'ಅಮ್ಮನಿಲ್ಲದ ಮೊದಲ ವರ್ಷ..' ಬರ್ತ್‌ಡೇ ಕುರಿತು ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್‌ ನೀಡಿದ ಕಿಚ್ಚ ಸುದೀಪ್‌!

Published : Aug 25, 2025, 05:07 PM ISTUpdated : Aug 25, 2025, 05:16 PM IST
Kiccha Sudeep

ಸಾರಾಂಶ

ಕಿಚ್ಚ ಸುದೀಪ್ ಅವರು ಈ ವರ್ಷ ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಲಿದ್ದಾರೆ. ಸೆಪ್ಟೆಂಬರ್ 2 ರಂದು 52ನೇ ವರ್ಷಕ್ಕೆ ಕಾಲಿಡಲಿರುವ ಅವರು, ಸೆಪ್ಟೆಂಬರ್ 1 ರ ರಾತ್ರಿಯೇ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಂಗಳೂರು (ಆ.25): ಇತ್ತೀಚಿನ ವರ್ಷಗಳಲ್ಲಿ ಸೂಪರ್‌ಸ್ಟಾರ್‌ಗಳು ತಮ್ಮ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಣೆ ಮಾಡಿಕೊಳ್ಳುವ ಸಂಭ್ರಮಗಳೇ ದೂರವಾಗುತ್ತಿರುವ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಈ ಬಾರಿ ಜನ್ಮದಿನವನ್ನು ಅಭಿಮಾನಿಗಳ ಜೊತೆಯಲ್ಲಿಯೇ ಆಚರಣೆ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸ್ವತಃ ಸುದೀಪ್‌ ಪೋಸ್ಟ್‌ ಮಾಡಿದ್ದಾರೆ. ಸೆಪ್ಟೆಂಬರ್‌ 2 ರಂದು ಕಿಚ್ಚ ಸುದೀಪ್‌ 52ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ, ಸೆ.2ರ ಬದಲು ಸೆ. 1ರ ರಾತ್ರಿಯೇ ಸಿಗೋಣ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

'ನನ್ನೆಲ್ಲ ಪ್ರೀತಿಯ ಸ್ನೇಹಿತರಿಗೆ. ಸೆಪ್ಟೆಂಬರ್ 2 ರಂದು ಆಚರಿಸಲು ತೋರಿಸಲಾದ ಉತ್ಸಾಹದ ಕುರಿತು ಪೋಸ್ಟ್ ಮಾಡಲಾದ ಅನೇಕ ವೀಡಿಯೊಗಳನ್ನು ನೋಡಿದ್ದೇನೆ. ಈ ಪ್ರೀತಿ ಮತ್ತು ಅಪ್ಪುಗೆಗೆ ದೊಡ್ಡ ದೊಡ್ಡ ಧನ್ಯವಾದಗಳು' ಎಂದು ಪೋಸ್ಟ್‌ಅನ್ನು ಅವರು ಹಂಚಿಕೊಂಡಿದ್ದಾರೆ.

ಪ್ರಿಯ ಸ್ನೇಹಿತರೇ..

ಸೆಪ್ಟೆಂಬರ್‌ ಎರಡರ ಬೆಳಗಿನಲ್ಲಿಅಲ್ಲ ಸೆಪ್ಟೆಂಬರ್‌ ಒಂದರ ರಾತ್ರಿಯೇ ಸಿಗೋಣವಾ..!

ಸೆಪ್ಟೆಂಬರ್‌ ಎರಡರಂದು ನೀವು ನನ್ನನ್ನು ಭೇಟಿ ಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದುರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿ ಮಾಡುತ್ತಲೇ ನಾನೂ ಸಂಭ್ರಮಿಸಿದ್ದೇನೆ. ಆದರೆ, ಈ ಸಲ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ.

ಆದರೆ, ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ! ನಿಮ್ಮ ಮೂಲಕವೇ ನನ್ನ ಹುಟ್ದಬ್ಬ ಹುಟ್ಟಬೇಕು! ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದು ಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್‌ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ? ಹೇಗೆ? ಅನ್ನೋದನ್ನ ತಿಳಿಸುತ್ತೇನೆ.ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್‌ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸ್ಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ. ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ.

ಸದಾ ಪ್ರೀತಿ ಇರಲಿ

ನಿಮ್ಮ

ಕಿಚ್ಚ

ಸೂಪರ್‌ಸ್ಟಾರ್‌ಗಳು ತಮ್ಮ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಂದ ದೂರವಿರುವ ಸಂದರ್ಭದಲ್ಲಿ, ನಟ ಕಿಚ್ಚ ಸುದೀಪ್‌ ಕೈಗೊಂಡಿರುವ ನಿರ್ಧಾರಕ್ಕೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.ಸೆಪ್ಟೆಂಬರ್ 2 ರಂದು ತಮ್ಮ 52ನೇ ವರ್ಷದ ಜನ್ಮದಿನವನ್ನು ಒಂದು ದಿನ ಮುಂಚಿತವಾಗಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