ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್‌ಲವ್‌ಯಾ’ ಸಿನಿಮಾ ಇಂದು (ಫೆ.24) ಬಿಡುಗಡೆ ಆಗಿದೆ. ಈ ಸಿನಿಮಾ ಮೂಲಕ ರಕ್ಷಿತಾ ಸೋದರ ರಾಣಾ ಹೀರೋ ಆಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಮೊದಲ ಸಿನಿಮಾ ಬಿಡುಗಡೆ ಆದ ಸಂಭ್ರಮದಲ್ಲಿರುವ ರಾಣಾ ಜೊತೆ ಮಾತುಕತೆ.
ರಾಜೇಶ್ ಶೆಟ್ಟಿ
ಮೊದಲ ಸಿನಿಮಾ ಬಿಡುಗಡೆಯ ಮೊದಲ ದಿನ...
ಏಳು ವರ್ಷದ ಜರ್ನಿ ಇದು. 2015ನೇ ಇಸವಿಯಲ್ಲಿ ನಾನು ನಟನಾಗುತ್ತೇನೆ ಅಂತ ಮನೆಯಲ್ಲಿ ಹೇಳಿದೆ. ಅಲ್ಲಿಂದ ಇಲ್ಲಿಯವರೆಗೆ ಸಿನಿಮಾದ ಎಲ್ಲಾ ವಿಭಾಗವನ್ನು ಕಲಿಯಲು ಯತ್ನಿಸಿದೆ. ಅಮೆರಿಕಾಗೆ ಹೋಗಿ ನಟನೆ ಕೋರ್ಸು ಮಾಡಿದೆ. ದಿ ವಿಲನ್ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಡಾನ್ಸು, ಫೈಟಿಂಗು ಅಭ್ಯಾಸ ಮಾಡಿದೆ. ಈಗ ನಟನಾಗಿ ಜನರ ಮುಂದೆ ಬರುತ್ತಿದ್ದೇನೆ. ಹೊಸಬರು ನಾವು, ನಿರ್ದೇಶಕರು ಕೂಡ ಹೊಸ ಥರದ ಸಿನಿಮಾ ಮಾಡಿದ್ದೇನೆ ಅಂತಲೇ ಹೇಳುತ್ತಿದ್ದಾರೆ. ಖುಷಿ ಇದೆ, ಆತಂಕವಿದೆ, ಎದೆ ಬಡಿತ ಜೋರಾಗಿದೆ.
undefined
ನಟನೆ, ಸಿನಿಮಾ ಮೇಲೆ ನಿಮಗೆ ಪ್ರೀತಿ ಹುಟ್ಟಿದ್ದು ಹೇಗೆ?
ನಾನು ಸಿನಿಮಾ ವಾತಾವರಣದಲ್ಲೇ ಬೆಳೆದವನು. ಬಹುಶಃ ವಾತಾವರಣ ನಮ್ಮನ್ನು ಹೆಚ್ಚು ಪ್ರಭಾವಿಸುತ್ತದೆ ಅನ್ನಿಸುತ್ತದೆ. ಬಾಲ್ಯದಲ್ಲಿ ನಾನು ಹತ್ತಿರದಿಂದ ನೋಡಿದ ಮೊದಲ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್. ನಾನು ಅಕ್ಕನ ಸಿನಿಮಾ ಶೂಟಿಂಗ್ ನೋಡಲು ಹೋಗುತ್ತಿದ್ದೆ. ಮೂಲೆಯಲ್ಲಿ ನಿಂತು ಪುನೀತ್ ಸರ್‌ರನ್ನು ನೋಡುತ್ತಿದ್ದೆ. ಅವರು ನನ್ನನ್ನು ಕರೆದು ಮಾತನಾಡಿಸಿ ಪ್ರೀತಿ ತೋರಿಸಿದ ಪುಳಕ ಇವತ್ತೂ ನನ್ನಲ್ಲಿದೆ. ಅವರ ವಿನಯ, ಪ್ರೀತಿ ನೋಡಿ ನನಗೆ ನಾನೂ ಸಿನಿಮಾ ಮಾಡಬೇಕು ಅನ್ನಿಸಿತ್ತು. ಅವರ ನಡವಳಿಕೆ ಸ್ಫೂರ್ತಿ ನೀಡಿತ್ತು. ಆದರೆ ಭವಿಷ್ಯ ತಿಳಿದಿರಲಿಲ್ಲ. ಮನೆಯಲ್ಲಿ ಓದು ಓದು ಅನ್ನುತ್ತಿದ್ದರು. ಇಂಜಿನಿಯರಿಂಗ್ ಓದಿದೆ. ಮಾಸ್ಟರ್ಸ್ ಮಾಡು ಎಂದರು. ನನಗೆ ಸಿನಿಮಾ ಮೇಲೆ ಪ್ರೀತಿಯಾಗಿತ್ತು. ಧೈರ್ಯ ಮಾಡಿ ಮನೆಯಲ್ಲಿ ಹೇಳಿದೆ. ಒಪ್ಪಿದರು. ಇವತ್ತು ನಟನಾಗಿ ನಿಮ್ಮ ಮುಂದೆ ನಿಂತಿದ್ದೇನೆ.
