ಲಾಯರ್ ಜಗದೀಶ್ ದರ್ಶನ್ ವಿರುದ್ಧ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು, ಅದರಲ್ಲಿ ಕೋರ್ಟ್ ದಿಕ್ಕು ತಪ್ಪಿಸಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋದಲ್ಲಿ ಹೇಳಿದ್ದೇನು?
ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ನಟ ದರ್ಶನ್ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ದರ್ಶನ್ ಅವರನ್ನು ಬೈಯುತ್ತಲೇ ಫೇಮಸ್ ಆದವರು ಜಗದೀಶ್. ಇದೇ ಕಾರಣಕ್ಕೆ ಜಗದೀಶ್ ಮತ್ತು ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಅಷ್ಟಕ್ಕೂ ಈಗ ದರ್ಶನ್ ವಿರುದ್ಧ ಇನ್ನೊಂದು ವಿಡಿಯೋ ಶೇರ್ ಮಾಡಿರುವ ಲಾಯರ್ ಜಗದೀಶ್ ಅವರಿಗೆ ದರ್ಶನ್ ಆಪರೇಷನ್ ಚಿಂತೆ ಶುರುವಾಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಜೈಲು ಸೇರಿದ್ದರು. ಜೈಲಿನಲ್ಲಿ ತಿಂಗಳು ಕಳೆಯುತ್ತಾ ಹೋಗುತ್ತಿತ್ತು. ಆದರೆ ಹೊರ ಬರು ಸಾಧ್ಯತೆಗಳು ಕಂಡಿರಲಿಲ್ಲ. ಜಾಮೀನು ಅರ್ಜಿ ಮುಂದೂಡುತ್ತಲೇ ಇದ್ದಾಗ ದರ್ಶನ್ ಆರೋಗ್ಯದಲ್ಲಿ ಏರುಪೇರು ಕಂಡು ಬಂತು. ಬೆನ್ನು ನೋವು ಹೆಚ್ಚಾಗಿ ಸರ್ಜರಿ ಮಾಡುವ ಹಂತಕ್ಕೆ ಹೋಗಿತ್ತು. ಹೀಗಾಗಿ ಕೋರ್ಟ್ ದರ್ಶನ್ ಅವರಿಗೆ 6 ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಿದೆ.
ಚಿಕಿತ್ಸೆಗೆಂದು ಒಂದೆರಡು ದಿನ ಆಸ್ಪತ್ರೆ ಕಡೆ ಮುಖ ಮಾಡಿದ ದರ್ಶನ್ ಸರ್ಜರಿ ಯಾಕೆ ಮಾಡಿಸಿಕೊಂಡಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ನಡುವೆಯೇ, ಇದೇ ಪ್ರಶ್ನೆಯನ್ನು ಲಾಯರ್ ಜಗದೀಶ್ ಈಗ ವಿಡಿಯೋ ಮೂಲಕ ಕೇಳಿದ್ದಾರೆ. ಅವರ ಮಾತಲ್ಲೇ ಹೇಳುವುದಾದರೆ, ದರ್ಶನ್ ಅವರ ಲಾಯರ್ ಹೇಳಿದ್ದು, ಅವರ ಎಲ್5 ಯಾವುದೋ ಮೂಳೆಗೆ ಹೆಚ್ಚು-ಕಡಿಮೆ ಆಗಿದೆ. ಅದನ್ನೇನಾದ್ರೂ ಟ್ರೀಟ್ ಮಾಡದಿದ್ರೆ ತೊಂದರೆ ಆಗತ್ತೆ. ವಕೀಲರು ಏನಾದ್ರೂ ಕೋರ್ಟ್ಗೆ ಮಿಸ್ಗೈಡ್ ಮಾಡಿದ್ರೋ ಹೇಗೆ? ಲಕ್ಷ ಹೊಡೀತದೆ ಎಂದಿದ್ರು, ಈಗ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಅವರನ್ನು ಹೊರಗಡೆ ಕರೆದುಕೊಂಡು ಬರಲು ಕೋರ್ಟ್ ಅನ್ನು ಏನಾದ್ರೂ ಮಿಸ್ಗೈಡ್ ಮಾಡಿದ್ರಾ ಎದು ಪ್ರಶ್ನಿಸಿದ್ದಾರೆ.
