ಮೂರು ದಿನಗಳ ಹಿಂದೆ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನನ್ನ ಅಜ್ಜಿ ಭಾರ್ಗವಿ ಜೊತೆಗಿದ್ದೆ: ಸಂಯುಕ್ತಾ ಹೊರನಾಡು

Kannadaprabha News   | Asianet News
Published : Feb 20, 2022, 11:28 AM IST
ಮೂರು ದಿನಗಳ ಹಿಂದೆ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನನ್ನ ಅಜ್ಜಿ ಭಾರ್ಗವಿ ಜೊತೆಗಿದ್ದೆ: ಸಂಯುಕ್ತಾ ಹೊರನಾಡು

ಸಾರಾಂಶ

ಸದಾ ನಗುಮೊಗದ, ಎಂದೂ ಸಿಡಿಮಿಡಿಗೊಳ್ಳದ, ಅಂದುಕೊಂಡದ್ದನ್ನು ಮಾಡಿಯೇ ತೀರುವ ಅಜ್ಜಿ ಭಾರ್ಗವಿಯ ನಿರ್ಗಮನದ ನೋವನ್ನು ಮರೆಯಲು ಅಜ್ಜಿಯ ಮುದ್ದಿನ ಮೊಮ್ಮಗಳು ಸಂಯುಕ್ತಾ ಕಂಡುಕೊಂಡ ಮಾರ್ಗ ಇದು. ಅಜ್ಜಿಯ ಜೊತೆಗಿನ ತನ್ನ ಮಧುರ ಒಡನಾಟವನ್ನು ಈ ಬರಹದಲ್ಲಿ ಅವರು ತೆರೆದಿಟ್ಟಿದ್ದಾರೆ. ಇದು ಅಜ್ಜಿಗೆ ಮೊಮ್ಮಗಳ ನುಡಿನಮನ    

ಸಂಯುಕ್ತಾ ಹೊರನಾಡು

ನನ್ನಜ್ಜಿ ಮತ್ತು ನನ್ನ ಸಂಬಂಧ ನನ್ನ ಬದುಕಿನ ಒಂದು ಶ್ರೇಷ್ಠವಾದ ಪ್ರಯಾಣ. ನನ್ನ ಜೀವನವನ್ನು ಪ್ರಭಾವಿಸಿದ ಬಹುದೊಡ್ಡ ಅಂಶ ನನ್ನಜ್ಜಿ. ತನ್ನ ರವಿಕೆಯನ್ನು ತಾನೇ ಹೊಲಿಯುವುದರಿಂದ ಹಿಡಿದು ತನ್ನ ಲಕ್ಷಣವಾದ ಮುಖದ ಹಣೆ ಮೇಲೆ ದುಂಡನೆಯ ಕುಂಕುಮದ ಬೊಟ್ಟು ಇಡುವವರೆಗೂ ನನ್ನಜ್ಜಿ ಭಜ್ಜಿ ತನ್ನದೇ ಆದ ದಾರಿಯನ್ನು ಕಂಡುಕೊಂಡಿದ್ದಳು. ಆ ದಾರಿಯಲ್ಲಿ ನಡೆಯುವ ಧೈರ್ಯ ತೋರಿದ್ದಳು. ದಾರಿಯಲ್ಲಿರುವ ಸಮಸ್ತವನ್ನೂ ತನ್ನದಾಗಿಸಿಕೊಂಡಿದ್ದಳು.

ತನ್ನೊಳಗಿದ್ದ ಬೆಂಕಿಯ ದೊಂದಿಯ ಮೂಲಕ ತಾನಿರುವ ಜಾಗವನ್ನು ಬೆಳಗಿಸುತ್ತಿದ್ದಳು. ಖುದ್ದು ಆಕೆಯೇ ಒಂದು ಶಕ್ತಿಯಾಗಿದ್ದಳು. ಅದು ಅವಳಿಗೆ ಗೊತ್ತಿತ್ತು. ಸುತ್ತಮುತ್ತ ಇದ್ದವರಿಗೂ ತಿಳಿದಿತ್ತು. ಆದರೆ ಆಕೆ ಬಹುತೇಕ ಹೃದಯಗಳನ್ನು ಗೆದ್ದಿದ್ದು ಘನತೆಯಿಂದ. ಆಕೆ ತನ್ನ ಸುತ್ತ ಇದ್ದ ಪ್ರತಿಯೊಂದಕ್ಕೂ ಘನತೆ ತಂದುಕೊಟ್ಟಳು. ಒಬ್ಬ ಪರಿಪೂರ್ಣ ಶ್ರೇಷ್ಠ ಸ್ತ್ರೀ ಶಕ್ತಿಯಾಗಿದ್ದಳು.

