'ಶುಲ್ಕ ವಿನಾಯಿತಿ ನೀಡದಿದ್ದರೆ ಸಿನಿಮಾ ಬಿಡುಗಡೆ ಮಾಡಲ್ಲ'

By Kannadaprabha NewsFirst Published Oct 14, 2020, 9:29 AM IST
Highlights

ಕೋವಿಡ್‌ 19 ಕಾರಣದಿಂದ ತೊಂದರೆಗೆ ಸಿಲುಕಿರುವ ನಿರ್ಮಾಪಕರ ಹಿತ ಕಾಯುವ ದೃಷ್ಟಿಯಿಂದ ಯುಎಫ್‌ಓ ಮತ್ತು ಕ್ಯೂಬ್‌ ಡಿಜಿಟಲ… ಸಿನಿಮಾ ಡಿಸ್ಟ್ರಿಬ್ಯೂಷನ್‌ ಸಂಸ್ಥೆಗಳು ಸದ್ಯ ಪಡೆಯುತ್ತಿರುವ ಸೇವಾ ಶುಲ್ಕವನ್ನು ಎರಡು ವರ್ಷಗಳ ಕಾಲ ನಿಲ್ಲಿಸಬೇಕು!

ಇದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಒತ್ತಾಯ.

ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗಳು ಪ್ರತಿ ಶೋಗೆ ನಿರ್ಮಾಪಕನಿಂದ 300 ರು. ಪಡೆಯುತ್ತಿವೆ. ವಾರಕ್ಕೆ ಒಂದು ಚಿತ್ರಮಂದಿರದಿಂದ 40ರಿಂದ 50 ಸಾವಿರ ರು.ಗಳನ್ನು ನಿರ್ಮಾಪಕ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಎರಡು ವರ್ಷಗಳ ಕಾಲ ವಿನಾಯತಿ ನೀಡಬೇಕು ಎಂಬ ಮನವಿಯನ್ನು ಯುಎಫ್‌ಓ ಮತ್ತು ಕ್ಯೂಬ್‌ ಮುಂಬೈ ಕಚೇರಿಗೆ ಇಮೇಲ್‌ ಮೂಲಕ ಮನವಿ ಸಲ್ಲಿಸಿತ್ತು. ಆದರೆ ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ.

280 ಮೂವಿ ರೆಡಿ: ಥಿಯೇಟರ್ ತೆರೆದರೂ ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ 
 

‘ಎಲ್ಲಾ ನಿರ್ಮಾಪಕನಿಗೂ ಒಳಿತಾಗಬೇಕು, ನಿರ್ಮಾಪಕ ಉಳಿದರೆ ಮಾತ್ರ ಚಿತ್ರರಂಗ ಬೆಳೆಯಲು ಸಾಧ್ಯ. ಈಗ 100ಕ್ಕೂ ಹೆಚ್ಚು ಹೊಸ ಚಿತ್ರಗಳು ಬಿಡುಗಡೆಗೆ ಮುಂದಾಗಿವೆ. ಈ ಹಂತದಲ್ಲಿ ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗಳು ನಿರ್ಮಾಪಕನ ಹಿತ ಕಾಯಬೇಕು’. ಕೆ. ಮಂಜು, ಕಾರ್ಯದರ್ಶಿ

ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ನಿರ್ಮಾಪಕರ ಸಂಘ, ಸಾಧ್ಯವಾದಷ್ಟುಬೇಗ ನಮ್ಮ ಮನವಿಯನ್ನು ಪುರಸ್ಕರಿಸಬೇಕು, ನಿರ್ಮಾಪಕರ ಹಿತ ಕಾಯಬೇಕು, ಇಲ್ಲದೇ ಇದ್ದರೆ ಯಾವುದೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ರಾಜ್ಯದ 600 ಥಿಯೇಟರ್‌ಗಳಿಗೆ ಸಿನಿಮಾ ಕೊಡೋರು ಯಾರು?

ಸೇವಾಶುಲ್ಕ ಕೈ ಬಿಡಲು ಬುಕ್‌ ಮೈ ಶೋಗೆ ಒತ್ತಾಯ

ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರ ಹೇಳಿದೆ. ಜೊತೆಗೆ ಆನ್‌ಲೈನ್‌ ಬುಕ್ಕಿಂಗ್‌ಗೆ ಇದ್ದ ಮಿತಿಯನ್ನೂ ತೆಗೆದುಹಾಕಿದೆ. ಇಂತಹ ವೇಳೆಯಲ್ಲಿ ಬುಕ್‌ ಮೈ ಶೋ ಒಂದು ಟಿಕೆಟ್‌ಗೆ 40 ರು ವರೆಗೆ ಸೇವಾಶುಲ್ಕ ಪಡೆಯುತ್ತಿರುವುದು ಸರಿಯಲ್ಲ. ಬುಕ್‌ ಮೈ ಶೋ ಸಂಸ್ಥೆ ಈ ಸಂದರ್ಭದಲ್ಲಿ ಕಮಿಷನ್‌ ಪಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ನಿರ್ಮಾಪಕರ ಸಂಘ ಒತ್ತಾಯಿಸಿದೆ.

 

‘ನಿರ್ಮಾಪಕ ಕೋವಿಡ್‌ ಕಾರಣದಿಂದ ಸಾಕಷ್ಟುಸಮಸ್ಯೆಗೆ ತುತ್ತಾಗಿದ್ದಾನೆ. ಸರ್ಕಾರ ಶೇ.50ರಷ್ಟುಜನರು ಮಾತ್ರ ಚಿತ್ರಮಂದಿರಕ್ಕೆ ಬರಬೇಕು ಎಂದು ಹೇಳಿದೆ. ಹೀಗಿರುವಾಗ ಚಿತ್ರಮಂದಿರಗಳು, ಕಲಾವಿದರು, ತಂತ್ರಜ್ಞರೆಲ್ಲರೂ ನಿರ್ಮಾಪಕನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆದರೆ ಯುಎಫ್‌ಓ, ಕ್ಯೂಬ್‌ ಸಂಸ್ಥೆಗಳು ಮಾತ್ರ ಇನ್ನೂ ನಮ್ಮ ಮನವಿ ಆಲಿಸಿಲ್ಲ. ಸಿನಿಮಾ ಪ್ರದರ್ಶನದ ವೇಳೆ ಪ್ರದರ್ಶನವಾಗುವ ಜಾಹೀರಾತಿನಿಂದ ಬರುವ ಆದಾಯ ಅವರಿಗೆ ಸಿಗುತ್ತಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ನಿರ್ಮಾಪಕನಿಗೆ ಈಗಾಗಲೇ ಆಗಿರುವ ಹೊರೆಯಲ್ಲಿ ಅದೂ ತುಸು ಪಾಲು ಪಡೆದುಕೊಳ್ಳಬೇಕು’ - ಪ್ರವೀಣ್‌ ಕುಮಾರ್‌, ನಿರ್ಮಾಪಕರ ಸಂಘದ ಅಧ್ಯಕ್ಷ

 

click me!