ದರ್ಶನ್ ಈಗ ಇಲ್ಲೇ ಮಲಗಿದ್ದಾನೆ. ಜೈಲಲ್ಲೂ ಮಲಗ್ತಿದ್ದ. ಲಕ್ವ ಅಂತ ಏಕೆ ಹೇಳಬೇಕಿತ್ತು? ಲಕ್ವದ ಹೆಸರಿನಲ್ಲಿ ದರ್ಶನ್ ಕೋರ್ಟ್ ದಿಕ್ಕು ತಪ್ಪಿಸಿದ್ನಾ? ಕೋರ್ಟ್ಗೆ ಸುಳ್ಳು ಹೇಳಿ ಈ ಚೆಲ್ಲಾಟ ಆಡುವ ಅವಶ್ಯಕತೆ ಇದ್ಯಾ ಎಂದು ಲಾಯರ್ ಜಗದೀಶ್ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿ ಚಾವಡಿ ಈ ವಿಡಿಯೋ ಶೇರ್ ಮಾಡಿಕೊಂಡಿದೆ. ವಿಡಿಯೋಗೆ ಪರ- ವಿರೋಧಗಳ ಕಮೆಂಟ್ ಸುರಿಮಳೆಯಾಗುತ್ತಿದೆ. ದರ್ಶನ್ ಫ್ಯಾನ್ಸ್ ಜಗದೀಶ್ ವಿರುದ್ಧ ಮತ್ತೆ ಗರಂ ಆಗಿದ್ರೆ, ಜಗದೀಶ್ ಫ್ಯಾನ್ಸ್ ನೀವು ಹೇಳ್ತಿರೋದು ಸರಿಯಿದೆ. ನಮಗೂ ಇದೇ ಪ್ರಶ್ನೆ ಕಾಡ್ತಿದೆ ಎಂದಿದ್ದಾರೆ.
ಇನ್ನು ದರ್ಶನ್ ಮತ್ತು ಜಗದೀಶ್ ಅವರ ಗಲಾಟೆ ವಿಷಯದ ಕುರಿತು ಹೇಳುವುದಾದರೆ, ದರ್ಶನ್ ವಿರುದ್ಧ ಜಗದೀಶ್ ಅವರು ಹೇಳಿಕೆ ನೀಡಿದ್ದರಿಂದ ದರ್ಶನ್ ಅವರ ಅಭಿಮಾನಿಗಳು ಜಗದೀಶ್ ವಿರುದ್ಧ ಕೆಲವೊಂದು ಕೆಟ್ಟ ಶಬ್ದಗಳನ್ನು ಬಳಸಿ ಟೀಕೆ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಗದೀಶ್ ಅವರು ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ದೂರು ದಾಖಲಿಸಿದ್ದಾರೆ. ದರ್ಶನ್ ಅಭಿಮಾನಿಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ 2 ದಿನಗಳಲ್ಲಿ ಸಾವಿರಕ್ಕೂ ಅಧಿಕ ಸಲ ಬೆದರಿಕೆ ಕರೆಗಳು ಬಂದಿವೆ. ದರ್ಶನ್ ಅಭಿಮಾನಿ ರಿಷಿ ಎಂಬಾತ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಕಾರಣ ಸದ್ಯ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಸೂಚನೆ ಕಾರಣ. ದರ್ಶನ್ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದು, ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ನಮಗೆ ರಕ್ಷಣೆ ಕೊಡುವ ಜೊತೆಗೆ ದರ್ಶನ್ ಹಾಗೂ ರಿಷಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.