ರಾಗಿಣಿ ಮತ್ತು ಇತರ ಅಮಲಿನ ಕತೆಗಳು!ಮದ್ಯ ಹಳೇದು, ಮದ್ದು ಹೊಸದು

By Kannadaprabha News  |  First Published Sep 6, 2020, 11:55 AM IST

ಪೇಜ್‌ ಥ್ರೀ ಪಾರ್ಟಿ ನಟಿಯರೆಂದೇ ಹೆಸರಾದ ಕೆಲವರು ಸಿನಿಮಾ ಪಾರ್ಟಿಗಳಿಂದಾಚೆಗೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಕಾರ್ಪೊರೆಟ್‌, ಪೊಲಿಟಿಕಲ್‌, ಬಿಸಿನೆಸ್‌ ಮತ್ತು ತಮಗೆ ಸಂಬಂಧವಿಲ್ಲದ ಬರ್ತ‚ಡೇ ಪಾರ್ಟಿಗಳಲ್ಲೂ ಅವರು ಮಿಂಚತೊಡಗಿದರು.


ಜೋಗಿ

ಯಶಸ್ಸಿಗಿಂತ ದೊಡ್ಡ ಅಮಲು ಮತ್ತೊಂದಿಲ್ಲ. ಚಪ್ಪಾಳೆಗಿಂತ ದೊಡ್ಡ ಮತ್ತು ಬೇರೊಂದಿಲ್ಲ. ಆದರೂ ಯಾಕೆ ಡ್ರಗ್‌ ತಗೋತಾರೆ ಇವರೆಲ್ಲ? ಸುಮ್ನೆ ಅವರವರ ಕೆಲಸ ಮಾಡ್ಕೊಂಡಿರೋದಕ್ಕೇನು ಪ್ರಾಬ್ಲೆಮ್ಮು. ಸುಮ್ನೆ ಚಿತ್ರರಂಗದ ಮರ್ಯಾದೆ ತೆಗೀತಾರೆ. ಮೊದಲೇ ನಾವು ಗಾಜಿನ ಮನೇಲಿದ್ದೀವಿ. ಯಾರು ಬೇಕಾದರೂ ಕಲ್ಲು ಹೊಡೀಬಹುದು. ಸಿನಿಮಾ ಮಾಡೋರು ಅಂದ್ರೆ ನೈತಿಕತೆ ಇಲ್ಲದವರು ಅಂತ ಅರ್ಧಕ್ಕರ್ಧ ಮಂದಿ ತಿಳ್ಕಂಡಿದ್ದಾರೆ. ಅದರ ಮಧ್ಯೆ ಇದು ಬೇರೆ. ಜನರಿಗಂತೂ ನಮ್ಮ ಬಗ್ಗೆ ಸಿಂಪತೀನೇ ಇಲ್ಲ. ಇನ್‌ಕಮ್‌ ಟ್ಯಾಕ್ಸ್‌ ರೇಡ್‌ ಆದ್ರೂ ಸಂತೋಷಪಡ್ತಾರೆ, ಹನಿಟ್ರಾಪ್‌ ಕೇಸಲ್ಲಿ ಸಿಕ್ಕಾಕ್ಕೊಂಡ್ರೂ ಖುಷಿಪಡ್ತಾರೆ, ಗಂಡ ಹೆಂಡ್ತಿ ಬೇರೆ ಆದ್ರೂ ಎಂಜಾಯ್‌ ಮಾಡ್ತಾರೆ. ನಾವೇ ಬೇಕಾ ಕಾಂಟ್ರವರ್ಸಿಗೆ..!

Latest Videos

undefined

ದೊಡ್ಡ ಯಶಸ್ಸನ್ನೇ ಕಂಡಿರುವ ನಟರೊಬ್ಬರು ಬೇಸರದಿಂದ ಹೇಳಿಕೊಂಡದ್ದು ಇಷ್ಟು. ಬೇರೇನೂ ಮಾತಾಡುವ ಹುಮ್ಮಸ್ಸು ಅವರಿಗೆ ಇರಲಿಲ್ಲ. ಪದೇ ಪದೇ ಸಿನಿಮಾದವರೇ ಟಾರ್ಗೆಟ್‌ ಆಗುವ ಬಗ್ಗೆ ಅವರಿಗೆ ನೋವಿತ್ತು. ಅಂಥ ದುರ್ದೆಸೆಯನ್ನು ಸಿನಿಮಾದ ಮಂದಿ ತಾವಾಗಿಯೇ ಆವಾಹಿಸಿಕೊಳ್ಳುತ್ತಾರೆ ಅನ್ನುವ ಕುರಿತು ಸಿಟ್ಟೂಇತ್ತು.

