ಶಾಲೆಗಳು, ಮಾಲ್, ಚಿತ್ರಮಂದಿರಗಳು ಸೇರಿದಂತೆ ಜನಸಂದಣಿಯ ಪ್ರದೇಶಗಳು ಬಿಕೋ ಎನ್ನುತ್ತಿವೆ. ಒಟ್ಟಾಗಿ ನೂರು ಜನ ಸೇರಕ್ಕೂ ಹೆದರುವಂತೆ ಕೊರೋನಾ ಭೀತಿ ಹುಟ್ಟಿಸಿದೆ. ಕೇರಳದಲ್ಲಿ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸರ್ಕಾರವೇ ಆದೇಶ ನೀಡಿದೆ.
ಕರ್ನಾಟಕದಲ್ಲಿ ಚಿತ್ರಮಂದಿರಗಳು ಬಾಗಿಲು ಹಾಕದಿದ್ದರೂ ಜನ ಸಿನಿಮಾ ನೋಡಲು ಬರುತ್ತಿಲ್ಲ ಎಂಬುದು ಖಾಲಿ ಚಿತ್ರಮಂದಿರಗಳೇ ಹೇಳುತ್ತಿವೆ. ರಾಜ್ಯಕ್ಕೂ ಕೊರೋನಾ ಭೀತಿ ಗಾಢವಾಗಿ ತಟ್ಟಿದರೂ ಈ ವಾರ ತೆರೆಗೆ ಸಜ್ಜಾಗಿರುವ ಚಿತ್ರಗಳಿಗೂ ಇದ್ಯಾವುದು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಹೀಗಾಗಿ ಕೊರೋನಾಗೂ ಕ್ಯಾರೆ ಎನ್ನದೆ ಮಾಚ್‌ರ್ 12 ಮತ್ತು 13ಕ್ಕೆ ಐದಾರು ಸಿನಿಮಾಗಳು ಕನ್ನಡದಲ್ಲಿ ತೆರೆಗೆ ಬರುತ್ತಿವೆ.
ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!
ಚಿರಂಜೀವಿ ಸರ್ಜಾ ನಟನೆಯ ‘ಶಿವಾರ್ಜುನ’, ಶುಭಾ ಪೂಂಜಾ, ರಕ್ಷಾ… ಜೋಡಿಯ ‘ನಗರಗುಂದ ಬಂಡಾಯ’, ಹೊಸಬರ ಚಿತ್ರಗಳಾದ ‘ಅಂಬಾನಿಪುತ್ರ’ ಹಾಗೂ ‘5 ಅಡಿ 7 ಅಂಗುಲ’, ನೇಹಾ ಪಾಟೀಲ್ ನಟನೆಯ ‘ಹುಲಿದುರ್ಗ’ ಚಿತ್ರಗಳು ತೆರೆ ಮೇಲೆ ಕಾಣಿಸಿಕೊಳ್ಳಲಿವೆ. ಕಮರ್ಷಿಯಲ್ ಕತೆ, ರೈತನ ಬಯೋಗ್ರಫಿ, ಕ್ರೈಮ್ ಥ್ರಿಲ್ಲರ್ ಹಾಗೂ ಪ್ರೇಮ ಕತೆಯನ್ನು ಒಳಗೊಂಡಿರುವ ಚಿತ್ರಗಳಿವು. ಇವುಗಳ ಜತೆಗೆ ಮತ್ತೆರಡು ಚಿತ್ರಗಳು ಬಿಡುಗಡೆಗೆ ಜತೆಯಾಗುವ ಸಾಧ್ಯತೆಗಳಿವೆ.
ಕೊರೋನಾ ವೈರಸ್ ಭೀತಿಯಿಂದ ಬೇರೆ ರಾಜ್ಯಗಳಲ್ಲಿ ತಾತ್ಕಾಲಿಕವಾಗಿ ಚಿತ್ರಮಂದಿರಗಳು ಮುಚ್ಚಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಕರ್ನಾಟಕದಲ್ಲಿ ಚಿತ್ರಮಂದಿರಗಳು ಮುಚ್ಚಬೇಕು ಎನ್ನುವ ಯಾವುದೇ ಆದೇಶವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮಾಡಿಲ್ಲ. ಒಂದು ವೇಳೆ ಸರ್ಕಾರ ಆದೇಶ ಕೊಟ್ಟರೆ ಖಂಡಿತಾ ಅದನ್ನು ಪಾಲಿಸುತ್ತೇವೆ. ಸರ್ಕಾರದ ಆದೇಶ ಇಲ್ಲದೆ ಥಿಯೇಟರ್ಗಳಿಗೆ ಬಾಗಿಲು ಹಾಕಿ ಎನ್ನಲಾಗದು.- ಜೈರಾಜ್,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು
‘ರಾಜ್ಯದಲ್ಲಿ ಕೊರೋನಾ ಭೀತಿ ಅಷ್ಟಾಗಿ ಇಲ್ಲ. ಒಳ್ಳೆಯ ಸಿನಿಮಾ ಆದರೆ ಜನ ನೋಡಲು ಬರುತ್ತಾರೆ’ ಎಂಬುದು ಆಯಾ ಚಿತ್ರತಂಡದವರ ಅಭಿಪ್ರಾಯ.
ತೆರೆ ಕಾಣುತ್ತಿರುವ ಚಿತ್ರಗಳು
1. ಶಿವಾರ್ಜುನ
2. ನಗರಗುಂದ ಬಂಡಾಯ
3. ಅಂಬಾನಿ ಪುತ್ರ
4. 5 ಅಡಿ 7 ಅಂಗುಲ
5. ಹುಲಿದುರ್ಗ
ಸಿನಿಮಾ ಬಿಡುಗಡೆ ದಿನಾಂಕವನ್ನು ನಾವು ಮೊದಲೇ ಘೋಷಣೆ ಮಾಡಿದ್ವಿ. ಒಂದು ಸಲ ಬಿಡುಗಡೆ ದಿನಾಂಕ ಪ್ರಕಟಿಸಿ ಥಿಯೇಟರ್ ವ್ಯವಸ್ಥೆ ಮಾಡಿಕೊಂಡು ಪ್ರಚಾರ ಶುರು ಮಾಡಕ್ಕೆ 50 ರಿಂದ 60 ಲಕ್ಷ ವೆಚ್ಚವಾಗತ್ತದೆ. ಇದ್ದಕ್ಕಿದ್ದಂತೆ ಬಿಡುಗಡೆ ದಿನಾಂಕ ಮುಂದೂಡಿದರೆ ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತದೆ. ಮತ್ತೆ ಇದೇ ಥಿಯೇಟರ್ ಸೆಟಪ್ ಸಿಗೋದು ಕಷ್ಟ. ಹೀಗಾಗಿ ಈಗ ಚಿತ್ರದ ಬಿಡುಗಡೆ ಮುಂದೂಡಲಾಗದು.- ಶಿವಾರ್ಜುನ್, ನಿರ್ಮಾಪಕ