
ಇಂದು ರುಕ್ಷ್ಮಿಣಿ ವಸಂತ್ ಭಾರತದೆಲ್ಲೆಡೆ ಫುಲ್ ಫೇಮಸ್. ಆಕೆಯ ನಟನೆಯನ್ನು, ಸೌಂದರ್ಯವನ್ನು ಹೊಗಳದವರೇ ಇಲ್ಲ. ಕಾಂತಾರ ಅಧ್ಯಾಯ-1 ಸಿನಿಮಾದ ಮೂಲಕ ರುಕ್ಷ್ಮಿಣಿ ಮತ್ತೊಮ್ಮೆ ಜನರಿಗೆ ಹತ್ತಿರವಾಗಿದ್ದಾರೆ. ರಾಣಿ ಕನಕವತಿಯಾಗಿ ಆಕೆಯ ಅಭಿನಯ ಪ್ರೇಕ್ಷಕರ ಮನಗೆದ್ದಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ರುಕ್ಷ್ಮಿಣಿ ವಸಂತ್ ಪರಿಚಯವಾಗುತ್ತಿದ್ದಾರೆ. ಆದರೆ, ರುಕ್ಷ್ಮಿಣಿ ವಸಂತ್ ಇಡೀ ದೇಶಕ್ಕೆ ಪರಿಚಯವಾಗೋ ಮುನ್ನ ಅವರು ಗುರುತಿಗೆ ಬಂದಿದ್ದೇ 'ವಸಂತ್' ಅನ್ನೋ ಹೆಸರಿನಿಂದ. ವಸಂತ್ ಅನ್ನೋದು ಸಾಮಾನ್ಯ ಹೆಸರಲ್ಲ. ಕರ್ನಲ್ ವಸಂತ್ ವೇಣುಗೋಪಾಲ್ ಅನ್ನೋದು ಭಾರತೀಯ ಸೇನೆಯಲ್ಲಿ ಅದರಲ್ಲೂ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನಲ್ಲಿ ಧೈರ್ಯ ಸಾಹಸಕ್ಕೆ ಇನ್ನೊಂದು ಹೆಸರು.
ಮರಾಠ ಲೈಟ್ ಇನ್‌ಫ್ಯಾಂಟ್ರಿಯ ಘೋಷವಾಕ್ಯ 'ಕರ್ತವ್ಯ, ಗೌರವ, ಧೈರ್ಯ', ಡ್ಯೂಟಿ, ಹಾನರ್, ಕರೇಜ್‌ನಂತೇ ಬದುಕಿದವರು ವಸಂತ್ ವೇಣುಗೋಪಾಲ್. ರುಕ್ಷ್ಮಿಣಿ ವಸಂತ್‌ಗೆ 10 ವರ್ಷವಾಗಿದ್ದಾಗ 2007ರ ಜುಲೈ 31ರಂದು ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ವೀರಮರಣ ಕಂಡ ವ್ಯಕ್ತಿ. ಅವರ ಈ ಅತ್ಯುನ್ನತ ಸಾಹಸಕ್ಕಾಗಿ ಕೇಂದ್ರ ಸರ್ಕಾರ, ಶಾಂತಿಕಾಲದ ಸರ್ವಶ್ರೇಷ್ಠ ಸೇನಾ ಪುರಸ್ಕಾರವಾದ ಅಶೋಕ ಚಕ್ರ ನೀಡಿ ಗೌರವಿಸಿದೆ.