ನಾವು ಜನಪ್ರಿಯರಾಗುತ್ತಾ ಹೋದ ಹಾಗೆ ಜವಾಬ್ದಾರಿಯೂ ಹೆಚ್ಚಾಗುತ್ತೆ. ಎತ್ತರದಲ್ಲಿ ನಿಂತವನಿಗೆ ತನ್ನನ್ನು ಎತ್ತಿ ಹಿಡಿದವರು ಯಾರು ಅನ್ನುವುದು ಗೊತ್ತಿರಬೇಕು. ಯಾರ ಹೆಗಲ ಮೇಲೆ ನಿಂತಿದ್ದೇನೆ ಅನ್ನುವುದರ ಅರಿವೂ ಇರಬೇಕು. ಅವರೆಲ್ಲ ಎತ್ತಿ ಹಿಡಿದದ್ದರಿಂದ ಎತ್ತರದಲ್ಲಿದ್ದೇನೆ ಅನ್ನುವುದು ಗೊತ್ತಿದ್ದರೆ, ಅವರು ಯಾವಾಗ ಬೇಕಿದ್ದರೂ ಕೆಳಗೆ ತಳ್ಳಬಹುದು ಅನ್ನುವ ಭಯವೂ ಇರುತ್ತದೆ. ಆಗ ನಾವು ಎಚ್ಚರಿಕೆಯಿಂದ ನಡೆಯುತ್ತೇವೆ. ನಮ್ಮ ಹಿರಿಯ ಕಲಾವಿದರಿಗೆ ಆ ಎಚ್ಚರ ಇತ್ತು. ಅವರಿಂದ ನಾವೂ ಅದನ್ನು ಬಳುವಳಿಯಾಗಿ ಪಡೆದಿದ್ದೇವೆ. ಅದು ಅವರವರ ಸಂಸ್ಕಾರ, ಸಂಸ್ಕೃತಿ. ಯಾರೂ ಇಲ್ಲಿ ಮತ್ತೊಬ್ಬರಿಗೆ ಹೇಳುವ ಸ್ಥಿತಿಯಲ್ಲಿಲ್ಲ.

ಮೊದಲು ಗಾಂಜಾ, ಬಳಿಕ ಎಂಡಿಎಂಎ: ಹೌದು, ನಾನು ಡ್ರಗ್ಗಿಣಿ: ನಟಿ ರಾಗಿಣಿ ತಪ್ಪೊಪ್ಪಿಗೆ!

ಅಷ್ಟುಹೇಳಿ ಅವರು ಮಾತು ಮುಗಿಸಿದರು. ಅಷ್ಟುಹೊತ್ತಿಗೆ ರಾಗಿಣಿ ಬಂಧನದ ಸುದ್ದಿ ಟೆಲಿವಿಷನ್ನಿನಲ್ಲಿ ಬ್ರೇಕಿಂಗ್‌ ನ್ಯೂಸ್‌ ಆಗಿ ಹೊರಹೊಮ್ಮಿಯಾಗಿತ್ತು. ರಾಗಿಣಿ ಬಂಧನಕ್ಕೆ ಒಳಗಾದ ಮೇಲೂ ಅಭಿಮಾನಿಗಳತ್ತ ಅಭಿಮಾನದಿಂದ ಕೈ ಬೀಸಿ ಬಂಧಿಸುವವರು ಮೂರು ಮಂದಿ, ಬಿಡಿಸುವವರು ನೂರು ಮಂದಿ ಎಂಬ ಆತ್ಮವಿಶ್ವಾಸದಲ್ಲಿ ಒಳಗೆ ನಡೆಯುವುದು ತೆರೆಯ ಮೇಲೆ ಕಾಣಿಸುತ್ತಿತ್ತು.