ನನ್ನ ಅಜ್ಜಿ ನನ್ನ ಮೊದಲ ನಿರ್ದೇಶಕಿ. ಆಕೆ ನನ್ನ ಮೊದಲ ನಾಟಕ ಉಂಡಾಡಿ ಗುಂಡ ನಿರ್ದೇಶನ ಮಾಡಿದಾಗ ನನಗೆ ೬ ವರ್ಷ ವಯಸ್ಸು. ಆಕೆ ಆಗಲೂ ಬಾಸ್, ನಾಯಕಿ. ಎಲ್ಲರೂ ತಮಗೆ ಗೊತ್ತಿಲ್ಲದೆಯೇ ಅವಳನ್ನು ಹಿಂಬಾಲಿಸುತ್ತಿದ್ದರು. ಆಕೆ ಜನರನ್ನು ಎತ್ತಿ ಹಿಡಿಯುತ್ತಿದ್ದಳು. ಪ್ರೋತ್ಸಾಹಿಸುತ್ತಿದ್ದಳು. ಅವಳ ಸುತ್ತ ಇದ್ದವರಿಗೆ ಆಕೆಯನ್ನು ಪ್ರೀತಿಸದೆ ಬೇರೆ ದಾರಿಯೇ ಇರುತ್ತಿರಲಿಲ್ಲ.

ಅವಳು ಹೋದಲ್ಲೆಲ್ಲಾ ನಾನು ಹಿಂಬಾಲಿಸುತ್ತಿದ್ದೆ. ಅನೇಕರಿಗೆ ಇದ್ದಂತೆ ಆಕೆ ಮಾಡಿದ್ದನ್ನೆಲ್ಲಾ ನಾನೂ ಮಾಡಬೇಕು ಅನ್ನುವ ಹಂಬಲ ನನಗೆ. ಅಷ್ಟು ಆಕರ್ಷಕ ಅಯಸ್ಕಾಂತದಂಥ ವ್ಯಕ್ತಿತ್ವ ಅವಳದು. ನನ್ನಜ್ಜಿ ಮತ್ತು ನನ್ನಜ್ಜ ಮೇಕಪ್ ನಾಣಿಯವರನ್ನು ನಾನು ರಂಗದ ಮೇಲೆ ನೋಡುತ್ತಿದ್ದೆ. ನನ್ನಜ್ಜಿ ವೇದಿಕೆ ಹತ್ತಿ ಮೈಕ್ ಹಿಡಿದು ಮೊದಲು ತನ್ನ ಬಗ್ಗೆಯೇ ತಮಾಷೆ ಮಾಡುತ್ತಿದ್ದಳು. ಅನಂತರ ಜೀವನದ ಕುರಿತು ತಮಾಷೆ ಮಾಡುತ್ತಿದ್ದಳು. ಪ್ರತಿಯೊಬ್ಬರು ಆಕೆಯ ಜೊತೆಯೇ ನಗುತ್ತಿದ್ದರು. ಜೀವನವನ್ನು ಒಪ್ಪಿಕೊಂಡಾಗ, ನಮ್ಮನ್ನು ನಾವೇ ಪ್ರೀತಿಸಿದಾಗ ಮತ್ತು ನಮ್ಮನ್ನು ನೋಡಿ ನಾವೇ ನಗುವ ಶಕ್ತಿ ಗಳಿಸಿಕೊಂಡಾಗ ಮಾತ್ರ ಆಕೆಯಂತೆ ಇರುವುದು ಸಾಧ್ಯ ಅನ್ನುವುದು ನನಗೀಗ ಅರಿವಾಗಿದೆ. ನನ್ನಜ್ಜಿಗೆ ಆ ಕಲೆ ಕರಗತವಾಗಿತ್ತು. ನಟನೆಗಿಂತ, ನಿರ್ದೇಶನಕ್ಕಿಂತ, ಗಾಯನಕ್ಕಿಂತ ನಾನು ನನ್ನಜ್ಜಿಯಿಂದ ಹೇಗಿರಬೇಕು ಅನ್ನುವುದನ್ನು ಕಲಿತೆ. ಯಾವುದು ನಮ್ಮ ನಿಯಂತ್ರಣದಲ್ಲಿ ಇಲ್ಲವೋ ಅದನ್ನು ಬಿಟ್ಟುಬಿಡಬೇಕು ಮತ್ತು ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಅನ್ನುವುದನ್ನು ಕಲಿತೆ.

