
ಕನ್ನಡ ಸಿನಿಮಾ ಪ್ರದರ್ಶಕರು ಹಲವು ಬೇಡಿಕೆಗಳ ಪಟ್ಟಿಯೊಂದನ್ನು ಮತ್ತೊಮ್ಮೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕೊರೋನಾ ಹಾಗೂ ಲಾಕ್‌ಡೌನ್ ಕಾರಣಕ್ಕೆ ಚಿತ್ರಮಂದಿರಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಆಸ್ತಿ ತೆರಿಗೆಯಲ್ಲಿ ವಿನಾಯಿತಿ, ಮಾಸಿಕ ವಿದ್ಯುತ್ ಹಾಗೂ ನೀರಿನ ಬಿಲ್‌ನಲ್ಲಿ ವಿನಾಯಿತಿ ನೀಡಬೇಕು. ಚಿತ್ರಮಂದಿರಗಳಲ್ಲಿ ದುಡಿಯುವ ಕಾರ್ಮಿಕರಿಗೆ ಈ ಕೆಲಸ ಇಲ್ಲದ ಕಾರಣ ಅವರನ್ನು ಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸಿ ಅವರಿಗೆ ಧನಸಹಾಯ ನೀಡುವುದು ಹಾಗೂ ಚಿತ್ರರಂಗವನ್ನು ಕೈಗಾರಿಕಾ ವಲಯ ಎಂದು ಘೋಷಣೆ ಮಾಡಬೇಕು ಎಂಬುದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮನವಿ.
ಸಿನಿಮಾ ಪ್ರದರ್ಶಕರು ತಮ್ಮ ಈ ಬೇಡಿಕೆಗಳನ್ನು ಕಳೆದ ವರ್ಷವೇ ಸರ್ಕಾರದ ಮುಂದೆ ಇಟ್ಟಿದ್ದರು. ಈಗ ಕೊರೋನಾ ಎರಡನೇ ಅಲೆ ಕಾರಣಕ್ಕೆ ಸರ್ಕಾರ ಮತ್ತೆ ಸೆಮಿ ಲಾಕ್‌ಡೌನ್ ಘೋಷಣೆ ಮಾಡಿದೆ. ಈಗಲೂ ಪ್ರದರ್ಶಕರು ಇದೇ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ‘ಕೋವಿಡ್-19 ನಿಯಮಗಳನ್ನು ನಾವು ಸಂಪೂರ್ಣವಾಗಿ ಬೆಂಬಲಿಸಿ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದೇವೆ. ಬಾಗಿಲು ಹಾಕಿರುವ ಚಿತ್ರಮಂದಿರಗಳಿಂದ ಈಗ ಯಾವುದೇ ರೀತಿಯ ಆದಾಯ ಇಲ್ಲ.
ಸರ್ಕಾರದಿಂದ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಆರ್ಥಿಕ ನೆರವು ನೀಡುವಂತೆ ಪ್ರದರ್ಶಕರಿಂದ ಮನವಿ!
ಕಳೆದ ಬಾರಿ ಎಂಟು ತಿಂಗಳು ಚಿತ್ರಮಂದಿರಗಳು ಮುಚ್ಚಿದ್ದವು. ಈ ಬಾರಿಯೂ ಕೊರೋನಾ ನಿಯಮದಂತೆ ಥಿಯೇಟರ್‌ಗಳು ಮುಚ್ಚಿವೆ. ಇದರಿಂದ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗಿದೆ. ಹೀಗಿದ್ದೂ ಆಸ್ತಿ ತೆರಿಗೆ, ವಿದ್ಯುತ್ ಬಿಲ್ ಇತ್ಯಾದಿ ತೆರಬೇಕಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.- ಕೆ ವಿ ಚಂದ್ರಶೇಖರ್, ಪ್ರದರ್ಶಕರ ಸಂಘದ ಅಧ್ಯಕ್ಷ
ಇಂಥ ಸಂದರ್ಭದಲ್ಲಿ ಎಂದಿನಂತೆ ಆಸ್ತಿ ತೆರಿಗೆ, ವಿದ್ಯುತ್, ನೀರಿನ ಬಿಲ್ ಸೇರಿದಂತೆ ಲಕ್ಷಗಳ ಲೆಕ್ಕದಲ್ಲಿ ಕಟ್ಟಬೇಕಿದೆ. ಚಾಲನೆಯಲ್ಲೇ ಇಲ್ಲದ ಚಿತ್ರಮಂದಿರಗಳಿಂದ ಇಷ್ಟು ಮೊತ್ತದ ಹಣ ಕೊಡಲು ಆಗುತ್ತಿಲ್ಲ. ಹೀಗಾಗಿ ಈ ವರ್ಷದ ಆಸ್ತಿ ತೆರಿಗೆ, ನೀರು ಹಾಗೂ ವಿದ್ಯುತ್ ಬಿಲ್‌ನಲ್ಲಿ ವಿನಾಯಿತಿ ನೀಡಬೇಕು’ ಎಂಬುದು ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಅವರ ಮನವಿ.ಇದೇ ಮನವಿಯನ್ನು ಈಗಾಗಲೇ ಉಪ ಮುಖ್ಯಮಂತ್ರಿ ಡಾ ಸಿ ಅಶ್ವಥ್ ನಾರಾಯಣ ಹಾಗೂ ಸಚಿವ ಸಿ ಸಿ ಪಾಟೀಲ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.
ಸೆಲೆಬ್ರಿಟಿಗಳಿಂದ ಕೊರೋನಾ ಸಂತ್ರಸ್ತರಿಗೆ ನೆರವು;ದಿನಸಿ ಕಿಟ್, ಊಟ, ತರಕಾರಿ ವಿತರಣೆ
ಆದರೆ, ಚಿತ್ರರಂಗದ ಈ ಬೇಡಿಕೆ ಮಾತ್ರ ಅಧಿಕಾರಿಗಳ ಪರಿಶೀಲನೆ, ಸಂಬಂಧಪಟ್ಟವರ ಭರವಸೆಗಳಲ್ಲೇ ಉಳಿದು ಹೋಗಿದೆ. ‘ಕಳೆದ ವರ್ಷದಿಂದಲೂ ನಾವು ಇದೇ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ಇದುವರೆಗೂ ಸರ್ಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ನೋಡೋಣ, ಪರಿಶೀಲನೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳುತ್ತಿದ್ದಾರೆ’ ಎನ್ನುತ್ತಾರೆ ಕೆ ವಿ ಚಂದ್ರಶೇಖರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.