
ಹಿರಿಯ ಕಲಾವಿದ ಶಂಕರ್ ಭಟ್ ಅವರಿಗೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ‘ಕಲಾ ವಿಭೂಷಣ ರಾಷ್ಟ್ರ ಪ್ರಶಸ್ತಿ’ ಸಂದಿದೆ. ಏ.28ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಭಟ್ಟರು ‘ಶ್ವೇತ ಗುಲಾಬಿ’ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಆ ದಿನಗಳಲ್ಲೇ ರಾಜ್ಯಮಟ್ಟದ ನಾಟಕದ ಸ್ಪರ್ಧೆಗಳಲ್ಲಿ ಉತ್ತಮ ನಟನೆಗಾಗಿ ಮೂರು ಬಾರಿ ‘ಉಲ್ಲಾಳ್ ಶೀಲ್ಡ್’ ಪಡೆದ ಪ್ರತಿಭಾವಂತರು. ಮುಂದೆ ಹವ್ಯಾಸಿ ರಂಗಭೂಮಿಯಲ್ಲಿ ಗಿರೀಶ್ ಕಾರ್ನಾಡ್, ಬಿ ವಿ ಕಾರಂತ್, ಜಿ ವಿ ಅಯ್ಯರ್, ಶಂಕರ್‌ನಾಗ್, ರಮೇಶ್ ಭಟ್, ನಾಗಾಭರಣ ಮೊದಲಾದವರೊಂದಿಗೆ ನಾಟಕಗಳಲ್ಲಿ ಅಭಿನಯಿಸಿದರು.
ಸಿನಿಮಾ ರಂಗದಲ್ಲಿ ‘ದೀಕ್ಷಾ’ ಹಿಂದಿ ಚಿತ್ರದಲ್ಲಿ ನಾನಾ ಪಾಟೇಕರ್ ಎದುರು ಶಾಲಾ ಮಾಸ್ತರನಾಗಿ ಮಿಂಚಿದ್ದರು. ಇದು ಡಾ. ಯು ಆರ್ ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕಾದಂಬರಿ ಆಧರಿತ ಚಲನಚಿತ್ರ. ಈ ಚಿತ್ರಕ್ಕೆ ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಮುಂದೆ ಜಿ ವಿ ಅಯ್ಯರ್ ನಿರ್ದೇಶನದ ‘ಆದಿ ಶಂಕರಾಚಾರ್ಯ’, ‘ಮಧ್ವಾಚಾರ್ಯ’, ‘ರಾಮಾನುಜಾಚಾರ್ಯ’, ‘ನಾಟ್ಯರಾಣಿ ಶಾಂತಲಾ’ ಮೊದಲಾದ ಸಿನಿಮಾಗಳಲ್ಲಿನ ಇವರ ನಟನೆ ಸಿನಿಮಾ ದಿಗ್ಗಜರ ಗಮನ ಸೆಳೆಯಿತು.
ಉಪೇಂದ್ರ ನಟನೆಯ ‘ಶ್’ ಚಿತ್ರದಲ್ಲಿ ಖಳನಾಯಕನಾಗಿ ಉತ್ತಮ ಅಭಿನಯ ಮೆರೆದರು. ‘ಉಪೇಂದ್ರ’, ‘ರಕ್ತ ಕಣ್ಣೀರು’, ‘ಹುಡುಗಾಟ’ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್, ಕಲ್ಯಾಣ್ ಕುಮಾರ್, ಅನಂತ್ ನಾಗ್, ಶಂಕರ್‌ನಾಗ್ ಅವರ ಚಿತ್ರಗಳಿಂದ ಹಿಡಿದು ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‌ಕುಮಾರ್, ಗಣೇಶ್ ಮೊದಲಾದವರೊಂದಿಗೆ ನಟಿಸಿದ್ದಾರೆ. ನಾಲ್ಕು ತಲೆಮಾರಿನ ನಟರೊಂದಿಗೆ ಅಭಿನಯಿಸಿದ ಹಿರಿಮೆ ಇವರದು.
ಕನ್ನಡ ಕಿರುತೆರೆಯ ಆರಂಭ ಕಾಲದಿಂದ ಇಲ್ಲಿಯವರೆಗೆ ನಟಿಸುತ್ತ ಬಂದಿದ್ದಾರೆ. ಕಿರುತೆರೆ ಆರಂಭಕಾಲದ ಜಿ ವಿ ಅಯ್ಯರ್ ನಿರ್ದೇಶನದ ‘ಕೃಷ್ಣಾವತಾರ’ ಎಂಬ ಹಿಂದಿ ಧಾರಾವಾಹಿ, ‘ಸಿಹಿ ಕಹಿ’, ‘ನಮ್ಮ ನಮ್ಮಲ್ಲಿ’, ‘ಅಮ್ಮ’, ‘ಮನೆತನ’ ‘ಜನನಿ’, ‘ಕಾವ್ಯಾಂಜಲಿ’ ಮೊದಲಾದ ಧಾರವಾಹಿಗಳಿಂದ ಇತ್ತೀಚಿನ ಜನಪ್ರಿಯ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ವರೆಗೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ‘ಕೆಂಪೇಗೌಡ’, ‘ಆರ್ಯಭಟ’ ‘ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ’ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಇವರಿಗೆ ಬಂದಿವೆ. ಇದೀಗ ‘ಕಲಾ ವಿಭೂಷಣ’ ಗೌರವವೂ ದೊರಕುತ್ತಿದ್ದು, ಚಿತ್ರರಂಗದಲ್ಲಿ ಇನ್ನಷ್ಟುಉತ್ತಮ ಪಾತ್ರಗಳಲ್ಲಿ ನಟಿಸಲು ಪ್ರೇರಣೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.