"

ಗಾಂಧೀನಗರಕ್ಕೆ ವಿವಾದಗಳು ಹೊಸತೇನಲ್ಲ. ನಿಂದನೆ, ಅಪನಿಂದೆ, ಸೋಲು, ಹತಾಶೆ, ಸಾವು, ನೋವುಗಳನ್ನು ಕನ್ನಡ ಚಿತ್ರರಂಗ ಕಾಣುತ್ತಲೇ ಬಂದಿದೆ. ಬಾಲಿವುಡ್‌ನಷ್ಟುಘಾಸಿಗೊಳ್ಳದೇ ಹೋದರೂ ತರಚಿದ ಗಾಯಗಳನ್ನು ಮಾಡಿಕೊಂಡಿದೆ. ಕೆಲವೊಮ್ಮೆ ಕೊಳಕು ಬಟ್ಟೆಯನ್ನು ತುಂಬಿದ ರಸ್ತೆಯ ನಡುವಲ್ಲಿ ಒಗೆಯುವ ಕೆಲಸವನ್ನೂ ಮಾಡಿದೆ. ಆದರೆ ಡ್ರಗ್‌ ವಿವಾದಕ್ಕೆ ಸಿಕ್ಕಿಹಾಕಿಕೊಂಡದ್ದು ಇದೇ ಮೊದಲು.

ಮದ್ಯ ಹಳೇದು, ಮದ್ದು ಹೊಸದು

ಗಾಂಧೀನಗರಕ್ಕೂ ಮದ್ಯಕ್ಕೂ ಹಳೇ ನಂಟು. ಒಂದು ಕಾಲದಲ್ಲಿ ಸಿನಿಮಾ ಪಾರ್ಟಿಗಳಷ್ಟೇ ಅಲ್ಲ, ಸಿನಿಮಾ ಪತ್ರಿಕಾಗೋಷ್ಠಿಗಳೂ ಮದ್ಯದಲ್ಲಿ ತೋಯುತ್ತಿದ್ದವು. ಪತ್ರಿಕಾಗೋಷ್ಠಿಗಳೇ ಪಾರ್ಟಿಗಳಾಗಿ ಬದಲಾಗುತ್ತಿದ್ದವು. ಮಿಕ್ಕಂತೆ ಬೇರೆ ಪಾರ್ಟಿ ಸಂಸ್ಕೃತಿ ಕನ್ನಡದಲ್ಲಿ ಇರಲೇ ಇಲ್ಲ. ಬಹುಶಃ ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ಆರಂಭವಾದ ಸಿನಿಮಾ ಪಾರ್ಟಿಗಳು 2010ರ ತನಕವೂ ಜಾರಿಯಲ್ಲಿದ್ದವು. ಪತ್ರಿಕಾಗೋಷ್ಠಿಯ ನಂತರ ಉಳಿದ ವಿವರಗಳಿಗಾಗಿ ಪತ್ರಕರ್ತರೂ ನಟರೂ ನಟಿಯರೂ ತಂತ್ರಜ್ಞರೂ ಒಂದಾಗಿ ತೀರ್ಥರೂಪಿಗಳಾಗಿ ಬದಲಾಗುತ್ತಿದ್ದರು. ಸತ್ಯಗಳು ಬಯಲಾಗುತ್ತಿದ್ದವು. ಗುಟ್ಟುಗಳು ಹೊರಬರುತ್ತಿದ್ದವು. ಮಾಹಿತಿಗಳು ವಿನಿಮಯಗೊಳ್ಳುತ್ತಿದ್ದವು. ಕಾವೇರಿದ ಕ್ಷಣಗಳಲ್ಲಿ ಹೊಸ ಜಗಳಗಳು ಹುಟ್ಟಿಸಾಯುತ್ತಿದ್ದವು. ಹಳೇ ಜಗಳಗಳು ಇತ್ಯರ್ಥ ಆಗುತ್ತಿದ್ದವು.

