
ಕಣ್ಣಲ್ಲೇ ನಟಿಸುವ ನಾಯಕ, ಕಂಚಿನ ಕಂಠದ ಗಾಯಕ ಎಲ್ಲವೂ ಆಗಿರುವ ಈ ಪ್ರತಿಭಾವಂತ ಕಲಾವಿದ ಈಗ ಕನ್ನಡದ ಜೊತೆಗೆ ತೆಲುಗಿನಲ್ಲೂ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ವಸಿಷ್ಠ ನಟನೆಯ ಕನ್ನಡ ಮತ್ತು ತೆಲುಗು ಚಿತ್ರಗಳು ಬಿಡುಗಡೆಗೆ ಸರತಿಯಲ್ಲಿ ಕಾಯುತ್ತಿವೆ. ಈಗ ಏರಿದ್ದು ಒಂದು ಎತ್ತರವಾದರೆ ಇನ್ನು ಏರಲಿರುವುದು ಮತ್ತೊಂದು ಎತ್ತರ ಎಂಬಂತೆ ಇರುವ ವಸಿಷ್ಠ ಸಿಂಹ ಜೊತೆ ಮಾತುಕತೆ.
- ರಾಜೇಶ್ ಶೆಟ್ಟಿ
ತೆಲುಗಿನತ್ತ ಮುಖ ಮಾಡಿದ್ದೀರಿ. ಅಲ್ಲೂ ಹಲವು ಸಿನಿಮಾಗಳಿವೆ. ತೆಲುಗು ಮಂದಿಯ ಪ್ರೀತಿ ಹೇಗೆ ಗಳಿಸಿದಿರಿ?
ಸಿನಿಮಾವನ್ನು ಪ್ರೀತಿಸಿಕೊಂಡು ಬಂದವರು ನಾವು. ವಿಕ್ಟರಿ ವೆಂಕಟೇಶ್ ನಟನೆಯ ‘ನಾರಪ್ಪ’ ಚಿತ್ರದಲ್ಲಿ ನಟನೆ ಶುರು ಮಾಡಿದಾಗಲೇ ತೆಲುಗು ಚಿತ್ರರಂಗದ ಅನೇಕ ತಂಡಗಳು ನನಗೆ ಬಂದು ಸ್ಕಿ್ರಪ್ಟ್ ಹೇಳಿದವು. ಸಿನಿಮಾದಲ್ಲಿ ನಟಿಸಿ ಸಿನಿಮಾ ರಿಲೀಸ್ ಆಗಿ ಗೆದ್ದ ಮೇಲೆ ಸ್ಕಿ್ರಪ್ಟ್ ಬರುವುದು ಸಹಜ. ಆದರೆ ಸೆಟ್‌ನಲ್ಲಿ ನನ್ನ ಕೆಲಸ ನೋಡಿಯೇ ಕಲಾವಿದ ಅನ್ನುವ ಕಾರಣಕ್ಕೆ ಸ್ಕಿ್ರಪ್ಟ್‌ಗಳು ಅರಸಿಕೊಂಡು ಬಂದಿದ್ದು ನನಗೆ ತುಂಬಾ ಖುಷಿ ಕೊಟ್ಟಸಂಗತಿ. ನಾನು ನಾಯಕನಾಗಿ ನಟಿಸಿದ ‘ಒಡೆಲ್ಲಾ ರೈಲ್ವೇ ಸ್ಟೇಷನ್’, ‘ನಯೀಮ್ ಡೈರೀಸ್’ ಶೂಟಿಂಗ್ ಮುಗಿದಿದೆ. ಇನ್ನೇನು ರಿಲೀಸ್ ಆಗುತ್ತದೆ. ಈಗ ಜಗಪತಿಬಾಬು ಅವರ ‘ಸಿಂಬಾ’ ಚಿತ್ರದಲ್ಲಿ ಎಸಿಪಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇನ್ನೂ ಹಲವು ಸ್ಕಿ್ರಪ್ಟ್‌ಗಳು ಬಂದಿವೆ. ನಿಧಾನಕ್ಕೆ ಘೋಷಣೆಯಾಗಲಿದೆ. ತೆಲುಗು ಚಿತ್ರದಲ್ಲಿ ನನಗೆ ನಾಯಕ ಪಾತ್ರಗಳೇ ಸಿಗುತ್ತಿರುವುದು ಅವರು ನನಗೆ ತೋರಿಸುತ್ತಿರುವ ಪ್ರೀತಿಗೆ ಪುರಾವೆ. ಅವರ ಪ್ರೀತಿಗೆ ನಾನು ಆಭಾರಿ.