Bhargavi Narayan Passes Away: ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಅವಳು ತನ್ನ ನಿಷ್ಕಲ್ಮಷವಾದ ನಗುವಿನಿಂದ, ಉದಾರವಾದ ಮಾತುಗಳಿಂದ ತಾನು ಭೇಟಿಯಾದವರನ್ನೆಲ್ಲಾ ತುಸು ಮೃದು ಮಾಡುತ್ತಿದ್ದಳು. ಜಗತ್ತನ್ನು ಕರುಣೆಯಿಂದ ನೋಡುವ ಹಾಗೆ ಬದಲಿಸುತ್ತಿದ್ದಳು. ಈ ಜಗತ್ತಿಗೆ ಬೇಕಾಗಿರುವುದು ಕೂಡ ಅದೇ. ಆಕೆ ಯಾವತ್ತೂ ಉಪದೇಶ ನೀಡಲಿಲ್ಲ. ಆಕೆ ತನ್ನ ಬದುಕನ್ನು ಬದುಕಿದಳು ಮತ್ತು ಆಕೆಯ ಆ ದಾರಿ ಎಲ್ಲರನ್ನೂ ಸೆಳೆಯುವಂತಿತ್ತು. ಹಾಗಾಗಿಯೇ ಹೇಗಾದರೂ ಆಕೆಯಂತೆ ಇದ್ದುಬಿಡಬೇಕು ಎಂಬ ಉತ್ಕಟವಾದ ಆಸೆಯನ್ನು ಹುಟ್ಟಿಸುತ್ತಿದ್ದಳು.

 

ಅವಳು ಎಷ್ಟು ಉದಾರಿಯಾಗಿದ್ದಳು ಎಂದರೆ ಯಾವತ್ತೂ ತನ್ನ ಬಗ್ಗೆ ಯೋಚಿಸಲಿಲ್ಲ. ಯಾವತ್ತೋ ಒಂದಿನ ಫೋನ್ ಮಾಡಿ, ‘ಸಂಯು, ನನ್ನ ಕೊನೆಯಾಸೆಯೊಂದಿದೆ ನೆರವೇರಿಸ್ತೀಯಾ’ ಎಂದು ಕೇಳಿದ್ದಳು. ತಾನು ಕಟ್ಟಿದ ಮನೆ ಇರುವ ರಸ್ತೆ, ತಾನೇ ಕಟ್ಟಿದ ಕುಟುಂಬ ಇರುವ ರಸ್ತೆಗೆ ಮೇಕಪ್ ನಾಣಿ ರಸ್ತೆ ಎಂಬ ಹೆಸರಿರಬೇಕು, ಮಾಡಿಕೊಡ್ತೀಯಾ ಎಂದಿದ್ದಳು. ಅವಳ ಆ ಕೊನೆಯಾಸೆ ಈಡೇರಿಸಿದ ಧನ್ಯಭಾವ ನನಗಿದೆ. ಅವಳಿಗೆ ಅವಳ ನಿರ್ಗಮನದ ಸೂಚನೆ ಮೊದಲೇ ಸಿಕ್ಕಿತ್ತು ಅನ್ನಿಸುತ್ತದೆ. ಯಾವುದೋ ಒಂದು ಬೆಳಿಗ್ಗೆ ಫೋನ್ ಮಾಡಿದವಳೇ, ‘ಸಂಯು, ನನ್ನನ್ನು ಅಂಚೆಕಚೇರಿಗೆ ಒಮ್ಮೆ ಕರೆದುಕೊಂಡು ಹೋಗುತ್ತೀಯಾ’ ಎಂದು ಕೇಳಿದಳು. ನಾನು ಯಾಕೆ ಎಂದು ವಿಚಾರಿಸಿದೆ. ‘ಸೈಂಟ್ ಜಾನ್ಸ್ ಆಸ್ಪತ್ರೆಗೆ ನನ್ನ ದೇಹದಾನ ಮಾಡಲು ನೋಂದಣಿ ಪತ್ರವನ್ನು ಸಲ್ಲಿಸಬೇಕು’ ಎಂದಳು. ನಾನು ತಕ್ಷಣ ‘ಆನ್ ಲೈನ್‌ನಲ್ಲಿ ಮಾಡುತ್ತೇನೆ ಬಿಡು’ ಎಂದೆ. ಅಷ್ಟು ಹೊತ್ತಿಗಾಗಲೇ ಆಕೆ ಮೆತ್ತಗಾಗಿಬಿಟ್ಟಿದ್ದಳು. ಅವಳಿಗೆ ಮತ್ತಷ್ಟು ತ್ರಾಸು ಕೊಡುವುದು ನನಗೆ ಇಷ್ಟವಿರಲಿಲ್ಲ. ಆದರೆ ಅವಳು ಮಾತ್ರ, ‘ನೀನು ನನ್ನನ್ನು ಕರೆದುಕೊಂಡು ಹೋಗದಿದ್ದರೆ ನಾನೇ ನಡೆದುಕೊಂಡು ಅಂಚೆ ಕಚೇರಿಗೆ ಹೋಗುತ್ತೇನೆ’ ಎಂದಳು. ಅದು ಅವಳ ಬೆದರಿಕೆ. ಸ್ವಲ್ಪ ಹೆದರಿಕೆ ಹುಟ್ಟಿತು. ಮರುದಿನವೇ ಎದ್ದು ಹೋದೆ. ಅವಳು ಗೇಟ್ ಬಳಿಯೇ ಕಾಯುತ್ತಾ ನಿಂತಿದ್ದಳು.

