ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' ಚಿತ್ರದ 'ಸಂಭಾಳಿಸು ಗುಟ್ಟಾಗಿ ನೀ' ಎಂಬ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಸ್ಯಾಂಡಲ್‌ವುಡ್‌ನ (Sandalwood) ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ಅವರು 2020ರ ಜೂನ್ ತಿಂಗಳಲ್ಲಿ ನಿಧನರಾದರು. ಅವರ ಅಕಾಲಿಕ ನಿಧನದ ನೋವು ಇನ್ನೂ ಕೂಡ ಕನ್ನಡಿಗರನ್ನು ಕಾಡುತ್ತಿದೆ. ಈ ಮಧ್ಯೆ ಅವರು ನಟಿಸಿದ್ದ 'ರಾಜಮಾರ್ತಾಂಡ' (RajaMarthanda) ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಈ ಮಧ್ಯೆ ಚಿತ್ರತಂಡ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ. ಹೌದು! ಚಿರು ನಟಿಸಿದ್ದ 'ರಾಜಮಾರ್ತಾಂಡ' ಸಿನಿಮಾವು ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ರಿಲೀಸ್‌ಗೆ ರೆಡಿಯಾಗಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ 'ಸಂಭಾಳಿಸು ಗುಟ್ಟಾಗಿ ನೀ' (Sambhalisu) ಎಂಬ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಲವ್ ಸಾಂಗ್ ಹಾಡಿನಲ್ಲಿ ಚಿರು ಹಾಗೂ ಚಿತ್ರದ ನಾಯಕಿ ದೀಪ್ತಿ ಸತಿ (Deepti Sati) ಕಾಂಬಿನೇಷನ್ ರೊಮ್ಯಾಂಟಿಕ್ ಆಗಿ ಮೂಡಿ ಬಂದಿದೆ. ಅಲ್ಲದೇ ಹಾಡಿನ ರಿಹರ್ಸಲ್‌ನಲ್ಲಿ ಚಿರು ಮಾಡಿದ ತುಂಟಾಟಗಳು ಈ ಹಾಡಿನಲ್ಲಿ ಕಾಣಬಹುದಾಗಿದೆ. ಈ ಹಾಡಿಗೆ ಕುಶಾಲ್ ಗೌಡ ಸಾಹಿತ್ಯ ರಚಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಸಂಗೀತ ಸಂಯೋಜನೆಯಿದೆ. ಸಂಜಿತ್ ಹೆಗ್ಡೆ (Sanjith Hegde) 'ಸಂಭಾಳಿಸು' ಸಾಂಗ್‌ಗೆ ದನಿಯಾಗಿದ್ದು, ಭೂಷಣ್ ಕೊರಿಯೋಗ್ರಫಿ ಈ ಹಾಡಿಗಿದೆ.
Chiranjeevi Sarja Rajamarthanda : ಮತ್ತೊಂದು ಸುದ್ದಿ ಕೊಟ್ಟ ರಾಜಮಾರ್ತಾಂಡ
ಚಿರಂಜೀವಿ ಸರ್ಜಾ ಅವರ ನಿಧನಕ್ಕೂ ಮೊದಲೇ 'ರಾಜಮಾರ್ತಾಂಡ' ಶೂಟಿಂಗ್ ಮುಕ್ತಾಯಗೊಂಡಿತ್ತು. ಹಾಗಾಗಿ, ಇದನ್ನು ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಅನ್ನಬಹುದು. ಇನ್ನು, ಚಿತ್ರಕ್ಕೆ ಚಿರು ಡಬ್ ಮಾಡಲು ಆಗಿರಲಿಲ್ಲ. ಹಾಗಾಗಿ ಚಿರು ಸಹೋದರ ಧ್ರುವ ಸರ್ಜಾ (Dhruva Sarja) 'ರಾಜಮಾರ್ತಾಂಡ' ಚಿತ್ರದ ನಿರ್ಮಾಪಕರಿಗೆ ಮಾತು ಕೊಟ್ಟಿದ್ದರು. ಅಣ್ಣ ಬಿಟ್ಟು ಹೋದ ಸಿನಿಮಾಗೆ ತಾವೇ ಡಬ್ಬಿಂಗ್ (Dubbing) ಮಾಡುವುದಾಗಿ ಹೇಳಿದ್ದರು. ಅಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರಕ್ಕೆ ಡಬ್ಬಿಂಗ್ ಮಾಡಲಿದ್ದರಂತೆ. ಇದೀಗ ಈ ಚಿತ್ರವು ಸೆನ್ಸಾರ್ ಅಂಗಳದಲ್ಲಿದೆ.