ಮದ್ಯದಾಚೆಗೂ ಒಂದು ಕಡು ಅಮಲಿನ ಜಗತ್ತಿದೆ ಅನ್ನುವುದು ಗಾಂಧೀನಗರಕ್ಕೆ ಗೊತ್ತಿರಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮದ್ಯವೂ ಕೂಡ ದಿನನಿತ್ಯದ ಸೌಭಾಗ್ಯವೂ ಆಗಿರಲಿಲ್ಲ. ಮುಹೂರ್ತದ ದಿನ, ಶೂಟಿಂಗ್‌ ಮುಗಿದ ದಿನ, ಬಿಡುಗಡೆಯ ದಿನ- ಎಂದು ಅದಕ್ಕೊಂದು ಲೆಕ್ಕಾಚಾರ ಇರುತ್ತಿತ್ತು.

ಈ ಪಾರ್ಟಿ ಸಂಸ್ಕೃತಿ ಗಾಂಧೀನಗರಕ್ಕಿರಲಿಲ್ಲ ಅನ್ನುವುದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಸಿನಿಮಾ ಕಲಾವಿದರಿಗಾಗಿಯೇ ಒಂದು ಕ್ಲಬ್‌ ಇಲ್ಲ. ಕ್ರಿಕೆಟ್‌, ಬ್ಯಾಡ್ಮಿಂಟನ್‌, ಆರ್ಮಿ, ಟೆನಿಸ್‌, ಗಾಲ್‌್ಫ ಆಟಗಾರರ ಕ್ಲಬ್ಬುಗಳ ಹಾಗೆ, ಸರ್ಕಾರಿ ನೌಕರರ ಕ್ಲಬ್‌ ಥರ, ಬಡಾವಣೆಗೊಂದು ಇರುವ ಕ್ಲಬ್ಬಿನಂತೆ, ಟೆಲಿವಿಷನ್‌ ಕಲಾವಿದರ ಕ್ಲಬ್‌ ಥರ ಸಿನಿಮಾ ಮಂದಿ ಸೇರುವಂಥ ಒಂದು ಕ್ಲಬ್‌ ಕಟ್ಟುವ ಆಸಕ್ತಿಯೇ ಗಾಂಧಿನಗರಕ್ಕೆ ಇರಲಿಲ್ಲ.

ಡ್ರಗ್ ಮಾಫಿಯಾ ಬಗ್ಗೆ ನಟಿ ಸಂಜನಾ ತೆರೆದಿಟ್ಟ ಸತ್ಯಗಳು ಫುಲ್ ವೈರಲ್?

ಇದು ಹೊಸ ಜಮಾನ!

ಇದೆಲ್ಲ ಹೊಸಬರ ಕಾರುಬಾರು ಅಂತ ಇವತ್ತು ಚಿತ್ರರಂಗ ಗುಟ್ಟಾಗಿಯೂ ಬಹಿರಂಗವಾಗಿಯೂ ಹೇಳುತ್ತಿರುವುದು ಪೂರ್ತಿ ಸುಳ್ಳಲ್ಲ. ಮೊದಲ ತಲೆಮಾರಿನ ಕಲಾವಿದರು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌, ಶ್ರೀನಾಥ್‌ ಅಂದುಕೊಂಡರೆ, ನಂತರದ ತಲೆಮಾರಿನಲ್ಲಿ ಶಿವರಾಜ್‌ಕುಮಾರ್‌, ಉಪೇಂದ್ರ, ಸುದೀಪ್‌, ದರ್ಶನ್‌, ಪುನೀತ್‌, ಯಶ್‌, ಗಣೇಶ್‌ ಮುಂತಾದವರು ಬರುತ್ತಾರೆ ಎನ್ನುವುದಾದರೆ ಆ ನಂತರದ ತಲೆಮಾರಿನ ನಟನಟಿಯರ ಪಾಲಿಗೆ ಯಶಸ್ಸಿನ ಅಮಲು ಅಷ್ಟಾಗಿ ಏರಲಿಲ್ಲ. ಬೇರೆ ಅಮಲಿಗೆ ಕೊರತೆಯೂ ಇರಲಿಲ್ಲ. ಮಾದಕ ದ್ರವ್ಯ ಚಿತ್ರರಂಗಕ್ಕೆ ಕಾಲಿಟ್ಟದ್ದೇ ಆಗ.