ಕಣ್ಣೆದುರೇ ಜನ ಸಾಯ್ತಿದ್ರೂ ಏನೂ ಮಾಡಲಾಗದ ಅಸಹಾಯಕತೆ: ಸಂಯುಕ್ತಾ ಹೊರನಾಡು

ರೇಷ್ಮೆ ಸೀರೆ ಧರಿಸಿಕೊಂಡು, ಹಣೆಗೆ ದೊಡ್ಡ ಕುಂಕುಮ ಬೊಟ್ಟು ಇಟ್ಟುಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು, ಅವಳಿಷ್ಟದ ನೆಕ್‌ಲೇಸ್ ಹಾಕಿಕೊಂಡು ನಿಂತಿದ್ದಳು. ತಾನು ಅಂದುಕೊಂಡಿದ್ದು ಸಾಧಿಸುವ ದೃಢ ಸಂಕಲ್ಪ ಇಟ್ಟುಕೊಂಡು ನಿಂತಿದ್ದಳು. ಆ ಕ್ಷಣ ನನಗೆ ಆಕೆ ಒಂದು ಸಾಗರದಂತೆ ಕಂಡಳು. ಅತಿ ಸುಂದರ, ಅತಿ ಶಕ್ತಿಶಾಲಿ ಮತ್ತು ತಣ್ಣನೆಯ ಶಾಂತ ಸಮುದ್ರ. ನನ್ನ ಜೊತೆ ಸಾಗುವ ಕೊನೆಯ ಪಯಣ ಇದು ಅನ್ನುವುದು ಅವಳಿಗೆ ಗೊತ್ತಿತ್ತೋ ಏನೋ. ನನಗೆ ತಿಳಿದಿರಲಿಲ್ಲ. ಅದೊಂಥರ ಅವಳು ತನ್ನ ಸಂಕಲ್ಪ ಸಾಧನೆಯನ್ನು ಸಾಕಾರಗೊಳಿಸುವ ಸಂತೋಷದಂತೆಯೂ ಬದುಕನ್ನು ಸಂಭ್ರಮಿಸುವ ಗಳಿಗೆಯಂತೆಯೂ ಅನ್ನಿಸುತ್ತಿತ್ತು. ಈ ಅದ್ಭುತ ಕ್ಷಣವನ್ನು ಅನುಭವಿಸುವ ಗಳಿಗೆಯಲ್ಲಿ ನಾನು ಅವಳ ಪಕ್ಕ ಇದ್ದಿದ್ದು ನನ್ನ ಸುಯೋಗ ಮತ್ತು ನಾನು ಯಾವತ್ತೂ ಮರೆಯಲಾಗದ ನೆನಪು.