ಗೀತ ರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮ್ ನಾರಾಯಣ್ (K.Ramnarayan) 'ರಾಜಮಾರ್ತಾಂಡ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಶಿವಕುಮಾರ್ ಎನ್ ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ ಚಿರು ಜೊತೆ 'ಅಜಿತ್' (Ajith) ಸಿನಿಮಾ ಮಾಡಿದ್ದರು. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಹಾಗೂ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿರು ಪತ್ನಿ ಮೇಘನಾ ರಾಜ್ (Meghana Raj) ಕೂಡ ಈ ಚಿತ್ರದ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮೊದಲ ಟೀಸರ್‌ನ್ನು ಕೂಡಾ ರಾಯನ್ ರಾಜ್ ಸರ್ಜಾ (Raayan Raj Sarja) ಬಿಡುಗಡೆ ಮಾಡಿದ್ದ.
ಚಿರು ಹುಟ್ಟುಹಬ್ಬಕ್ಕೆ 'ರಾಜಮಾರ್ತಾಂಡ' ಟೀಸರ್ ರಿಲೀಸ್
ಇನ್ನು ಹಿಂದೆ ನಿಖಿಲ್ ಕುಮಾರಸ್ವಾಮಿ ಜೊತೆಗೆ 'ಜಾಗ್ವಾರ್' ಸಿನಿಮಾದಲ್ಲಿ ನಟಿಸಿದ್ದ ದೀಪ್ತಿ ಸತಿ 'ರಾಜಮಾರ್ತಾಂಡ' ಸಿನಿಮಾದಲ್ಲಿ ಚಿರುಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಮೇಘಶ್ರೀ, 'ಟಗರು' ಖ್ಯಾತಿಯ ತ್ರಿವೇಣಿ ರಾವ್ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಭಜರಂಗಿ ಲೋಕಿ, ದೇವರಾಜ್, ಚಿಕ್ಕಣ್ಣ, ಸುಮಿತ್ರಾ, ಶಂಕರ್ ಅಶ್ವತ್ಥ್, ವಿನೀತ್ ಕುಮಾರ್ ಮುಂತಾದವರ ತಾರಾಬಳಗವಿದೆ. ಜೆ.ಕೆ. ಗಣೇಶ್ ಕ್ಯಾಮೆರಾ ಕೈ ಚಳಕ, ವೆಂಕಟೇಶ್ ಯು.ಡಿ.ವಿ. ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನವಿರುವ 'ರಾಜಮಾರ್ತಾಂಡ' ಚಿತ್ರಕ್ಕೆ ಭೂಷಣ್ ಹಾಗೂ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. 'ರಾಜಮಾರ್ತಾಂಡ' ಚಿತ್ರವು ಆ್ಯಕ್ಷನ್ ಜೊತೆಗೆ ಸೆಂಟಿಮೆಂಟ್ ಅಂಶಗಳೊಂದಿಗೆ ಸಾಗುವ ಸಿನಿಮಾವಾಗಿದ್ದು, ತನ್ನ ಸಾಮರ್ಥ್ಯದಿಂದ ಏನು ಬೇಕಾದರೂ ಪಡೆದುಕೊಳ್ಳುವ ವ್ಯಕ್ತಿಯಾಗಿ ಚಿರು ಕಾಣಿಸಿಕೊಂಡಿದ್ದಾರೆ.