನಡದ ಚೊಚ್ಚಲ ಸಿನಿಮಾದ ಮಾಹಿತಿಯನ್ನೂ ಅಧಿಕೃತವಾಗಿ ಹಂಚಿಕೊಂಡಿದೆ.
ಕೇರಳದ ಪಾಲಕ್ಕಾಡ್ ಮೂಲದ ಅಪರ್ಣಾ ದಾಸ್, ತಮಿಳಿನಲ್ಲಿ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರದ ಮೂಲಕ ಗಮನಸೆಳೆದಿದ್ದರು. ಬಳಿಕ ಕವಿನ್ ಜೊತೆಗಿನ ‘ಡಾಡ’ ಸಿನಿಮಾದಲ್ಲಿನ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದ್ದರು. ‘ವದಂತಿ’ ವೆಬ್ ಸರಣಿಯಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿರುವ ಅಪರ್ಣಾ, ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಜರ್ನಿ ಆರಂಭಿಸಿದ್ದಾರೆ.
55 ದಿನಗಳ ಕಾಲ ಅದ್ಧೂರಿ ಚಿತ್ರೀಕರಣ
‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾವನ್ನು ಎಸ್.ವಿ. ನಾರಾಯಣ್ ಹಾಗೂ ಎಸ್.ವಿ. ಕೃಷ್ಣಮೂರ್ತಿ ತಮ್ಮ ‘ಎಸ್.ವಿ. ಎಂಟರ್‌ಟೈನ್‌ಮೆಂಟ್’ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ. ‘ಅಟೆಂಪ್ಟ್ ಟು ಮರ್ಡರ್’ ಹಾಗೂ ‘ರಂಗನಾಯಕಿ’ಯಂತಹ ವಿಭಿನ್ನ ಸಿನಿಮಾಗಳನ್ನು ನಿರ್ಮಿಸಿರುವ ಸಂಸ್ಥೆಗೆ ಇದು ನಾಲ್ಕನೇ ಸಿನಿಮಾ. ಸುನೀಲ್ ರುದ್ರಪ್ರಭಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಎಸ್. ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಖ್ಯಾತ ಸಂಕಲನಕಾರ ಕೆ.ಎಂ. ಪ್ರಕಾಶ್ ಎಡಿಟಿಂಗ್ ಮಾಡುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಮೇಲುಕೋಟೆ, ದೊಡ್ಡಬಳ್ಳಾಪುರ, ಗದಗ, ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಮುತ್ತಲಿನ ಹಲವು ಸುಂದರ ತಾಣಗಳಲ್ಲಿ ಬರೋಬ್ಬರಿ 55 ದಿನಗಳ ಕಾಲ ಸಿನಿಮಾದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು, ಸಿದ್ಲಿಂಗು ಶ್ರೀಧರ್, ದೀಕ್ಷಿತ್ ಗೌಡ, ಮನಮೋಹನ್ ರೈ ಹಾಗೂ ದಶಾವರ ಚಂದ್ರು ಸೇರಿದಂತೆ ಹಲವು ಹಿರಿಯ ಹಾಗೂ ಯುವ ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರೀಕರಣ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಶೀಘ್ರದಲ್ಲೇ ಸಿನಿಮಾದ ಮುಂದಿನ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದ್ದು, ಅಪರ್ಣಾ ದಾಸ್ ಅವರ ಕನ್ನಡದ ಮೊದಲ ಸಿನಿಮಾ ಹಾಗೂ ಮನೋರಂಜನ್-ಪೃಥ್ವಿ ಅಂಬಾರ್ ಮುಖಾಮುಖಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.