ಎಲ್‌ಐಸಿ ಉದ್ಯೋಗಿ ಎನ್‌ಕೆ ವೇಣುಗೋಪಾಲ್ ಹಾಗೂ ಪ್ರಫುಲ್ಲಾ ಅವರ ಪುತ್ರನಾಗಿ ಜನಿಸಿದ್ದ ವಂತ್ ವೇಣುಗೋಪಾಲ್, ತಂದೆಯ ಕಾರಣಕ್ಕಾಗಿ ಕರ್ನಾಟಕದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಆಗುತ್ತಲೇ ಇದ್ದರು. ಇದರಿಂದಾಗಿ ಉಡುಪಿ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಅವರ ವಿದ್ಯಾಭ್ಯಾಸ ನಡೆದಿತ್ತು. ಅದೆಷ್ಟೇ ಊರು ಸುತ್ತಿದರೂ ಅವರ ನಡೆಯಲ್ಲಿ ಶಿಸ್ತು, ಸೇನೆಗೆ ಸೇರುವ ಅವರ ಉತ್ಸಾಹ ಹಾಗೆಯೇ ಉಳಿದುಕೊಂಡಿತ್ತ. ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಗಿಸಿದ ವಸಂತ್ ವೇಣುಗೋಪಾನ್ 1988ರಲ್ಲಿ ಪದವೀಧರರಾದರು. ಬದ್ಧ ವಿದ್ಯಾರ್ಥಿ ಮಾತ್ರವಲ್ಲದೆ, ಪ್ರತಿಭಾವಂತ ಅಥ್ಲೀಟ್ ಕೂಡ ಆಗಿದ್ದರು. ಎನ್‌ಸಿಸಿಯನ್ನು ಬಹಳಷ್ಟು ಇಷ್ಟಪಡುತ್ತಿದ್ದ ವಂಸತ್ ಇದೇ ಕಾರಣಕ್ಕಾಗಿ 1986-87ರಲ್ಲಿ ಕೆನಡಾಕ್ಕೂ ಹೋಗಿ ಬಂದಿದ್ದರು.
1988ರಲ್ಲಿ ಡೆಹ್ರಾಡೂನ್‌ನ ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಪ್ರವೇಶ ಪಡೆದ ವಸಂತ್ ವೇಣುಗೋಪಾಲ್, ಕಠಿಣ ತರಬೇತಿಯ ಬಳಿಕ 1989ರ ಜೂನ್ 10 ರಂದು ಮರಾಠ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್‌ನ 8ನೇ ಬೆಟಾಲಿಯನ್‌ಗೆ ಸೇರಿಕೊಂಡರು. ಮರಾಠಾ ಲೈಟ್ ಇನ್ಫ್ಯಾಂಟ್ರಿ ಭಾರತೀಯ ಸೇನೆಯ ಅತ್ಯಂತ ಹಳೆಯ ಮತ್ತು ಅತ್ಯಂತ ವಿಜೃಂಭಿತ ರೆಜಿಮೆಂಟ್‌ಗಳಲ್ಲಿ ಒಂದು. ಈ ರೆಜಿಮೆಂಟ್‌ನ ಅದಮ್ಯ ಚೈತನ್ಯ ಮತ್ತು ಶೌರ್ಯದ ಶ್ರೀಮಂತ ಇತಿಹಾಸಕ್ಕೆ ಹೆಸರುವಾಸಿಯಾಗಿದೆ.
2007ರಲ್ಲಿ ಕಾರ್ಯಾಚರಣೆಯ ವೇಳೆ ಕರ್ನಲ್ ವಸಂತ್ ವೇಣುಗೋಪಾಲ್
2007ರಲ್ಲಿ ಹುತಾತ್ಮರಾಗುವವರೆಗೆ 18 ವರ್ಷಗಳ ಕಾಲ ಸೇನಾ ಜೀವನದಲ್ಲಿ ಕರ್ನಲ್ ವಸಂತ್ ಈ ಅವಧಿಯಲ್ಲಿ ಸಾಕಷ್ಟು ಸವಾಲಿನ ಪರಿಸ್ಥಿತಿಯನ್ನು ಎದುರಿಸಿದ್ದರು. ಪಠಾಣ್ ಕೋಟ್, ಸಿಕ್ಕಿಂ, ಗಾಂಧಿನಗರ, ರಾಂಚಿ, ಬೆಂಗಳೂರು ಹಾಗೂ ಜಮ್ಮು ಕಾಶ್ಮೀರದ ವಿವಿಧ ಕಾರ್ಯಾಚರಣೆ ಸೆಕ್ಟರ್‌ಗಳಲ್ಲಿ ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದರು. ಅವರ ನಾಯಕತ್ವ ಶೈಲಿ ಹಾಗೂ ಸೈನಿಕರ ಜೊತೆಗಿನ ಆತ್ಮೀಯ ಸ್ನೇಹವನ್ನೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಒಬ್ಬ ಲೀಡರ್ ಯಾವಾಗಲೂ ತಮ್ಮ ಸೈನಿಕರ ಜೊತೆ ನಿಲ್ಲಬೇಕು ಅನ್ನೋದು ಅವರ ಅಚಲ ನಂಬಿಕೆಯಾಗಿತ್ತು. ಕೊನೇ ಉಸಿರಿರುವವರೆಗೂ ಕರ್ನಲ್ ವಸಂತ್ ಇದನ್ನೇ ಮಾಡಿದ್ದರು.
