ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರಂಭಗೊಂಡು ಯಶಸ್ವಿ 75 ವಸಂತ ಪೂರೈಸಿದೆ. 2020ನೇ ವರ್ಷವು ಅದರ 75ನೇ ವರ್ಷದ ಉತ್ಸವ. ಈ ಹಿನ್ನೆಲೆಯಲ್ಲೀಗ ವಾಣಿಜ್ಯ ಮಂಡಳಿ 75ನೇ ವರ್ಷದ ಉತ್ಸವದ ಲಾಂಛನ ಬಿಡುಗಡೆ ಮಾಡಿದೆ. ಮಾ.8ರಂದು ಭಾನುವಾರ ಬೆಳಗ್ಗೆ ಬೆಂಗಳೂರಿನ ಚಾಮರಾಜ ಪೇಟೆ ಕಲಾವಿದರ ಸಂಘದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 7ನೇ ವರ್ಷದ ಉತ್ಸವದ ಲಾಂಛನ ಬಿಡುಗಡೆ ಸಮಾರಂಭ ಆಯೋಜಿಸಿತ್ತು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಕುಮಾರ ಬಂಗಾರಪ್ಪ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಬಂದಿದ್ದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಚಿತ್ರೋದ್ಯಮದ ಎಲ್ಲಾ ಸಮಸ್ಯೆಗಳನ್ನು ನಿಗದಿತ ಅವಧಿಯೊಳಗೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪೈರಸಿ ಹಾವಳಿ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿನ ಸಮಸ್ಯೆ, ಫಿಲಂ ಸಿಟಿ ನಿರ್ಮಾಣ ಹಾಗೂ ಜಿಎಸ್‌ಟಿ ಹಿಂತಿರುಗಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ ಸಕಾಲಕ್ಕೆ ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ವಾಣಿಜ್ಯ ಮಂಡಳಿ ಪರವಾಗಿ ಶಾಸಕ ಕುಮಾರ ಬಂಗಾರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ವಿವರಿಸಿದರು.
undefined
ಸಿನಿಮಾ ಪ್ರಚಾರಕ್ಕೆ ಫ್ಲೆಕ್ಸ್ ಅನುಮತಿ -ಸಿಎಂಗೆ ಶಿವಣ್ಣ ಮನವಿ!
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಹಾಗೆಯೇ 75ನೇ ವರ್ಷದ ಉತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಅದರ ವಿವರ ನೀಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಹಾಜರಿದ್ದು ಲಾಂಛನ ಬಿಡುಗಡೆ ಮಾಡಿದ ನಟರಾದ ರವಿಚಂದ್ರನ್, ಜಗ್ಗೇಶ್ ತಮ್ಮ ಅನಿಸಿಕೆ ಹಂಚಿಕೊಂಡರು. ಕನ್ನಡ ಚಿತ್ರೋದ್ಯಮ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
‘ಸರ್ಕಾರ ಚಿತ್ರನಗರಿ ನಿರ್ಮಾಣಕ್ಕೆ 500 ಕೋಟಿ ಕೊಟ್ಟಿದೆ. ಅದರ ಕೀರ್ತಿ ಹಿರಿಯರಿಗೆ ಸೇರಬೇಕು. ಪ್ರತಿದಿನ, ಪ್ರತಿನಿತ್ಯ ಸಿನಿಮಾ ರಂಗದ ಬಗ್ಗೆ ನಮ್ಮ ಚಿತ್ರ ನಗರಿ ಎಂದು ದೊಡ್ಡ ಕನಸನ್ನು ಇಟ್ಟುಕೊಂಡು ಬಂದಂತಹ ಮಹನೀಯರು ಅನೇಕರು ಇದ್ದಾರೆ. ಇದು ಒಬ್ಬರಿಂದ ಸಾಧ್ಯವಾಗಿಲ್ಲ’ ಎಂದರು ಜಗ್ಗೇಶ್.
ಮಾಜಿ ಸಚಿವೆ ಜಯಮಾಲಾ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್, ಕೆ.ಸಿ.ಎನ್. ಚಂದ್ರಶೇಖರ್, ಎಚ್.ಡಿ. ಗಂಗರಾಜು, ಸಾ.ರಾ. ಗೋವಿಂದು, ಎಸ್.ಎ, ಚಿನ್ನೇಗೌಡ, ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.