ನಿಮ್ಮ ದೇಶದ ‘ಪ್ರೇಮದ ಊರು’ ಬಿಟ್ಟು ನಮ್ಮ ‘ಪ್ರೇಮದ ಊರಲಿ’ಗೆ ಬನ್ನಿ: ನಟಿ ರಮಿಕಾ ಶಿವು ಮನವಿ!

Published : Oct 10, 2026, 03:31 PM IST
Actress Ramika Shivu

ಸಾರಾಂಶ

‘ಪ್ರೇಮದ ಊರಲಿ’ ಸಿನಿಮಾ ವಿದೇಶಗಳಲ್ಲಿಯೂ ಬಿಡುಗಡೆಯಾಗಿದೆ. ನಟಿ ರಮಿಕಾ ಶಿವು, ವಿದೇಶಗಳಲ್ಲಿರುವ ಕನ್ನಡಿಗರು ಚಿತ್ರಮಂದಿರಗಳಲ್ಲಿಯೇ ಸಿನಿಮಾ ವೀಕ್ಷಿಸಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ‘ಪ್ರೇಮದ ಊರಲಿ’ ಸಿನಿಮಾ ಇದೀಗ ದೇಶದ ಗಡಿ ದಾಟಿ ವಿದೇಶಗಳಲ್ಲಿಯೂ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ಚಿತ್ರದ ಯಶಸ್ಸಿಗೆ ಪ್ರೇಕ್ಷಕರು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿರುವ ನಾಯಕಿ ರಮಿಕಾ ಶಿವು, ಎಲ್ಲರೂ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ವಿಶೇಷವಾಗಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಅವರು ಕೇಳಿಕೊಂಡಿದ್ದಾರೆ.

ವಿದೇಶಗಳಲ್ಲಿಯೂ ‘ಪ್ರೇಮದ ಊರಲಿ’ ಬಿಡುಗಡೆ

‘ಪ್ರೇಮದ ಊರಲಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮತ್ತಷ್ಟು ಪ್ರೇಕ್ಷಕರನ್ನು ತಲುಪುವ ಪ್ರಯತ್ನದಲ್ಲಿದೆ. ಚಿತ್ರತಂಡದ ಮಾಹಿತಿ ಪ್ರಕಾರ, ಅಕ್ಟೋಬರ್ 9ರಂದು ಭಾರತದ ಪ್ರಮುಖ ನಗರಗಳು ಸೇರಿದಂತೆ ವಿದೇಶಗಳಲ್ಲಿಯೂ ಸಿನಿಮಾ ಬಿಡುಗಡೆಯಾಗಿದೆ.

ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಅನಿಲ್ ಥಡಾನಿ ಅವರ ಎಎ ಸಿನಿಮಾಸ್ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು, ವಿದೇಶಗಳಲ್ಲಿಯೂ ಕೆಆರ್‌ಜಿ ಸ್ಟುಡಿಯೋಸ್ ಓವರ್‌ಸೀಸ್ ಮೂಲಕ ಪ್ರೇಕ್ಷಕರ ಮುಂದೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮುಖ ಕಲಾವಿದರು ಪ್ರೇಕ್ಷಕರಲ್ಲಿ ವಿಶೇಷ ಮನವಿ ಮಾಡುತ್ತಿದ್ದಾರೆ. ಓಟಿಟಿ ಅಥವಾ ಇತರ ಮಾಧ್ಯಮಗಳಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಗಳಲ್ಲಿಯೇ ಸಿನಿಮಾ ವೀಕ್ಷಿಸಿ ತಂಡವನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.

‘ನಿಮ್ಮ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬನ್ನಿ’

ಚಿತ್ರದಲ್ಲಿ ವಸಂತ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಮಿಕಾ ಶಿವು, ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ಚಿತ್ರದ ಮೇಲಿಟ್ಟಿರುವ ಪ್ರೀತಿ ಮತ್ತು ಆಶೀರ್ವಾದದಿಂದಲೇ ಸಿನಿಮಾ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

'ನಿಮ್ಮ ಪ್ರೀತಿ ಹಾಗೂ ಆಶೀರ್ವಾದದಿಂದ ನಮ್ಮ ‘ಪ್ರೇಮದ ಊರಲಿ’ ಸಿನಿಮಾ ಎಲ್ಲರಿಗೂ ತಲುಪಿದೆ. ನೀವೆಲ್ಲರೂ ನಮ್ಮ ಸಿನಿಮಾವನ್ನು ಒಪ್ಪಿಕೊಂಡಿದ್ದೀರಿ, ಮೆಚ್ಚಿಕೊಂಡಿದ್ದೀರಿ. ಇದೀಗ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುತ್ತಿದೆ. ನಿಮ್ಮ ನಿಮ್ಮ ದೇಶದಲ್ಲಿರುವ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಎಲ್ಲರೂ ಚಿತ್ರಮಂದಿರಗಳಲ್ಲಿಯೇ ನಮ್ಮ ಸಿನಿಮಾ ವೀಕ್ಷಿಸಿ' ಎಂದು ರಮಿಕಾ ಶಿವು ಮನವಿ ಮಾಡಿದ್ದಾರೆ.

ನಟಿಯ ಈ ಮಾತುಗಳು ವಿದೇಶಗಳಲ್ಲಿ ನೆಲೆಸಿರುವ ಕನ್ನಡ ಸಿನಿಪ್ರಿಯರನ್ನು ತಲುಪುವ ನಿರೀಕ್ಷೆಯಿದೆ. ಅದರಲ್ಲೂ ಕನ್ನಡ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿ ಬೆಂಬಲಿಸುವ ಪ್ರೇಕ್ಷಕರಿಗೆ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಂತೆ ಮಾಡಿರುವ ಈ ಮನವಿ ಗಮನ ಸೆಳೆಯುತ್ತಿದೆ.

ಯಾರದ್ದಿದು ‘ಪ್ರೇಮದ ಊರಲಿ’?

ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರದಲ್ಲಿ ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಹಾಗೂ ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಚಿತ್ರವನ್ನು ನಿರ್ಮಿಸಿದ್ದಾರೆ.

ಇನ್ನು ಸುನಾದ್ ಗೌತಮ್ ಸಂಗೀತ ಸಂಯೋಜನೆ, ರಾಜ್‌ಕಾಂತ್ ಎಸ್.ಕೆ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ. ಕನ್ನಡದ ‘ಪ್ರೇಮದ ಊರಲಿ’ಯನ್ನು ದೇಶದ ಗಡಿ ದಾಟಿಸಿ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಇದೀಗ ರಮಿಕಾ ಶಿವು ಅವರ ಮನವಿಗೆ ವಿದೇಶಗಳಲ್ಲಿರುವ ಕನ್ನಡಿಗರು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಚಿತ್ರಕ್ಕೆ ಯಾವ ರೀತಿಯ ಬೆಂಬಲ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಕ್ಸ್‌ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಭರ್ಜರಿ ಆಟ: 15 ದಿನದ ಕಲೆಕ್ಷನ್ ಇಷ್ಟೊಂದು ಕೋಟಿನಾ?
ಹುಬ್ಬಳ್ಳಿಗೆ ಹೊರಟ ಆಂಕರ್ ಅನುಶ್ರೀ.. ಗೊತ್ತಿದ್ರೆ, ಅದೇನೂ ದೊಡ್ಡ ಸೀಕ್ರೆಟ್ ಅಲ್ಲ ಬಿಡಿ ಅಂತೀರಾ.. ಆದ್ರೆ ಗೊತ್ತಾ ನಿಮ್ಗೆ!?