ಈ ಮೂರು ದಿನಗಳ ಹಿಂದೆ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಾನು ಅವಳ ಜೊತೆ ಇದ್ದೆ. ಅವಳು ತನ್ನ ಸಾವಿನಲ್ಲಿಯೂ ಉದಾರತೆ ಮೆರೆದಿದ್ದಳು. ದೇಹದಾನ ಮಾಡಿದ್ದಳು. ಅದನ್ನು ಮೀರಲು ಯಾರಿಂದಲಾದರೂ ಸಾಧ್ಯವೇ? ಆಕೆ ಅವತ್ತು ಮಹಾ ಶಾಂತಮೂರ್ತಿಯಂತೆ ಕಂಡಳು. ಸೈಂಟ್ ಜಾನ್ಸ್ ಹೋಗುವ ಈ ಪಯಣ ನನ್ನ ಬದುಕಿನ ಮಹತ್ವದ ಪಯಣವಾಗಿತ್ತು. ನಾನು ಈಗಲೂ ಆಕೆಯಂತೆ ಇರಲು ಹಂಬಲಿಸುತ್ತಿದ್ದೇನೆ. ನನಗೆ ಗೊತ್ತಿರುವುದು ಅಷ್ಟೇ. ನಾನು ಆಕೆಯಂತೆ ಆಗಬೇಕು.

ನನ್ನ ಬದುಕಿನ ಅತ್ಯಂತ ಶ್ರೇಷ್ಠ ಸಂಬಂಧವೆಂದರೆ ಅದು ನನ್ನಜ್ಜಿಯ ಜೊತೆಗಿನ ನನ್ನ ಪಯಣ. ಆಕೆ ತನ್ನ ಮೊಮ್ಮಕ್ಕಳಿಗೆ, ತನ್ನ ಕುಟುಂಬಕ್ಕೆ ಮಾತ್ರ ನಾಯಕಿಯಾಗಿರಲಿಲ್ಲ. ಮಹಿಳೆಯರು, ಕಲಾವಿದರು ಮತ್ತು ಆಕೆಯ ದಾರಿಯಲ್ಲಿ ಸಿಕ್ಕಿದ ಎಲ್ಲರ ಸ್ಫೂರ್ತಿಯಾಗಿದ್ದಳು. ಅವಳು ನಿಜವಾದ ಅರ್ಥದಲ್ಲಿ ಒಬ್ಬಳು ಶ್ರೇಷ್ಠ ಸ್ತ್ರೀ ಸಮಾನತಾವಾದಿಯಾಗಿದ್ದಳು. ನನ್ನಜ್ಜಿ ಭಜ್ಜಿ ನನ್ನ ರಕ್ತನಾಳಗಳಲ್ಲಿದ್ದಾಳೆ. ನನ್ನ ದೇಹದ ಕಣಕಣಗಳಲ್ಲಿದ್ದಾಳೆ. ನನ್ನ ಡಿಎನ್‌ಎಯಲ್ಲಿದ್ದಾಳೆ. ನಾನು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಆಕೆ ನನ್ನೊಳಗಿದ್ದಾಳೆ.

ಅವಳು ಹೆಮ್ಮೆ ಪಡುವಂತೆ ನಾನು ಬದುಕಬೇಕು. ಅದಕ್ಕಾಗಿಯೇ ದೇಹದಾನ ಮಾಡುವ ನೋಂದಣಿ ಪತ್ರವನ್ನು ತಂದಿಟ್ಟುಕೊಂಡಿದ್ದೇನೆ. ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗುತ್ತೇನೆ. ಅವಳು ಬದುಕಿದಂತೆ ಬದುಕುತ್ತೇನೆ. ಅವಳು ಹೆಮ್ಮೆಯಿಂದ ಜೋರಾಗಿ ಎಂದಿನಂತೆ ನಿಷ್ಕಲ್ಮಷ ನಗು ಬೀರುವಂತೆ ಬಾಳುತ್ತೇನೆ. ಇದು ನನ್ನ ಪ್ರತಿಜ್ಞೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಜೈಲಲ್ಲಿ ಮುಂದುವರೆದ ದಾಸನ ದಾದಾಗಿರಿ.. ಟಿವಿ ಬದಲು ಸಿಸಿಟಿವಿ ಬಂತು ದರ್ಶನ್ ಸೆಲ್‌ಗೆ!
    Actress Amulya: ತಮ್ಮ ಮುದ್ದಾದ ‘Family’ ಜೊತೆ Golden Girl.. ಯಾರ್ ದೃಷ್ಟಿ ಬೀಳದಿರಲಿ