ಮುಂದಿನ ಆಲೋಚನೆಗಳು? ಪ್ರೇಮ್, ಸುದೀಪ್ ಸರ್‌ರಂತಹ ಗುರುಗಳ ಜೊತೆ ಕೆಲಸ ಮಾಡಿದ ಖುಷಿ ಇದೆ. ಒಂದು ಶಾಟ್ ಮುಗಿದ ಮೇಲೆ ನಿರ್ದೇಶಕರು ಚೆನ್ನಾಗಿ ಮಾಡಿದ್ದೀಯಾ ಅಂತ ಹೇಳಿದಾಗಿನ ಸಂಭ್ರಮ ಮನಸ್ಸಲ್ಲಿದೆ. ಆ ಖುಷಿ ಇನ್ನೂ ಬೇಕು. ನನಗೆ ಸಿಕ್ಕ ಖುಷಿಯನ್ನು ನೋಡುಗರಿಗೆ ದಾಟಿಸಬೇಕು. ನನಗೆ ಎಕ್ಸೈಟ್ ಮಾಡಿದ ಕತೆಗಳನ್ನು ಒಪ್ಪಿಕೊಂಡು ಆ ಎಕ್ಸೈಟ್‌ಮೆಂಟ್ ಅನ್ನು ಪ್ರೇಕ್ಷಕರಿಗೆ ಕೊಡುವ ಪ್ರಯತ್ನ ಮಾಡುತ್ತೇನೆ.
ಏಕ್‌ಲವ್‌ಯಾ ಜರ್ನಿ ಹೇಗಿತ್ತು?
ಸಿನಿಮಾ ಮಾಡಬೇಕು ಎಂಬ ನಿರ್ಧಾರ ಆಗಿತ್ತು. ಹಾಗಂತ ಸುಮ್ಮನೆ ಏನೂ ಮಾಡಬಾರದು. ಏನು ಮಾಡಿದರೂ ತೀವ್ರವಾಗಿ ಮಾಡಬೇಕು. ಅದು ನನ್ನ ಮನಸ್ಸಲ್ಲಿತ್ತು. ನಮ್ಮ ನಿರ್ದೇಶಕರು ಸಿನಿಮಾ ಮಾಡುವುದಾದರೆ ಒಳ್ಳೆಯದು ಅಂದಿದ್ದೆ. ಅಮ್ಮ, ಅಕ್ಕ ನಿರ್ದೇಶಕರನ್ನು ಒಪ್ಪಿಸಿದರು. ‘ದಿ ವಿಲನ್’ನಲ್ಲಿ ನನ್ನ ಕೆಲಸ ಹತ್ತಿರದಿಂದ ನೋಡಿದ್ದ ಪ್ರೇಮ್ ಅವರು ಕೂಡ ಒಪ್ಪಿದರು. ಹಾಗೆ ಶುರುವಾಯಿತು ಜರ್ನಿ. ಈ ಸಿನಿಮಾದಲ್ಲಿ ನನಗೆ ಮೂರು ಶೇಡ್ ಇದೆ. 15 ವರ್ಷದ ಜರ್ನಿ ಇದೆ. ಮೊದಲ ಸಿನಿಮಾದಲ್ಲಿ ಇಷ್ಟೊಂದು ಗಾಢವಾಗಿರುವ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ನಿರ್ದೇಶಕರು ನನಗೆ ಮರ ಸುತ್ತುವ ಪ್ರೀತಿ ತೋರಿಸಲು ಇಷ್ಟವಿಲ್ಲ ಎಂದು ಆರಂಭದಲ್ಲೇ ಹೇಳಿದ್ದರು. ಅದನ್ನು ಏಕ್‌ಲವ್‌ಯಾ ನಿಜ ಮಾಡಿದೆ ಎಂಬ ನಂಬಿಕೆ ನನ್ನದು. ಈ ಸಿನಿಮಾ ಏನೋ ಹೇಳುತ್ತದೆ. ಅದು ನಿಮ್ಮನ್ನು ಕಾಡಿದರೆ ಸಾರ್ಥಕ.