ಒಂದು ಹಂತದಲ್ಲಿ ಅವರ ತಾಯಿ, ಪ್ರತಿ ಕಾರ್ಯಾಚರಣೆಗಳನ್ನು ನೀನೇ ವೈಯಕ್ತಿಕವಾಗಿ ಮುನ್ನಡೆಸಬೇಕೇ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ್ದ ಕರ್ನಲ್ ವಸಂತ್, 'ನನ್ನ ಹುಡುಗರು ಎಲ್ಲಿ ಹೋಗ್ತಾರೋ ನಾನು ಅಲ್ಲಿಗೆ ಹೋಗಬೇಕು' ಎಂದಿದ್ದರು.
2007ರಲ್ಲಿ ಜಮ್ಮುಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಕರ್ನಲ್ ವಸಂತ್ ವೇಣುಗೋಪಾಲ್
ಅದು 2007ರ ಜುಲೈ, ತಮ್ಮ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದರು ಕರ್ನಲ್ ವಸಂತ್. ಈ ಹಂತದಲ್ಲಿ ಅವರ ಬೆಟಾಲಿಯನ್ ಕಾರ್ಯತಂತ್ರದಲ್ಲಿ ಅತ್ಯಂತ ಪ್ರಮುಖವಾದ ಉರಿ ಸೆಕ್ಟರ್‌ನಲ್ಲಿ ನಿಯೋಜನೆಯಾಗಿತ್ತು. ಜುಲೈ 30 ರಂದು ಎಲ್‌ಓಸಿಯಿಂದ ಟೆರರಿಸ್ಟ್‌ಗಳು ಭಾರತದ ಗಡಿಗೆ ನುಗ್ಗಿದ್ದಾರೆ ಎನ್ನುವ ಮಾಹಿತಿ ಸಿಕ್ಕ ತಕ್ಷಣ ಬಂದೂಕು ಹಿಡಿದು ತಮ್ಮ ತಂಡದೊಂದಿಗೆ ಅವರನ್ನು ಎದುರಿಸಲು ಮುನ್ನಡೆದಿದ್ದರು. ಇಡೀ ಕಾರ್ಯಾಚರಣೆಯ ನೇತೃತ್ವವನ್ನು ಅವರು ವಹಿಸಿಕೊಂಡಿದ್ದರು.
ಸೇನೆಗೆ ಮಾಹಿತಿ ಸಿಕ್ಕಿದೆ ಎಂದು ಟೆರರಿಸ್ಟ್‌ಗಳು ಗೊತ್ತಾದ ತಕ್ಷಣ ಅಲ್ಲಿಂದ ಕಾಲ್ಕೀಳುವ ಪ್ರಯತನ ಮಾಡಿದ್ದರು. ಆದರೆ, ವಸಂತ್ ವೇಣುಗೋಪಾಲ್ ಅವರ ಚಾಣಾಕ್ಷತೆಯಿಂದಾಗಿ ಭಯೋತ್ಪಾದಕರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಮಿಚ್ಚಿದ್ದರು. ದಟ್ಟಿ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಅವಿರತವಾಗಿ ಶ್ರಮಿಸಿದರು. ಆದರೆ, ಹಂತಹಂತದಲ್ಲಿ ಗುಂಡಿನ ದಾಳಿ ನಡೆಸುತ್ತಾ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದರು. ಜುಲೈ 31ರ ಬೆಳಗಿನ ಜಾವ ಆಗೋದನ್ನೇ ಕಾಯುತ್ತಿದ್ದ ಕರ್ನಲ್ ವಸಂತ್, ಕಾಡಿನಲ್ಲಿ ಅಡಗಿದ್ದ ಟೆರರಿಸ್ಟ್‌ಗಳ ಮೇಲೆ ಏಕಕಾಲದಲ್ಲಿ ಅಂತಿಮ ದಾಳಿ ಆರಂಭಿಸಿದರು. ಈ ಹಂತದಲ್ಲಿ ಒಬ್ಬನನ್ನು ಸ್ವತಃ ಕರ್ನಲ್ ವೇಣುಗೋಪಾಲ್ ಗುಂಡಿಕ್ಕಿ ಕೊಂದರು. ಆದರೆ, ಈ ಸಮಯದಲ್ಲಿ ಅವರ ಗುಂಡುಗಳು ಕೂಡ ಇವರ ದೇಹ ಹೊಕ್ಕಿದ್ದವು. ತೀವ್ರ ರಕ್ತಸ್ರಾವ ಆಗುತ್ತಿದ್ದರೂ, ತಮ್ಮ ಸೈನಿಕರಿಗೆ ಆದೇಶ ನೀಡೋದನ್ನು ಅವರು ಮುಂದುವರಿಸಿದ್ದರು.