ಕಳೆದೆರಡು ದಶಕಗಳ ಹಿಂದೆ ಪೇಜ್‌-ಥ್ರೀ ಪಾರ್ಟಿಗಳು ಆರಂಭವಾದವು. ಅದನ್ನು ಮೊದಲು ಆರಂಭಿಸಿದ್ದು ಇಂದ್ರಜಿತ್‌ ಲಂಕೇಶರಂಥ ‘ಎಲೀಟ್‌’ ನಿರ್ದೇಶಕರು. ಗಾಂಧೀನಗರದ ಹೋಟೆಲುಗಳಿಂದ ಪಾರ್ಟಿ ಎಂಜಿ ರಸ್ತೆಯ ಝಗಮಗ ಲೈಟುಗಳ ಗ್ಲಾಮರ್‌ಫುಲ್‌ ಜಗತ್ತಿಗೆ ವರ್ಗವಾಯಿತು. ಚಿತ್ರಕ್ಕೆ ಸಂಬಂಧಪಡದ ಬೆಡಗಿಯರು ಪಾರ್ಟಿಗಳನ್ನು ರಂಗುಗೊಳಿಸುವುದಕ್ಕೆ ಚಂದಗಾಣಿಸುವುದಕ್ಕೆ ಚಿಯರ್‌ ಗಲ್‌ರ್‍್ಸ ಥರ ಬರತೊಡಗಿದರು. ಪಾರ್ಟಿಗಳಲ್ಲಿ ರಾರ‍ಯಂಪ್‌ ವಾಕ್‌ ಆರಂಭವಾಯಿತು. ಕ್ರಮೇಣ ಪ್ರೈವೇಟ್‌ ಪಾರ್ಟಿಗಳು ಆರಂಭವಾದವು. ರೇವ್‌ ಪಾರ್ಟಿಗಳು ಏರ್ಪಾಡಾದವು. ಕಾರ್‌ಪಾರ್ಟಿಗಳು ಶುರುವಾದವು. ಪಂಚತಾರಾ ಹೋಟೆಲುಗಳ ಹಿಂಬಾಗಿಲಿನಿಂದ ಪಾರ್ಟಿ ಡ್ರೆಸ್‌ ತೊಟ್ಟಬೆಡಗಿಯರ ಬೆಟಾಲಿಯನ್‌ ಸದ್ದಿಲ್ಲದೇ ಪಾರ್ಟಿಯೊಳಗೆ ಬಂದು ರಾರಾಜಿಸುವುದು ಶುರುವಾಯಿತು. ಇವರೆಲ್ಲ ಎಲ್ಲಿದ್ರು ಅಂತ ಕಂಗಾಲಾಗುವ ಮಟ್ಟಿಗೆ ಪೇಜ್‌ಥ್ರೀ ಪಾರ್ಟಿಗಳು ಕಣ್ಣುಕುಕ್ಕತೊಡಗಿದವು.

ನಾವೇ ಬೇರೆ, ನಮ್ಮ ಖದರೇ ಬೇರೆ!

ಆರಂಭದಲ್ಲಿ ಪರಭಾಷೆಯಿಂದ ಕನ್ನಡಕ್ಕೆ ಬರುತ್ತಿದ್ದ ಕಲಾವಿದೆಯರು ಹೀಗೆ ಬಂದು ಹಾಗೆ ಹೋಗುತ್ತಿದ್ದರು. ಎಪ್ಪತ್ತು ಎಂಬತ್ತರ ದಶಕದಲ್ಲಿ ಕನ್ನಡಕ್ಕೆ ಬಂದ ಯಾವ ನಾಯಕಿಯೂ ಇಲ್ಲೇ ಮನೆ ಮಾಡಿದ ಉದಾಹರಣೆ ಇಲ್ಲ. ಆದರೆ ಕಳೆದ ಎರಡು ದಶಕಗಳಿಂದ ಪರಭಾಷೆಗಳಿಂದ ಬಂದವರು ಇಲ್ಲೇ ಉಳಿಯತೊಡಗಿದರು. ಇಲ್ಲೇ ಮನೆ ಮಾಡಿದರು. ಇಲ್ಲೇ ತಮ್ಮ ಕಾರ್ಯಾಚರಣೆ ಆರಂಭಿಸಿದರು. ಮುಂಗಾರು ಮಳೆಯ ಹಾಗೆ ಬಂದ ಪರಭಾಷಾ ನಟಿಯರೆಲ್ಲ ಇಲ್ಲಿನ ಕಲಾವಿದರ ಜೊತೆ ಬೆರೆಯಲಿಕ್ಕಾಗದೇ ತಮ್ಮದೇ ಸಂಗ ಕಟ್ಟಿಕೊಂಡರು. ತಮ್ಮದೇ ಸಂತೋಷಗಳನ್ನು ಕಂಡುಕೊಂಡರು. ತಮ್ಮದೇ ಶೈಲಿಯ ಬದುಕು ಆರಂಭಿಸಿದರು.

