5ಕೋಟಿ ಸಾಲಕ್ಕೆ ಬಡ್ಡಿ ಸೇರಿಸಿ 13 ಕೋಟಿ ಹಿಂತಿರುಗಿಸುವಂತೆ ಕನ್ನಡ ನಿರ್ಮಾಪಕ ಪುಷ್ಕರ್‌ಗೆ ಕೊಲೆ ಬೆದರಿಕೆ!

By Kannadaprabha News  |  First Published Jun 30, 2024, 6:22 PM IST

ಸಾಲದ ಶೂಲದಲ್ಲಿರುವ ಚಿತ್ರ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯಗೆ ಅಧಿಕ ಬಡ್ಡಿ ನೀಡುವಂತೆ ಕೊಲೆ ಬೆದರಿಕೆ. ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು.


ಬೆಂಗಳೂರು (ಜೂ.30): ಹಣಕಾಸು ವ್ಯವಹಾರ ಸಂಬಂಧ ಚಿತ್ರ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿರ್ಮಾಪಕ ಪುಷ್ಕರ್‌ ಅವರು ನೀಡಿದ ದೂರು ಆಧರಿಸಿ ಸಹಕಾರ ಸಂಘಗಳ ಉಪನಿಬಂಧಕ ಕಿಶೋರ್‌ ಕುಮಾರ್‌ ಸಿಸಿಬಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಡಿ.ಬಿ.ಆದರ್ಶ, ಸಿ.ಹರ್ಷ, ಶಿವು, ಡಿ.ಬಿ.ಹರ್ಷ ವಿರುದ್ಧ ಕರ್ನಾಟಕ ಲೇವಾದೇವಿದಾರರ ಕಾಯ್ದೆ ಮತ್ತು ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್‌ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು

ದೂರಿನಲ್ಲಿ ಏನಿದೆ?: ನಿರ್ಮಾಪಕ ಪುಷ್ಕರ್‌ ನೀಡಿದ ದೂರಿನಲ್ಲಿ ‘ನಾನು ಬಸವೇಶ್ವರನಗರದಲ್ಲಿ ಪುಷ್ಕರ್‌ ಫಿಲಂ ಸಂಸ್ಥೆ ಹೊಂದಿದ್ದು, ಗೋಧಿಬಣ್ಣ ಸಾಧಾರಣ ಮೈಕಟ್ಟು, ಕಿರಿಕ್‌ ಪಾರ್ಟಿ, ಅವನೇ ಶ್ರೀಮನ್‌ ನಾರಾಯಣ ಸೇರಿದಂತೆ 12 ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಅವನೇ ಶ್ರೀಮನ್‌ ನಾರಾಯಣ, ಅವತಾರ ಪುರುಷ-1, ಅವತಾರ ಪುರುಷ-2 ಸಿನಿಮಾಗಳಿಂದ ಹಾಗೂ ಕೋವಿಡ್‌ನಿಂದ ಸಾಕಷ್ಟು ಹಣವನ್ನು ಕಳೆದುಕೊಂಡು ಆರ್ಥಿಕ ನಷ್ಟ ಹೊಂದಿದ್ದೆ. ಹೀಗಾಗಿ 2019ರಲ್ಲಿ ನನ್ನ ಸಂಬಂಧಿ ಡಿ.ಬಿ.ಆದರ್ಶ ಬಳಿ ಸಾಲಕ್ಕೆ ಹಣ ಕೇಳಿದೆ. ಇದಕ್ಕೆ ಆತ ಒಪ್ಪಿದ ಹಿನ್ನೆಲೆಯಲ್ಲಿ ತಿಂಗಳಿಗೆ ಶೇ.5ರ ಬಡ್ಡಿಯಂತೆ 2019ರಿಂದ 2023ರ ವರೆಗೆ ಹಂತ ಹಂತವಾಗಿ ₹5 ಕೋಟಿ ಸಾಲ ಪಡೆದಿದ್ದೆ. ಈ ಸಾಲಕ್ಕೆ ಭದ್ರತೆಯಾಗಿ 10 ಖಾಲಿ ಚೆಕ್‌ಗಳನ್ನು ನೀಡಿದ್ದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಸಲು-ಬಡ್ಡಿ ಸೇರಿ ₹11.50 ಕೋಟಿ ನೀಡಿರುವೆ: ‘ಆದರ್ಶ್‌ನಿಂದ ಪಡೆದಿದ್ದ ₹5 ಕೋಟಿ ಸಾಲಕ್ಕೆ ಪ್ರತಿ ತಿಂಗಳು ಬಡ್ಡಿ ಪಾವತಿಸಿದ್ದೇನೆ. ಬಳಿಕ ಅದರ್ಶ್‌ ಹಾಗೂ ಆತ ಹೇಳಿದ ಇತರೆ ವ್ಯಕ್ತಿಗಳಿಗೆ ವಿವಿಧ ಹಂತಗಳಲ್ಲಿ ಅಸಲು ಮತ್ತು ಬಡ್ಡಿ ರೂಪದಲ್ಲಿ ಒಟ್ಟು ₹11.50 ಕೋಟಿ ನೀಡಿದ್ದೇನೆ. ಆದರೂ ಆದರ್ಶ್‌ ಹಾಗೂ ಇತರರು, ನೀನು ನೀಡಿರುವ ಹಣ ಬಡ್ಡಿ ಮತ್ತು ಚಕ್ರ ಬಡ್ಡಿಗೆ ಸರಿಯಾಗಿದೆ. ಹೀಗಾಗಿ ಇನ್ನೂ ನೀನು ನಮಗೆ ₹13 ಕೋಟಿ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಅಲ್ಲದೆ, ಆದರ್ಶ್, ಹರ್ಷ ಹಾಗೂ ಸಹಚರರು ನನ್ನ ಮನೆ ಮತ್ತು ಕಚೇರಿಗೆ ಹುಡುಗರನ್ನು ಕಳುಹಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಹಾಲಿವುಡ್ ನಲ್ಲಿ ಭೀಕರ ಹತ್ಯೆ, 8 ತಿಂಗಳ ಗರ್ಭಿಣಿ ನಟಿಯನ್ನು 16 ಬಾರಿ ಇರಿದು, ನೇತು ಹಾಕಿದ ಹಂತಕರು!