ಚಿತ್ರರಂಗಕ್ಕೆ ಬಂದು ಎಂಟು ವರ್ಷ ಆಗಿದೆ. ಜರ್ನಿ ತೃಪ್ತಿಕರವಾಗಿದೆಯೇ? ಅಥವಾ ಹುಡುಕಾಟ ಜಾರಿಯಲ್ಲಿದೆಯೇ?
ತೃಪ್ತಿ ಅನ್ನುವುದಿಲ್ಲ. ತೃಪ್ತಿ ಸಿಗುವುದಕ್ಕೆ ಇನ್ನೂ ಬಹಳಷ್ಟುವರ್ಷಗಳು ಬೇಕು. ಹೊಸ ಹೊಸ ಪಾತ್ರಗಳಲ್ಲಿ ನಟಿಸಬೇಕು ಅನ್ನುವ ಆಸೆ, ಹುಡುಕಾಟ ಇನ್ನೂ ಜಾರಿಯಲ್ಲಿದೆ. ಆದರೆ ಈ ಪಯಣ ನನಗೆ ಖುಷಿ ಕೊಟ್ಟಿದೆ. ಹೊಸ ಹೊಸ ಪಾತ್ರಗಳು ನನಗಾಗಿ ಸೃಷ್ಟಿಯಾಗುತ್ತಿದೆ. ಅದಕ್ಕೆ ಜೀವ ತುಂಬುವ ಅವಕಾಶ ನನಗೆ ಸಿಗುತ್ತಿದೆ. ಸಂತೋಷ ಇದೆ.
ಕನ್ನಡದಲ್ಲಿ ಯಾವ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ?
ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಸಿನಿಮಾ ನವೆಂಬರಲ್ಲಿ ಬಿಡುಗಡೆಯಾಗುತ್ತದೆ. ವಿಶಿಷ್ಟಕತೆ ಹೊಂದಿರುವ ಸಿನಿಮಾ ಅದು. ಅದನ್ನು ಹೊರತು ಪಡಿಸಿ ‘ತಲ್ವಾರ್‌ಪೇಟೆ’ ಎಂಬ ಸಿನಿಮಾದಲ್ಲಿ ಸಾಣೆ ಹಿಡಿಯುವವನ ಪಾತ್ರ ಮಾಡುತ್ತಿದ್ದೇನೆ. ಅದೊಂದು ಬೇರೆಯದೇ ಜಗತ್ತು. ಸಮಾಜದ ಕೊನೆಯಲ್ಲಿ ಇರುವವನ ಪ್ರೀತಿ, ಸ್ನೇಹ, ಬದುಕಿನ ಕತೆ. ‘ಹೆಡ್ ಬುಷ್’ ಸಿನಿಮಾದ ಶೂಟಿಂಗ್ ಬಾಕಿ ಇದೆ. ಅದು ಕನ್ನಡದ ಮೈಲಿಗಲ್ಲು ಸಿನಿಮಾ ಆಗಲಿದೆ. ಹರಿಪ್ರಿಯಾ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರ ಇದೆ. ಸ್ಕಿ್ರಪ್ಟ್‌ಗಳು ಬರುತ್ತಿವೆ. ಒಂದೊಂದೇ ಕತೆಗಳನ್ನು ಕೇಳುತ್ತಿದ್ದೇನೆ. ಯಾವ ಕತೆಗೆ ಮರುಳಾಗುತ್ತೇನೋ ಆ ಕತೆಯನ್ನು ನಿಮಗೆ ಹೇಳುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.