ಹೈಫೈ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ ನಂತರ ಅದೊಂದು ಸ್ಟೇಟಸ್‌ ಸಿಂಬಲ್‌ ಕೂಡ ಆಗಿಬಿಟ್ಟಿತು. ಯಾರೆಲ್ಲ ಇಂಥ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೋ ಅವರು ಚಿತ್ರರಂಗದಲ್ಲೇ ಮಡಿವಂತ, ಹಳೆಯ ಕಾಲದ ನಟಿಯರೆಂದು ಪರಿಗಣಿಸಲ್ಪಟ್ಟರು. ಪೇಜ್‌ ಥ್ರೀ ಪಾರ್ಟಿ ನಟಿಯರೆಂದೇ ಹೆಸರಾದ ಕೆಲವರು ಸಿನಿಮಾ ಪಾರ್ಟಿಗಳಿಂದಾಚೆಗೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಕಾರ್ಪೊರೆಟ್‌, ಪೊಲಿಟಿಕಲ್‌, ಬಿಸಿನೆಸ್‌ ಮತ್ತು ತಮಗೆ ಸಂಬಂಧವಿಲ್ಲದ ಬರ್ತ‚ಡೇ ಪಾರ್ಟಿಗಳಲ್ಲೂ ಅವರು ಮಿಂಚತೊಡಗಿದರು. ಕ್ರಮೇಣ ಅವರಿದ್ದರೇ ಅದೊಂದು ಪಾರ್ಟಿ ಎಂಬಂತಾಯಿತು. ಇವರನ್ನು ಕರೆದರೆ ಅವರನ್ನೂ ಕರೆಯಿರಿ ಅಂತ ಇವರು ಹೇಳಿ ಅವರದ್ದೊಂದು ಗ್ಯಾಂಗು ಕೂಡ ಸೃಷ್ಟಿಯಾಯಿತು.

ಇಲ್ಲಿಂದಾಚೆಗೆ ನಡೆದ ವ್ಯವಹಾರಗಳೇ ಕನ್ನಡ ಚಿತ್ರರಂಗವನ್ನು ಇವತ್ತಿನ ಸ್ಥಿತಿಗೆ ತಂದಿಟ್ಟಿದೆ. ಈಗೇನು ‘ಡ್ರಗ್‌’ ಅಪವಾದವನ್ನು ಹೊತ್ತುಕೊಂಡು ಚಿತ್ರರಂಗ ಕಂಗಾಲಾಗಿದೆಯೋ ಅದರಲ್ಲಿ ಕೋರ್‌ ಚಿತ್ರರಂಗದ ಪಾಲು ಇಲ್ಲವೇ ಇಲ್ಲ. ಅವೆಲ್ಲವೂ ಚಿತ್ರೋದ್ಯಮದ ಅಂಚು ಅಂಚಿನಲ್ಲಿರುವ ಮಿಂಚಿ ಮರೆಯಾಗುವವರ ಚಿತಾವಣೆ ಅಷ್ಟೇ.

ಚಿತ್ರರಂಗ ಬದಲಾಗಿಲ್ಲ. ಚಿತ್ರರಂಗದ ಹವ್ಯಾಸಗಳೂ ಬದಲಾಗಿಲ್ಲ. ಕೆಲವರು ಹೇಳುವಂತೆ ಅದರ ಪಾವಿತ್ರ್ಯವೂ ಕೆಟ್ಟಿಲ್ಲ.

ಕೆಲವರಿಗೆ ಒಂಚೂರು ಅಮಲೇರಿದೆ.

ಇಳಿಯುತ್ತದೆ!

click me!