ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್ ಆಟೋ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಡಿಸೆಂಬರ್ 24 ಕ್ರಿಸ್‌ಮಸ್ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ.
ಡಾಲಿ ಧನಂಜಯ್ (Dolly Dhananjay) ಎಸಿಪಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ 'ಸಲಗ' (Salaga) ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದ್ದರೆ, ಇತ್ತ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ 'ರತ್ನನ್ ಪ್ರಪಂಚ' (Rathnan Prapancha) ಚಿತ್ರದಲ್ಲಿ ಧನಂಜಯ್ ಅವರು ರತ್ನಾಕರನಾಗಿ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾಗಿ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಇದೀಗ ಧನಂಜಯ್ ಅಭಿನಯದ ಮತ್ತೊಂದು ಚಿತ್ರದ ಗ್ಲಿಂಪ್ಸ್ (Glimpse) ವಿಡಿಯೋ ಬಿಡುಗಡೆಯಾಗಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram), ಫ್ರೆಂಡ್ಶಿಪ್ಪೆ ರಿಲಿಜನ್ನು, ಫ್ರೆಂಡ್ಶಿಪ್ಪೆ ಎಮೋಷನ್ನು, ಫ್ರೆಂಡ್ಶಿಪ್ಪೆ ಸೊಲ್ಯೂಷನ್ನು ಅಂತ ಹೇಳಕ್ ಬತ್ತಾ ಅವ್ರೆ ನಮ್ಮ ರಾಸ್ಕಲ್ಸ್ ಎಂದು ಧನಂಜಯ್ ಪೋಸ್ಟ್ ಮಾಡಿದ್ದಾರೆ.
ಹೌದು! ಡಾಲಿ ಧನಂಜಯ್ 'ಟಗರು' (Tagaru) ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಇದೀಗ ಅವರ ಅಭಿನಯದ 'ಬಡವ ರಾಸ್ಕಲ್' (Badava Rascal) ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಿಡುಗಡೆಯಾದ ವಿಡಿಯೋದಲ್ಲಿ ಧನಂಜಯ್, ಶಂಕರ್ ಅಲಿಯಾಸ್ ಬಡವ ರಾಸ್ಕಲ್... ಎಂದು ಮಾಸ್ ಎಂಟ್ರಿ ಕೊಟ್ಟಿದ್ದು, ಜೊತೆಯಲ್ಲಿ ಪಿಟ್ಟ, ಪ್ಯಾಕೆಟ್, ಕಬಾಬ್, ಬೆಂಕಿ, ಸಣ್ಣಪ್ಪ, ಡೌನ್ ಟು ಅರ್ಥ್, ನಾಗ ಎಂಬ ಪಾತ್ರಗಳ ಪರಿಚಯವಿದೆ. ಜೊತೆಗೆ ಚಿತ್ರತಂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ಡಿಸೆಂಬರ್ 24 ಕ್ರಿಸ್‌ಮಸ್ (Christmas) ಹಬ್ಬದಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಬಡವ ರಾಸ್ಕಲ್ ಚಿತ್ರದಲ್ಲಿ ಮಠ ಗುರುಪ್ರಸಾದ್
ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್ ಆಟೋ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದು, 'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ (Amrutha Iyengar) ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು (Rangayana Raghu), ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಾಗೂ ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ (vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ನಡೆದಿದ್ದು, ಬೆಂಗಳೂರು, ಮೈಸೂರು ಹಾಗೂ ಪಾಂಡವಪುರ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಧನಂಜಯ್ ಮಾನ್ಸೂನ್ ರಾಗ (Monsoon Raga) ಸೇರಿದಂತೆ ಹೆಡ್ ಬುಷ್ (Head Bush) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಧನಂಜಯ್ ಅಭಿನಯದ 'ಹೆಡ್ ಬುಷ್' ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಶೂನ್ಯ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಲ್ಲದೇ ಅಲ್ಲು ಅರ್ಜುನ್ (Allu Arjun) ಅಭಿನಯದ 'ಪುಷ್ಪ' (Pushpa) ಚಿತ್ರದಲ್ಲಿ ಧನಂಜಯ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.