ಅಧಿಕ ಬಡ್ಡಿಗೆ ಬೇಡಿಕೆ, ಕೊಲೆ ಬೆದರಿಕೆ: ‘ಆದರ್ಶ್‌ ಮತ್ತು ಹರ್ಷ ಲೇವಾದೇವಿ ವ್ಯವಹಾರ ಮಾಡಲು ಸಹಕಾರ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಆದರೂ ಸಾರ್ವಜನಿಕರಿಂದ ಭದ್ರತೆಗೆ ಖಾಲಿ ಚೆಕ್‌ಗಳು, ಆಸ್ತಿ ಪತ್ರಗಳನ್ನು ಪಡೆದು ಸಾಲ ನೀಡುತ್ತಿದ್ದಾರೆ. ಮಾಸಿಕ ಶೇ.5ರಿಂದ ಶೇ.15ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಬಡ್ಡಿ ಹಣ ನೀಡಿದ ಸಾಲಗಾರರ ಮನೆ ಬಳಿ ಹುಡುಗರನ್ನು ಕಳುಹಿಸಿ ಹೆದರಿಸುವುದು, ನಿಂದಿಸುವುದು ಹಾಗೂ ಪ್ರಾಣ ಬೆದರಿಕೆ ಹಾಕಿಸುತ್ತಾರೆ. ನಾನು ಬಡ್ಡಿ ಸಮೇತ ಅಸಲು ತೀರಿಸಿದ್ದರೂ ಅಧಿಕ ಬಡ್ಡಿಗೆ ಬೇಡಿಕೆ ಇರಿಸಿ, ಕೊಲೆ ಬೆದರಿಕೆ ಹಾಕಿರುವ ಆದರ್ಶ ಹಾಗೂ ಆತನ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ನಿರ್ಮಾಪಕ ಪುಷ್ಕರ್‌ ದೂರಿನಲ್ಲಿ ಕೋರಿದ್ದಾರೆ.

click me!