ಮಗಳ ಜೊತೆ ಕರ್ನಲ್
ತೀವ್ರವಾಗಿ ಗಾಯಗೊಂಡಿದ್ದರೂ, ಕರ್ನಲ್ ವಸಂತ್ ವೇಣುಗೋಪಾಲ್ ತಮ್ಮ ಉಳಿದ ಶಕ್ತಿಯನ್ನು ಒಟ್ಟುಗೂಡಿಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಇನ್ನೊಬ್ಬ ಭಯೋತ್ಪಾದಕನ ಎದೆಗೆ ಗುಂಡಿಟ್ಟಿದ್ದರು. ಈ ಹಂತದಲ್ಲಿ ಮತ್ತೊಂದು ಸುತ್ತಿನ ಗುಂಡಿನ ದಾಳಿ ಇವರ ಮೇಲಾಗಿತ್ತು. ಪ್ರಜ್ಞಾಹೀನ ಸ್ಥಿತಿಗೆ ಹೋಗುವ ಮುನ್ನ ಕೊನೆಯ ಗುಂಡನ್ನ ಟೆರರಿಸ್ಟ್‌ನ ಎದೆಗೆ ನುಗ್ಗಿಸಿ ಶೌರ್ಯ ಮೆರೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕರ್ನಲ್ ವಸಂತ್ ಹಾಗೂ ಲ್ಯಾನ್ಸ್ ನಾಯಕ್ ಬಚ್ಚವ್ ಶಶಿಕಾಂತ್ ಗಣಪತ್ ವೀರ ಮರಣ ಕಂಡರೆ, 8 ಭಯೋತ್ಪಾದಕರನ್ನು ಸೇನೆ ಹತ್ಯೆ ಮಾಡಿತು. ಕರ್ನಲ್ ವಸಂತ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ "ಅಶೋಕ ಚಕ್ರ"ವನ್ನು ನೀಡಿ ಸರ್ಕಾರ ಗೌರವಿಸಿತು.
ಭರತನಾಟ್ಯ ಕಲಾವಿದೆಯಾಗಿದ್ದ ಸುಭಾಷಿಣಿ ಅವರನ್ನು 1993ರಲ್ಲಿ ವಿವಾಹವಾಗಿದ್ದರು. ಕರ್ನಲ್ ವಸಂತ್ ಹುತಾತ್ಮರಾದಾಗ ಅವರ ವಯಸ್ಸು 40. ಇದರ ನೆನಪಿನಲ್ಲಿಯೇ 2011ರಲ್ಲಿ ಫಾರೆವರ್ ಫೋರ್ಟಿ ಅನ್ನೋ ಪುಸ್ತಕವನ್ನೂ ಸುಭಾಷಿಣಿ ಬರೆದಿದ್ದಾರೆ. ಅದಲ್ಲದೆ, ಪತಿಯ ನೆನಪಿನಲ್ಲಿ ಬೆಂಗಳೂರಿನಲ್ಲಿ ವಸಂತರತ್ನ ಕಲಾಸಂಸ್ಥೆಯನ್ನೂ ಆರಂಭಿಸಿದ್ದಾರೆ. ವಸಂತ್ ಹುತಾತ್ಮರಾದಾಗ ರುಕ್ಷ್ಮಿಣಿ ವಂಸತ್‌ಗೆ 10 ವರ್ಷ ಹಾಗೂ ಅವರ ಸಹೋದರಿ ಯೆಶೋಧಾಗೆ 7 ವರ್ಷ ವಯಸ್ಸಾಗಿತ್ತು.
ಪತ್ನಿ ಸುಭಾಷಿಣಿ, ಮಗಳಾದ ಯಶೋಧಾ, ರುಕ್ಷ್ಮಿಣಿ ಜೊತೆ ಕರ್ನಲ್ ವಸಂತ್ ವೇಣುಗೋಪಾಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.